ದಾದಿ ಎಂಬ ದೇವತೆ

ಸೇವೆಯೇ ದೈವ ಸರ್ವಜ್ಞ!

Team Udayavani, Apr 15, 2020, 1:12 PM IST

ದಾದಿ ಎಂಬ ದೇವತೆ

ಕೋವಿಡ್-19 ಕಾರಣಕ್ಕೆ ಕೆಲವರಿಗೆ ರಜೆ ಸಿಕ್ಕಿದೆ. ಹಲವರಿಗೆ, ಮನೆಯಿಂದಲೇ ಕೆಲಸ ಮಾಡುವ ಅವಕಾಶವಿದೆ. ಆದರೆ, ನರ್ಸ್‌ಗಳಿಗೆ ಆ ಸೌಲಭ್ಯವಿಲ್ಲ. ಅವರು, ಹಗಲು- ರಾತ್ರಿಯ ಪರಿವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಕೊರೊನಾ ವೇಷದ ಯಮರಾಜ ಎದುರಿಗೇ ಇರುವುದನ್ನು ತಿಳಿದೂ ಸೇವೆಗೆ ನಿಂತಿದ್ದಾರೆ. ಯಾರೋ ಒಬ್ಬರಿಗೆ ಕೋವಿಡ್-19 ಸೋಂಕು ಅಂದರೆ, ಇಡೀ ಬೀದಿಗೇ ನಿರ್ಬಂಧ ಹೇರಲಾಗುತ್ತದೆ. ಆದರೆ, ಸೋಂಕು ಇರುವಾತ ಎದುರಿಗೇ ಮಲಗಿದ್ದರೂ, ಹಸನ್ಮುಖದಿಂದಲೇ ಸೇವೆಗೆ ನಿಲ್ಲುವವರು, “ನರ್ಸ್‌’ ವೇಷದ ದೇವತೆಗಳು. ಈ ತಾಯಂದಿರ ಸೇವೆಯ ಕುರಿತು ಅವರ ಕುಟುಂಬದವರು ಹೆಮ್ಮೆಯಿಂದ ಹೇಳಿಕೊಂಡಿರುವ ಮಾತುಗಳು ಇಲ್ಲಿವೆ…

 

