9 ನಿಮಿಷದಲ್ಲಿ 1,200 ಮೆ.ವ್ಯಾ. ವಿದ್ಯುತ್ ಉಳಿಕೆ
Team Udayavani, Apr 7, 2020, 1:24 PM IST
ಬೆಂಗಳೂರು: ರಾಜ್ಯದ ಜನ ಕೇವಲ ಒಂಬತ್ತು ನಿಮಿಷದಲ್ಲಿ ತಮಗರಿವಿಲ್ಲದೆ ಇಡೀ ಬೆಂಗಳೂರು ನಿತ್ಯ ಸುಡುವ ವಿದ್ಯುತ್‌ನ ಕಾಲುಭಾಗದಷ್ಟು ಇಂಧನ ಉಳಿತಾಯ ಮಾಡಿದ್ದಾರೆ!
ಪ್ರಧಾನಿ ನರೇಂದ್ರ ಮೋದಿ ನೀಡಿದ “ಒಗ್ಗಟ್ಟಿನ ಕರೆ’ಗೆ ರಾಜ್ಯದಲ್ಲಿ ಅಭೂತಪೂರ್ವ ಸ್ಪಂದನೆ ದೊರಕಿತು. ಜನ ಭಾನುವಾರ ರಾತ್ರಿ 9 ಗಂಟೆ ಆಗುತ್ತಿದ್ದಂತೆ ಎಲ್ಲೆಡೆ ವಿದ್ಯುದ್ದೀಪಗಳನ್ನು ಆರಿಸಿ, ಮೋಂಬತ್ತಿ, ಮೊಬೈಲ್ ಲೈಟ್, ಟಾರ್ಚ್ ಬೆಳಗುವ ಮೂಲಕ ಬೆಂಬಲಿಸಿದರು. ಪರಿಣಾಮ ಆ ಒಂಬತ್ತು ನಿಮಿಷಗಳಲ್ಲಿ ರಾಜ್ಯದ ವಿದ್ಯುತ್ ಬಳಕೆ ಏಕಾಏಕಿ 1,200 ಮೆ.ವ್ಯಾ. ಕುಸಿತ ಕಂಡಿತ್ತು. ಇದು ಒಟ್ಟಾರೆ ಬೆಂಗಳೂರು ಒಂದು ದಿನಕ್ಕೆ ಬಳಕೆ ಮಾಡುವ (ನಿತ್ಯದ ಬಳಕೆ 4,800 ಮೆ.ವ್ಯಾ.) ವಿದ್ಯುತ್‌ನ ಶೇ. 25ರಷ್ಟಾಗಿದೆ.
ಇನ್ನು 9 ನಿಮಿಷ ಕಾಲ ಸಾರ್ವಜನಿಕರು ಗೃಹಬಳಕೆ ವಿದ್ಯುತ್ ದೀಪಗಳನ್ನು ಆರಿಸಿ ದರೆ, 700ರಿಂದ 800 ಮೆಗಾವ್ಯಾಟ್ ನಷ್ಟು ಬೇಡಿಕೆ ಇಳಿಕೆಯಾಗುವ ಅಂದಾಜು ಇತ್ತು. ಆದರೆ, ದಿಢೀರ್ 1,200 ಮೆಗಾವ್ಯಾಟ್ ವಿದ್ಯುತ್ ಬಳಕೆ ಕಡಿಮೆಯಾಗಿತ್ತು ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್. ಮಂಜುಳಾ ಹೇಳಿದರು.
ಉಷ್ಣ ವಿದ್ಯುತ್ ಸ್ಥಾವರಗಳನ್ನು ಸಾಧ್ಯವಾದಷ್ಟು ಕನಿಷ್ಠ ಉತ್ಪಾದನೆಗೆ ಸೀಮಿತಗೊಳಿಸಲಾಗಿತ್ತು. ಜಲವಿದ್ಯುತ್ ಘಟಕಗಳಲ್ಲಿ ದಿಢೀರ್ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲು ಹಾಗೂ ದಿಢೀರ್ ಗರಿಷ್ಠ ಉತ್ಪಾದನೆ ಮಾಡಲು ಅವಕಾಶವಿರುವುದರಿಂದ ಜಲವಿದ್ಯುತ್ ಘಟಕಗಳನ್ನು ಆ 9 ನಿಮಿಷಗಳ ಅವಧಿಯಲ್ಲಿ ಸ್ಥಗಿತಗೊಳಿಸಿ ಮತ್ತೆ ಚಾಲನೆ ನೀಡುವ ಮೂಲಕ ಪರಿಸ್ಥಿತಿ ನಿಭಾಯಿಸಲಾಯಿತು. ಈ ಪ್ರಕ್ರಿಯೆಯಿಂದ ಉಳಿತಾಯದ ಪ್ರಶ್ನೆ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬೆಸ್ಕಾಂನಲ್ಲಿ 620 ಮೆಗಾವ್ಯಾಟ್ ಇಳಿಕೆ: ಬೆಸ್ಕಾಂ ವ್ಯಾಪ್ತಿಯಲ್ಲಿ 9 ನಿಮಿಷಗಳ ಅವಯಲ್ಲಿ ಸುಮಾರು 620 ಮೆಗಾವ್ಯಾಟ್‌ನಷ್ಟು ವಿದ್ಯುತ್ ಬಳಕೆ ಇಳಿಕೆಯಾಗಿತ್ತು. ಇಲಾಖೆಯ ಉನ್ನತ ಅಧಿಕಾರಿಗಳು, ಕೆಪಿಟಿಸಿಎಲ್, ಕೆಪಿಸಿಎಲ್, ಇತರೆ ಎಸ್ಕಾಂಗಳ ಸಹಯೋಗದಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಯಿತು. ಗೃಹಬಳಕೆ ವಿದ್ಯುತ್ ದೀಪ ಹೊರತುಪಡಿಸಿ ಉಳಿದ ವಿದ್ಯುತ್ ಉಪಕರಣಗಳನ್ನು ಬಂದ್ ಮಾಡದಂತೆ ಎಸ್‌ಎಂಎಸ್ ಸಂದೇಶ ಸೇರಿದಂತೆ ನಾನಾ ರೀತಿ ಪ್ರಚಾರ ಮನವಿಗೆ ಗ್ರಾಹಕರು ಸ್ಪಂದಿಸಿದ್ದಾರೆ. 9 ನಿಮಿಷ ವಿದ್ಯುತ್ ದೀಪ ಆರಿಸಿದ್ದರ ಪರಿಣಾಮ ಯಾವುದೇ ಲಾಭ, ಉಳಿತಾಯದ ಪ್ರಶ್ನೆ ಉದ್ಭವಿಸುವುದಿಲ್ಲ. ಬೇಡಿಕೆಯಷ್ಟು ವಿದ್ಯುತ್ ಬಳಕೆಯಾಗುತ್ತದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ. ರಾಜೇಶ್‌ಗೌಡ ತಿಳಿಸಿದರು.
ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಬೇಸಿಗೆಯಲ್ಲೇ ವಿದ್ಯುತ್ ಬೇಡಿಕೆ 6000 ಮೆಗಾವ್ಯಾಟ್‌ಗೆ ಏರಿಕೆಯಾಗಿತ್ತು. ಆದರೆ ಸದ್ಯ ಲಾಕ್ ಡೌನ್‌ನಿಂದಾಗಿ ಬೇಡಿಕೆ 4,800 ಮೆಗಾವ್ಯಾಟ್‌ನಷ್ಟಿದೆ. ವರ್ಷದಿಂದ ವರ್ಷಕ್ಕೆ ವಿದ್ಯುತ್ ಬೇಡಿಕೆ 300- 400 ಮೆಗಾವ್ಯಾಟ್‌ನಷ್ಟು ಹೆಚ್ಚಾಗುತ್ತದೆ. ಆದರೆ ಈ ಬಾರಿ ಬೇಡಿಕೆ 4,800 ಮೆಗಾವ್ಯಾಟ್‌ನಷ್ಟಿದೆ. ಕೈಗಾರಿಕೆ ಹಾಗೂ ವಾಣಿಜ್ಯ ಬಳಕೆ ವಿದ್ಯುತ್ ಪ್ರಮಾಣ ಕಡಿಮೆಯಿರುವ ಕಾರಣ ಬೇಡಿಕೆ ಇಳಿಕೆಯಾಗಿದೆ ಎಂದು ಹೇಳಿದರು.
9 ನಿಮಿಷದ ನಂತರ ದೀಪಗಳು ಬೆಳಗಲಾರಂಭಿಸುತ್ತಿದ್ದಂತೆ ವಿದ್ಯುತ್ ಬಳಕೆ ಸಹಜ ಸ್ಥಿತಿಗೆ ಮರಳಿತು. ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್), ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್), ಎಲ್ಲ ಎಸ್ಕಾಂಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದ್ದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗಿಲ್ಲ ಎಂದು ಇಂಧನ ಇಲಾಖೆ ತಿಳಿಸಿದೆ.
ರಾಜ್ಯಾದ್ಯಂತ ವಿದ್ಯುತ್ ಬೇಡಿಕೆ 225 ದಶಲಕ್ಷ ಯೂನಿಟ್‌ನಷ್ಟಿದ್ದು, ಲಾಕ್‌ಡೌನ್‌ನಿಂದಾಗಿ ಸುಮಾರು 30 ದಶಲಕ್ಷ ಯೂನಿಟ್ ನಷ್ಟು ಬೇಡಿಕೆ ಇಳಿಕೆಯಾಗಿದೆ. ಲಾಕ್‌ಡೌನ್‌ಗೂ ಮೊದಲು ದಿನದ ಪೀಕ್ ಲೋಡ್ 12,500 ಮೆಗಾವ್ಯಾಟ್‌ನಷ್ಟಿತ್ತು. ಈಗ ಬೇಡಿಕೆ 9000ದಿಂದ 10,000 ಮೆಗಾವ್ಯಾಟ್‌ನಷ್ಟಿದೆ. – ಡಾ.ಎನ್.ಮಂಜುಳಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.