ತರಕಾರಿ ವ್ಯಾಪಾರಿಗೆ ಕೋವಿಡ್ ಸೋಂಕು
ಕಂಟೈನ್ಮೆಂಟ್ ಪ್ರದೇಶದಲ್ಲಿ ರ್‍ಯಾಂಡಮ್ ಪರೀಕ್ಷೆ ವೇಳೆ ಕೋವಿಡ್ ಪತ್ತೆ
Team Udayavani, Apr 29, 2020, 7:03 AM IST
ಬೆಂಗಳೂರು: ನಗರದ ಹಾಟ್‌ಸ್ಪಾಟ್ ಪಾದರಾಯನಪುರ ವಾರ್ಡ್‌ನಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಕೋವಿಡ್ ವೈರಸ್ ಸೋಂಕು ತಗುಲಿದೆ. ಈ ವ್ಯಕ್ತಿಗೆ ಆಯ್ದ ಮಾದರಿ ಪರೀಕ್ಷೆ (ರ್‍ಯಾಂಡಮ್) ವೇಳೆ ಸೋಂಕಿರುವುದು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಬೆಂಗಳೂರಿನ ಪಾದರಾಯಪುರದಲ್ಲಿ ಈ ಹಿಂದೆ ತರಕಾರಿ ಮಾರುತ್ತಿದ್ದ 48 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ಸೋಮವಾರ ತಡರಾತ್ರಿ ಪತ್ತೆ ಯಾಗಿದೆ. ಆರೋಗ್ಯ ಇಲಾಖೆ ಮಂಗಳವಾರದ ಬುಲೆಟಿನ್‌ನಲ್ಲಿ ಈ ವ್ಯಕ್ತಿಗೆ ಸೋಂಕು ತಗುಲಿರುವುದನ್ನು ದೃಢೀಕರಿಸಿದ್ದು, ಕಂಟೈನ್ಮೆಂಟ್ ಪ್ರದೇಶಕ್ಕೆ ಭೇಟಿ ನೀಡಿದ ಹಿನ್ನೆಲೆ ಸೋಂಕು ತಗುಲಿದೆ ಎಂದು ಸೂಚಿಸಿದೆ. ಆದರೆ, ಈ ವ್ಯಕ್ತಿ ಅದೇ ವಾರ್ಡ್‌ನ ನಿವಾಸಿಯಾಗಿದ್ದು, ಆ ಪ್ರದೇಶಲ್ಲಿ ಸಮುದಾಯಕ್ಕೆ ಸೋಂಕು ಹರಡಿದೆಯೇ? ಎಂದು ಪತ್ತೆ ಮಾಡಲು ಸ್ಥಳೀಯ ಆರೋಗ್ಯ ಅಧಿಕಾರಿಗಳು ರ್‍ಯಾಂಡಮ್ ಪರೀಕ್ಷೆ ಮಾಡಿಸುವಾಗ ಈ ವ್ಯಕ್ತಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಬುಲೆಟಿನ್‌ನಲ್ಲಿ ಅಥವಾ ಪತ್ರಿಕಾಗೋಷ್ಠಿಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ.
ಇನ್ನು ಈ ವ್ಯಕ್ತಿ ಲಾಕ್‌ಡೌನ್ ಬಳಿಕ ತರಕಾರಿ ಮಾರಾಟ ನಿಲ್ಲಿಸಿದ್ದನು. ಪ್ರಾಥಮಿಕ ಸಂಪರ್ಕದಲ್ಲಿದ್ದ ಐದು ಮಂದಿ ಕುಟುಂಬ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಸ್ಥಳೀಯ ಮೂಲಗಳು ಉದಯವಾಣಿಗೆ ತಿಳಿಸಿವೆ. ಈ ಮಧ್ಯೆ ಪಾದರಾಯನಪುರದಲ್ಲಿ ಸೋಂಕು ದೃಢಪಟ್ಟವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್
ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ತಿಳಿಸಿದ್ದಾರೆ. ಅಲ್ಲದೆ, ಈ ಪ್ರದೇಶಗಳಲ್ಲಿ ಪ್ರತಿಯೊಂದು ಮನೆಗಳನ್ನು ತಪಾಸಣೆ ಮಾಡಲಾಗಿದೆ. ಮಂಗಳವಾರ
ಪಾದರಾಯನಪುರದಿಂದ 48 ಹಾಗೂ ಹೊಂಗಸಂದ್ರದಿಂದ 72 ಜನರನ್ನು ರ್‍ಯಾಂಡಮ್ ಆಗಿ ಆಯ್ಕೆ ಮಾಡಿಕೊಂಡು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ರ್‍ಯಾಂಡಮ್ ಪರೀಕ್ಷೆ: ಸೋಂಕು ಪತ್ತೆ ಇಲ್ಲ
ಮಂಗಳವಾರ ಸಂಜೆ ಸಚಿವ ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ, “”ಹಾಟ್‌ಸ್ಪಾಟ್‌ಗಳಾದ ಪಾದರಾಯನಪುರ ಹಾಗೂ ಹೊಂಗಸಂದ್ರದಲ್ಲಿ ರ್‍ಯಾಂಡಮ್ ಪರೀಕ್ಷೆ ಮಾಡಿದ್ದು, ಎಲ್ಲರ ವರದಿಗಳು ನೆಗೆಟಿವ್ ಬಂದಿವೆ” ಎಂದರು. ಸಚಿವರ ಈ ಹೇಳಿಕೆ ಅನುಮಾನ ಮೂಡಿಸಿದೆ. ಒಂದು ವೇಳೆ ಈ ರ್‍ಯಾಂಡಮ್ ಪರೀಕ್ಷೆಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟರೆ ಸಮುದಾಯಕ್ಕೆ ಸೋಂಕು ಹರಡಿದಯೇ ಎಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ವಿಷಯ ಮರೆಮಾಚುವ ಪ್ರಯತ್ನ ಮಾಡಿರಬಹದು ಎಂದು ಹೇಳಲಾಗುತ್ತಿದೆ.
ಹಾಟ್‌ಸ್ಪಾಟ್ ರ್‍ಯಾಂಡಮ್ ಪರೀಕ್ಷೆ ನೆಗೆಟಿವ್
ಸದ್ಯ ರಾಜ್ಯದ ಸೋಂಕಿತ ಪ್ರಕರಣಗಳನ್ನು ಆಧರಿಸಿ ರಾಜ್ಯದಲ್ಲಿ ಒಟ್ಟು 120 ಕಂಟೈನ್ಮೆಂಟ್ ಝೋನ್‌ಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 436 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಈ ಪ್ರದೇಶದಲ್ಲಿ ಒಟ್ಟು 72,611 ಮನೆಗಳಿದ್ದು ಒಟ್ಟಾರೆ 4,07,811 ಮಂದಿ ವಾಸಿಸುತ್ತಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು. ಇನ್ನು 5,931 ವಾಣಿಜ್ಯ ಮಳಿಗೆಗಳು ಹಾಗೂ ಸರ್ಕಾರಿ ಕಚೇರಿಗಳಿವೆ. ಬಫರ್ ಝೋನ್‌ಗಳಲ್ಲಿ 7,69,342 ಮನೆಗಳಿದ್ದು, 36,29,204 ಮಂದಿ ವಾಸಿಸುತ್ತಿದ್ದಾರೆ. 65,358 ವಾಣಿಜ್ಯ ಮಳಿಗೆಗಳು ಹಾಗೂ ಸರ್ಕಾರಿ ಕಚೇರಿಗಳಿವೆ
ಎಂದು ಮಾಹಿತಿ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.