1,500 ಕಂಕಣ ಭಾಗ್ಯಕ್ಕೆ ಕೋವಿಡ್ 19 ಅಡ್ಡಿ
Team Udayavani, Apr 6, 2020, 1:52 PM IST
ಸಾಂದರ್ಭಿಕ ಚಿತ್ರ
ಬೆಳಗಾವಿ: ಮಹಾಮಾರಿ ಕೋವಿಡ್ 19 ಹೊಡೆತ ಕಂಕಣಭಾಗ್ಯಕ್ಕೂ ಬಿದ್ದಿದ್ದು, ನಗರ ಸೇರಿದಂತೆ ಜಿಲ್ಲಾದ್ಯಂತ ನಡೆಯಬೇಕಾಗಿದ್ದ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಮದುವೆ ಸಮಾರಂಭಗಳ ಮೇಲೆ ಕರಿನೆರಳು ಬಿದ್ದಿದೆ.
ಮದುವೆ ಸಮಾರಂಭವನ್ನು ಅದ್ಧೂರಿಯಾಗಿ ಮಾಡಬೇಕು, ಸಾವಿರಾರು ಮಂದಿಗೆ ಊಟ ಹಾಕಿಸಬೇಕು, ಬ್ಯಾಂಡ್ ಬಾಜಾ ಹಚ್ಚಿ ಕುಣಿದು ಸಂಭ್ರಮಿಸಬೇಕು ಎನ್ನುವವರಿಗೆ ಕೋವಿಡ್ 19 ಮಹಾಮಾರಿಯಿಂದ ನಿರಾಸೆಯುಂಟಾಗಿದ್ದು, ಜಿಲ್ಲಾದ್ಯಂತ ನಡೆಸಲು ಉದ್ದೇಶಿಸಿದ್ದ ಮದುವೆ ಸಮಾರಂಭಗಳ ದಿನಾಂಕವನ್ನು ಮುಂದೂಡಲಾಗಿದೆ.
ಹೋಳಿ ಹುಣ್ಣಿಮೆ ಮುಗಿಯಿತೆಂದರೆ ವಿವಾಹ ಮುಹೂರ್ತಗಳು ಹೆಚ್ಚಾಗಿ ಇರುತ್ತವೆ. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಅಂತೂ ಮದುವೆ ಸೀಸನ್ ಜೋರಾಗಿಯೇ ಇರುತ್ತದೆ. 2020ರ ಮದುವೆ ಸೀಸನ್ ಆರಂಭಗೊಳ್ಳುತ್ತಿದ್ದಂತೆ ಕೋವಿಡ್ -19 ಬಂದು ಅಪ್ಪಳಿಸಿದೆ. ಇಡೀ ದೇಶ ಲಾಕ್‌ಡೌನ್ ಆಗಿದ್ದರಿಂದ ಎಲ್ಲ ಕಾರ್ಯಕ್ರಮಗಳು ರದ್ದಾಗುತ್ತಿವೆ. ಲಾಕ್‌ಡೌನ್ ಆದೇಶ ಮದುವೆಗೂ ತಟ್ಟಿದೆ.
ಮೊದಲೇ ಬುಕಿಂಗ್ ಮಾಡಿದ್ದ ಜನ: ಜಿಲ್ಲೆಯಲ್ಲಿರುವ ಸುಮಾರು 300ಕ್ಕೂ ಹೆಚ್ಚು ಮಂಗಲ ಕಾರ್ಯಾಲಯಗಳನ್ನು ಜನರು ಬುಕಿಂಗ್ ಮಾಡಿದ್ದರು. ಅನೇಕ ಮದುವೆ ದಿನಾಂಕಗಳನ್ನು ಫಿಕ್ಸ್ ಮಾಡಿದ್ದರು. 7-8 ತಿಂಗಳ ಮುಂಚೆಯೇ ಬಂದು ಕಾರ್ಯಾಲಯಗಳನ್ನು ಕಾಯ್ದಿರಿಸುತ್ತಾರೆ. ನಗರ ಸೇರಿದಂತೆ ಜಿಲ್ಲೆಯಲ್ಲಿ ಅನೇಕ ಕಾರ್ಯಾಲಯಗಳಲ್ಲಿ ನಡೆಯಬೇಕಿದ್ದ ಮದುವೆಗಳಿಗೆ ಈಗ ಬ್ರೇಕ್ ಬಿದ್ದಂತಾಗಿದೆ.
