ಹಿತಭುಕ್ ಮಿತಭುಕ್ ಋತುಭುಕ್
Team Udayavani, Apr 1, 2020, 11:56 AM IST
ಒಂದು ಕಥೆ ಇದೆ. ಒಂದೂರಲ್ಲಿ ಒಬ್ಬ ರಾಜಕುಮಾರ. ಮದುವೆಯಾಗಲು ಚತುರಕನ್ಯೆಯನ್ನು ಹುಡುಕುತ್ತಿರುತ್ತಾನೆ. ಒಬ್ಬ ಜಾಣ ಕನ್ಯೆಯ ಬಗೆಗೆ ಆತನಿಗೆ ಯಾರೋ ಹೇಳುತ್ತಾರೆ. ಅವಳ ಮನೆಗೆ ಕನ್ಯಾ ಪರೀಕ್ಷೆಗಾಗಿ ಬರುತ್ತಾನೆ. ಆಕೆಗೆ, ಬಂದವನು ಯಾರು ಎನ್ನುವುದು ಗೊತ್ತಿರುವುದಿಲ್ಲ. ತಾನೊಬ್ಬ ಯಾತ್ರಿಕನೆಂದೂ, ಆಶ್ರಯ ಕೊಡಬೇಕೆಂದೂ ಬೇಡಿಕೊಳ್ಳುತ್ತಾನೆ. ಮನೆಯಲ್ಲಿ ಏನೂ ಇರದ ಕಾರಣ,ಅತಿಥಿಗೆ ಏನು ಆಹಾರ ಕೊಡಲಿ, ಎಂದು ಚಿಂತಾಕ್ರಾಂತಳಾದ ಆಕೆಗೆ, ಒಂದು ಹಿಡಿ ಭತ್ತ ಕೊಟ್ಟು, ಏನಾದರೂ ಅಡುಗೆ ಮಾಡುವಂತೆ ಕೇಳಿಕೊಳ್ಳುತ್ತಾನೆ.
ಆಕೆ ಆ ಭತ್ತವನ್ನು ಕುಟ್ಟಿ, ಕೇರಿ ಅಕ್ಕಿ ಮಾಡಿಕೊಳ್ಳುತ್ತಾಳೆ. ತೌಡಿನೊಂದಿಗೆ, ಒಣಗಿದ ಒಂದಿಷ್ಟು ಕಟ್ಟಿಗೆ, ಚಕ್ಕೆಗಳನ್ನು ಆರಿಸಿ ತಂದು, ಒಲೆ ಹೂಡಿ, ಅಕ್ಕಿಯನ್ನು ಕುದಿಯಲು ಇಟ್ಟು, ಗಂಜಿ ಬಸಿದುಕೊಳ್ಳುತ್ತಾಳೆ. ಒಲೆಯ ಕೆಳಗಿನ ಇದ್ದಿಲನ್ನು ಮಾರಿ, ತುಸು ಉಪ್ಪು, ಖಾರ, ಬೆಲ್ಲ, ತರುತ್ತಾಳೆ. ಹಿತ್ತಲಿನ ಗಿಡದಲ್ಲಿ ಒಂದಿಷ್ಟು ನೆಲ್ಲಿಕಾಯಿಗಳನ್ನು ಕಿತ್ತು, ಗೊಲ್ಲನೊಬ್ಬನಿಗೆ ಕೊಟ್ಟು ತುಸು ಮಜ್ಜಿಗೆ ಕೊಳ್ಳುತ್ತಾಳೆ. ಉಳಿದ ಒಂದಿಷ್ಟು ನೆಲ್ಲಿಕಾಯಿ ಜಜ್ಜಿ, ತುಸು ಬೆಲ್ಲ ಹಾಕಿ ಕುದಿಸಿ ಗೊಜ್ಜು ಮಾಡುತ್ತಾಳೆ. ಬಸಿದ ಗಂಜಿಗೆ ಉಪ್ಪು, ಹಸಿಮೆಣಸಿನ ಕಾಯಿ ಜಜ್ಜಿ ಹಾಕಿ ಕುದಿಸಿ, ರಾಜಕುಮಾರನನ್ನು ಊಟಕ್ಕೆ ಕರೆಯುತ್ತಾಳೆ. ಹಬೆಯಾಡುವ ಅನ್ನ, ಹಿತವಾದ ಮೇಲೋಗರ, ಪಕ್ಕಕ್ಕಿಷ್ಟು ಹುಳಿ, ಸಿಹಿಯ ಗೊಜ್ಜು, ಮಜ್ಜಿಗೆಯ ಊಟ ನೋಡಿ ರಾಜಕುಮಾರ ಅಚ್ಚರಿಗೊಳ್ಳುತ್ತಾನೆ. ಸ್ವಾದಭರಿತ ಊಟದಿಂದ ಸಂತೃಪ್ತನಾಗಿ ಆಕೆಯ ಕೈಹಿಡಿಯುತ್ತಾನೆ.
