ಲಾಕ್‌ಡೌನ್ ಬಳಿಕ ವ್ಯವಹಾರ ಚೇತರಿಕೆ ಕಷ್ಟ
ಮಾಲ್, ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಬಂದ್ ಆಗಿ ತಿಂಗಳು ಪೂರ್ಣ; ಸರ್ಕಾರದಿಂದ ನೆರವಿಗೆ ಆಗ್ರಹ
Team Udayavani, Apr 17, 2020, 3:11 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೋವಿಡ್-19 ತಡೆ ಹಿನ್ನೆಲೆಯಲ್ಲಿ ಮಾಲ್, ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳು ಸ್ಥಗಿತಗೊಂಡು ತಿಂಗಳು ಕಳೆದಿದೆ. ಏಕಪರದೆ ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ಗಳು ಸಾಮಾಜಿಕ ಅಂತರದೊಂದಿಗೆ ಮುಂದೆ ವ್ಯವಹಾರ ನಡೆಸುವುದು ಹೇಗೆ ಎಂಬ ಆತಂಕದಲ್ಲಿದ್ದರೆ, ಮಾಲ್‌ಗಳಲ್ಲಿನ ಬಾಡಿಗೆದಾರರು ಬಾಡಿಗೆ ವಿನಾಯ್ತಿ ಪಡೆಯುವ ಜತೆಗೆ ವಿದ್ಯುತ್, ನೀರು ಸಂಪರ್ಕಕ್ಕೆ ವಿಧಿಸುವ ನಿರ್ದಿಷ್ಟ ಶುಲ್ಕ, ಬೇಡಿಕೆ ಶುಲ್ಕ ಬಿಲ್ ಪಾವತಿಯಿಂದ ಪಾರಾಗುವುದು ಹೇಗೆ
ಎಂಬ ಚಿಂತೆಯಲ್ಲಿದ್ದಾರೆ.
ಲಾಕ್‌ಡೌನ್ ಜಾರಿಗೂ ಒಂಬತ್ತು ದಿನ ಮೊದಲೇ ಸ್ಥಗಿತಗೊಂಡ ಮಾಲ್, ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳ ಮಾಲಿಕರು, ಬಾಡಿಗೆದಾರರಿಗೆ ತೊಂದರೆಗೆ ಒಳಗಾಗಿದ್ದರೆ, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಿಟ್ಟಿನಲ್ಲಿ ಲಾಕ್‌ಡೌನ್ ಅವಧಿ ನಂತರವೂ ಸೋಂಕು ಭೀತಿಯು ಅಡ್ಡಪರಿಣಾಮ ಬೀರುವ ಆತಂಕ ಈ ವಲಯವನ್ನು ಕಾಡುತ್ತಿದೆ. ಸರ್ಕಾರದ ಸೂಚನೆಯಂತೆ ಏಕ ಪರದೆ ಚಲನಚಿತ್ರ ಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು ತಿಂಗಳಿಂದ ಸ್ಥಗಿತಗೊಂಡಿವೆ. ರಾಜ್ಯದಲ್ಲಿ 650 ಏಕಪರದೆ ಚಲನಚಿತ್ರ ಮಂದಿರಗಳಿದ್ದು, ಸುಮಾರು 13,000 ಮಂದಿ ಕಾರ್ಮಿಕರಿದ್ದಾರೆ. ಇದರಲ್ಲಿ ಬಹುಪಾಲು ಮಂದಿ ಕಾಯಂ ನೌಕರರು. ಸೋಂಕು ಭೀತಿ
ತೀವ್ರವಾಗಿರುವುದರಿಂದ ಮುಂದೆ ನೌಕರರು ಸಿಗುತ್ತಾರೋ ಇಲ್ಲವೋ ಎಂಬ ಆತಂಕ ಮಾಲಿಕರಲ್ಲಿ ಮೂಡಿದೆ.
ಇನ್ನು ಮಲ್ಟಿಪ್ಲೆಕ್ಸ್‌ಗಳಲ್ಲೂ ಸಾವಿರಾರು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಮಿಕರ ನೇಮಕವಾಗುವುದರಿಂದ ಗುತ್ತಿಗೆದಾರರು ಜವಾಬ್ದಾರರಾಗಿರುತ್ತಾರೆ. ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸವಾಲಾಗಿದ್ದು, ಲಾಕ್‌ಡೌನ್
ಬಳಿಕ ಜನ ಚಿತ್ರಮಂದಿರಗಳತ್ತ ಮುಖ ಮಾಡುವರೇ ಎಂಬ ಅನುಮಾನವೂ ಈ ವಲಯವನ್ನು ಕಾಡುತ್ತಿದೆ. ಮಾಲ್‌ಗಳಲ್ಲಿ ಬಾಡಿಗೆದಾರರ ಪರದಾಟ: ಮಾಲ್
ಗಳು ತಿಂಗಳಿಂದ ಬಂದ್ ಆಗಿರುವುದರಿಂದ ಬಾಡಿಗೆದಾರರು (ರಿಟೇಲರ್‌ಗಳು) ತೊಂದರೆಗೆ ಸಿಲುಕುವಂತಾಗಿದೆ. ಮಾಲಿಕರೊಂದಿಗೆ ಒಡಂಬಡಿಕೆಯಂತೆ ಮಾಲ್ ಸಂಪೂರ್ಣ ಬಂದ್ ಆದರೆ ಮಾಸಿಕ ಬಾಡಿಗೆ ವಿನಾಯ್ತಿಗೆ ಅವಕಾಶವಿದೆ ಎನ್ನಲಾಗಿದೆ. ಅದರಂತೆ ಬಹುತೇಕ ಮಾಲ್‌ಗಳು ಬಾಡಿಗೆದಾರರಿಗೆ ವಿನಾಯ್ತಿ ನೀಡಬೇಕಿದ್ದು, ಎಷ್ಟರ ಮಟ್ಟಿಗೆ ವಿನಾಯ್ತಿ ನೀಡಲಿದ್ದಾರೆ ಎಂದು ಕಾದುನೋಡಬೇಕಿದೆ.
