ಕುಡಿವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಿ
ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಕೆ.ಎಸ್.ಈಶ್ವರಪ್ಪ ಸೂಚನೆ
Team Udayavani, Apr 29, 2020, 2:58 PM IST
ಸಾಂದರ್ಭಿಕ ಚಿತ್ರ
ತುಮಕೂರು: ಸರ್ಕಾರ ಕುಡಿವ ನೀರಿಗಾಗಿ ಸಾಕಷ್ಟು ಹಣವನ್ನು ವಿನಿಯೋಗಿಸುತ್ತಿದ್ದು, ಬರಪೀಡಿತ ತಾಲೂಕಿಗೆ ಒಂದು ಕೋಟಿ ಹಾಗೂ ಇತರೆ ತಾಲೂಕಿಗೆ 50ಲಕ್ಷ ರೂ. ಗಳಿಗೆ ಮಂಜೂರಾತಿ ನೀಡಿದ್ದು, ಈ ಹಣದ ಸಂಪೂರ್ಣ ಬಳಕೆಗೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆದು ತುರ್ತಾಗಿ ಕಾರ್ಯಗತಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕುಡಿವ ನೀರಿನ ಸಮಸ್ಯೆ ಕುರಿತು ಕ್ಷೇತ್ರದ ಶಾಸಕರಿಂದ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ತೀವ್ರ ಕುಡಿವ ನೀರಿನ ಸಮಸ್ಯೆ ಇರುವ ಗ್ರಾಮಗಳ ಜನ ಜಾನುವಾರುಗಳಿಗೆ ತೊಂದರೆಯಾಗದಂತೆ ಟ್ಯಾಂಕರ್ ಮೂಲಕ ಆದ್ಯತೆ ಮೇರೆಗೆ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ಪೋರ್ಸ್ ಸಮಿತಿಯ ಸಭೆಯನ್ನು ಆಯಾ ಕ್ಷೇತ್ರಗಳಲ್ಲಿ ನಡೆಸಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
7 ತಾಲೂಕುಗಳು ಬರಪೀಡಿತ: ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿರುವುದರಿಂದ ಇವುಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಇದರ ಸಂಪೂರ್ಣ ಬಳಕೆಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಿಳಿಸಿದರು.
ಕುಡಿವ ನೀರಿನ ಸಮಸ್ಯೆ ನಿವಾರಿಸಿ: ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ನಮ್ಮ ಜಿಲ್ಲೆ ಕುಡಿವ ನೀರಿನ ಬಗ್ಗೆ ಬಹಳ ಸಮಸ್ಯೆಯನ್ನು ಎದುರಿಸುತ್ತಿದ್ದು, ಖಾಸಗಿ
ಬೋರ್‌ವೆಲ್‌ಗಳಿಂದ ನೀರನ್ನು ಪಡೆದು ಟ್ಯಾಂಕರ್‌ಗಳ ಮೂಲಕ ಗ್ರಾಮಗಳಿಗೆ ಕುಡಿವ ನೀರು ಸರಬರಾಜಿಗೆ ಪ್ರತಿ ತಾಲೂಕಿಗೆ 2 ಕೋಟಿ ರೂ. ಅನುದಾನ ನೀಡುವಂತೆ
ಸಚಿವರಲ್ಲಿ ಮನವಿ ಮಾಡಿದರು.
ಕೂಲಿ ಕಾರ್ಮಿಕರಿಗೆ ನೆರವು ನೀಡಿ: ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಕೋವಿಡ್-19ರ ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಮನೆಯಲ್ಲಿಯೇ
ಉಳಿದಿದ್ದು, ಕೆಲಸವಿಲ್ಲದೆ ಮನೆಯಲ್ಲಿ ಪರಿತಪಿಸುತ್ತಿದ್ದಾರೆ. ಅಂತಹ ಕುಟುಂಬಗಳಿಗೆ 30 ದಿನಗಳ ನಿರುದ್ಯೋಗ ಭತ್ಯೆ ನೀಡ ಬೇಕೆಂದು ಸಚಿವರಿಗೆ ಮನವಿ ಮಾಡಿದರು.
ಶುದ್ಧ ನೀರಿನ ಘಟಕ ದುಸ್ತಿ ಮಾಡಿ: ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ 1,495 ಶುದ್ಧ ಕುಡಿವ ನೀರಿನ ಘಟಕಗಳಿದ್ದು, ಅವುಗಳಲ್ಲಿ ಏಜೆನ್ಸಿಗಳಿಂದ ನಿರ್ವಹಣೆ ಇಲ್ಲದೆ ಸಾಕಷ್ಟು ಸ್ಥಗಿತಗೊಂಡಿವೆ ಎಂದು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಯ ಎಂಜಿನಿಯರ್‌ಗಳು ಪ್ರತಿ ಘಟಕಕ್ಕೆ ಭೇಟಿ ನೀಡಿ ಅವುಗಳ ಸ್ಥಿತಿಗತಿಗಳ ಬಗ್ಗೆ ಮುಂದಿನ ಸಭೆಯಲ್ಲಿ ನಿಖರವಾದ ಮಾಹಿತಿಯನ್ನು ನೀಡಬೇಕೆಂದು ಸಚಿವರು ತಾಕೀತು ಮಾಡಿದರು. ಜಿಪಂ ಅಧ್ಯಕ್ಷೆ ಲತಾ, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಬಿ.ನಾಗೇಶ್, ಜಯರಾಂ, ಸತ್ಯನಾರಾಯಣ, ವೀರ ಭದ್ರಯ್ಯ,
ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಎ.ಅತಿಖ್, ಜಿ.ಪಂ. ಉಪಾಧ್ಯಕ್ಷೆ ಶಾರದಾ , ಗ್ರಾಮೀಣಾಭಿವೃದ್ಧಿ ಇಲಾಖೆಯ ವಿಶೇಷಾಧಿಕಾರಿ ಜಯರಾಂ,
ಜಿಪಂ ಸಿಇಒ ಶುಭಾ ಕಲ್ಯಾಣ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.