ಹೋಮ್ ಕ್ವಾರಂಟೈನ್: ಯಾರ ಹೊಣೆಗಾರಿಕೆ ಎಷ್ಟೆಷ್ಟು ?
Team Udayavani, Mar 28, 2020, 12:00 PM IST
ಮಂಗಳೂರು: ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಬಹಳ ಜನಪ್ರಿಯವಾಗಿರುವ ಪದವೆಂದರೆ ಗೃಹವಾಸ (ಹೋಮ್ ಕ್ವಾರಂಟೈನ್). ಸ್ವಲ್ಪ ಕಠಿನವಾಗಿ ಹೇಳುವುದಾದರೆ ಗೃಹ ಬಂಧನವೆನಿಸಲೂ ಬಹುದು.
ಮಾರ್ಚ್ ತಿಂಗಳಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಹಲವಾರು ಮಂದಿ ವಿದೇಶದಿಂದ ಮರಳಿದ್ದಾರೆ. ಇವರೆಲ್ಲರೂ ಭಾರತಕ್ಕೆ ವಾಪಸಾದ ಅವಧಿಯಲ್ಲಿ ಜಗತ್ತಿನ ಹಲವು ದೇಶಗಳಲ್ಲಿ ಕೋವಿಡ್ 19 ವೈರಸ್ ಹಬ್ಬಿತ್ತು. ಸಾಂಕ್ರಾಮಿಕ ರೋಗದ ಭೀತಿ ವ್ಯಾಪಿಸಿತ್ತು. ಇದೊಂದು ಸಾಂಕ್ರಾಮಿಕ ರೋಗವಾಗಿದ್ದರಿಂದ ಹಾಗೂ ಯಾವುದೇ ಔಷಧ ಇನ್ನೂ ಲಭ್ಯವಿರದ ಕಾರಣ ಮುನ್ನೆಚ್ಚರಿಕೆ ಕ್ರಮವೇ ಬಹಳ ಪ್ರಮುಖವೆಂದು ನಿರ್ಧರಿಸಲಾಗಿದೆ. ಜಗತ್ತಿನ ಎಲ್ಲ ರಾಷ್ಟ್ರಗಳೂ ಇದಕ್ಕಾಗಿ ಮುಂಜಾಗ್ರತಾ ಕ್ರಮಗಳಿಗೆ ಹೆಚ್ಚು ಗಮನ ಕೊಡುತ್ತಿವೆ. ಈ ಹಿನ್ನೆಲೆಯಲ್ಲಿ ಈ ನಿಗದಿತ ಅವಧಿಯಲ್ಲಿ ವಿದೇಶದಿಂದ ಮರಳಿ ಬಂದವರಿಗೆ ವಿಮಾನ ನಿಲ್ದಾಣದಲ್ಲೇ ಆರೋಗ್ಯ ತಪಾಸಣೆ ನಡೆಸಿ, 14 ದಿನಗಳ ಗೃಹ ವಾಸ ಕಡ್ಡಾಯಗೊಳಿಸಿ ಮೊಹರು ಹಾಕುತ್ತಾರೆ. ಇದಕ್ಕೆ ಕಾರಣವೆಂದರೆ, ಆ ಅವಧಿಯೊಳಗೆ ಕೊರೊನಾ ಬಾಧೆಯ ಲಕ್ಷಣಗಳು ಒಂದುವೇಳೆ ಕಂಡು ಬಂದರೆ ಅದು ಎಲ್ಲರಿಗೂ ಹರಡಬಾರದು ಎಂಬುದು.