ನಿಗದಿತ-ಬೇಡಿಕೆ ಶುಲ್ಕ ಪಾವತಿ ಹೊರೆ?: ಮಾಲ್ ಗಳಿಗೆ ವಿಧಿಸುವ ಮಾಸಿಕ ವಿದ್ಯುತ್, ನೀರಿನ ಬಿಲ್ ಮೊತ್ತದ ಜತೆಗೆ ನಿಗದಿತ ಶುಲ್ಕ ಇಲ್ಲವೇ ಬೇಡಿಕೆ ಶುಲ್ಕ
ಪಾವತಿ ಭರಿಸುವುದು ಹೊರೆಯಾಗಿ ಪರಿಣಮಿಸಿದೆ ಎಂದು ಮಾಲ್, ಮಲ್ಟಿಪ್ಲೆಕ್ಸ್‌ಗಳ ಮಾಲೀಕರು ಅಲವತ್ತುಕೊಳ್ಳುತ್ತಾರೆ. ಜಲಮಂಡಳಿಯು ನೀರಿನ
ಬಿಲ್ ಮೊತ್ತದ ಜತೆಗೆ ನಿರ್ವಹಣಾ ಶುಲ್ಕ ವಿಧಸುತ್ತಿದೆ. ಹಾಗೆಯೇ ಎಸ್ಕಾಂಗಳು ವಿದ್ಯುತ್ ಬಳಕೆ ಶುಲ್ಕದ ಜತೆಗೆ ಮಂಜೂರಾದ ಗುತ್ತಿಗೆ ಬೇಡಿಕೆಯ (ಸ್ಯಾಂಕ್ಷನ್
ಕಾಂಟ್ರಾಕ್ಟ್ ಡಿಮ್ಯಾಂಡ್) ಶೇ. 80ರಷ್ಟು ಮೊತ್ತವನ್ನು ಬೇಡಿಕೆ ಶುಲ್ಕದ ರೂಪದಲ್ಲಿ ಸಂಗ್ರಹಿಸುತ್ತಿದೆ. ಲಾಕ್ ಡೌನ್‌ನಿಂದಾಗಿ ಈ ಎರಡು ಶುಲ್ಕ ಮನ್ನಾ
ಮಾಡಬೇಕು. ಇಲ್ಲವೇ ಕಂತಿನಲ್ಲಿ ಪಾವತಿಸಲು ಅವಕಾಶ ನೀಡಬೇಕು ಎಂಬುದು ಕೆಲ ಮಾಲ್ ಮಾಲಿಕರ ಆಗ್ರಹ.
ವಿನಾಯ್ತಿ ಸಾಧ್ಯವಿಲ್ಲ: ಅನ್ಯರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಎಸ್ಕಾಂಗಳು ವಿಧಸುವ ಬೇಡಿಕೆ ಶುಲ್ಕ ಬಹಳ ಕಡಿಮೆ ಇದೆ. ಅಲ್ಲದೆ, ವಿದ್ಯುತ್ ಉತ್ಪಾದನಾ ನಿಗಮಗಳಿಗೂ ಹಣ ಪಾವತಿಸಬೇಕಾಗುತ್ತದೆ. ಈಗಾಗಲೇ ಎಲ್ಲ ಎಸ್ಕಾಂಗಳು ಕೆಪಿಸಿಎಲ್‌ಗೆ ಬಾಕಿ ಉಳಿಸಿಕೊಂಡಿವೆ. ಹಾಗಾಗಿ ಬೇಡಿಕೆ ಶುಲ್ಕಕ್ಕೆ ವಿನಾಯ್ತಿ ನೀಡುವ ಪ್ರಶ್ನೆ ಉದ್ಭವಿಸದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.
