ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್
Team Udayavani, Apr 8, 2020, 1:08 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋವಿಡ್ 19 ವೈರಸ್ ಹಾವಳಿಯನ್ನು ಹತ್ತಿಕ್ಕುವ ಸಲುವಾಗಿ ಭಾರತದಲ್ಲಿ 21 ದಿನಗಳ ಲಾಕ್
ಡೌನ್ ಜಾರಿಯಲ್ಲಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲೂ ಜನಜೀವನ ಮನೆಗಳಿಗೇ
ಸೀಮಿತವಾಗಿಬಿಟ್ಟಿದೆ. ಆದರೆ ಹೀಗೆ ಏಕಾಏಕಿ ಎಲ್ಲರೂ ಮನೆಯಲ್ಲೇ ಕೂರುವಂತಾಗಿರುವುದರಿಂದ ಬಗೆಬಗೆಯ ಸೈಡ್ ಎಫೆಕ್ಟ್ಸ್ ಕೂಡ ಕಾಣಿಸಲಾರಂಭಿಸಿವೆ. ಇದರಲ್ಲಿ ಪ್ರಮುಖವಾದದ್ದೆಂದರೆ, ಕೆಲವು ದಿನಗಳಿಂದ ಜಗತ್ತಿನಾದ್ಯಂತ ಜನರಲ್ಲಿ ಮಾನಸಿಕ ಒತ್ತಡ ಹಾಗೂ ಖಿನ್ನತೆಯ ಪ್ರಮಾಣ ಹೆಚ್ಚುತ್ತಿರುವುದು.
ಇಂಡಿಯನ್ ಸೈಕಿಯಾಟ್ರಿ ಸೊಸೈಟಿಯ ಒಂದು ಸಮೀಕ್ಷೆಯ ಪ್ರಕಾರ, ಮಾನಸಿಕ ಒತ್ತಡದಿಂದ ಬಳಲುತ್ತಿರುವವರ ಹಾಗೂ ತತ್ಪರಿಣಾಮವಾಗಿ ಮನೋವೈದ್ಯರ ಬಳಿ ತೆರಳುತ್ತಿರುವವರ ಸಂಖ್ಯೆ ಶೇ. 20ರಷ್ಟು ಅಧಿಕವಾಗಿದೆಯಂತೆ. ಇದು ಒಂದು ವಾರದಲ್ಲಿ ದಾಖಲಾದ ಅಂಕಿಅಂಶಗಳು ಎನ್ನುವುದು ಗಮನಿಸಬೇಕಾದ ಸಂಗತಿ!
ಈ ಅಧ್ಯಯನ ವರದಿಯನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ಸತತ 24 ಗಂಟೆ ಮನೆಯಲ್ಲೇ ಇರುವುದರಿಂದಾಗಿ ನಮ್ಮ ಸ್ವಭಾವದಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುವುದು ಹಾಗೂ ಈ ಹೊಸ ಜೀವನ ಶೈಲಿಗೆ ಒಗ್ಗಿಕೊಳ್ಳುವವರೆಗೂ ಕಿರಿ ಕಿರಿಯಾಗುವುದು, ಬೇಸರವಾಗುವುದು, ಆತಂಕವಾಗುವುದು ಸಹಜವೇ.
ಕೋವಿಡ್ 19 ವೈರಸ್ ನಿಂದಾಗಿ ಭಾರತೀಯ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದೆ. ಅನೇಕ ಉದ್ಯೋಗಗಳು ರಾತೋ ರಾತ್ರಿ ನಿಂತುಬಿಟ್ಟಿವೆ. ಜನರಿಗೆ ಭವಿಷ್ಯದ ಬಗ್ಗೆ ಅತಂತ್ರತೆ ಕಾಡಲಾರಂಭಿಸಿದೆ. ಕೆಲಸ ಇರುತ್ತದೋ ಹೋಗುತ್ತದೋ ಎಂಬ ಭಯ ಹಾಗೂ ಆಹಾರ ಪದಾರ್ಥಗಳ ಲಭ್ಯತೆಯ ಬಗೆಗಿನ ‘ಅನಗತ್ಯ’ ಆತಂಕಗಳು ಒಂದೆಡೆಯಾದರೆ, ಕೊರೊನಾ ಸೋಂಕಿನ ಸಾವು-ನೋವುಗಳ ಸುದ್ದಿಗಳು ಅವರನ್ನು ಮತ್ತಷ್ಟು ಕಂಗಾಲಾಗಿಸುತ್ತಿವೆ. ಇದನ್ನು ಹೊರತುಪಡಿಸಿಯೂ ಆಧುನಿಕ ಜಗತ್ತಿನ ಗದ್ದಲದ ಬದುಕಲ್ಲಿ ವ್ಯಸ್ತವಾಗಿದ್ದ ಜನರಿಗೆ ಏಕಾಏಕಿ ಕಟ್ಟಿ ಹಾಕಿದಂತಾಗಿರುವುದರಿಂದ ಒಂಟಿತನವೂ ಕಾಡಲಾರಂಭಿಸಿದೆ.