ಉದ್ಯೋಗಗಳಿಗೂ ಬರೆ: ಈ ಶುಭ ಮಂಗಲ ಕಾರ್ಯಕ್ರಮದ ಮೇಲೆ ಅವಲಂಬಿತರಾಗಿರುವ ಅಡುಗೆ ಭಟ್ಟರು, ಪುರೋಹಿತರು, ಪೆಂಡಾಲ್‌ದವರು, ಬ್ಯಾಂಡ್ ಬಾಜಾದವರು, ಪೇಂಟರ್, ಗಾಯಕರು, ಕೆಲಸಗಾರರು ಸೇರಿದಂತೆ ಅನೇಕದ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ. ಪ್ರತಿ ವರ್ಷ ಮದುವೆ ಸೀಸನ್‌ಗಳನ್ನೇ ನಂಬಿಕೊಂಡು ಉದ್ಯೋಗ ಮಾಡುತ್ತಿರುವವರಿಗೆ ಕೋವಿಡ್ 19 ಭಾರೀ ಹೊಡೆತ ನೀಡಿದೆ. ಲಕ್ಷಾಂತರ ರೂ. ಬಂಡವಾಳ ವಿನಿಯೋಗಿಸಿ ಉದ್ಯೋಗ ನಡೆಸುತ್ತಿರುವ ಇವರಿಗೆ ಈಗ ದಿಕ್ಕು ತೋಚದಂತಾಗಿದೆ.
ಈ ಸಲ ಅಧಿಕ ತಿಂಗಳು ಬಂದಿದ್ದರಿಂದ ಜುಲೈದಿಂದ ನವೆಂಬರ್‌ವರೆಗೆ ಮದುವೆ ಮುಹೂರ್ತಗಳೇ ಇಲ್ಲ. ನಾಲ್ಕು ತಿಂಗಳ ಅವ ಧಿಯಲ್ಲಿ ಮುಹೂರ್ತ ಇಲ್ಲದ್ದಕ್ಕೆ ಜನರು ಹೆಚ್ಚಾಗಿ ಏಪ್ರಿಲ್, ಮೇ ತಿಂಗಳಲ್ಲಿ ಹೆಚ್ಚಿನ ಮುಹೂರ್ತಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಮಂಗಲ ಕಾರ್ಯಾಲಯಕ್ಕೆ ಮೊದಲೇ ಹಣ ನೀಡಿ ಕಾಯ್ದಿರಿಸಲಾಗಿರುತ್ತದೆ. ಆಡ್ವಾನ್ಸ್ ಹಣ ನೀಡುವುದರ ಜತೆಗೆ ಹೂವಿನ ಅಲಂಕಾರದವರನ್ನೂ ಬುಕಿಂಗ್ ಮಾಡಲಾಗಿತ್ತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದುವೆಗಳೆಲ್ಲವೂ ಲಾಕ್ ಆಗಿವೆ.
ಯಾದಿ ಪೇ ಶಾದಿಗಳೂ ಹೆಚ್ಚು : ಲಾಕ್‌ಡೌನ್ ವೇಳೆ ಸಮಾರಂಭಗಳಲ್ಲಿ ಜನದಟ್ಟನೆ ಮಾಡಬಾರದು ಎಂಬ ಸರ್ಕಾರದ ಸೂಚನೆಯಂತೆ ಕೆಲವು ಕಡೆಗೆ ಯಾದಿ ಪೇ ಶಾದಿ ಸಂಪ್ರದಾಯಗಳೂ ನಡದಿವೆ. ವರನ ಕಡೆಗೆ ನಾಲ್ವರು ಹಾಗೂ ವಧು ಕಡೆಯವರು ನಾಲ್ವರು ಸೇರಿ ಪುರೋಹಿತರ ಸಮ್ಮುಖದಲ್ಲಿ ಮದುವೆಗಳೂ ಅಲ್ಲಲ್ಲಿ ನಡೆದಿವೆ. ಒಂದು ಕಡೆ ಕೋವಿಡ್ 19 ಹೊಡೆತ ಬಿದ್ದರೂ ಇನ್ನೊಂದೆಡೆ ಆಡಂಬರದ ಮದುವೆಗಳಿಗೂ ಬ್ರೇಕ್ ಬಿದ್ದಂತಾಗಿದೆ.