ಹೊಸ ಸಮಸ್ಯೆಗೆ ಹೊಸ ಪರಿಹಾರ ಅವಶ್ಯ
ಕೋವಿಡ್-19 ಸೋಂಕಿನ ಭೀತಿ ಹೊಸ ಸಮಸ್ಯೆಯಾಗಿದ್ದು, ಹೊಸ ಪರಿಹಾರವನ್ನೇ ಕಂಡುಕೊಳ್ಳಬೇಕಿದೆ. ಚಿತ್ರೀಕರಣ ಸಂದರ್ಭದಲ್ಲಿ ನೂರಾರು ಮಂದಿ ಒಟ್ಟಿಗೆ ಇರುವುದು ಅನಿವಾರ್ಯ. ಹಾಗೆಯೇ ಚಿತ್ರಮಂದಿರಗಳಲ್ಲೂ ನೂರಾರು ಮಟ್ಟಿಗೆ ಒಟ್ಟಿಗೆ ಕುಳಿತು ಸಿನಿಮಾ ವೀಕ್ಷಿಸುತ್ತಾರೆ. ಹಾಗಾಗಿ ಲಾಕ್ ಡೌನ್ ಮುಗಿದರೂ ಕೆಲಕಾಲ ಸಾಮಾಜಿಕ ಅಂತರ ಪಾಲನೆ ಸವಾಲಾಗಬಹುದು. ಸದ್ಯದ ಪರಿಸ್ಥಿತಿಯಲ್ಲಿ ನಿರ್ಮಾಣ, ವಿತರಣೆ ಹಾಗೂ ಪ್ರದರ್ಶನ ವಿಭಾಗದವರು ಸಂಕಷ್ಟದಲ್ಲಿದ್ದು,
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೆರವಿಗೆ ಧಾವಿಸಬೇಕು ಎಂದು ಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮನವಿ ಮಾಡಿದರು.
ದೀರ್ಘಾವಧಿ ಹೊಡೆತ
ರಾಜ್ಯದಲ್ಲಿ 650 ಏಕ ಪರದೆ ಚಿತ್ರಮಂದಿರಗಳಿದ್ದು, ಸುಮಾರು 13,000 ಮಂದಿ ನೌಕರರಿದ್ದಾರೆ. ಈ ನೌಕರರಿಗೆ ಯಾವುದೇ ರೀತಿಯ ಭದ್ರತೆ ಇಲ್ಲ. ಲಾಕ್‌ಡೌನ್ ಮುಂದುವರಿದರೆ ಕಾರ್ಮಿಕರಿಗೆ ಸಂಬಳದಲ್ಲಿ ಒಂದಿಷ್ಟು ಕಡಿತ ಮಾಡಿ, ನಂತರ ಚಿತ್ರಮಂದಿರಗಳು ಕಾರ್ಯಾರಂಭವಾದ ಬಳಿಕ ಬಾಕಿ ವೇತನ ಪಾವತಿಗೆ ಪ್ರಯತ್ನಿಸಬಹುದು. ಆದರೆ ಸೋಂಕಿನ ಭೀತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಸವಾಲಾಗಿದ್ದು, ಮುಂದೆ ನೌಕರರ ಅಭಾವ ಸೃಷ್ಟಿಯಾಗುವ ಆತಂಕ ಮೂಡಿಸಿದೆ. ಜತೆಗೆ ಜನ ಚಿತ್ರಮಂದಿರಗಳಿಗೆ ಬರುತ್ತಾರೆಯೇ ಎಂಬ ಪ್ರಶ್ನೆಯೂ ಇದೆ. ಲಾಕ್ ಡೌನ್‌ನಿಂದ ದೀರ್ಘಾವಧಯಲ್ಲೂ ಸಾಕಷ್ಟು ಹೊಡೆತ ಬೀಳುವ ಆತಂಕವಿದೆ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ತಿಳಿಸುತ್ತಾರೆ.
ಈಗಿನ ಪರಿಸ್ಥಿತಿಯಲ್ಲಿ ವಿದ್ಯುತ್, ನೀರು ಬಳಕೆಗೆ ವಿಧಿಸುವ ನಿಗದಿತ ಶುಲ್ಕ ಭರಿಸುವುದು ಕಷ್ಟ. ಹಾಗಾಗಿ, ಸರ್ಕಾರ ಲಾಕ್‌ಡೌನ್ ಅವಧಿಯಲ್ಲಿ ಮಾಲ್‌ಗಳ ವಿದ್ಯುತ್, ನೀರು ಬಳಕೆಗೆ ವಿಧಿಸುವ ನಿಗದಿತ ಶುಲ್ಕಕ್ಕೆ ವಿನಾಯ್ತಿ ನೀಡಬೇಕು. ಇಲ್ಲವೇ ಲಾಕ್‌ಡೌನ್ ಮುಗಿದ ಬಳಿಕ ಈ ಶುಲ್ಕವನ್ನು ಹತ್ತು ಕಂತುಗಳಲ್ಲಿ ಬಡ್ಡಿರಹಿತ ಪಾವತಿಗೆ ಅವಕಾಶ ನೀಡಬೇಕೆಂದು ಸರ್ಕಾರಕ್ಕೆ ಸಲಹೆ ನೀಡುತ್ತೇನೆ.
● ಉದಯ್ ಗರುಡಾಚಾರ್, ಗರುಡಾ ಮಾಲ್ ಸಮೂಹದ ಮುಖ್ಯಸ್ಥ ಮತ್ತು ಶಾಸಕ.
ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.