ಕೋವಿಡ್-19 ವಿರುದ್ಧ ಸಮರಕ್ಕೆ ಸಹಕರಿಸಿ
ಅಧಿಕಾರಿಗಳು, ಜನಪ್ರತಿನಿಧಿಗಳು, ದಾನಿಗಳು ಕೈಜೋಡಿಸಿ: ಜಿಲ್ಲಾ ಸಚಿವರ ಮನವಿ
Team Udayavani, Apr 14, 2020, 5:50 PM IST
ದಾವಣಗೆರೆ: ಕೋವಿಡ್-19 ವಿರುದ್ಧ ಸಮರಕ್ಕೆ ಅಧಿ ಕಾರಿಗಳು, ಜನ ಪ್ರತಿನಿಧಿಗಳು ಹಾಗೂ ದಾನಿಗಳು ಸೇರಿ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮನವಿ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕದ ಬಳಿಕ ಮೊದಲ ಬಾರಿಗೆ ಸೋಮವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಅವರು, ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮ ಬಗ್ಗೆ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊರೊನಾ ಮುಕ್ತ
ಜಿಲ್ಲೆಯಾಗಿಸುವಲ್ಲಿ ಶ್ರಮಿಸಿದ ಎಲ್ಲರನ್ನೂ ಅಭಿನಂದಿಸಿದರು. ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ವಹಿಸಬೇಕು. ಅವರ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಬಾರದು, ಆರೋಗ್ಯ ಇಲಾಖೆ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ಕೈಗೊಳ್ಳಬೇಕು. ಎಲ್ಲ ಅಧಿಕಾರಿಗಳು ಸಮರ್ಥ ಹಾಗೂ ಎಚ್ಚರಿಕೆಯಿಂದ ಕ್ರಮ ವಹಿಸುವ ಮೂಲಕ ಸಾರ್ವಜನಿಕರ ರಕ್ಷಣೆಯಲ್ಲಿ ತೊಡಗಬೇಕು. ಪಾಲಿಕೆ ಸದಸ್ಯರು ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.
ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ನಗರದಲ್ಲಿ ವಲಸೆ ಕಾರ್ಮಿಕರು, ನಿರ್ಗತಿಕರಿಗೆ ಸಮರ್ಪಕವಾಗಿ ಆಹಾರಕಿಟ್ ವಿತರಣೆಯಾಗುತ್ತಿಲ್ಲ. ಬೆಳಗಾವಿಯಿಂದ ಬಂದವರು ಸೇರಿದಂತೆ ಭಾನುವಾರ ಎರಡು ಸಾವಿರದಷ್ಟು ಜನರು ಆಹಾರಕಿಟ್‌ಗಾಗಿ ಸೇರಿದ್ದರು. ಪಾಲಿಕೆ ಸದಸ್ಯರಿಂದ ಆಯಾ ವಾರ್ಡ್‌ಗಳ ಬಡವರ, ನಿರ್ಗತಿಕರ ಮಾಹಿತಿ ಪಡೆದು, ಅಂತಹವರಿಗೆ ಆಹಾರದ ಕಿಟ್‌ಗಳ ವಿತರಣೆಯಾಗಬೇಕು. ನಾನು ಸಹ ಕಾರ್ಮಿಕ ಸಚಿವರೊಂದಿಗೆ ಮಾತನಾಡಿದ್ದು, ಜಿಲ್ಲೆಯಲ್ಲಿ ಎಷ್ಟೇ ಕಾರ್ಮಿಕರಿದ್ದರೂ ಅವರಿಗೆ ಆಹಾರದ ವ್ಯವಸ್ಥೆ ಮಾಡಲಾಗುವುದು. ಎಸ್‌ಡಿಆರ್‌ಎಫ್ ನಿಧಿಯಲ್ಲಿಯೂ ಅವರಿಗೆ ಅಗತ್ಯವಾದ ಊಟ, ವಸತಿ ಇತರೆ ಖರೀದಿಗೆ ಜಿಲ್ಲಾಡಳಿತಕ್ಕೆ ಅಧಿಕಾರ ನೀಡಲಾಗಿದೆ ಎಂದಿದ್ದಾರೆ. ಈ ಪ್ರಕಾರ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕೆಂದರು.