ಹಗಲು ಇರುಳಿನ ಕಾಲಚಕ್ರ ಉರುಳುತಿಲ್ಲ…
ಡಾ. ಲಕ್ಷ್ಮಣ


ನಿಸ್ಸಂಶಯವಾಗಿ ಇದು ವೈದ್ಯಕೀಯ ತುರ್ತುಕಾಲ, ಕಣ್ಣಿಗೆ ಕಾಣದ ಯಃಕಶ್ಚಿತ್‌ ವೈರಸ್ಸೊಂದು ಜಗತ್ತಿಗೆ ಮಾಸ್ಕ್ ಹಾಕಿಸಿ, ಜನಜೀವನವನ್ನು ಸ್ತದ್ಧಗೊಳಿಸಿದೆ. ಎಲ್ಲರ ಕಣ್ಣುಗಳಲ್ಲೂ ಆತಂಕದ ಛಾಯೆ! ಹಾಗಂತ ಎಲ್ಲಿಯೂ ಹೇಳುವ ಹಾಗಿಲ್ಲ. ಈ ತಲ್ಲಣದ ಗಳಿಗೆಯಲ್ಲಿ, ರಾತ್ರಿ ವೈದ್ಯರು ಮಲಗಿದ ಹೊತ್ತಿನಲ್ಲಿ, ರಾತ್ರಿ ಬರುವ ರೋಗಿಗಳ ಆರೈಕೆ ಮಾಡುತ್ತಿದ್ದಾಳೆ ಆಕೆ. ಜ್ವರ, ಕೆಮ್ಮು ನೆಗಡಿಯೆಂದರೆ ಈಗ ಜಗತ್ತು ಬೆಚ್ಚಿ ಬೀಳುತ್ತಿದೆ. ಈ ರೋಗಿಗಳನ್ನು ಮುಟ್ಟುವ ಮಾತು ಹಾಗಿರಲಿ, ಯಾರೂ ಮಾತನಾಡಿಸರು. ಆದರೆ, ಈ ಬಿಳಿಯ ಮೇಲಂಗಿ ಹಾಕಿಕೊಂಡ ಶ್ವೇತ ಶುಭ್ರಧಾರಿಣಿ, ಸುಡುವ ಹಣೆಗಳ ಮೇಲೆ ತಣ್ಣೀರು ಬಟ್ಟೆಯಿಟ್ಟು, ಇಂಜೆಕ್ಷನ್ನು
ಕೊಟ್ಟು ವೈದ್ಯರ ಸಲಹೆ ಮೇರೆಗೆ ಮಾತ್ರೆ ಕೊಟ್ಟು, ನರ್ಸಿಂಗ್‌ ಹೋಮಿನ ಇನ್‌ ಪೇಷಂಟಿನಲಿ ದಾಖಲಾದ ದಮ್ಮು ರೋಗಿಯ ಗ್ಲುಕೋಸ್‌ ಡ್ರಿಪ್‌ ಬದಲಾಯಿಸಲು ಓಡಿ ಹೋಗುತ್ತಾಳೆ. ಕೋವಿಡ್-19 ಬಂದಾಗಿನಿಂದ ಇವಳಿಗೆ ಹೆಚ್ಚುವರಿ ಡ್ನೂಟಿ. ಉಳಿದ ಎಲ್ಲ ನರ್ಸುಗಳು ಯುಗಾದಿಗೆಂದು ರಜೆಗೆ ಊರಿಗೆ ಹೋದವರು, ಲಾಕ್‌ ಡೌನ್‌ನಿಂದಾಗಿ ಊರಿನಲ್ಲೇ ಉಳಿದುಹೋಗಿದ್ದಾರೆ. ಹೀಗಾಗಿ, ಉಳಿದವಳೊಬ್ಬಳೇ ಶ್ವೇತವಸ್ತ್ರದ ದೇವತೆ, ಹೆಸರು ಮಂಜುಳಾ.

ಎಸ್‌. ಮಂಜುಳಾ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಅಜ್ಜೀಪುರ ಗ್ರಾಮದವರು. ಕಳೆದ ಆರು ವರ್ಷಗಳಿಂದ, ಎಲೆಕ್ಟ್ರಾನಿಕ್‌ ಸಿಟಿಗೆ ಸಮೀಪದ ದೊಡ್ಡ ತೋಗೂರಿನ ಲಕ್ಷ್ಮೀ ನರ್ಸಿಂಗ್‌ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಜುಳಾರ ಪತಿ ಕೂಡ ಮೇಲ್‌ ನರ್ಸ್‌ ಆಗಿ ಬೇರೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ. ಇವರದು ಕೆಲವೊಮ್ಮೆ ರಾತ್ರಿ ಪಾಳಿಯಾದರೆ, ಕೆಲವೊಮ್ಮೆ ಹಗಲು ಪಾಳಿ. ಕೊರೊನಾ ಬಂದಾಗಿನಿಂದ ಇಬ್ಬರಿಗೂ ಹಗಲು ಯಾವುದು, ರಾತ್ರಿ ಯಾವುದು ಗೊತ್ತಾಗುತ್ತಿಲ್ಲ. ಹೀಗಾಗಿ, ಪಾಳಿಯ ಖಬರು ಇಬ್ಬರಿಗೂ ಇಲ್ಲ. ಎರಡು ರೋಗಿಗಳು ಬರುವ ನಡುವಿನ ನಂತರವೇ ಇವರ ಊಟ- ತಿಂಡಿ- ಕಾಫಿ, ಸಮಯ ಸಿಕ್ಕರೆ ಅಮ್ಮನಿಗೆ ಫೋನು… ಆ ಕಡೆ ಅಮ್ಮ ಆತಂಕದಲ್ಲಿದ್ದಾರೆ. “ಅದೇನೋ ಮೂಗು ಮುಚುಗು ಕಾಯಿಲೆ ಬಂದದಂತಲ್ಲವಾ, ಹುಸಾರು ಕಣ್‌ ಮಗಾ… ಇಲ್ಲಿ ಊರಲ್ಲಿ ಎಲ್ಲಾ ಅಂಗಡಿಗಳು ಬಂದ್‌ ಆಗಿವೆ. ಕೂಲಿಗೆ ಯಾರೂ ಕರೆಯುತ್ತಿಲ್ಲ. ಊಟದ್ದೇ ಕಷ್ಟ’ ಅಂತ ವಯಸ್ಸಾದ ಅಮ್ಮ ಕಣ್ಣೀರಾಗುತ್ತಾರೆ.

