ಬಸ್ ನಿರ್ವಾಹಕ ವೃತ್ತಿಯಲ್ಲಿ ಧ್ವನಿ ತಂತುವಿನ ಮೇಲೆ ಆಗುವ ಪರಿಣಾಮಗಳು
Team Udayavani, Apr 12, 2020, 10:52 AM IST
“ಉಡುಪಿ… ಉಡುಪಿ… ಉಡುಪಿ…’ ಅಥವಾ “ಮಂಗ್ಳೂರ್… ಮಂಗ್ಳೂರ್…’ ಮತ್ತು ಕೊನೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಗಟ್ಟಿ ಧ್ವನಿಯಲ್ಲಿ “ರೈಟ್ ಪೋಯಿ———’
ಇದು ನಾವೆಲ್ಲ ಬಸ್ ಪ್ರಯಾಣ ಸಂದರ್ಭದಲ್ಲಿ ಸದಾ ಕೇಳಿಸಿಕೊಳ್ಳುವ ಬಸ್ ಕಂಡಕ್ಟರ್‌ನ ಕೂಗು. ಸ್ಥಳದಿಂದ ಸ್ಥಳಕ್ಕೆ ಕೂಗುವ ಊರಿನ ಹೆಸರು, ಭಾಷೆ ಬದಲಾಗಬಹುದಾದರೂ ಅವರು ಗಂಟಲೆತ್ತರಿಸಿ ಕೂಗುವ ಶೈಲಿ ಮತ್ತು ಸ್ವರ ಒಂದೇ. ಬಸ್ ಕಂಡಕ್ಟರ್‌ಗಳು ತಾವು ಕಾರ್ಯನಿರ್ವಹಿಸುವ ಬಸ್‌ಗಳಿಗೆ ಪ್ರಯಾಣಿಕರನ್ನು ಒಟ್ಟು ಸೇರಿಸುವುದಕ್ಕಾಗಿ ಧ್ವನಿಯನ್ನು ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ದುಡಿಸಿಕೊಳ್ಳಬೇಕಾಗುತ್ತದೆ. ಅವು ಬೆಳಗ್ಗಿನಿಂದ ಸಂಜೆಯ ತನಕವೂ ಧ್ವನಿಯನ್ನು ಹೀಗೆ ಒಂದೇ ಪ್ರಮಾಣದಲ್ಲಿ ದುಡಿಸಿಕೊಳ್ಳುತ್ತಾರೆ. ಅವರ ಧ್ವನಿಗೆ ವಿಶ್ರಾಂತಿ ದೊರಕುವುದು ಪ್ರಾಯಃ ರಾತ್ರಿ ಬಸ್ ಕೊನೆಯ ಸ್ಟಾಪ್‌ನಲ್ಲಿ ನಿಂತಾಗಲೇ. ನಂಬಿದರೆ ನಂಬಿ, ಬಿಟ್ಟರೆ ಬಿಡಿ; ವೃತ್ತಿಪರ ಧ್ವನಿ ಬಳಕೆದಾರರ ಸಮೂಹದಲ್ಲಿ ಬಸ್ ನಿರ್ವಾಹಕರೂ ಸೇರುತ್ತಾರೆ. ತಮ್ಮ ಅನ್ನದ ಗಳಿಕೆಗಾಗಿ ಧ್ವನಿಯನ್ನು ಬಳಸಿಕೊಳ್ಳುವವರು ವೃತ್ತಿಪರ ಧ್ವನಿ ಬಳಕೆದಾರರು. ಇವರಲ್ಲಿ ವ್ಯತ್ಯಾಸವೆಂದರೆ, ಹಾಡುಗಾರರು, ನಟ-ನಟಿಯರು, ಉದ್ಘೋಷಕರಂತಹ ವೃತ್ತಿಪರ ಧ್ವನಿ ಬಳಕೆದಾರರು ತಮ್ಮ ಧ್ವನಿಯ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ಮತ್ತು ಕಾಳಜಿಯನ್ನು ತೆಗೆದುಕೊಂಡರೆ ಬಸ್ ಕಂಡಕ್ಟರ್‌ಗಳು ಆ ಬಗ್ಗೆ ಎಚ್ಚರಿಕೆ ವಹಿಸುವುದಿಲ್ಲ. ತಾವು ವೃತ್ತಿಪರ ಧ್ವನಿ ಬಳಕೆದಾರರು, ಧ್ವನಿಯ ಬಗ್ಗೆ ಕಾಳಜಿ ವಹಿಸಬೇಕು ಎಂಬ ಅರಿವು ಕೂಡ ಅವರಲ್ಲಿ ಇರುವುದಿಲ್ಲ.