ಸಂಸದ ಜಿ.ಎಂ.ಸಿದ್ದೇಶ್ವರ್, ಕೇಂದ್ರ ಸರ್ಕಾರ ಎಲ್ಲರನ್ನೂ ಕಾಪಾಡುವ ನಿಟ್ಟಿನಲ್ಲಿ ನೆರವು ಕಲ್ಪಿಸಿದೆ. ದಾನಿಗಳೂ ಕೂಡ ಕಿಟ್‌ಗಳನ್ನು ನೀಡುತ್ತಿದ್ದಾರೆ. ಎಲ್ಲರೂ ಕೈಜೋಡಿಸಿದರೆ ಮಾತ್ರ ರಕ್ಷಣೆ ಸಾಧ್ಯ ಎಂದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲೆಯಲ್ಲಿ 1806 ಕಾರ್ಮಿಕರನ್ನು ಗುರುತಿಸಲಾಗಿದ್ದು, ಇದರಲ್ಲಿ 377 ಕಾರ್ಮಿಕರು ಅನ್ಯರಾಜ್ಯದಿಂದ ಬಂದಿದ್ದಾರೆ. ಕಾರ್ಮಿಕರು ವಿವಿಧೆಡೆ ಶೆಲ್ಟರ್‌ಗಳಿದ್ದಾರೆ ಇವರೆಲ್ಲರಿಗೂ ಆಹಾರದ ಕಿಟ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಶೇ.91
ಪಡಿತರ ವಿತರಣೆಯಾಗಿದೆ. ಜೊತೆಗೆ 3271 ಕಿಟ್‌ಗಳನ್ನು ದಾನಿಗಳಿಂದ ಸಂಗ್ರಹಿಸಿ ನೀಡಲಾಗುತ್ತಿದೆ ಎಂದರು. ಉಸ್ತುವಾರಿ ಸಚಿವರು, ಪಡಿತರ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ ನೀಡುವ ವ್ಯವಸ್ಥೆ ಈ ದಿನದಿಂದಲೇ ಮಾಡಿ ಎಂದಾಗ, ಆಹಾರ ಇಲಾಖೆ ಉಪನಿರ್ದೇಶಕ ಮಂಟೇಸ್ವಾಮಿ, 3440 ಮಂದಿ ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರಿಗೂ ಪಡಿತರ ನೀಡಲಾಗುವುದು ಎಂದರು.
ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಸಾಲ ಮಾಡಿ ದ್ವಿಚಕ್ರ, ನಾಲ್ಕು ಚಕ್ರದ ವಾಹನ ಖರೀದಿಸಿದವರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗಿದೆ. ಅವರೂ ಕೂಡ ಬಡವರೇ. ಇದರಿಂದ ಅವರಿಗೆ ತುಂಬಾ ತೊಂದರೆಯಾಗಿದ್ದು ಅವರಿಗೆ ಪಡಿತರ ಕೊಡಿಸಬೇಕೆಂದು ಉಸ್ತುವಾರಿ ಸಚಿವರಿಗೆ ಕೋರಿದರು. ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಮಾತನಾಡಿ, ಎಲ್ಲ ವಾರ್ಡುಗಳಲ್ಲಿ ಬಿಪಿಎಲ್ ಕಾರ್ಡ್ ಇದ್ದವರು ಮತ್ತು ಇಲ್ಲದೇ ಇರುವ ಬಡವರ ಲಿಸ್ಟ್ ತಯಾರಿಸಲಾಗಿದೆ. ಕೇವಲ ಆಹಾರ ಕಿಟ್ ನೀಡಿದರೆ ಸಾಲದು. ಅನೇಕರಿಗೆ ಅಡುಗೆ ಮಾಡುವ ಸೌಲಭ್ಯವಿಲ್ಲದ ಕಾರಣ ಗಂಜಿ ಕೇಂದ್ರ ತೆರೆಯುವಂತೆ ಮನವಿ ಮಾಡಿದರು. ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿ, ಕೋವಿಡ್ ಹಿನ್ನೆಲೆಯಲ್ಲಿ ಪಡಿತರ ಚೀಟಿ ರದ್ದಾದವರಿಗೂ ಪಡಿತರ ನೀಡುವಂತೆ ಆಹಾರ ಇಲಾಖೆಗೆ ಸೂಚಿಸಿ, ಯಾರೂ ಹಸಿವಿನಿಂದ ಬಳಲಬಾರದೆಂಬುದು ಮುಖ್ಯಮಂತ್ರಿಗಳ ಆಶಯವಾಗಿದೆ. ಆದರೆ, ಗಂಜಿ ಕೇಂದ್ರ ತೆರೆಯಲು ಬರುವುದಿಲ್ಲ. ಕೋವಿಡ್ ಸಂಕಷ್ಟ ಮುಗಿಯುವವರೆಗೆ ಬಡವರ, ನಿರ್ಗತಿಕರನ್ನು ಜಿಲ್ಲಾಡಳಿತ ನೋಡಿಕೊಳ್ಳಬೇಕು. ಜೊತೆಗೆ ಪಾಲಿಕೆ ಸದಸ್ಯರು, ಶಾಸಕರು ಕೈ ಜೋಡಿಸಬೇಕೆಂದರು.
ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಚನ್ನಗಿರಿಯಲ್ಲಿ ವಲಸಿಗರು ಮತ್ತು ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಟಪದಲ್ಲಿ ವಸತಿ ಊಟ ನೀಡಲಾಗುತ್ತಿದೆ. ದಾನಿಗಳ ನೆರವಿನಿಂದ ಇಂತಹವರಿಗೆ ಊಟದ ವ್ಯವಸ್ಥೆ ಮಾಡಬಹುದು. ಶಾಸಕರ ಅನುದಾನದಲ್ಲಿ ಮಾಸ್ಕ್ಮತ್ತು ಸ್ಯಾನಿಟೈಸರ್ ಖರೀದಿಸಲು ಕ್ರಮ ವಹಿಸಬೇಕು. ಜೊತೆಗೆ ಪಡಿತರ ನೀಡಲು ಹಣ ತೆಗೆದುಕೊಳ್ಳುತ್ತಿರುವ ಪಡಿತರ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರು.
ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಮಿಕ ಅ ಧಿಕಾರಿಗಳು ಸರಿಯಾಗಿ ಕಾರ್ಮಿಕರನ್ನು ಗುರುತಿಸಿಲ್ಲ. ನೀವು ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ. ನಾಳೆಯಿಂದಲೇ ನನ್ನ ಕ್ಷೇತ್ರದಲ್ಲಿ ನಾನೇ ಸ್ವಂತ ಆಹಾರ ಕಿಟ್‌ಗಳನ್ನು ನೀಡಲಿದ್ದೇನೆ. ನೀರಿಲ್ಲದೇ ತೋಟಗಳು ಒಣಗುತ್ತಿದ್ದು, ಬೋರ್‌ವೆಲ್ ಕೊರೆಯಲು ಅನುಮತಿ ನೀಡಬೇಕೆಂದರು. ಆಗ, ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಹಿರಿಯರಾದ ಶಾಮನೂರು ಶಿವಶಂಕರಪ್ಪ ಮತ್ತು ಜಿ.