ಬೆಳ್ತಂಗಡಿ ವಾರದ ಸಂತೆ ಎಪಿಎಂಸಿಗೆ ತಾತ್ಕಾಲಿಕ ಸ್ಥಳಾಂತರ
Team Udayavani, Apr 20, 2020, 4:55 AM IST
ಬೆಳ್ತಂಗಡಿ: ಕೋವಿಡ್ 19 ವೈರಸ್ ಆತಂಕದ ನಡುವೆ ವಾರದ ಸಂತೆಯಂದು ಸಂತೆ ಮಾರುಕಟ್ಟೆಯಲ್ಲಿ ಅತೀಹೆಚ್ಚು ಜನ ಸೇರುತ್ತಿರುವುದರಿಂದ ಬೆಳ್ತಂಗಡಿ ಸೋಮವಾರ ಸಂತೆಯನ್ನು ತಾತ್ಕಾಲಿಕವಾಗಿ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸುವ ಕುರಿತು ಶಾಸಕ ಹರೀಶ್ ಫೂಂಜ ರವಿವಾರ ಸ್ಥಳ ಪರಿಶೀಲನೆ ನಡೆಸಿದರು.
ಮಾಹಿತಿ ನಾಮಫಲಕ ಅಳವಡಿಕೆ
ನ.ಪಂ.ಮುಖ್ಯಾಧಿಕಾರಿ ಸುಧಾಕರ್ ಮಾತನಾಡಿ, ಎಲ್ಲ ವ್ಯಾಪಾರಿಗಳಿಗೆ ಮಾಹಿತಿ ನೀಡಲಾಗಿದೆ.ರಸ್ತೆ ಬದಿ ತರಕಾರಿ ಮಾರಾಟಗಾರಿಗೆ ಇಲ್ಲಿಗೆ ಬರಲು ತಿಳಿಸಲಾಗಿದೆ ಎಂದರು.
ಈ ಕುರಿತು ಸ್ಥಳದಲ್ಲಿ ಮಾಹಿತಿ ನಾಮಫಲಕವನ್ನು ಅಳವಡಿಸಲಾಗುತ್ತದೆ. ಸಾರ್ವಜನಿಕರಿಗೆ ಪಾರ್ಕಿಂಗ್ ಸಹಿತ ಖರೀದಿಗೆ ಮಾರ್ಕಿಂಗ್ ವ್ಯವಸ್ಥೆ ಮಾಡಲಾ ಗುವುದು. ಸೂಕ್ತ ಮೂಲ ಸೌಕರ್ಯವನ್ನೂ ಒದಗಿಸಲಾಗುತ್ತದೆ. ಎ. 20ರಂದು ಎ.ಪಿ.ಎಂ.ಸಿ.ಯಲ್ಲೇ ವಾರದ ಸಂತೆ ನಡೆಯ ಲಿದೆ ಎಂದರು. ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಬೆಳ್ತಂಗಡಿ ಠಾಣೆ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಎಪಿಎಂಸಿ ಕಾರ್ಯದರ್ಶಿ ರವೀಂದ್ರ, ನ.ಪಂ. ಎಂಜಿನಿಯರ್ ಮಹಾ ವೀರ ಆರಿಗ ಉಪಸ್ಥಿತರಿದ್ದರು.
ಅಗತ್ಯ ಮುನ್ನೆಚ್ಚರಿಕೆ ಕ್ರಮ
ಈ ಸಂದರ್ಭ ಮಾತನಾಡಿದ ಶಾಸಕರು, ವಾರದ ಸಂತೆಯಿಂದ ಯಾವುದೇ ತೊಂದರೆಗೊಳಗಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ವ್ಯಾಪಾರಸ್ಥರಿಗೆ ನಗರ ಪಂಚಾಯತ್‌ನಿಂದ ಸೂಚನೆ ನೀಡಲಾಗಿದೆ. ಸೋಮವಾರ ವಾರದ ಸಂತೆಯಂದು ತೆರೆದಿರುವ ಹಸಿ ಮೀನು, ಒಣ ಮೀನು, ತರಕಾರಿ, ಹಣ್ಣುಹಂಪಲು, ತಳ್ಳುಗಾಡಿ ಸಹಿತ ಎಲ್ಲ ಅಂಗಡಿಗಳು ಎ.ಪಿ.ಎಂ.ಸಿ.ಗೆ ಸ್ಥಳಾಂತರಗೊಳ್ಳಲಿವೆ ಎಂದರು.