50 ಲಕ್ಷ ರೂ. ಕ್ಯಾಪ್ಸಿಕಂ ಗಿಡದಲ್ಲೇ ಕೊಳೆಯುತ್ತಿದೆ
Team Udayavani, Apr 16, 2020, 4:41 PM IST
ಬಂಗಾರಪೇಟೆ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗೆ ಆ ರೈತ ಲಕ್ಷಾಂತರ ರೂ. ಆದಾಯ ನೋಡುತ್ತಿದ್ದ. ಆದರೆ, ವಿಧಿಯಾಟ, ಕೋವಿಡ್ – 19 ಬಂದು ಲಾಕ್‌ಡೌನ್ ಆಗಿದ್ದರಿಂದ 50 ಲಕ್ಷ ರೂ. ಆದಾಯ ತರಬೇಕಿದ್ದ ಕ್ಯಾಪ್ಸಿಕಂ ಬೆಳೆ ಗಿಡದಲ್ಲೇ ಕೊಳೆಯುತ್ತಿದೆ. ಸಾಲದ ಸುಳಿಗೆ ಸಿಲುಕಿರುವ ತಾಲೂಕಿನ ಐಮರಸಪುರ ಗ್ರಾಮದ ರೈತ, ಈಗ ದಿಕ್ಕು ತೋಚದೆ ತಲೆ ಮೇಲೆ ಕೈಹೊತ್ತು ಕೂತಿದ್ದಾನೆ.
ಗ್ರಾಮದ ಎನ್.ಆರ್.ಜೀವನರೆಡ್ಡಿ ತಮ್ಮ ಎರಡೂವರೆ ಎಕರೆಯಲ್ಲಿ ಪಾಲಿಹೌಸ್ ನಿರ್ಮಿಸಿ ವಿದೇಶಿ ಗುಣಮಟ್ಟದ ಕೆಂಪು ಬಣ್ಣದ ಇನ್ಸ್‌ಪ್ರಿಷನ್ ಹಾಗೂ ಹಳದಿ ಬಣ್ಣದ ಬಚಾಟಾ ತಳಿಯ ಕ್ಯಾಪ್ಸಿಕಂ ಅನ್ನು 20 ಲಕ್ಷ ರೂ. ವೆಚ್ಚದಲ್ಲಿ ಬೆಳೆದಿದ್ದಾನೆ. ಆದರೆ, ಲಾಕ್‌ಡೌನ್‌ನಿಂದ ಬೆಳೆ ಕೇಳುವವರೇ ಇಲ್ಲ. 50 ಲಕ್ಷ ರೂ. ಆದಾಯದ ಭರವಸೆಯಲ್ಲಿದ್ದ ರೈತ, ಈಗ ಕಂಗಾಲಾಗಿದ್ದಾನೆ.ಕ್ಯಾಪ್ಸಿಕಂ ಬೆಳೆಯು ಹೆಚ್ಚಾಗಿ ದುಬೈ, ಸಿಂಗಾಪುರ್, ದೆಹಲಿ, ಮುಂಬೈ, ಕೊಲ್ಕತಾಗೂ ರಫ್ತು ಆಗುತ್ತದೆ. ಪ್ರವಾಸಿ ತಾಣಗಳಲ್ಲಿ ಹೆಚ್ಚಾಗಿ ಈ ಕ್ಯಾಪ್ಸಿಕಂ ಬಳಕೆ ಮಾಡಲಾಗುತ್ತದೆ. ಪ್ರಸ್ತುತ ಎಲ್ಲೂ ಪ್ರವಾಸಿಗರು ಇಲ್ಲದೇ ಇರುವ ಕಾರಣ ಬೆಳೆ ನಷ್ಟವಾಗುತ್ತಿದೆ.
ಒಂದೂವರೆ ಕೋಟಿ ರೂ.ನಲ್ಲಿ ಪಾಲಿಹೌಸ್ ನಿರ್ಮಿಸಿ, 20 ಲಕ್ಷ ರೂ. ವೆಚ್ಚ ಮಾಡಿ ಕ್ಯಾಪ್ಸಿಕಂ ಬೆಳೆಯಲಾಗಿದೆ. ಕೋವಿಡ್ – 19 ಲಾಕ್‌ಡೌನ್‌ನಿಂದ 50 ಲಕ್ಷ ರೂ. ನಷ್ಟ ಅನುಭವಿಸುವಂತಾಗಿದೆ. ಸೌತ್ ಇಂಡಿಯಾ ಬ್ಯಾಂಕ್‌ನಲ್ಲಿ 50 ಲಕ್ಷ ರೂ. ಸಾಲ ಇದೆ. ಬಡ್ಡಿ ಮನ್ನಾ ಮಾಡಬೇಕು. ಸಾಲ ಕಟ್ಟಲು ಆರು ತಿಂಗಳು ಕಾಲಾವಕಾಶ ನೀಡಬೇಕು. ಸೂಕ್ತ ಪರಿಹಾರ ನೀಡಬೇಕು. ಫಸಲನ್ನು ಸರ್ಕಾರವೇ ಖರೀದಿಸಬೇಕು.
ಎನ್.ಆರ್.ಜೀವನರೆಡ್ಡಿ, ಕ್ಯಾಪ್ಸಿಕಂ ಬೆಳೆಗಾರ
ಐಮರಸಪುರ ರೈತ ಜೀವನರೆಡ್ಡಿ ಬೆಳೆದಿರುವ ಕ್ಯಾಪ್ಸಿಕಂ ಫಸಲು ಖರೀದಿಸಲು ಮಾಲೂರು ತಾಲೂಕಿನ ಎನ್‌ಬಿಆರ್ ಆಗ್ರೋಟೆಕ್ ಕಂಪನಿಗೆ ಸಲಹೆ ನೀಡಲಾಗಿದೆ. ಲಾಕ್‌ಡೌನ್ ಆಗಿರುವುದರಿಂದ ರೈತರು ನಷ್ಟಕ್ಕೆ ಒಳಗಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ. ಪ್ರವಾಸಿ ತಾಣಗಳು, ರೆಸ್ಟೋರೆಂಟ್ ಮುಚ್ಚಿರುವುದರಿಂದ ಕ್ಯಾಪ್ಸಿಕಂ ಖರೀದಿ ಕಡಿಮೆಯಾಗಿದೆ.
ಗಾಯತ್ರಿ , ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.