ದಲ್ಲಾಳಿ ಬದಲು ದಾನಿಗಳು ರೈತರಿಂದಲೇ ಖರೀದಿಸಲಿ..
ಲಕ್ಷ ಲಕ್ಷ ರೂ. ಖರ್ಚು ಮಾಡಿ ಬೆಳೆ ಬೆಳೆದ ರೈತನಿಗೆ ಅನುಕೂಲ ದಾನ-ಸಹಾಯದ ರೂಪದಲ್ಲಿ ವಿತರಿಸುವವರು ರೈತರತ್ತ ಬರಲಿ
Team Udayavani, Apr 10, 2020, 11:36 AM IST
ಧಾರವಾಡ: ಕೊರೊನಾ ಲಾಕ್ ಡೌನ್ ಅಕ್ಷರಶಃ ಅನ್ನದಾತನನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮುಂಗಾರಿನಲ್ಲಿ ಅತಿವೃಷ್ಟಿಯ ಕಾಟದಿಂದ ಹೊರಬಂದು ಹಿಂಗಾರಿನಲ್ಲಿ ಹಣ್ಣು-ತರಕಾರಿ ಬೆಳೆದ ರೈತರಿಗೆ ಕೊರೊನಾ ಕಣ್ಣಿಗೆ ಕಾಣದಂತೆ ಬಂದು ಏಟು ಕೊಟ್ಟಾಗಿದೆ.
ಸದ್ಯಕ್ಕೆ ಅಕ್ಕಿ, ಗೋಧಿ, ಜೋಳ, ಕುಸುಬಿ, ಗೋವಿನ ಜೋಳವನ್ನು ರೈತರು ಕೊಂಚ ಕಾಯ್ದಿಟ್ಟುಕೊಂಡು ಮಾರಾಟ ಮಾಡಲು ಅವಕಾಶ ಇದೆ ಎನ್ನಬಹುದು. ಆದರೆ ಲಕ್ಷ ಲಕ್ಷ ಖರ್ಚು ಮಾಡಿ ಟನ್ ಲೆಕ್ಕದಲ್ಲಿ ಬೆಳೆದ ಹಣ್ಣು-ತರಕಾರಿ ಕೊಯ್ಯಲಾಗದೆ ಹೊಲದಲ್ಲಿಯೇ ಕೊಳೆಯುತ್ತಿದೆ. ಇನ್ನೊಂದೆಡೆ ಅದನ್ನು ಕೊಯ್ದು ತಂದರೂ ಮಾರಾಟ ಮಾಡುವುದು ಕಷ್ಟವಾಗುತ್ತಿದೆ. ಸರಿಯಾಗಿ ಬೇಸಿಗೆ ಸಂದರ್ಭಕ್ಕೆ ಫಸಲು ಬರುವಂತೆ ಬೆಳೆದ ಕಲ್ಲಂಗಡಿ, ಅನಾನಸ್, ಕರ್ಬೂಜಕ್ಕೆ ರೈತರು ಲಕ್ಷ ಲಕ್ಷ ಹಾಕಿದ ಖರ್ಚು ಮೈಮೇಲೆ ಬಂದಿದ್ದು, ಮಹಾಮಾರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಇದಕ್ಕೇನು ಪರಿಹಾರ?: ಕೊರೊನಾದಿಂದ ರೈತರಿಗೆ ತೊಂದರೆಯಾಗಿರುವುದು ಗೊತ್ತಿರುವ ಸಂಗತಿ. ಹಾಗಿದ್ದರೆ ಇದಕ್ಕೇನು ಪರಿಹಾರವಿಲ್ಲವೇ? ಎನ್ನುವ ಪ್ರಶ್ನೆ ಕಾಡುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳು ಮತ್ತು ರೈತಪರ ಕಾಳಜಿ ಇರುವ ಜನರು ಸದ್ಯಕ್ಕೆ ರೈತರ ಬೆನ್ನಿಗೆ ನಿಂತಿದ್ದು, ಕೆಲವೆಡೆ ರೈತರಿಂದ ಹಣ್ಣು ಮತ್ತು ತರಕಾರಿಗಳನ್ನು ಕೊಳ್ಳುವುದಕ್ಕೆ ನೇರವಾಗಿ ಮುಂದೆ ಬಂದಿದ್ದಾರೆ. ಇಂತಿಪ್ಪ ಜನರೇ ಇನ್ನೊಂದು ಹೆಜ್ಜೆ ಮುಂದಿಟ್ಟರೆ ಖಂಡಿತಾ ತರಕಾರಿ ಮತ್ತು ಹಣ್ಣು ಬೆಳೆದ ರೈತರನ್ನು ಈ ಸಂಕಷ್ಟದ ಸಂದರ್ಭದಿಂದ ಪಾರು ಮಾಡಬಹುದಾಗಿದೆ.
