ಜನತಾ ಕರ್ಫ್ಯೂಗೆ ಕಾರ್ಕಳದಲ್ಲಿ ಅಭೂತಪೂರ್ವ ಬೆಂಬಲ : ನಗರ ಸಂಪೂರ್ಣ ಸ್ತಬ್ಧ
Team Udayavani, Mar 22, 2020, 4:12 PM IST
ಕಾರ್ಕಳ, ಮಾ. 21: ಕೋವಿಡ್ 19 ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಕರೆ ಕೊಟ್ಟಿರುವ ಜನತಾ ಕರ್ಫ್ಯೂಗೆ ಕಾರ್ಕಳದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ರವಿವಾರ ಕಾರ್ಕಳ ಸಂಪೂರ್ಣ ಸ್ತಬ್ಧವಾಗಿತ್ತು. ಜನತಾ ಕರ್ಫ್ಯೂಗೆ ಸ್ವಯಂ ಪ್ರೇರಣೆಯಿಂದ ಬೆಂಬಲ ಸೂಚಿಸಿದ ಕಾರ್ಕಳದ ನಾಗರಿಕರು ಮನೆಯಲ್ಲೇ ಹೆಚ್ಚಿನ ಕಾಲ ಕಳೆದರು.
ಕಾರ್ಕಳ ನಗರ ವ್ಯಾಪ್ತಿಯ ಬಂಗ್ಲೆಗುಡ್ಡೆಯಿಂದ ಕರಿಯಕಲ್ಲುವರೆಗಿನ ಹೊಟೇಲ್, ಅಂಗಡಿ-ಮುಂಗಟ್ಟು ಬಂದ್ ಆಗಿತ್ತು. ಪೆಟ್ರೋಲ್ ಬಂಕ್‌ಗಳು ಕೂಡ ಬಂದ್ ಆಗಿದ್ದರೆ, ನಗರದಲ್ಲಿ ಒಂದೆರಡು ಮೆಡಿಕಲ್ ಶಾಪ್ ತೆರೆದಿರುವುದು ಕಂಡು ಬಂತು. ನಿತ್ಯ ಜನರಿಂದ ಗಿಜಿಗುಡುತ್ತಿದ್ದ ತರಕಾರಿ ಹಾಗೂ ಮೀನಿನ ಮಾರ್ಕೆಟ್, ಬಾರ್, ವೈನ್ ಶಾಪ್, ಬೇಕರಿ, ಚಿನ್ನಾಭರಣ ಮಳಿಗೆ, ಹೂವಿನ-ಹಣ್ಣಿನ ಅಂಗಡಿಗಳು ಮುಚ್ಚಿದ್ದವು. ಮುಂಜಾನೆ ವೇಳೆ ಎಂದಿನಂತೆ ಪತ್ರಿಕೆ, ಹಾಲು ದೊರೆಯುತ್ತಿದ್ದರೂ ಅಷ್ಟೇ ವೇಗವಾಗಿ ಸ್ಥಗಿತಗೊಂಡಿತು.
ಬಿಕೋ ಎನ್ನುತ್ತಿದ್ದ ಬಸ್ ನಿಲ್ದಾಣ-ರಸ್ತೆ : ಕಾರ್ಕಳ ನಗರದ ಬಸ್ ನಿಲ್ದಾಣ ಬಸ್, ಪ್ರಯಾಣಿಕರಿಲ್ಲದೇ ಖಾಲಿ ಖಾಲಿಯಾಗಿತ್ತು. ರಸ್ತೆಗಳು ವಾಹನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು. ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿ ತಮ್ಮ ಸೇವೆ ಸ್ಥಗಿತಗೊಳಿಸಿದ್ದರು.
ಕೋವಿಡ್ 19 ನಿರ್ಮೂಲನೆ ಪಣ ತೊಟ್ಟ ಕಾರ್ಕಳದ ಜನತೆ : ಕೋವಿಡ್ 19ನಿರ್ಮೂಲನೆಗೆ ಪಣ ತೊಟ್ಟ ಕಾರ್ಕಳದ ಜನತೆ ರವಿವಾರ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಮನೆಯಲ್ಲೇ ಕಾಲ ಕಳೆದರು. ಮಿಯ್ನಾರು, ದುರ್ಗ, ಸಾಣೂರು, ಅಯ್ಯಪ್ಪ ನಗರ, ಜೋಡುರಸ್ತೆ, ಜೋಡುಕಟ್ಟೆ, ಜಯಂತಿನಗರ ಜಂಕ್ಷನ್‌ಗಳಲ್ಲಿ ಒಂದಿಬ್ಬರ ಸಂಚಾರ ಕಂಡುಬಂದರೆ ಉಳಿದಂತೆ ಪೇಟೆಯತ್ತ ಜನ ಮುಖ ಮಾಡಲೇ ಇಲ್ಲ.