ಈ ಕಥೆಯ ನೀತಿ ಇಷ್ಟೇ. ಸಕಲ ಸಾಮಗ್ರಿಗಳಿ ದ್ದರೆ ಯಾರಾದರೂ ಅಡುಗೆ ಮಾಡಬಲ್ಲರು. ಏನೂ ಇಲ್ಲದೇ ಇದ್ದಾಗಲೂ ಸ್ವಾದ ತುಂಬುವುದು ಇದೆಯಲ್ಲ, ಅದೂ ಒಂದು ಕಲೆ. ಸದ್ಯದ ಪರಿಸ್ಥಿತಿಯಲ್ಲಿ, ತಿಂಗಳೊಪ್ಪತ್ತು ಅಥವಾ ಅದಕ್ಕೂ ಹೆಚ್ಚು ಕಾಲ ಮನೆಯಲ್ಲೇ ಇರಬೇಕಾಗಬಹುದು. ಮನೆಯ ಎಲ್ಲಾ ಸಾಮಗ್ರಿಗಳು ಮುಗಿಯುತ್ತಾ ಬಂದಿವೆ. ಆದರೆ, ತರಕಾರಿಗಾಗಿ ಹೊರಗೆ ಹೋಗಲೂ ಸಾಧ್ಯವಿಲ್ಲ ಅಂದಿರಾ? ಚಿಂತೆ ಬೇಡ, ಈ ಸಮಯದಲ್ಲಿ, ಕಡಿಮೆ ವಸ್ತುಗಳನ್ನು ಬಳಸಿ ಮಾಡಬಹುದಾದ ಕೆಲವು ಅಡುಗೆಗಳು ಹೀಗಿವೆ.
- ಕುದಿಯುವ ನೀರಿಗೆ ತುಸು ಬೆಲ್ಲ, ಹುಣಸೆರಸ, ಉಪ್ಪು ಹಾಕಿ ಕುದಿಸಿ. ತುಪ್ಪ, ಒಣ ಮೆಣಸಿನಕಾಯಿ, ಜೀರಿಗೆಯ ಒಗ್ಗರಣೆ ಕೊಡಿ. ಘಮಘಮ ಗೊಡ್ಡುಸಾರು ಸಿದ್ಧ. ಒಣಗಿದ ಅಮಸೋಲ್ ಸಾರನ್ನೂ ಮಾಡಬಹುದು.
- ಕಡಲೇಹಿಟ್ಟಿಗೆ ಒಂದಿಷ್ಟು ಉಪ್ಪಿಟ್ಟು ರವೆ ಬೆರೆಸಿ. ಅದಕ್ಕೆ ಉಪ್ಪು, ಖಾರ ಹಾಕಿ ಉದುರುದುರಾಗಿ ಕಲೆಸಿ ಒಗ್ಗರಣೆಯಲ್ಲಿ ಬಾಡಿಸಿ, ತುಸು ನೀರು ಹಾಕಿ ಮುಚ್ಚಿಡಿ. ಇಷ್ಟು ಮಾಡಿದರೆ, ರುಚಿಕಟ್ಟಾದ ಭರಡಾ ಪಲ್ಯ ರೆಡಿ.