ಆದರೆ ಹೀಗೆ ಗೃಹ ವಾಸದಲ್ಲಿರುವವರು ನಿಯಮಗಳನ್ನೂ ಮೀರಿ ಎಲ್ಲೆಲ್ಲೋ ತಿರುಗಾಡುತ್ತಿರುವುದು ಕೋವಿಡ್ 19 ವ್ಯಾಪಿಸಿಕೊಳ್ಳಲು ಕಾರಣವಾಗುತ್ತಿದೆ ಎಂಬ ಆತಂಕ ಇಡೀ ಸಮಾಜವನ್ನು ವ್ಯಾಪಿಸಿಕೊಂಡಿದೆ. ಇದೇ ಸಂದರ್ಭದಲ್ಲಿ
ಅಂಥ ವ್ಯಕ್ತಿ ಹೊರಗೆ ಹೋದದ್ದನ್ನು ಗಮನಿಸಿದರೆ, ಜಿಲ್ಲಾಡಳಿತಕ್ಕೆ ತಿಳಿಸಬೇಕೆಂದು ಇದ್ದರೂ ನಾಗರಿಕರೂ ಸುಮ್ಮನಿರುತ್ತಿದ್ದಾರೆ ಎಂಬ ಅಪವಾದವೂ ಕೇಳಿಬರುತ್ತಿದೆ. ಈ ರೋಗವನ್ನು ತಡೆಯುವುದು ಬರೀ ಸರಕಾರದ ಹೊಣೆಯಲ್ಲ, ಪ್ರತಿ ನಾಗರಿಕರ ಹೊಣೆಯೂ ಹೌದು. ಈ ಹಿನ್ನೆಲೆಯಲ್ಲಿ ಗೃಹ ವಾಸದಲ್ಲಿರುವ ವ್ಯಕ್ತಿಯ ಸಾಮಾಜಿಕ ಜವಾಬ್ದಾರಿ ಹಾಗೂ ಪ್ರತಿ ನಾಗರಿಕರನ ಜವಾಬ್ದಾರಿ ಇಲ್ಲಿದೆ. ಈ ಮೂಲಕ ರೋಗವನ್ನು ತಡೆಯುವಲ್ಲಿ ವಹಿಸುವ ಪಾತ್ರ ಹಾಗೂ ಕೈಗೊಳ್ಳುವ ಸಾಧನೆ ಅನನ್ಯ.
ಗೃಹ ವಾಸದಲ್ಲಿರುವವರ ಸಾಮಾಜಿಕ ಜವಾಬ್ದಾರಿ
– ರೋಗ ಲಕ್ಷಣಗಳನ್ನು ಹೊಂದಿದ್ದರೆ, ಸಮಾಜದ ಇನ್ನೊಬ್ಬನಿಗೆ ಹರಡದೇ, ಅದು ಸಾಮುದಾಯಿಕ ಸಾಂಕ್ರಾಮಿಕ ರೋಗವಾಗದಂತೆ ತಡೆಯುವಲ್ಲಿ ತನ್ನ ಕೊಡುಗೆ ನೀಡಿದಂತಾಗುತ್ತದೆ.
– ಗೃಹಬಂಧನದ ವ್ಯಕ್ತಿ ಹೊರಹೋದರೆ ಕೊರೊನಾವನ್ನು ಕೈಎತ್ತಿ ಬೇರೆಯವರಿಗೆ ನೀಡಿದಂತೆ; ಬದಲಾಗಿ ಮನೆಯೊಳಗೆ ಇದ್ದರೆ ಬೇರೆಯವರನ್ನು ಮಹಾಮಾರಿಯಿಂದ ರಕ್ಷಿಸಿದ್ದಕ್ಕೆ ಸಮಾನ.
– ಒಬ್ಬ ವ್ಯಕ್ತಿಯಿಂದ ಸಾಮಾನ್ಯವಾಗಿ 100 ಜನರಿಗೆ ಹರಡುವುದು ತಡೆದರೆ, ಅದು ಜಿಲ್ಲೆಯಲ್ಲಿ 1 ಲಕ್ಷ ಜನರನ್ನು ಸಂರಕ್ಷಿಸಿದಂತಾಗುತ್ತದೆ.
– ದೇಶ ಸೇವೆ ಮಾಡುವ ರೀತಿಯಲ್ಲೇ ಇದೂ ಸಹ ದೇಶ ಸೇವೆ. ಗೃಹ ವಾಸ ಸೂತ್ರ ತಪ್ಪದೇ ಪಾಲಿಸುವ ಮೂಲಕ ಕೊರೊನಾ ಸಮರದಲ್ಲಿ ದೇಶಕ್ಕೆ ಸಹಾಯ ಮಾಡಿದಂತೆ.
– ಮನೆಯ ಹೊರಹೋಗಬಾರದು, ಜತೆಗೆ ಮನೆಮಂದಿಯ ಜತೆಗೂ ಬೆರೆಯಬಾರದು.. ಬೆರೆತರೆ ಮನೆಮಂದಿಯ ಕುಟುಂಬವನ್ನೇ ಆ ಮೂಲಕ ಸಮಾಜವನ್ನೇ ಸ್ವತಃ ನಿರ್ನಾಮ ಮಾಡಿದಂತಾಗುತ್ತದೆ. ಇದು ಸರ್ವಥಾ ಸಲ್ಲದು.
