ಬೀದರ್‌ನಲ್ಲಿ ಲಾಕ್‌ಡೌನ್ ಟೈಟ್!
ಸೀಲ್ ಡೌನ್ ಜಾರಿಗೆ ಸರ್ಕಾರ ಸಿದ್ಧತೆ? | ಜನರಲ್ಲಿ ಭೀತಿ ಹೆಚ್ಚಿಸಿದ ಕೊರೊನಾ ಪ್ರಕರಣಗಳು
Team Udayavani, Apr 11, 2020, 11:55 AM IST
ಬೀದರ: ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತನೆಯಾದ ಹಳೆ ಜಿಲ್ಲಾಸ್ಪತ್ರೆ ಕಟ್ಟಡ.
ಬೀದರ: ಶರ ವೇಗದಲ್ಲಿ ಹರಡುತ್ತಿರುವ ಮಹಾಮಾರಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಹೇರಿರುವ ಲಾಕ್‌ಡೌನ್‌ನನ್ನು ಗಡಿ ಜಿಲ್ಲೆ ಬೀದರನಲ್ಲಿ ಮಾಸಾಂತ್ಯದವರೆಗೆ ವಿಸ್ತರಿಸುವ ಹಾಗೂ ಮತ್ತಷ್ಟು ಬಿಗಿಗೊಳಿಸುವ ಸಾಧ್ಯತೆ ದಟ್ಟವಾಗಿದೆ.
ಲಾಕ್‌ಡೌನ್ ಆರಂಭದಲ್ಲಿ ಒಂದೂ ಪಾಸಿಟಿವ್ ಪ್ರಕರಣಗಳಿಲ್ಲದೇ ಜಿಲ್ಲೆಯ ಜನತೆ ನೆಮ್ಮದಿಯಿಂದ ಇದ್ದರು. ಆದರೆ ಕಳೆದ ವಾರ ಒಂದೇ ದಿನ 10 ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜನರಲ್ಲಿ ಭೀತಿ ಆವರಿಸಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ರಾಜ್ಯದ 18 ಜಿಲ್ಲೆಗಳಲ್ಲಿ ಬೀದರ ಸಹ ಒಂದಾಗಿದ್ದರಿಂದ “ಸೀಲ್ ಡೌನ್’ ಜಾರಿಗೆ ಸರ್ಕಾರ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಆದರೆ, ಲಾಕ್‌ಡೌನ್ ದಿಂದ ಸಂಕಷ್ಟಕ್ಕೀಡಾಗಿರುವ ಜನರಿಗಾಗಿ ಘೋಷಿಸಿರುವ ಸೌಲಭ್ಯಗಳನ್ನು ಸಮರ್ಪಕ ಜಾರಿಗೊಳಿಸುವಲ್ಲಿ ಮಾತ್ರ ಎಡವುತ್ತಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ಆಹಾರದ ಕೊರತೆಯಾಗದಂತೆ ಸರ್ಕಾರ ಉಚಿತ ಆಹಾರ ವಿತರಣೆ ಯೋಜನೆ ಜಾರಿಗೊಳಿಸಿ ಐದು ದಿನಗಳಲ್ಲಿ ಫಲಾನುಭವಿಗಳಿಗೆ ಆಹಾರ ಧಾನ್ಯ ಪೊರೈಸುವ ಭರವಸೆ ನೀಡಿತ್ತು. ಆದರೆ
10 ದಿನ ಕಳೆದರೂ ಈವರೆಗೆ ಅರ್ಧದಷ್ಟು ಫಲಾನುಭವಿಗಳಿಗೂ ಆಹಾರ ತಲುಪಿಲ್ಲ. ಸಂದಿಗ್ಧ ಸ್ಥಿತಿಯಲ್ಲೂ ಕೆಲವು ಕಡೆಗಳಲ್ಲಿ ಬಡವರಿಗೆ ಕೈಸೇರಬೇಕಾದ ಪಡಿತರ ಧಾನ್ಯಕ್ಕೂ ಕನ್ನ ಹಾಕುತ್ತಿರುವ, ಹಣ ಪಡೆಯುತ್ತಿರುವ ಮತ್ತು ಹಳ್ಳಿಗಳಲ್ಲಿ ಉಚಿತ ಅಕ್ಕಿ, ಗೋ ದಿ ಜತೆಗೆ ಸೋಪು, ಎಣ್ಣೆ ಖರೀದಿ ಮಾಡುವಂತೆ ಹಣ ಸುಲಿಯುತ್ತಿರುವ ಪ್ರಕರಣಗಳು ಕೇಳಿ ಬರುತ್ತಿವೆ.