ಬಸ್ ಕಂಡಕ್ಟರ್‌ಗಳನ್ನು ಗಮನಿಸಿದರೆ, ಅವರ ಧ್ವನಿ ಬೆಳಗ್ಗಿನ ಸಮಯದಲ್ಲಿ ಸಾಕಷ್ಟು ಗಟ್ಟಿ ಮತ್ತು ಪರಿಣಾಮಕಾರಿಯಾಗಿರುವುದು ಹಾಗೂ ಹೊತ್ತು ಸರಿದಂತೆ ಶಕ್ತಿಗುಂದುವುದನ್ನು ಕಾಣಬಹುದು. ಸಂಜೆ ಅಥವಾ ರಾತ್ರಿಯ ಹೊತ್ತಿಗೆ ಅದು ದೊರಗಾಗಿರುತ್ತದೆ, ಭಾಗಶಃ ಅಥವಾ ಸಂಪೂರ್ಣ ನಷ್ಟವಾಗಿರುತ್ತದೆ. ಆದರೂ ಈ ನಷ್ಟವನ್ನು ಅವರು ಸಿಳ್ಳೆಯ ಮೂಲಕ ತುಂಬಿಕೊಳ್ಳುತ್ತಾರೆ. ಈ ಸಿಳ್ಳೆ ಎಷ್ಟು ಬಲವಾಗಿರುತ್ತದೆ ಎಂದರೆ ಅವರ ಹತ್ತಿರ ಕುಳಿತ ಅಥವಾ ನಿಂತ ಪ್ರಯಾಣಿಕರ ಕಿವಿಯಲ್ಲಿ ಅದು ದೀರ್ಘಕಾಲ ಗುಂಯ್‌ಗಾಡುತ್ತದೆ, ಕೆಲವೊಮ್ಮೆ ನೋವನ್ನುಂಟು ಮಾಡುತ್ತದೆ! ಈ ವಿದ್ಯಮಾನ ಬಹುತೇಕ ಯಾರ ಗಮನಕ್ಕೂ ಬಂದಿರುವುದಿಲ್ಲ. ಯಾಕೆಂದರೆ, ಮರುದಿನ ಬೆಳಗ್ಗೆ ಅವರ ಧ್ವನಿ ಬಹುತೇಕ ಸರಿಹೋಗಿರುತ್ತದೆ. ಆದರೆ ಹೇಗೆ? ಒಂದೇ ಒಂದು ಕಾರಣ ಎಂದರೆ, ಕಂಡಕ್ಟರ್ ರಾತ್ರಿ ಮಲಗಿರುವ ಸಮಯದಲ್ಲಿ ಅವನ ಧ್ವನಿ ಮಡಿಕೆ ಸಾಕಷ್ಟು ವಿಶ್ರಾಂತಿಯನ್ನು ಪಡೆಯುತ್ತದೆ. ದಿನವಿಡೀ ಗಟ್ಟಿಧ್ವನಿಯಲ್ಲಿ ಕೂಗಿದ್ದರಿಂದಾಗಿ ಧ್ವನಿ ಮಡಿಕೆಯಲ್ಲಿ ಊತ ಕಾಣಿಸಿಕೊಂಡಿದ್ದರೂ ಅದು ರಾತ್ರಿಯ ನಿದ್ದೆಯ ಸಮಯದಲ್ಲಿ ನಿವಾರಣೆಯಾಗುತ್ತದೆ. ಆದರೆ ದುರದೃಷ್ಟವಶಾತ್, ಕೆಲವರಲ್ಲಿ ಇದು ಇಷ್ಟಕ್ಕೆ ಪರಿಹಾರವಾಗದೆ ಧ್ವನಿ ಮಡಿಕೆಗೆ ಹಾನಿ ಉಂಟಾಗುತ್ತದೆ. ಈ ಹಾನಿಯು ಧ್ವನಿ ಮಡಿಕೆಯಲ್ಲಿ ಸಣ್ಣ ಉಬ್ಬು ಅಥವಾ ಗಡ್ಡೆಯಷ್ಟು ಅಲ್ಪ ಪ್ರಮಾಣದ್ದಾಗಿರಬಹುದು ಯಾ ಧ್ವನಿಯ ಮೇಲಿನ ಒತ್ತಡ ಮತ್ತು ಇತರ ಅಂಶಗಳ ಆಧಾರದಲ್ಲಿ ಗಂಭೀರ ಪ್ರಮಾಣದ್ದೂ ಆಗಿರಬಹುದು.