- ಕಡಲೇ ಹಿಟ್ಟು ಮತ್ತು ಉಪ್ಪು ಕಲಸಿ ಈರುಳ್ಳಿ, ಹಸಿಮೆಣಸಿನಕಾಯಿಯ ಒಗ್ಗರಣೆಯಲ್ಲಿ ಹಬೆ ಬರುವವರೆಗೂ ಸಣ್ಣ ಉರಿಯಲ್ಲಿ ಕುದಿಸಿದರೆ ಝಣಕ ರೆಡಿ.
- ಕಡಲೇಬೀಜ ಹುರಿದು ಉಪ್ಪು, ಖಾರ ಹಾಕಿ ಪುಡಿ ಮಾಡಿಕೊಳ್ಳಿ. ಹೀಗೆಯೇ ಹುಚ್ಚೆಳ್ಳು, ಅಗಸೇಬೀಜದ ಪುಡಿಗಳನ್ನೂ ಪಲ್ಯದ ಬದಲಾಗಿ ರೊಟ್ಟಿ ಚಪಾತಿಗಳಿಗೆ ಬಳಸಬಹುದು.
- ಕಾಯಿತುರಿ, ಉಪ್ಪು, ಮೆಣಸಿನಕಾಳನ್ನು ಅಕ್ಕಿಯೊಂದಿಗೆ ಕುದಿಸಿದರೆ ಕಾಯಿಗಂಜಿ ರೆಡಿ.
- ಎಲ್ಲ ಬೇಳೆಗಳನ್ನು ಒಂದೊಂದು ಚಮಚ ಹುರಿದು ಒಣ ಮೆಣಸಿನಕಾಯಿ, ಕರಿಬೇವು, ಇಂಗು ಹಾಕಿ ಪುಡಿ ಮಾಡಿಕೊಳ್ಳಿ. ಹುಣಸೇರಸ ಮತ್ತು ಬೆಲ್ಲ, ಉಪ್ಪು ಹಾಕಿ ಕಲೆಸಿದರೆ ಹಸಿ ಗೊಜ್ಜು. ಇದನ್ನೇ ಒಲೆಯ ಮೇಲೆ ಇಟ್ಟು ಕುದಿಸಿದರೆ ಗಟ್ಟಿ ಕುದಿಸಿದ ಗೊಜ್ಜು.
- ಒಣಗಿದ ಹಪ್ಪಳಗಳನ್ನು ಸುಟ್ಟು, ಒಗ್ಗರಣೆಯಲ್ಲಿ ಹಾಕಿ ಉಪ್ಪು ಖಾರ ಹುಳಿ ಬೆರೆಸಿದರೆ, ಹಪ್ಪಳದ ಪಲ್ಯ ರೆಡಿ. ಹೀಗೆಯೇ ಹಪ್ಪಳದ ಚಿತ್ರಾನ್ನವನ್ನೂ ಮಾಡಬಹುದು.
- ಮೊಸರಿದ್ದರೆ ಕಡಲೇಬೇಳೆ ನೆನೆಸಿ ರುಬ್ಬಿಕೊಂಡು,ಮಜ್ಜಿಗೆಯೊಂದಿಗೆ ಬೆರೆಸಿ ಪಳದ್ಯ ಮಾಡಿಕೊಳ್ಳಿ. ಇಲ್ಲವೇ ಅಂಗಳದ ದೊಡ್ಡ ಪತ್ರೆ ಅಥವಾ ವೀಳ್ಯದೆಲೆ ಜೊತೆಗೆ ತಂಬುಳಿ ಮಾಡಿ. ಉದ್ದಿನ ಹಿಟ್ಟಿದ್ದರೆ ಮೊಸರಿನಲ್ಲಿ ಕಲೆಸಿ ಒಗ್ಗರಣೆ ಕೊಡಿ.
- ಎಲ್ಲ ವಿಧದ ಕಾಳುಗಳನ್ನು ಮೊಳಕೆ ಬರಿಸಿ ಉಸುಳಿ ಮಾಡಬಹುದು.
-ದೀಪಾ ಜೋಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.