ಪ್ರವಾಸಿ ತಾಣದಲ್ಲೂ ಜನವಿರಲಿಲ್ಲ : ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಬಾಹುಬಲಿ ಗೋಮಟೇಶ್ವರ ಬೆಟ್ಟ, ಚತುರ್ಮುಖ ಬಸದಿ, ಕೋಟಿ-ಚೆನ್ನಯ ಥೀಮ್ ಪಾರ್ಕ್, ಆನೆಕೆರೆ ಪಾರ್ಕ್, ಸ್ವಿಮ್ಮಿಂಗ್ ಪೂಲ್, ಥೀಯೆಟರ್‌ಗಳನ್ನು ಮಾ. 17ರಂದೇ ಪುರಸಭೆ ಬಂದ್ ಮಾಡಿದ ಹಿನ್ನೆಲೆಯಲ್ಲಿ ಆ ಪ್ರದೇಶಗಳತ್ತಲೂ ಜನ ಧಾವಿಸಿಲ್ಲ.
ಶನಿವಾರ ಬಿರುಸಿನ ವ್ಯಾಪಾರ : ರವಿವಾರ ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್ ಆಗಲಿದೆ ಎಂಬ ಹಿನ್ನೆಲೆಯಲ್ಲಿ ಶನಿವಾರವೇ ದಿನಸಿ ಸಾಮಗ್ರಿ, ಅಗತ್ಯ ವಸ್ತುಗಳನ್ನು ಪಡೆಯಲು ಜನತೆ ಹೆಚ್ಚು ಉತ್ಸುಕರಾಗಿರುವುದು ಕಂಡುಬಂತು. ವಾರಗಟ್ಟಲೇ ಅಂಗಡಿಗಳು ಬಂದ್ ಆಗಲಿವೆ ಎಂಬ ಆತಂಕದಿಂದ ತಿಂಗಳಿಗೆ ಬೇಕಾಗುವಷ್ಟು ಆಹಾರ ಸಾಮಗ್ರಿಯನ್ನು ಪಡೆಯುತ್ತಿರುವ ದೃಶ್ಯವೂ ಶನಿವಾರ ಕಂಡುಬಂತು. ಹೀಗಾಗಿ ನಗರದಲ್ಲಿ ಜನಸಂದಣಿ ಹೆಚ್ಚಿತ್ತು.
ವೈನ್ ಶಾಪ್‌ಗೆ ಮುಗಿಬಿದ್ದ ಮದ್ಯಪ್ರಿಯರು : ಶನಿವಾರ ಸಂಜೆ 6 ಗಂಟೆಗೆ ಬಾರ್ ಬಂದಾದ ಹಿನ್ನೆಲೆ ಮತ್ತು ರವಿವಾರ ಮದ್ಯ ಸಿಗಲ್ಲ ಎಂಬ ನಿಟ್ಟಿನಲ್ಲಿ ಶನಿವಾರ ವೈನ್ ಶಾಪ್‌ಗ್ಳತ್ತ ಜನ ಮುಗಿಬಿದ್ದು ಮದ್ಯ ಖರೀದಿಯಲ್ಲಿ ತೊಡಗಿಕೊಂಡಿರುವ ದೃಶ್ಯ ಕಂಡುಬಂತು.
ದೇಗುಲದಲ್ಲಿ ಪ್ರಸಾದ ತೀರ್ಥ ಸ್ಥಗಿತ : ಮುಜರಾಯಿ ಇಲಾಖೆ ಗೊಳಪಡುವ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಅನಂತಶಯನ ಶ್ರೀ ಅನಂತಪದ್ಮನಾಭ ದೇವಸ್ಥಾನ, ಮಾರಿಗುಡಿ ದೇವಸ್ಥಾನ, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ತೀರ್ಥ, ಪ್ರಸಾದವನ್ನು ನಿಷೇಧಿಸಲಾಗಿತ್ತು. ಪಡುತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು.
ಸಿಂಪಡಣೆ ರೂಮರ್ : ಕೊರೊನಾ ವೈರಾಣು ನಾಶಪಡಿಸುವ ನಿಟ್ಟಿನಲ್ಲಿ ಸರಕಾರದ ವತಿಯಿಂದ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ ಎಂಬ ಕಿಡಿಗೇಡಿಗಳು ಹಬ್ಬಿಸಿದ ವದಂತಿಯಿಂದಾಗಿ ಕೆಲ ಹಿರಿಯರು ಮನೆಯಿಂದ ಅಂಗಳಕ್ಕೆ ಕಾಲಿಡಲೂ ಹಿಂಜರಿಯುತ್ತಿದ್ದರು. ಅಲ್ಲದೇ, ಕೆಲವೆಡೆ ಈ ವದಂತಿಯಿಂದಾಗಿ ಕುಡಿಯುವ ನೀರಿನ ಬಾವಿಗಳಿಗೆ ಟಾರ್ಪಲು ಹಾಸಿದ ನಿದರ್ಶನವೂ ಕಂಡುಬಂತು.
ವಿದೇಶಿಗರ ಆಗಮನ-ಆತಂಕಗೊಂಡ ಜನತೆ : ವಿದೇಶದಲ್ಲಿ ಉದ್ಯೋಗದಲ್ಲಿದ್ದು ಇತ್ತೀಚೆಗೆ ಊರಿಗೆ ಬಂದವರು ಮತ್ತು ಪದೇ ಪದೇ ವಿದೇಶಕ್ಕೆ ಭೇಟಿ ನೀಡಿ ಬರುವ ಉದ್ಯಮಿಗಳು 14 ದಿನಗಳ ಕಾಲ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಬಾರದು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಕೇಳಿಬಂತು.
ವೃತ್ತಿ ಪರತೆ ಮೆರೆದ ವೈದ್ಯರು-ದಾದಿಯರು: ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಂಖ್ಯೆ ವಿರಳವಾಗಿತ್ತು. ಆದರೂ ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಕಾರ್ಯನಿರ್ವಹಿಸುವ ಮೂಲಕ ವೃತ್ತಿಪರತೆ ಮೆರೆದರು. ಈ ನಿಟ್ಟಿನಲ್ಲಿ ವೈದ್ಯರ, ಆಸ್ಪತ್ರೆ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕ ಪ್ರಶಂಸೆ ವ್ಯಕ್ತವಾಗುತ್ತಿತ್ತು.
ಅತ್ತೂರು ಚರ್ಚ್‌ನಲ್ಲೂ ಧಾರ್ಮಿಕ ಕ್ರಿಯೆಯಿಲ್ಲ : ಮಾ. 19ರಿಂದ ಅತ್ತೂರು ಸಾಂತ್ ಲಾರೆನ್ಸ್ ಬಸಿಲಿಕಾದಲ್ಲಿ ಯಾವುದೇ ಧಾರ್ಮಿಕ ವಿಧಿಗಳನ್ನು ನಡೆಸಲಾಗುತ್ತಿಲ್ಲ. ಈ ಕುರಿತು ಈಗಾಗಲೇ ಭಕ್ತರಿಗೆ ಮಾಹಿತಿ ನೀಡಲಾಗಿದ್ದು, ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಭಕ್ತರ ಭೇಟಿಯನ್ನು ನಿಷೇಧಿಸಲಾಗಿದೆ. ಗುರುವಾರದ ನವೀನ ಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯವನ್ನೂ ಸ್ಥಗಿತಗೊಳಿಸಲಾಗಿತ್ತು ಎಂದು ಅತ್ತೂರು ಚರ್ಚ್‌ನ ಪ್ರಧಾನ ಧರ್ಮಗುರು ಫಾ| ಜಾರ್ಜ್ ಥಾಮಸ್ ಡಿ ಸೋಜಾ ಹೇಳಿದರು.
ಪ್ರಧಾನ ಮಂತ್ರಿಯವರ ಕರೆಗೆ ಓಗೊಟ್ಟ ಜನತೆ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಇದರಿಂದ ಕೊರೊನಾ ವೈರಾಣು ಸರಪಳಿ ತಡೆಯಲು ಸಾಧ್ಯವಿದ್ದು, ಮುಂದಿನ ದಿನಗಳಲ್ಲೂ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. –ಮಹಾವೀರ ಹೆಗ್ಡೆ ಬಿಜೆಪಿ ಕ್ಷೇತ್ರಾಧ್ಯಕ್ಷರು, ಕಾರ್ಕಳ
ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಜಾಗೃತಿ ಮೂಡಿಸುವಲ್ಲಿ ಜನತಾ ಕರ್ಫ್ಯೂ ಒಂದೊಳ್ಳೆಯ ಹೆಜೆc. ಸರಕಾರ ಮುಂದಿನ ಪರಿಸ್ಥಿತಿ ತಿಳಿದುಕೊಂಡು ಇಂತಹದ್ದೇ ಪರಿಣಾಮಕಾರಿ ಕಾರ್ಯಸೂಚಿ ನೀಡಬೇಕು. ವೈದ್ಯರ, ದಾದಿಯರ, ಆರೋಗ್ಯ ಇಲಾಖೆಯವರ ಸೇವೆ ಸ್ತುತ್ಯರ್ಹ. ಸಮಾಜ ಅವರ ಕಾರ್ಯವನ್ನು ಅಭಿನಂದಿಸಬೇಕು.-ಬಿಪಿನ್ ಚಂದ್ರಪಾಲ್ ಕಾಂಗ್ರೆಸ್ ವಕ್ತಾರರು
ಮಹಾಮಾರಿ ಕೊರೊನಾದಿಂದಾಗಿ ಚೀನಾ, ಇಟಲಿ ಮೊದಲಾದ ದೇಶಗಳು ತತ್ತರಿಸಿ ಹೋಗಿವೆ. ಭಾರತದಲ್ಲೂ ಕೊರೊನಾ ಭೀತಿ ಎದುರಾಗುತ್ತಿರುವ ಸಂದರ್ಭ ದೇಶವನ್ನು ಕೊರೊನಾದಿಂದ ಮುಕ್ತವಾಗಿಸುವ ನಿಟ್ಟಿನಲ್ಲಿ ಜನತಾ ಕರ್ಫ್ಯೂನಂತ ನಿರ್ಧಾರ ಬಹಳ ಪರಿಣಾಮಕಾರಿ. -ವೇದವ್ಯಾಸ ನಾಯಕ್ ಅಧ್ಯಕ್ಷ ಜೆಡಿಎಸ್ ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.