ಬಸ್ ನಿರ್ವಾಹಕ ವೃತ್ತಿಯಲ್ಲಿರುವ ಎಲ್ಲರೂ ತಮ್ಮ ಧ್ವನಿ ಮಡಿಕೆಗೆ ಹಾನಿ ಮಾಡಿಕೊಳ್ಳುತ್ತಾರೆ ಎಂದು ಇದರರ್ಥವೇ?
ಧ್ವನಿಯ ಬಳಕೆ ತೀವ್ರವಾಗಿದ್ದು, ಸತತವಾಗಿದ್ದರೆ ಸಾಧ್ಯತೆಗಳು ಅಧಿಕವಾಗಿರುತ್ತವೆ. ತಂಬಾಕು ಸೇವನೆ, ಧೂಮಪಾನ, ಮದ್ಯಪಾನ, ರಾಸಾಯನಿಕ ಅಥವಾ ಹೊಗೆಗೆ ಒಡ್ಡಿಕೊಳ್ಳುವುದು ಮತ್ತು ಕಾಫಿ ಅಥವಾ ಚಹಾದಂತಹ ಕೆಫೀನ್‌ಯುಕ್ತ ಪಾನೀಯಗಳನ್ನು ಅತಿಯಾಗಿ ಸೇವಿಸುವಂತಹ ಅಂಶಗಳಿಂದಲೂ ಈ ಅಪಾಯ ಹೆಚ್ಚುತ್ತದೆ. ಇವೆಲ್ಲದರ ಜತೆಗೆ ಗ್ಯಾಸ್ಟ್ರೈಟಿಸ್ ಕೂಡ ಧ್ವನಿ ಪೆಟ್ಟಿಗೆಯ ಮೇಲೆ ಭಾರೀ ಪರಿಣಾಮ ಬೀರಬಹುದಾಗಿದೆ.
ವೃತ್ತಿಯನ್ನು ತೊರೆಯಬೇಕೇ?