ಅವ್ವ ಕೂಲಿ ಮಾಡಿಯೇ ಮಗಳನ್ನು ನರ್ಸಿಂಗ್‌ ಓದಿಸಿದ್ದು. ನಡುಗಾಲದಲ್ಲಿ ಎದ್ದು ಹೋದ ಅಪ್ಪನ ಮೇಲೆ ಕೋಪವಿದೆ. ಆದರೆ, ಕೋಪದಿಂದ ಹೊಟ್ಟೆ ತುಂಬುವುದಿಲ್ಲವಲ್ಲ? ಈ ಹಸಿವಿಗಾಗಿ ದುಡಿಯಬೇಕು, ದುಡಿದು ಬದುಕಬೇಕೆಂಬ ಹಠ ತೊಟ್ಟೇ ಬೆಂಗಳೂರಿನ ಬಸ್ಸು ಹತ್ತಿದ್ದು… ಗೊತ್ತಿಲ್ಲ, ಅನ್ನ ಹಾಕುವ ಊರೇ ಇವರ ಕೊರಳ ಉರುಳಾಗುವುದಾ? ದೇವರೇ ಬಲ್ಲ. ಬಂದ ರೋಗಿಗಳಿಗೆಲ್ಲ ಕೋವಿಡ್-19 ಇರಲಿಕ್ಕಿಲ್ಲ. ಆದರೆ, ನೂರರಲ್ಲೊಬ್ಬರಿಗೆ ಕೋವಿಡ್-19 ಇದ್ದರೂ ಇವರಿಗೆ ಅಪಾಯವೇ… ಅಪಾಯ ಯಾರಿಗಿಲ್ಲ? ವೈದ್ಯರಿಗಿದೆ, ದಿನಸಿ ಕೊಡುವವನಿಗೆ, ಹಾಲು ಮಾರುವವನಿಗೆ, ಪೇಪರು ಹಂಚುವ ಹುಡುಗರಿಗೆ, ಮೆಡಿಕಲ್‌ ಶಾಪಿನವರಿಗೆ, ನೀರು ಕ್ಯಾನು ಹೊತ್ತು ತರುವ ಹುಡುಗನಿಗೆ… ಕಷ್ಟದ ಕಾಲ ಊರಿನಲ್ಲಿರುವ ಅವ್ವನಿಗೂ ಇದೆ ಸಂಕಷ್ಟದ ಕಾಲ. ನಾಡಿಗೂ ಇದೆ, ದೇಶಕ್ಕೂ ಇದೆ, ವಿಶ್ವಕ್ಕೂ ಇದೆ…  ಇಂದಲ್ಲಾ ನಾಳೆ ಹೋಗುತ್ತದೆ ಕೋವಿಡ್-19. ಅಲ್ಲಿಯವರೆಗೂ ನೀವು ಮನೆಯಲ್ಲಿರಿ. ಕ್ಷೇಮವಾಗಿ ಕೈ ತೊಳೆಯುತ್ತಿರಿ. ನಿಮಗಾಗಿ ಅವರಿದ್ದಾರೆ, ಹಗಲು ರಾತ್ರಿ ಪಾಳಿಗಳ ಖಬರು ಇಲ್ಲದೆ…