ಎಂ.ಸಿದ್ದೇಶ್ವರವರು ಬಡವರಿಗೆ ದಾನ ಮಾಡುವ ಮೂಲಕ ಇಡೀ ದಾವಣಗೆರೆಯ ಸಮಸ್ಯೆಯನ್ನೇ ಬಗೆಹರಿಸಬಹುದೆಂದರು. ಹರಿಹರ ಶಾಸಕ ಎಸ್. ರಾಮಪ್ಪ ಮಾತನಾಡಿ, ಹರಿಹರದಲ್ಲಿಯೂ ಸಾಕಷ್ಟು ಕಟ್ಟಡ ಮತ್ತು ವಲಸಿಗ ಕಾರ್ಮಿಕರಿದ್ದು ಅವರ ಬಗ್ಗೆ ಕಾರ್ಮಿಕ ಇಲಾಖೆಯವರು ಗಮನ ಹರಿಸಬೇಕು ಎಂದರು. ಸಂಸದ ಜಿ.ಎಂ.ಸಿದ್ದೇಶ್ವರ್, ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಕಿಟ್ಸ್‌ಗಳಿಗೆ ವ್ಯವಸ್ಥೆ ಮಾಡಿಕೊಂಡು ಪರೀಕ್ಷೆಗೆ ಹೆಚ್ಚಿನ ಒತ್ತು ನೀಡಬೇಕೆಂದರು.
ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಟಾರ್ ಮಾತನಾಡಿ, ದಾವಣಗೆರೆ ಹಿಂದುಳಿದ ಬಡಾವಣೆವೊಂದರಲ್ಲಿ ಆಂಬುಲೆನ್ಸ್ ಬರೋವಷ್ಟರಲ್ಲಿ ಹೆರಿಗೆಯಾದ ಪ್ರಕರಣ ನಡೆದಿದೆ. ವಾಹನ ವ್ಯವಸ್ಥೆ ಇಲ್ಲದೇ ಸಮಸ್ಯೆಯಾಗುತ್ತಿದೆ. ವಾರ್ಡ್‌ವಾರು ಒಂದೊಂದು ವಾಹನ ವ್ಯವಸ್ಥೆ ಮಾಡಬೇಕು ಹಾಗೂ ಸ್ಲಂಗಳಲ್ಲಿರುವ ಬಿಪಿ, ಶುಗರ್ ಕಾಯಿಲೆಯವರಿಗೆ ಮಾತ್ರೆ ಪೂರೈಸಬೇಕೆಂದರು.
ಜಿಲ್ಲಾಧಿಕಾರಿ ಮಾತನಾಡಿ, ಕೊರೊನಾ ಪ್ರಕರಣ, ಕೈಗೊಂಡ ಕ್ರಮ, ಪರಿಸ್ಥಿತಿ, ಸಾರ್ವಜನಿಕರಿಗೆ ಕಲ್ಪಿಸಿದ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಸರ್ವೇಕ್ಷಣಾ ಧಿಕಾರಿ ಡಾ| ಜಿ.ಡಿ..ರಾಘವನ್ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಮತ್ತು ಕಂಟೈನ್‌ಮೆಂಟ್ ಪ್ಲಾನ್ ಬಗ್ಗೆ ಪಿಪಿಟಿ ಮೂಲಕ ಮಾಹಿತಿ ನೀಡಿದರು. ಶಾಸಕರಾದ ಎಸ್.ಎ.ರವೀಂದ್ರನಾಥ್, ಎಸ್.ವಿ.ರಾಮಚಂದ್ರ, ಪ್ರೊ| ಎನ್.ಲಿಂಗಣ್ಣ, ಜಿ.ಪಂ. ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಮೇಯರ್ ಬಿ.ಜಿ.ಅಜಯ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠ ಹನುಮಂತರಾಯ, ಜಿ.ಪಂ ಸಿಇಒ ಪದ್ಮಾ ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡಿಎಚ್‌ಒ ಡಾ| ಘವೇಂದ್ರಸ್ವಾಮಿ, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.