ಬೇಕಿಲ್ಲ; ಈ ತೊಂದರೆ ವೃತ್ತಿಜೀವನಕ್ಕೆ ಅಡ್ಡಿ ಉಂಟುಮಾಡುವ ತನಕ ನೀವು ವೃತ್ತಿಯನ್ನು ತೊರೆಯಬೇಕಾಗಿಲ್ಲ. ತೊಂದರೆ ಉಲ್ಬಣವಾಗುವ ತನಕ ನೀವು ಕಾಯಬೇಕು ಎಂಬುದು ಇದರರ್ಥವಲ್ಲ. ನೀವು ನಿಮ್ಮ ಧ್ವನಿಯ ಬಗ್ಗೆ ಕಾಳಜಿ ವಹಿಸಿ ಧ್ವನಿ ಮಡಿಕೆಗಳಿಗೆ ಇನ್ನಷ್ಟು ಹಾನಿ ಆಗದಂತೆ ಎಚ್ಚರ ವಹಿಸಬೇಕು. ಏಕೆಂದರೆ ಅದು ಧ್ವನಿಯನ್ನು ಉತ್ಪಾದಿಸಲು ನಿಮಗಿರುವ ಏಕೈಕ ಸಂಪನ್ಮೂಲವಾಗಿದೆ ಮಾತ್ರವಲ್ಲದೆ ಆಹಾರವು ಶ್ವಾಸಕೋಶ ಅಥವಾ ಶ್ವಾಸನಾಳಕ್ಕೆ ನುಗ್ಗದಂತೆ ತಡೆಯುವ ತಡೆಗೋಡೆಯೂ ಆಗಿ ಕೆಲಸ ಮಾಡುತ್ತದೆ. ಆದ್ದರಿಂದ ಧ್ವನಿ ಮಡಿಕೆಗಳಲ್ಲಿ ಉಂಟಾಗುವ ಬೆಳವಣಿಗೆಯು ಧ್ವನಿ ಮಡಿಕೆಗಳ ಸಂಪೂರ್ಣ ಮುಚ್ಚುವಿಕೆಯನ್ನು ತಡೆಯುವ ಮೂಲಕ ಧ್ವನಿಯ ಉತ್ಪಾದನೆಯನ್ನು ತಡೆಯಬಹುದು ಮಾತ್ರವಲ್ಲದೆ ನುಂಗುವಿಕೆಗೂ ಅಡ್ಡಿಯಾಗಬಹುದು.
ಹಾಗಾದರೆ ನಾನೇನು ಮಾಡಬಹುದು?
– ಸತತವಾಗಿ ಕಿರುಚುವುದು, ದೊಡ್ಡ ಧ್ವನಿಯಲ್ಲಿ ಕೂಗುವುದನ್ನು ಕಡಿಮೆ ಮಾಡಿ.
– ಪೂರ್ಣ ಶಕ್ತಿ ಹಾಕಿ ಸಿಳ್ಳೆ ಹೊಡೆಯುವುದನ್ನು ಕಡಿಮೆ ಮಾಡಿ.
– ದಿನವಿಡೀ ಆಗಾಗ ನೀರು ಕುಡಿಯುತ್ತಿರಿ.
– ಅತಿಯಾಗಿ ಕೆಫೀನ್‌ಯುಕ್ತ/
ಸಾಫ್ಟ್ಡ್ರಿಂಕ್/ ಮದ್ಯ ಸೇವನೆಯನ್ನು ದೂರ ಮಾಡಿ.
– ತಂಬಾಕು/ ಮಾದಕದ್ರವ್ಯ/ ಧೂಮಪಾನ ನಿಲ್ಲಿಸಿ.
– ಊಟ-ಉಪಾಹಾರ ತಪ್ಪಿಸಿಕೊಳ್ಳಬೇಡಿ.
– ಆಹಾರ ಸೇವಿಸಿದ ಕೂಡಲೇ ಮಲಗಿಕೊಳ್ಳುವುದು ಅಥವಾ ನಿದ್ದೆ ಮಾಡುವುದು ಬೇಡ.
ವೃತ್ತಿಪರಿಣಿತರ ಸಹಾಯವನ್ನು ಯಾವಾಗ ಪಡೆಯಬೇಕು?
– ಧ್ವನಿಯಲ್ಲಿ ಯಾವುದೇ ಬದಲಾವಣೆ ದೀರ್ಘಕಾಲ ಕಂಡುಬಂದಾಗ
– ಸತತವಾಗಿ ಮಾತನಾಡುವುದಕ್ಕೆ ತೊಂದರೆ ಆಗುತ್ತಿರುವಾಗ
– ಮಾತನಾಡುವುದಕ್ಕೆ ತೊಂದರೆಯಾಗುತ್ತಿದ್ದರೆ
– ಧ್ವನಿ ಸಂಪೂರ್ಣ ನಷ್ಟವಾಗಿದ್ದರೆ
– ಡಾ| ದೀಪಾ ಎನ್. ದೇವಾಡಿಗ
ಅಸೊಸಿಯೇಟ್ ಪ್ರೊಫೆಸರ್, ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗ, ಎಂಸಿಎಚ್‌ಪಿ, ಡಾ| ಟಿಎಂಎ ಪೈ ಆಸ್ಪತ್ರೆ, ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.