ಕರ್ತವ್ಯದ ಮುಂದೆ ಕಷ್ಟಗಳೆಲ್ಲ ಗೌಣ

ನಾನು ಚೇತನ್‌. ನನ್ನ ಹೆಂಡತಿ ಶೋಭ, ರಾಯಚೂರು ಜಿಲ್ಲೆಯ ಸಿಂದನೂರು ತಾಲೂಕಿನ ಗಾಂಧಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿಯಾಗಿ
ಕೆಲಸ ಮಾಡುತ್ತಿದ್ದಾಳೆ. ರಾಜ್ಯಾದ್ಯಂತ ಕೋವಿಡ್-19 ಸೋಂಕಿನಿಂದ ಪಾರಾಗಲಿಕ್ಕಾಗಿ ಲಾಕ್‌ಡೌನ್‌ ಮಾಡಲಾಗಿದೆ. ಆದರೆ, ಆರೋಗ್ಯ ಇಲಾಖೆಯ ಸಿಬ್ಬಂದಿಗೆ ರಜೆ ಇಲ್ಲ. ಅವರು ಹೊರ ಹೋಗಲೇ ಬೇಕಿದೆ. ಸೋಂಕಿತರು ಮತ್ತು ರೋಗಿಗಳ ಶುಶ್ರೂಷೆ ಅವರ ಕರ್ತವ್ಯ. ಮನೆಯಲ್ಲಿ ಎಂಟು ವರ್ಷದ ಮಗನಿದ್ದಾನೆ. ನಾನೂ ಸಹ ಬ್ರದರ್‌ ಆಗಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕಾರಣ, ಇಬ್ಬರಿಗೂ ಬಿಡುವಿಲ್ಲ. ಚಿತ್ರದುರ್ಗದವರಾದ ನಾವು ಕೆಲಸದ ನಿಮಿತ್ತ ರಾಯಚೂರಿನಲ್ಲಿ ವಾಸಿಸುತ್ತಿದ್ದೇವೆ. ಸೈನಿಕರಂತೆಯೇ ನಮಗೂ ಕೆಲವು ಬಾಧ್ಯತೆಗಳಿರುತ್ತವೆ. ಎಷ್ಟೋ ಜನ, ನಮ್ಮಲ್ಲಿಗೆ ಬರುವಾಗಲೇ ಹೆದರಿರುತ್ತಾರೆ, ತನಗೇನು ಆಗುತ್ತದೋ ಎಂಬ ಭೀತಿಯಲ್ಲಿರುತ್ತಾರೆ. ಅವರಿಗೊಂದು ಸಾಂತ್ವನ ಬೇಕಿರುತ್ತದೆ. ಅವರೊಳಗೆ ನಮ್ಮದೇ ಒಬ್ಬ ತಾಯಿ, ತಂದೆ, ಅಕ್ಕ, ಅಣ್ಣ, ಮಗು… ಕಾಣಿಸಿದಂತಾಗುವಾಗ ನಮಗೂ ಮನ ಮಿಡಿಯುತ್ತದೆ. ಅಷ್ಟಕ್ಕೂ ನಾವೂ ಮನುಷ್ಯರೇ ತಾನೇ? ನಮಗೆ ಸೋಂಕು ತಗುಲಬಾರದೆಂದೇನೂ ಇಲ್ಲವಲ್ಲ… ನನ್ನ ಪತ್ನಿ ತುರ್ತಾಗಿ ಅವೇಳೆಯಲ್ಲಿ ಕೆಲಸಕ್ಕೆ ಹಾಜರಾಗಬೇಕಾಗಿ ಬಂದಾಗ, “ನಾನಿದ್ದೇನೆ’ ಎನ್ನುವ ಧೈರ್ಯವನ್ನು ನಾನು ಕೊಡುತ್ತೇನೆ. ಇಬ್ಬರೂ ಒಂದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದರಿಂದ, ಅವಳು ಹೇಳದೆಯೇ ಅವಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಗಿದೆ. ನಮ್ಮಿಬ್ಬರ ಕುಟುಂಬವೂ ಮಾನಸಿಕವಾಗಿ ಜೊತೆಯಲ್ಲಿದ್ದು ಧೈರ್ಯ ತುಂಬುತ್ತಿರುವುದರಿಂದ, ಮನಸಿಗೆ ಒಂದಷ್ಟು ಸಮಾಧಾನವಿದೆ. ನಾವಿಬ್ಬರೂ ಬೇರೆ ಬೇರೆ ಶಿಫ್ಟ್ನಲ್ಲಿ ಕೆಲಸ ಮಾಡುವುದರಿಂದ ಮಗನನ್ನು ಕೂಡಾ, ಶಿಫ್ಟ್ ಪ್ರಕಾರ ನೋಡಿಕೊಳ್ಳುತ್ತೇವೆ.