ಸೋಷಿಯಲ್ ಮೀಡಿಯಾ ಬಂದಾಗಿನಿಂದ ನಾವೆಲ್ಲ ಹತ್ತಿರವಾಗಿದ್ದೇವೆ ಎಂಬ ವಾದವಿದೆಯಾದರೂ, ಇದರ ಹೊರತಾಗಿಯೂ ಜನರು ಒಂಟಿತನದ ಭಾವನೆಯಲ್ಲಿ ಒದ್ದಾಡುತ್ತಿರುವುದು ದುರಂತವೇ ಸರಿ. ಮಕ್ಕಳು – ವೃದ್ಧರಾದಿಯಾಗಿ ಎಲ್ಲರೂ ಒಂದು ರೀತಿಯ ಈ ರೀತಿಯ ಭಾವನೆ ಅನುಭವಿಸುತ್ತಿರುವುದರಿಂದ ಮಾನಸಿಕ ಸ್ವಾಸ್ಥ್ಯಕ್ಕೆ ತೊಂದರೆಯಾಗುವುದು ಸಹಜವೇ.
ಅದರಲ್ಲೂನಿತ್ಯ ಹೊರಗೆ ಸುತ್ತಾಡುತ್ತಾ, ಹತ್ತಾರು ಜನರೊಂದಿಗೆ ಹರಟುತ್ತಾ ಇರುತ್ತಿದ್ದ ಹಿರಿಯರನ್ನೂ ಕೂಡ ಕೋವಿಡ್ 19 ವೈರಸ್ ಹಾವಳಿ ಹೈರಾಣು ಮಾಡುತ್ತಿದೆ. ಆದಾಗ್ಯೂ ಎಲ್ಲರೂ ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ, ಸುತ್ತಲೂ ಹತ್ತು ಜನರಿದ್ದರೂ ಮನುಷ್ಯನಿಗೆ ಒಂಟಿ ಭಾವ ಕಾಡುವುದು ಸಹಜವೇ. ಆದರೆ, ಅದರಿಂದ ತಪ್ಪಿಸಿಕೊಳ್ಳುವುದಕ್ಕೆ ನಾವು ಸೋಷಿಯಲ್ ಮೀಡಿಯಾಕ್ಕೆ ಮೊರೆ ಹೋಗಬೇಕಾದ ಅಗತ್ಯವಿಲ್ಲ.
ಸತ್ಯವೇನೆಂದರೆ, ಏಕಾಂತವೆನ್ನುವುದು ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು, ನಾವು ನಡೆದು ಬಂದ ಹಾದಿಯನ್ನು ವಿಶ್ಲೇಷಿಸಲು, ತಪ್ಪುಗಳನ್ನು ತಿದ್ದಿಕೊಳ್ಳಲು, ಭವಿಷ್ಯಕ್ಕೆ ನೀಲ ನಕ್ಷೆ ರಚಿಸಲು, ಸೂಕ್ತ ತಯಾರಿ ಮಾಡಿಕೊಳ್ಳಲು ಎದುರಾದ ಸದವಕಾಶವೂ ಹೌದು. ಮನುಷ್ಯ ಸಂಘಜೀವಿ, ಅವನಿಗೆ ಇನ್ನೊಬ್ಬ ಮನುಷ್ಯನ ಒಡನಾಟ ಬಹುಮುಖ್ಯ. ಆದರೆ ಈಗ ಕೊರೊನಾ ಹರಡುವ ಪರಿ ಹೇಗಿದೆಯೆಂದರೆ, ಒಬ್ಬರನ್ನು ಕಂಡರೆ ಇನ್ನೊಬ್ಬರು ಹೆದರುವಂತಾಗಿದೆ.
ಹೀಗೆರುವುದು, ಈ ಕ್ಷಣದ ಅಗತ್ಯ ಎನ್ನುವ ಸತ್ಯವನ್ನು ಒಪ್ಪಿಕೊಳ್ಳೋಣ. ಲಾಕ್ ಡೌನ್ ಬಗ್ಗೆ ಕೊರಗದೆ, ಇದು ನಮ್ಮ ಆತ್ಮಾವಲೋಕನಕ್ಕೆ ಸಿಕ್ಕಿದ ಅವಕಾಶವೆಂದು ಭಾವಿಸೋಣ. ಮಾನಸಿಕ ಒತ್ತಡದಿಂದ – ಖಿನ್ನತೆಯಿಂದ ದೂರವಾಗುವುದಕ್ಕೆ ಮನೆಯವರೊಂದಿಗೆ ಮಾತನಾಡುವುದು ಉತ್ತಮ ಮಾರ್ಗ ಎನ್ನುವುದೂ ನೆನಪಿರಲಿ.
ಪರಿಸ್ಥಿತಿಯನ್ನು ಹತೋಟಿಗೆ ತರಲು ಸರಕಾರ, ಆರೋಗ್ಯ ಇಲಾಖೆಗಳು, ವೈದ್ಯಕೀಯ ಸಿಬ್ಬಂದಿ ಹಗಲೂ ರಾತ್ರಿ ಶ್ರಮಿಸುತ್ತಿದ್ದಾರೆ. ನಾವು ಮನೆಯಲ್ಲಿದ್ದು ನಮ್ಮ ದೈಹಿ ಕ-ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಈ ಹೋರಾಟಕ್ಕೆ ನಮ್ಮದೇ ಆದ ರೀತಿಯಲ್ಲಿ ಕೊಡುಗೆ ಕೊಡೋಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.