ಬೇಕರಿ ಉದ್ಯಮಕ್ಕೆ ಕಾರ್ಮಿಕರ ಕೊರತೆ; ತಾಜಾ ಉತ್ಪನ್ನಕ್ಕೆ ಬೇಡಿಕೆ
Team Udayavani, Apr 11, 2020, 5:25 PM IST
ಉಡುಪಿ: ಬೇಕರಿ ಅಂಗಡಿ ತೆರೆಯಬೇಕು ಎನ್ನುವ ಸರಕಾರದ ನಿರ್ಧಾರಕ್ಕೆ ಕೋವಿಡ್ 19 ಸಾಕಷ್ಟು ಪೆಟ್ಟು ನೀಡಿದೆ. ಕಾರ್ಮಿಕರಿಲ್ಲದ ಕಡೆಗಳ ಬೇಕರಿ ಅಂಗಡಿಗಳು ತೆರೆದಿದ್ದರೂ ತಾಜಾ ತಿಂಡಿಗಳ ಕೊರತೆ ಎದುರಾಗಿದೆ.
ಲಕ್ಷಗಟ್ಟಲೆ ನಷ್ಟ
ನಗರದಲ್ಲಿ ಸುಮಾರು 35ಕ್ಕೂ ಅಧಿಕ ಬೇಕರಿ, ಕ್ಯಾಂಡಿಮೆಂಟ್ ಅಂಗಡಿಗಳು ಇವೆ. ಬೇಕರಿಗೆ ಅಂಗಡಿಗಳ ತೆರವಿಗೆ ಸರಕಾರ ಅನುಮತಿ ನೀಡಿ ಮೂರು ದಿನಗಳಾಗಿವೆ. ಬಹುತೇಕ ಬೇಕರಿ ಅಂಗಡಿಗಳು ತೆರೆದಿದ್ದರೂ ಅಂಗಡಿಗಳು ತೆರೆದಿಲ್ಲ. ರಾತ್ರಿ ಬೆಳಗಾಗುವುದರೊಳಗೆ ಲಾಕ್‌ಡೌನ್ ಜಾರಿಯಾದ್ದರಿಂದ ಉತ್ಪನ್ನಗಳು ಮಾರಾಟವಾಗದೆ ಲಕ್ಷಗಟ್ಟಲೆ ನಷ್ಟ ಅನುಭವಿಸುವಂತಾಗಿದೆ.
ವ್ಯಾಪಾರವಿಲ್ಲ
ಬೇಕರಿ ಅಂಗಡಿಗಳ ಮಾಲಕರ ಪ್ರಕಾರ ವ್ಯಾಪಾರವು ನಗರ, ಪಟ್ಟಣ ಪ್ರದೇಶಕ್ಕಿಂತ ಹಳ್ಳಿಯ ಗ್ರಾಹಕರನ್ನೇ ನೆಚ್ಚಿಕೊಂಡಿದೆ. ಸಾರಿಗೆ ವ್ಯವಸ್ಥೆ ಬಂದ್ ಆದ್ದರಿಂದ ಪ್ರಯಾಣಿಕರೂ ಇಲ್ಲದೆ ಬೇಕರಿ ವ್ಯಾಪಾರ ಕಷ್ಟ ಎನ್ನುವ ಅಭಿಮತ ವ್ಯಕ್ತವಾಗಿದೆ. ಸಾಮಾನ್ಯ ದಿನಗಳಲ್ಲಿ ಸಣ್ಣ ಬೇಕರಿ ಯಾದರೂ ದಿನಕ್ಕೆ 25 ರಿಂದ 30 ಕೆ.ಜಿ. ಮೈದಾ, ಅದಕ್ಕೆ ತಕ್ಕಂತೆ ಸಕ್ಕರೆ ಜತೆಗೆ ಪೂರಕವಾದ ಸಾಮಗ್ರಿ ಬೇಕೇ ಬೇಕು.