ಸಾಮಾನ್ಯ ನಾಗರಿಕನ ಸಾಮಾಜಿಕ ಜವಾಬ್ದಾರಿ
– ಒಬ್ಬ ಗೃಹಬಂಧನದ ವ್ಯಕ್ತಿ ಹೊರಗಡೆ ಇರುವುದನ್ನು ಆರೋಗ್ಯ ಇಲಾಖೆಗೆ ತಿಳಿಸಿದರೆ ಅದರಿಂದ ನಾವು ಮಾಡುವ ಉಪಕಾರವೇನು ಗೊತ್ತೇ? ಇಡೀ ಒಂದು ಸಮಾಜಕ್ಕೆ ಅಂಟಬಹುದಾದ ಸಾಂಕ್ರಾಮಿಕ ರೋಗವನ್ನು ತಡೆಯುವಲ್ಲಿ ಒಂದು ಅಂಶ ಯಶಸ್ವಿಯಾದಂತೆ. ಇದೂ ಒಂದು ಅತ್ಯಮೂಲ್ಯ ಕೊಡುಗೆ.
– ವರದಿ ಪಾಸಿಟಿವ್/ನೆಗೆಟಿವ್ ಬಗ್ಗೆ ಯೋಚಿಸಬೇಕಿಲ್ಲ. ಆದರೆ ಗೃಹ ವಾಸದಲ್ಲಿರುವವರಿಗೆ ನಿಯಮವನ್ನು ನೆನಪಿಸಿದಂತಾಗುತ್ತದೆ. ಜತೆಗೆ ಅದರಿಂದ ಇನ್ನಷ್ಟು ಅನಾಹುತಗಳನ್ನು ತಡೆಯಬಹುದು.
– ಗೊತ್ತಿಲ್ಲದೆ, ಅರಿವಿಲ್ಲದೆ ಸಮಾಜದೊಳಗೆ ಪಸರಿಸಬಹುದಾದ ಕೊರೊನಾ ಸರಪಳಿಯನ್ನು ಕಡಿಯುವಲ್ಲಿ ನಿಮ್ಮ ಕೊಡುಗೆಯೂ ಸೇರಿದಂತಾಗುತ್ತದೆ.
– ಒಬ್ಬನ ನಡೆಯನ್ನು ಪ್ರಶ್ನಿಸಿ ಅಥವಾ ಇಲಾಖೆಗಳಿಗೆ ತಿಳಿಸಿ ಅಕ್ಕಪಕ್ಕ, ಅವನ ಓಡಾಟದ ಹಾಗೂ ಅವನ ಅತಿ ಪ್ರೀತಿಪಾತ್ರರನ್ನೂ, ಸಮುದಾಯವನ್ನು ಕಾಪಾಡಿದಂತಾಗುತ್ತದೆ.
– ಇದೆಲ್ಲದಕ್ಕಿಂತಲೂ ಮುಖ್ಯವಾಗಿ ಸಮಾಜ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ನಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಿದಂತಾಗು¤ದೆ.
ಸಮಾಜದ ಸ್ವಾಸ್ಥಕ್ಕೆ ಮುಖ್ಯ ಕಾರ್ಯ
ಗೃಹಬಂಧನವೆಂಬುದು ವೈಯಕ್ತಿಕ ರಕ್ಷಣೆ ಒಂದೆಡೆಯಾದರೆ, ಸಮಾಜದ ಸ್ವಾಸ್ಥ್ಯ ಕಾಪಾಡುವುದು ಮುಖ್ಯ ಕಾರ್ಯವಾಗಿದೆ ಎಂಬ ಗುರಿ ನಮ್ಮದಾಗಬೇಕು. ಈ ಕುರಿತಂತೆ ಸಾಮಾನ್ಯ ವ್ಯಕ್ತಿಯಲ್ಲಿಯೂ ಅರಿವು ಮೂಡಬೇಕು.
– ಡಾ/ ಸುಭೋದ್ ಭಂಡಾರಿ, ವೈದ್ಯರು, ಮಂಗಳೂರು
ಸಾಮುದಾಯಿಕವಾಗಿ ಕೊರೊನಾ ಹರಡುವುದನ್ನು ತಪ್ಪಿಸಲು ಹಲವಾರು ಕ್ರಮಗಳನ್ನು ಅನುರಸರಿಸಲಾಗುತ್ತಿದೆ. ಆ ಪೈಕಿ ಗೃಹ ವಾಸ ಅಥವಾ ಗೃಹ ಬಂಧನವೂ ಒಂದು. ಗೃಹ ವಾಸಕ್ಕೆ ಗುರಿಯಾದವರು, ಜ್ವರದ ಲಕ್ಷಣವಿದ್ದವರು ಮನೆಯೊಳಗೇ ಇದ್ದರೆ ಕೊರೊನಾ ಸರಪಳಿಯನ್ನು ಕಡಿತ ಮಾಡಿದಂತಾಗುತ್ತದೆ.
– ಸಿಂಧೂ ಬಿ. ರೂಪೇಶ್, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.