ಕೋವಿಡ್: 769 ಕೋ.ರೂ.ನಷ್ಟದ ಆತಂಕದಲ್ಲಿ ಕ್ರಿಕೆಟ್ ಆಸ್ಟ್ರೇಲಿಯ
Team Udayavani, Apr 22, 2020, 9:34 AM IST
ಸಿಡ್ನಿ: ಆತಿಥೇಯ ಆಸ್ಟ್ರೇಲಿಯ ವಿರುದ್ಧ ಭಾರತ ಆಡಲಿರುವ ಮುಂಬರುವ ಕೂಟದಲ್ಲಿ ಟೆಸ್ಟ್ ಸರಣಿಯ ಸಂಖ್ಯೆಯನ್ನು ನಾಲ್ಕರಿಂದ ಐದಕ್ಕೆ ಹೆಚ್ಚಿಸುವ ಚಿಂತನೆಯನ್ನು ಕ್ರಿಕೆಟ್ ಆಸ್ಟ್ರೇಲಿಯ ಮಾಡುತ್ತಿದೆ.
ಕೋವಿಡ್ ವೈರಸ್ ಹೊಡೆತದಿಂದಾಗಿ ಕ್ರಿಕೆಟ್ ಆಸ್ಟ್ರೇಲಿಯ ಭಾರೀ ನಷ್ಟ ಅನುಭವಿಸಿದ್ದು ಆರ್ಥಿಕ ಪರಿಸ್ಥಿತಿ ಹಳಿಗೆ ತರಲು ಹೆಚ್ಚು ಆದಾಯ ತರುವ ನಿಟ್ಟಿನಲ್ಲಿ ಭಾರತ -ಆಸೀಸ್ ಸರಣಿಯನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಅಕ್ಟೋಬರ್ 18ರಿಂದ ಟಿ20 ವಿಶ್ವಕಪ್ ಕೂಡ ಆಸೀಸ್‌ನಲ್ಲಿ ಆರಂಭವಾಗಬೇಕಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಈ ಟಿ20 ಕೂಟ ನಡೆಯುವುದು ಅನುಮಾನ ಎನ್ನಲಾಗಿದೆ. ಒಂದು ವೇಳೆ ಯಾವುದೇ ಸರಣಿ ನಡೆಯದೇ ಇದ್ದರೆ ಕ್ರಿಕೆಟ್ ಆಸ್ಟ್ರೇಲಿಯ 769 ಕೋಟಿ ರೂ. ನಷ್ಟ ಅನುಭವಿಸುವ ಆತಂಕದಲ್ಲಿದೆ.
“ಅಭಿಮಾನಿಗಳಿಲ್ಲದೆ ಮುಚ್ಚಿದ ಬಾಗಿಲಿನಲ್ಲಿ ಭಾರತ ವಿರುದ್ಧ ಟೆಸ್ಟ್ ಸರಣಿ ಆಯೋಜಿಸಲು ಸಿದ್ಧರಿದ್ದೇವೆ, ಒಂದೇ ತಾಣದಲ್ಲಿ ಸರಣಿ ನಡೆಸುತ್ತೇವೆ, ನೇರ ಪ್ರಸಾರದ ಹಕ್ಕಿನಿಂದ ಸ್ವಲ್ಪವಾದರೂ ಆದಾಯ ಸಿಗಲಿದೆ’ ಎನ್ನುವುದು ಕ್ರಿಕೆಟ್ ಆಸ್ಟ್ರೇಲಿಯದ ಮುಖ್ಯ ಸಿಇಒ ಕೆವಿನ್ ರಾಬರ್ಟ್ಸ್ ಅವರ ಅಭಿಪ್ರಾಯವಾಗಿದೆ. ಡಿಸೆಂಬರ್‌ನಲ್ಲಿ ಟೆಸ್ಟ್ ಸರಣಿ ನಡೆಸಲು ಚಿಂತನೆ ನಡೆಸಲಾಗಿದೆ.
“ಟಿ20 ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಲಿ’
ಮುಂಬರುವ ಟಿ20 ವಿಶ್ವಕಪ್ ಮುಂದೂಡುವ ಬದಲು ಭಾರತದಲ್ಲಿ ನಡೆಸಿದರೆ ಉತ್ತಮ ಎಂದು ಸುನೀಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ. “ನಮಗೆಲ್ಲರಿಗೂ ತಿಳಿದಿರುವಂತೆ, ಸೆಪ್ಟಂಬರ್ 30ರ ವರೆಗೆ ಆಸ್ಟ್ರೇಲಿಯ ಸರಕಾರ ವಿದೇಶಿಗರನ್ನು ಸ್ವದೇಶಕ್ಕೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದೆ. ಆದರೆ ವಿಶ್ವಕಪ್ ಟೂರ್ನಿ ಅಕ್ಟೋಬರ್‌ನಲ್ಲಿ ಪ್ರಾರಂಭವಾಗುತ್ತದೆ. ಆದ್ದರಿಂದ ಇದು ಕಷ್ಟಕರವಾದ ವಿಚಾರವಾಗಿದೆ. ಈ ನಿಟ್ಟಿನಲ್ಲಿ 2020ರ ಟಿ20 ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಿದರೆ, ಆಸ್ಟ್ರೇಲಿಯ ಮುಂದಿನ ಆವೃತಿಗೆ ಆತಿಥ್ಯ ವಹಿಸಹುದು ಎಂದು ಗಾವಸ್ಕರ್ ಸಲಹೆಯೊಂದನ್ನು ನೀಡಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಕೋವಿಡ್ ಬೆದರಿಕೆಯು ಕಡಿಮೆಯಿದೆ. ಹೀಗಾಗಿ ಭಾರತದ ಆತಿಥ್ಯದಲ್ಲಿ ನಡೆಯುವ ಮುಂದಿನ ಟಿ20 ವಿಶ್ವಕಪ್ ಕೂಟವನ್ನು ಆಸ್ಟ್ರೇಲಿಯಕ್ಕೆ ಬಿಟ್ಟುಕೊಟ್ಟು ಈ ಬಾರಿಯ ಟಿ20 ವಿಶ್ವಕಪ್ ಭಾರತದಲ್ಲಿ ನಡೆಸಬಹುದು. ಆದರೆ ಇದಕ್ಕೆ ಭಾರತ ಮತ್ತು ಆಸ್ಟ್ರೇಲಿಯ ಒಪ್ಪಂದ ಮಾಡಿಕೊಂಡು ಆತಿಥ್ಯದ ಹಕ್ಕನ್ನು ವಿನಿಮಯ ಮಾಡಿಕೊಳ್ಳಬೇಕಾಗಿದೆ ಎಂದು ಗಾವಸ್ಕರ್ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.