ಬೆಳಗ್ಗೆ ತಿಂಡಿಗಳನ್ನು ಸಿದ್ಧಪಡಿಸಿದರೂ ಅವುಗಳು ಮಾರಾಟಕ್ಕೆ ಸಿಗುವುದು ಮಧ್ಯಾಹ್ನ 12ರ ಮೇಲೆಯೇ. ಇವುಗಳು ರಾತ್ರಿ 10ರೊಳಗೆ ಮಾರಾಟವಾಗದಿದ್ದಲ್ಲಿ ಕೆಡುವ ಸಾಧ್ಯತೆಗಳೇ ಹೆಚ್ಚು. ಸದ್ಯದ ಪರಿಸ್ಥಿತಿಯಲ್ಲಿ ಬೆಳಗ್ಗೆ ಮತ್ತು ಸಂಜೆ ಮೂರ್ನಾಲ್ಕು ಗಂಟೆಗಳ ವ್ಯಾಪಾರಕ್ಕೆ ಈ ಬೇಕರಿ ಐಟಂ ಪ್ರಮಾಣ ಹೆಚ್ಚಿರುತ್ತದೆ.
ಕಾರ್ಮಿಕರ ಕೊರತೆ
ತಿನಿಸುಗಳನ್ನು ಸಿದ್ಧಪಡಿಸಲು ಕಾರ್ಮಿಕರು ಬೇಕೆ ಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅವರೂ ಬರುತ್ತಿಲ್ಲ. ಸರಕಾರ ಕಿಟ್‌ಗಳನ್ನು ನೀಡುತ್ತಿರುವುದರಿಂದ ದುಡಿಯುವ ಅಗತ್ಯವೂ ಇಲ್ಲ. ಆದ್ದರಿಂದ ಅಂಗಡಿ ತೆರೆಯಲು ತೊಂದರೆಯಾಗುತ್ತಿದೆ ಎನ್ನುತ್ತಾರೆ ಮಾಲಕರು.
ಕಟ್ಟುನಿಟ್ಟು
ಲಾಕ್‌ಡೌನ್ ವೇಳೆ ಬೆಳಗ್ಗೆ 7ರಿಂದ 11ರ ತನಕ ಮಾತ್ರ ಬೇಕರಿ ಅಂಗಡಿ ತೆರೆದಿರುತ್ತದೆ. ಈ ಸಂದರ್ಭ ಮಾರ್ಗಸೂಚಿಗಳ ಬಗ್ಗೆ ಕಟ್ಟುನಿಟ್ಟಿನ ಆದೇಶವಿದೆ. ಸುರಕ್ಷತೆ ಕ್ರಮ ಅನುಸರಿಸಬೇಕು. ಇವೆಲ್ಲ ಕಿರಿಕಿರಿಯಿಂದ ಪಾರಾಗಲು ಲಾಕ್‌ಡೌನ್ ಮುಗಿಯುವ ಎ.14 ರ ತನಕ ಕಾದು, ಅನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಕೆಲ ಬೇಕರಿ ಮಾಲಕರು ನಿರ್ಧರಿಸಿದ್ದಾರೆ.
ಅಡಚಣೆ
ಗ್ರಾಹಕರು ತಾಜಾ ತಿಂಡಿಗಳನ್ನೇ ಕೇಳುತ್ತಿದ್ದಾರೆ. ಕಾರ್ಮಿಕರ ಕೊರತೆಯಿಂದ ತಿಂಡಿಗಳನ್ನು ತಯಾರಿಸಲು ಅಡಚಣೆಯಾಗುತ್ತಿದೆ. ಹೀಗಾಗಿ ವ್ಯಾಪಾರ ನಿರೀಕ್ಷಿತವಾಗಿ ನಡೆಯುತ್ತಿಲ್ಲ.
-ಗಿರಿಧರ, ಬೇಕರಿ ಮಾಲಕರು