ರೈತರ ಮನವಿ ಏನು?: ಸದ್ಯಕ್ಕೆ ಲಾಕ್ ಡೌನ್ ಏಪ್ರಿಲ್ ಅಂತ್ಯದವರೆಗೂ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ. ಈತನಕ ಹೇಗೋ ದಿನಗಳನ್ನು ತಳ್ಳಿಕೊಂಡು ಬಂದ ರೈತರಿಗೆ ಲಾಕ್‌ಡೌನ್ ಮುಂದುವರಿಯುವುದು ಗಾಯದ ಮೇಲೆ ಮತ್ತೂಂದು ಬರೆ ಎಳೆದಂತಾಗುವುದು ನಿಶ್ಚಿತ. ಯಾಕೆಂದರೆ ತರಕಾರಿ ಮತ್ತು ಹಣ್ಣುಗಳ ಫಲದ ಅವಧಿಯೇ ಹೆಚ್ಚೆಂದರೆ ಎರಡು ತಿಂಗಳು. ಈ ಅವಧಿಯಲ್ಲಿ ಈಗಾಗಲೇ ಅರ್ಧ ಸಮಯ ಹೋಗಿದ್ದು, ಹಾಕಿದ ಬೀಜ ಗೊಬ್ಬರದ ಖರ್ಚು ಕೂಡ ಹೊರ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಮೇ ಮೊದಲ ವಾರದವರೆಗೂ ಲಾಕ್‌ಡೌನ್ ಮುಂದುವರಿದರೆ ಹಿಂಗಾರಿಯಲ್ಲಿ ತರಕಾರಿ ಮತ್ತು ಹಣ್ಣು ಬೆಳೆದ ರೈತರು ನೂರಕ್ಕೆ ನೂರರಷ್ಟು ಹಾನಿಗೊಳಗಾದಂತೆಯೇ.
ಹೀಗಾಗಿ ಇದೀಗ ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ತಮ್ಮ ಹಣ್ಣು ತರಕಾರಿ ಕೊಳ್ಳುವುದು ಕಷ್ಟವಾಗುತ್ತಿದೆ. ಆದರೆ ಸಂಘ-ಸಂಸ್ಥೆಗಳು ಮತ್ತು ದಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಳೆದ ಒಂದು ವಾರದಿಂದ ಜನರಿಗೆ ಧಾನ್ಯ ಮತ್ತು ಕಿರಾಣಿ ದಿನಸಿ ವಸ್ತುಗಳನ್ನು ದಾನ ಮತ್ತು ಸಹಾಯದ ರೂಪದಲ್ಲಿ ಹಂಚುತ್ತಿದ್ದಾರೆ. ಇವರೆಲ್ಲರೂ ಕೂಡ ನೇರವಾಗಿ ರೈತರಿಂದಲೇ ತರಕಾರಿ ಮತ್ತು ಹಣ್ಣುಗಳನ್ನು ಕೊಂಡುಕೊಂಡರೆ ರೈತರಿಗೆ ನಿಜಕ್ಕೂ ಉಪಕಾರ ಮಾಡಿದಂತೆ ಆಗುತ್ತದೆ ಅನ್ನುತ್ತಿದ್ದಾರೆ ಸಂಕಷ್ಟದಲ್ಲಿರುವ ರೈತರು.