ಸಪ್ತಪದಿ ಯೋಜನೆಗೆ ತಟ್ಟಿದ ಬಿಸಿ : ಮದುವೆಗೆ ದುಂದು ವೆಚ್ಚ ಮಾಡಿ ಬಡ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಆರಂಭಿಸಿದ್ದ ಸಪ್ತಪದಿ ಸಾಮೂಹಿಕ ವಿವಾಹ ಯೋಜನೆಗೂ ಕೋವಿಡ್ 19 ಬಿಸಿ ತಟ್ಟಿದೆ. ಸವದತ್ತಿಯ ಯಲ್ಲಮ್ಮ ದೇವಸ್ಥಾನದಲ್ಲಿ ಏ. 26ರಂದು ನಡೆಯಬೇಕಾಗಿದ್ದ ಸಾಮೂಹಿಕ ವಿವಾಹ ಸಮಾರಂಭವನ್ನು ಸರ್ಕಾರ ಸದ್ಯದ ಮಟ್ಟಿಗೆ ರದ್ದುಗೊಳಿಸಿದೆ. ಈಗಾಗಲೇ ಬಹುತೇಕ ತಯಾರಿ ಮಾಡಿಕೊಂಡು ಸಪ್ತಪದಿ ಯೋಜನೆಯಡಿ ಸಾಮೂಹಿಕ ವಿವಾಹಗಳು ನೋಂದಣಿ ಆಗುತ್ತಿದ್ದವು.
ಈವರೆಗೆ ಏಪ್ರಿಲ್ ತಿಂಗಳಲ್ಲಿ ನಡೆಯಬೇಕಾಗಿದ್ದ 18 ಮದುವೆ ದಿನಾಂಕಗಳನ್ನು ಬುಕಿಂಗ್ ಮಾಡಲಾಗಿತ್ತು. ಆದರೆ ದೇಶಾದ್ಯಂತ ಲಾಕ್‌ಡೌನ್ ಹಿನ್ನೆಲೆಯಲ್ಲಿ ಈಗ ಯಾವುದೇ ಸಮಾರಂಭ ಇಲ್ಲ. ಬುಕಿಂಗ್ ಮಾಡಿದವರು ದಿನಾಂಕ ಮುಂದೂಡಬಹುದು ಅಥವಾ ಅಡ್ವಾನ್ಸ್ ನೀಡಿದ್ದನ್ನು ವಾಪಸ್ ಕೊಡಲಾಗುವುದು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಾಗ ಮತ್ತೆ ಬುಕಿಂಗ್ ಆರಂಬಿಸಲಾಗುವುದು. -ಶಿವಾಜಿ ಹಂಗೀರಕರ, ಅಧ್ಯಕ್ಷರು, ಮರಾಠಾ ಮಂದಿರ
-ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Assembly Election: “ಮಹಾ’ ಅಖಾಡದಲ್ಲಿ ಕರುನಾಡ ನಾಯಕರ ಹವಾ!
Belagavi: ಆಟೋ ಚಾಲಕನ ಮೇಲೆ ಅಪರಿಚಿತ ದುಷ್ಕರ್ಮಿಗಳಿಂದ ಹಲ್ಲೆ
Belagavi: ಅಕ್ರಮ ಆಸ್ತಿ ಸಂಪಾದನೆ ಆರೋಪ… ಬೆಳಗಾವಿ ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.