ಆದರೆ, ಕೆಲವೊಮ್ಮೆ, ಇಬ್ಬರೂ ಹೊರ ಹೋಗಬೇಕಾಗಿ ಬಂದಾಗ ಮಾತ್ರ ಮಗುವನ್ನು ಬೇರೆಯವರ ಸುಪರ್ದಿಗೆ ಬಿಟ್ಟು ಹೋಗಬೇಕಾಗುತ್ತದೆ. ಎಲ್ಲರ ಬಗ್ಗೆ ಎಚ್ಚರ ವಹಿಸುವ ನಮಗೆ ನಮ್ಮ ಮಗುವಿನ ಕಾಳಜಿ ಮಾಡುವುದು ಕಷ್ಟವಾಗುತ್ತಿದೆ ಎನಿಸುವಾಗ ಸ್ವಲ್ಪ ನೋವಾಗುತ್ತದೆ. ಆದರೂ ಒಂದೊಳ್ಳೆ ಕೆಲಸ ಮಾಡಿ ದ ತೃಪ್ತಿಯ ಮುಂದೆ ಅದು ಗೌಣವಾಗುತ್ತದೆ.

?ಚೇತನ್‌, ಶೋಭಾ
ನಿರೂಪಣೆ: ಆಶಾ ಜಗದೀಶ್‌

ಆಸ್ಪತ್ರೆಯ ಯೋಧರು ನಾವು…

ನನ್ನ ಹೆಸರು ಸತ್ಯ, ನಾನು 15 ವರ್ಷಗಳಿಂದ ಬೆಂಗಳೂರಿನ ದಾಸರಹಳ್ಳಿಯಲ್ಲಿರುವ ವಿಜಯ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದೀನಿ. ನನ್ನ ಗಂಡ ಮನೆಯಲ್ಲಿಯೇ ಲೇಥಿಂಗ್‌ ವರ್ಕ್‌ ಮಾಡ್ತಾರೆ. ಮೂವರು ಮಕ್ಕಳು. ದೊಡ್ಡವನು ಕೆಲಸ ಮಾಡ್ತಾನೆ, ಇಬ್ಬರು ಓದಿದ್ದಾರೆ. ಈ ಕೊರೊನಾ ಭಯ ಶುರುವಾದಾಗ, ದೊಡ್ಡ ಮಕ್ಕಳಿಬ್ಬರದೂ ಒಂದೇ ಸಮನೆ ಗಲಾಟೆ. “ನೀನು ಕೆಲಸಕ್ಕೆ ಹೋಗೋದು ಬೇಡ. ನಿನಗೇನಾದರೂ ಆದರೆ ನಮಗ್ಯಾರು ದಿಕ್ಕು?’ ಅಂತ. ಕೊನೆಯ ಮಗ ಮಾತ್ರ “ಪರವಾಗಿಲ್ಲಮ್ಮ, ನೀನು ಹೋಗು’ ಅನ್ನುವ ಧೈರ್ಯ ಕೊಟ್ಟ. ಗಂಡ ಹೇಳ್ತಾರೆ- “ಬೇರೆಯವರಿಗೆ ಸೇವೆ ಮಾಡುವ ಭಾಗ್ಯ ಎಷ್ಟು ಜನಕ್ಕೆ ಸಿಗುತ್ತೆ? ಮನೆಯ ಬಗ್ಗೆ ಯೋಚಿಸದೆ, ಧೈರ್ಯವಾಗಿ ಜನರ ಸೇವೆ ಮಾಡು, ನಮಗೆಲ್ಲರಿಗೂ ಒಳ್ಳೆಯದಾಗುತ್ತದೆ.