ಧಾರವಾಡ ಹಿಂಗಾರಿ ನೀರಾವರಿ ಆಧಾರಿತವಾಗಿದೆ. ಇಲ್ಲಿನ ರೈತರು ಹಿಂಗಾರಿನಲ್ಲಿ ಹಣ್ಣು ಮತ್ತು ತರಕಾರಿಯನ್ನೇ ಪ್ರಧಾನ ಬೆಳೆಯನ್ನಾಗಿ ಮಾಡಿಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ರೈತರು ಸಾಲದ ಸುಳಿಯಲ್ಲಿದ್ದು, ಬ್ಯಾಂಕಿನ ಕಂತುಗಳನ್ನು ಕಟ್ಟುವುದಕ್ಕೆ ತರಕಾರಿ ಬೆಳೆಯುತ್ತಾರೆ. ಲಾಕ್‌ಡೌನ್ ಇದಕ್ಕೆ ಅಡ್ಡಿಯಾಗಿದ್ದು, ಒಂದು ವೇಳೆ ದಾನಿಗಳು ನೇರವಾಗಿ ರೈತರಿಂದ ಹಣ್ಣು ಮತ್ತು ತರಕಾರಿ ಖರೀದಿಸಿದರೆ ರೈತರನ್ನು ಸಂಕಷ್ಟದಿಂದ ಮೇಲೆತ್ತಿದ್ದಂತೆ ಆಗುತ್ತದೆ. ಬರೀ ತರಕಾರಿ ಮಾತ್ರವಲ್ಲ ಹೂವು ಬೆಳೆದಿದ್ದ ರೈತರು ಕೂಡ ಕಷ್ಟದಲ್ಲಿ ಇದ್ದಾರೆ. ಮಲ್ಲಿಗೆ, ಸೇವಂತಿ, ಚೆಂಡು ಹೂ, ಗುಲಾಬಿ ಹೂ ಬೆಳೆದ ರೈತರು ಕೂಡ ಕೊರೊನಾ ಕಾಟಕ್ಕೆ ನಲುಗಿ ಹೋಗಿದ್ದಾರೆ.
ತಾವು ಬೆಳೆದ ಬೆಳೆಯಲ್ಲಿ ಸ್ವಲ್ಪ ಭಾಗ ದಾನ ಮಾಡುತ್ತಲೇ ಬಂದ ರೈತರು ಕೊರೊನಾ ಲಾಕ್‌ಡೌನ್‌ನಿಂದ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರಕಾರವೇ ಖುದ್ದಾಗಿ ರೈತರಿಂದ ಹಣ್ಣು-ತರಕಾರಿ ಖರೀದಿಸಿ ಮಾರಬೇಕು. ಜತೆಗೆ ಸಂಘ-ಸಂಸ್ಥೆಗಳು ರೈತರಿಂದ ನೇರ ಖರೀದಿಗೆ ಮುಂದಾಗಬೇಕು.
ಶಂಕರಪ್ಪ ಅಂಬಲಿ,
ರೈತ ಮುಖಂಡರು
ಮುಂಗಾರಿನ ನೆರೆ ಹಾವಳಿ ರೈತರನ್ನು ಪೀಡಿಸಿತ್ತು. ಇದೀಗ ಹಿಂಗಾರಿ ಮತ್ತು ತರಕಾರಿ ಬೆಳೆಗೆ ಕೊರೊನಾ ಕಾಟ ಶುರುವಾಗಿದೆ. ಹೀಗಾಗಿ ದಾನಿಗಳು ನೇರವಾಗಿ ರೈತರಿಂದಲೇ ಹಣ್ಣು, ತರಕಾರಿ ಖರೀದಿಸಿದರೆ ರೈತರಿಗೆ ಅನುಕೂಲ ಆಗಲಿದೆ.
ಕಲ್ಲನಗೌಡ ಪಾಟೀಲ,
ರೈತ ಮುಖಂಡ, ಬ್ಯಾಡ ಗ್ರಾಮಸ್ಥರು
ಕೊರೊನಾ ಸಂಕಷ್ಟದಲ್ಲಿರುವ ಬಡವರಿಗೆ ಹಂಚಲು ಇನ್ನೊಂದೆಡೆ ಸಂಕಷ್ಟಕ್ಕೆ ಸಿಲುಕಿರುವ ರೈತರಿಂದಲೇ ಎಲ್ಲರೂ ಹಣ್ಣು-ತರಕಾರಿ ಖರೀದಿಸುವುದು ಸೂಕ್ತ. ಇದರಿಂದ ಒಂದು ಉತ್ತಮ ಕೆಲಸ ಇಬ್ಬರ ಪ್ರಾಣ ಉಳಿಸಲಿದೆ.
ಅಮೃತ ಇಜಾರಿ,
ಹೋರಾಟಗಾರ, ಹುಬ್ಬಳ್ಳಿ
ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.