ಬೀದರ ಜಿಲ್ಲೆಯಲ್ಲಿ 3.07 ಲಕ್ಷ ಬಿಪಿಎಲ್ ಮತ್ತು 39 ಸಾವಿರ ಅಂತ್ಯೋದಯ ಸೇರಿದಂತೆ ಒಟ್ಟು 3.47 ಲಕ್ಷ ಪಡಿತರ ಚೀಟಿದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 723 ರೇಶನ್ ಅಂಗಡಿಗಳಿದ್ದು, ಈವರೆಗೆ ಕೇವಲ ಶೇ. 49.93ರಷ್ಟ ಕಾರ್ಡ್‌ದಾರರಿಗೆ ಮಾತ್ರ ಪಡಿತರ ವಿತರಣೆಯಾಗಿದೆ. ಇನ್ನೂ 20ಕ್ಕೂ ಹೆಚ್ಚು ಅಂಗಡಿಗಳಿಗೆ ಪಡಿತರ ಪೂರೈಕೆಯೇ ಆಗಿಲ್ಲ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಗೋದಾಮುಗಳಿಂದ ಅಂಗಡಿಗಳಿಗೆ ಪಡಿತರ ಮುಟ್ಟಿಸುವಲ್ಲಿ ವಿಳಂಬ ಆಗುತ್ತಿದೆ ಎನ್ನಲಾಗಿದೆ.
ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದ ಸ್ಲಂ ಪ್ರದೇಶದಲ್ಲಿ ವಾಸಿಸುತ್ತಿರುವ ಬಡವರು, ಕೂಲಿ ಕಾರ್ಮಿಕರಿಗೆ ಲಾಕ್‌ಡೌನ್ ಅವಧಿ ಮುಗಿಯುವ ವರೆಗೆ ವಿತರಿಸುತ್ತಿರುವ ಉಚಿತ ನಂದಿನಿ ಹಾಲಿನಲ್ಲೂ ದುರ್ಬಳಕೆ ಆರೋಪ ಕೇಳಿ ಬಂದಿದೆ. ಹಾಲಿನ ಪ್ಯಾಕೇಟ್ ಮೇಲೆ ಕೋವಿಡ್-19 ಮಾರಾಟಕ್ಕಿಲ್ಲ ಎಂದು ನಮೂದಾಗಿರುವ ಕಾರಣ ಮಾರುಕಟ್ಟೆಯಲ್ಲಿ ಮಾರಿಕೊಳ್ಳಲು ಅವಕಾಶವಿಲ್ಲ. ಆದರೆ, ಕಡು ಬಡವರಿಗೆ ತಲುಪಬೇಕಾದ ಹಾಲು ರಾಜಕೀಯ ಪುಡಾರಿಗಳ ಪಾಲು ಆಗುತ್ತಿರುವ ದೂರುಗಳು ಹೆಚ್ಚಿವೆ. ಕೆಎಂಎಫ್ ನಿಗದಿತ ಪಾಯಿಂಟ್‌ಗಳಿಗೆ
ಹಾಲು ಮುಟ್ಟಿಸು ತ್ತಿದ್ದು, ಕೆಲವೆಡೆ ಮಾತ್ರ ಅರ್ಹರಿಗೆ ಹಾಲು ವಿತರಣೆಯಾಗುತ್ತಿದೆ. ಈ ವೇಳೆ ಜನಗುಂಗುಳಿ ಸೇರುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಆತಂಕ ಹೆಚ್ಚಿಸುತ್ತಿದೆ. ಜಿಲ್ಲೆಯಲ್ಲಿ ನಿತ್ಯ ಐದು ಸಾವಿರ ಲೀಟರ್ ಹಾಲು (10 ಸಾವಿರ ಪ್ಯಾಕೇಟ್) ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಅದರಲ್ಲಿ ಬೀದರ ನಗರಸಭೆ ವ್ಯಾಪ್ತಿಯಲ್ಲಿ 2500 ಪ್ಯಾಕೇಟ್, ಬಸವಕಲ್ಯಾಣ ನಗರಸಭೆ 1750 ಪ್ಯಾಕೇಟ್, ಹುಮನಾಬಾದ ಪುರಸಭೆ ಎರಡು ಸಾವಿರ ಪ್ಯಾಕೇಟ್, ಭಾಲ್ಕಿ ಪುರಸಭೆ ಒಂದು ಸಾವಿರ ಪ್ಯಾಕೇಟ್, ಚಿಟಗುಪ್ಪ 1120 ಪ್ಯಾಕೇಟ್, ಔರಾದ ಪಟ್ಟಣ ಪಂಚಾಯತ್‌ಗೆ 250 ಪ್ಯಾಕೇಟ್ ಗಳನ್ನು ವಿತರಿಸಲಾಗುತ್ತಿದೆ.
ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತನೆ
ಜಿಲ್ಲಾ ಆಸ್ಪತ್ರೆ ಹಳೆ ಕಟ್ಟಡವನ್ನು ಕೋವಿಡ್ -19 ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮದೊಂದಿಗೆ ವ್ಯವಸ್ಥೆ ಮಾಡಲಾಗಿದ್ದು, ಎಲ್ಲ 10 ಸೋಂಕಿತರಿಗೆ ಕಳೆದೊಂದು ವಾರದಿಂದ ಚಿಕಿತ್ಸೆ ನೀಡಲಾಗುತ್ತಿದೆ. ರೋಗಗಳ ಉಪಚಾರಕ್ಕೆ ಅಗತ್ಯ ಚಿಕಿತ್ಸಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಆದರೆ, ಈವರೆಗೆ ಗುಣಮಟ್ಟದ ಪಿಪಿಇ ಕಿಟ್‌ಗಳನ್ನು ಮಾತ್ರ ಪೂರೈಕೆಯಾಗಿಲ್ಲ ಎನ್ನುವ ಆರೋಪ ಇದೆ. ವಾರ್ಡ್‌ಗಳಲ್ಲಿ ಆರೋಗ್ಯ ಇಲಾಖೆ ಮಾರ್ಗದರ್ಶಿ ನಿಯಮಗಳಂತೆ ಪಾಲನೆ ಮಾಡಲಾಗುತ್ತಿದ್ದು, ನರ್ಸಿಂಗ್ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಇನ್ನು ಶಂಕಿತ ಮತ್ತು ಸೋಂಕಿತ ಪ್ರಥಮ ಸಂಪರ್ಕ ಹೊಂದಿದವರಿಗೆ ಇಲ್ಲಿನ ಓಲ್ಡ್ ಸಿಟಿಯ ನೂರು ಹಾಸಿಗೆ ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಲಾಕ್‌ಡೌನ್‌ದಿಂದ ಹಣ್ಣುಗಳು ಮಣ್ಣು ಪಾಲು
ಲಾಕ್‌ಡೌನ್‌ದಿಂದ ತರಕಾರಿ ಮತ್ತು ಹಣ್ಣು ವ್ಯಾಪಾರಿಗಳು ಎರಡ್ಮೂರು ಪಟ್ಟು ಹೆಚ್ಚು ದರಕ್ಕೆ ಮಾರಾಟ ಮಾಡಿ ಜನರ ಜೇಬಿಗೆ ಕತ್ತರಿ ಹಾಕುವುದಕ್ಕೆ ಈಗ ಆಡಳಿತ ಬ್ರೇಕ್ ಹಾಕಿದೆ. ಶುಕ್ರವಾರ ನಗರದಲ್ಲಿ ತೋಟಗಾರಿಕೆ ಇಲಾಖೆಯಿಂದ ನಿಗದಿತ ದರದಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ ತರಕಾರಿ, ಹಣ್ಣು ಮಾರಾಟಕ್ಕೆ ವಿತರಣೆ ಮೊಬೈಲ್ ವಾಹನಗಳಿಗೆ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ತಾಲೂಕು ಕೇಂದ್ರಗಳಲ್ಲಿಯೂ ಯೋಜನೆ ಜಾರಿಗೊಳಿಸಲು ಚಿಂತನೆ ನಡೆದಿದೆ. ಆದರೆ, ನಗರದಲ್ಲಿ ಗ್ರಾಹಕರಿಗೆ ನೇರವಾಗಿ ಮಾರಾಟಕ್ಕೆ ಅವಕಾಶ ಇದ್ದರೂ ರೈತರಿಗೆ ತಮ್ಮ ಜಮೀನಿನಲ್ಲಿ ಬೆಳೆದ ಹಣ್ಣು- ತರಕಾರಿಯನ್ನು ನಗರಕ್ಕೆ ತರಲು ಸಾಗಣೆ ವ್ಯವಸ್ಥೆ ಇಲ್ಲದಂತಾಗಿದೆ. ಇದರಿಂದ ಫಸಲು ಮಣ್ಣು ಪಾಲಾಗುತ್ತಿದೆ.
ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.