ಮನೆಯ ಬಗ್ಗೆ ಯೋಚಿಸಬೇಡ. ನಾವು ನೋಡಿಕೊಳ್ತೀವಿ’ ಅಂತ. ಆದರೆ, ಅಕ್ಕಪಕ್ಕದ ಮನೆಯವರು ಒಂದಷ್ಟು ದಿವಸ ತುಂಬಾ ಗಲಾಟೆ ಮಾಡಿದರು. ನಿನ್ನಿಂದ ಬೀದಿಗೆ ರೋಗ ಹರಡುತ್ತದೆ ಅನ್ನೋ ತರಹ. ಕಡೆಗೆ, ಅವರಿಗೆಲ್ಲಾ ಮನೆಯವರು ಬೈದು ಬುದ್ಧಿ ಹೇಳಿದ್ದಾರೆ. “ನೀವ್ಯಾರೂ ನಮ್ಮ ಮನೆಯ ಬಳಿ ಬರಬೇಡಿ, ನಾವ್ಯಾರೂ ನಿಮ್ಮ ಮನೆಯ ಹತ್ತಿರ ಬರೋಲ್ಲ. ಒಂದು ವೇಳೆ ಈ ಕಾಯಿಲೆಯಿಂದ ನನ್ನ ಹೆಂಡತಿಗೆ ಏನಾದರೂ ಹೆಚ್ಚುಕಡಿಮೆಯಾದರೂ, ನಾನು ಅವಳ ಬಗ್ಗೆ ಹೆಮ್ಮೆಪಡ್ತೀನಿ. ಗಡಿಯಲ್ಲಿ ಸೈನಿಕರು ಫೈಟ್‌ ಮಾಡೋಲ್ವಾ? ಹಾಗೆಯೇ ನನ್ನ ಹೆಂಡತಿ ಆಸ್ಪತ್ರೆಯಲ್ಲಿ ಹೋರಾಟ ಮಾಡಿ ಸತ್ತಳು’ ಅಂತ ಅಂದು  ಕೊಳ್ತೀನಿ,  ಅಂತೆಲ್ಲಾ ಜಗಳವಾಡಿದ ಮೇಲೆ ಈಗ ಸುತ್ತ ಮುತ್ತ ಜನರು ಸುಮ್ಮನಾಗಿದ್ದಾರೆ. ನನ್ನಿಂದಾಗಿ ಯಾರಿಗೂ ಕಷ್ಟ ಆಗಬಾರದು ಅಂತ, ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು, ತಿಂಡಿ, ಅಡುಗೆ ಮಾಡಿಯೇ ಆಸ್ಪತ್ರೆಗೆ ಹೋಗುವುದು. ನಾನು ವಾಪಸ್‌ ಬರುವವರೆಗೆ ನಾಲ್ಕು  ಜನರೂ ಕಾಯ್ತಾ ಇರ್ತಾರೆ. ಕಷ್ಟದ ದಿನಗಳಲ್ಲಿ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಅಂದುಕೊಂಡಿದ್ದೇನೆ. ಆಸ್ಪತ್ರೆಯ ಯೋಧರು ನಾವು…

? ಸತ್ಯ, ವಿಜಯಾ ಆಸ್ಪತ್ರೆ, ಬೆಂಗಳೂರು.
ನಿರೂಪಣೆ: ರೂಪಲಕ್ಷ್ಮಿ

ಟಾಪ್ ನ್ಯೂಸ್

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.