![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, May 2, 2020, 5:16 AM IST
ಬೀದರ: ದೇಶದಲ್ಲಿ ತಲ್ಲಣ ಮೂಡಿಸುತ್ತಿರುವ ಕೋವಿಡ್ 19 ವೈರಸ್ ಸೋಂಕು ಇಡೀ ಮನುಕುಲವನ್ನೇ ಕಂಗೆಡಿಸಿದೆ. ವೈರಸ್ ಮತ್ತಷ್ಟು ವ್ಯಾಪಿಸದಂತೆ ನಿಯಂತ್ರಿಸಲು ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ.
ಇದರಿಂದ ಬಡವರು, ನಿರ್ಗತಿಕರು ಮತ್ತು ಕೂಲಿ ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ. ಕೈಗೆ ಕೆಲಸವಿಲ್ಲದೇ, ಹೊಟ್ಟೆಗೆ ಒಪ್ಪತ್ತಿನ ಊಟವೂ ಸಿಗದೇ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ.
ಆದರೆ, ಬೀದರ ಜಿಲ್ಲೆಯ ಭಾಲ್ಕಿ ಕ್ಷೇತ್ರದಲ್ಲಿ ಮಾತ್ರ ಲಾಕ್‌ಡೌನ್‌ನಿಂದ ತೀರಾ ಸಂಕಷ್ಟದ ಸ್ಥಿತಿ ಎದುರಾಗಿಲ್ಲ. ಇದಕ್ಕೆ ಕಾರಣ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಈಶ್ವರ ಖಂಡ್ರೆ ಅವರ ಅಗತ್ಯ ಸಿದ್ಧತೆಯೊಂದಿಗಿನ ಕ್ರಮಗಳು. ಹೌದು, ಲಾಕ್‌ಡೌನ್ ಸಂದರ್ಭದಲ್ಲಿಯೂ ಭಾಲ್ಕಿ ಕ್ಷೇತ್ರದಲ್ಲಿ ಜನ ಜೀವನ ಎಂದಿನಂತೆ ಸಾಗುತ್ತಿದೆ ಎಂದರೆ ಅದರ ಹಿಂದೆ ಶಾಸಕ ಖಂಡ್ರೆ ಅವರ ಪರಿಶ್ರಮ, ಶಿಸ್ತು ಬದ್ಧ ಯೋಜನೆ ಇದೆ ಎಂದರೆ ಅತಿಶಯೋಕ್ತಿಯಲ್ಲ.
ಶಾಸಕ ಖಂಡ್ರೆ ಅವರು ಪ್ರತಿ ನಿತ್ಯ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ಅಲ್ಲದೆ ಅಧಿಕಾರಿಗಳಿಗೆ ಚುರುಕು ಮೂಡಿಸುವ ಮತ್ತು ಆತಂಕದಲ್ಲಿರುವ ಜನರಲ್ಲಿ ಭರವಸೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮಹಾನಗರಗಳಿಗೆ ವಲಸೆ ಹೋಗಿ ಈಗ ತವರಿಗೆ ಮರಳಿರುವ ಸಾವಿರಾರು ಜನರು ಈಗ ಕೆಲಸವಿಲ್ಲದೇ ನಿರ್ಗತಿಕರಾಗಿದ್ದು, ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಇದನ್ನು ಅರಿತ ಶಾಸಕ ಖಂಡ್ರೆ, ನರೇಗಾ ಯೋಜನೆ ಮೂಲಕ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ. ನಿತ್ಯ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವ ಜನರನ್ನು ಗುರುತಿಸಿ ಅವರಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ. ಇದಕ್ಕಾಗಿ ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಪಡೆಯನ್ನು ಸಜ್ಜುಗೊಳಿಸಿದ್ದು, ಈ ಪಡೆ ನಿತ್ಯ ನಿರ್ಗತಿಕರ ಮನೆ ಬಾಗಿಲಿಗೆ ಕಿಟ್‌ಗಳನ್ನು ಪೂರೈಸುತ್ತಿದೆ.
ನಿರ್ಗತಿಕ ಕುಟುಂಬಕ್ಕೆ ಆಹಾರ ಪೊಟ್ಟಣ: ಲಾಕ್‌ಡೌನ್ ಶುರುವಾಗಿ ಒಂದು ತಿಂಗಳಿಗೂ ಹೆಚ್ಚು ದಿನ ಕಳೆದಿದ್ದು, ಸಾವಿರಾರು ಮಂದಿ ಬಡವರು, ನಿರ್ಗತಿಕರು ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದರು. ಒಂದು ಕಡೆ ಸರ್ಕಾರ ಮತ್ತು ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕ ಸಾಧಿಸಿ ಕ್ಷೇತ್ರದ 2.40 ಲಕ್ಷ ಪಡಿತರ ಫಲಾನುಭವಿಗಳಿಗೆ ಎರಡು ತಿಂಗಳ ಪಡಿತರ ಆಹಾರ ದೊರಕಿಸಿಕೊಡುವಲ್ಲಿ ಶ್ರಮಿಸಿದ್ದಾರೆ.
ಮತ್ತೊಂದೆಡೆ ವೈಯಕ್ತಿಕವಾಗಿ ಸ್ವಂತ ಖರ್ಚಿನಲ್ಲಿ 8 ಕೆ.ಜಿ ಅಕ್ಕಿ, 5 ಕೆ.ಜಿ ಗೋಧಿ ಹಿಟ್ಟು, 1 ಲೀಟರ್ ಅಡುಗೆ ಎಣ್ಣೆ, 1 ಕೆ.ಜಿ ಸಕ್ಕರೆ ಮತ್ತು ಸೋಪು ಒಳಗೊಂಡ ಆಹಾರದ ಪೊಟ್ಟಣ ಸಿದ್ಧಪಡಿಸಿ ಈವರೆಗೆ ಸಾವಿರಾರು ಕುಟುಂಬಗಳಿಗೆ ಪೂರೈಸಿ ಮಾನವೀಯತೆ ಮೆರೆದಿದ್ದಾರೆ.
50 ಸಾವಿರ ಪಾರ್ಲೆ-ಜಿ ಬಿಸ್ಕೆಟ್ ಪ್ಯಾಕೇಟ್: ಭಾರತದ ಅತಿದೊಡ್ಡ ಬಿಸ್ಕೆಟ್ ತಯಾರಕ ಪಾರ್ಲೆ-ಜಿ ಕಂಪನಿ ಹಾಗೂ ಬೆಳಗಾವಿಯ ಉದ್ಯಮಿ ದಿಗ್ವಿಜಯ ಸಿದ್ನಾಳ ಒಡೆತನದ ಶಶಿ ಸಿದ್ನಾಳ ಫುಡ್ಸ್ ಪ್ರೈ.ಲಿ. ಕೋವಿಡ್ ವಿರುದ್ಧದ ಸಮರಕ್ಕೆ ಸಾಥ್ ನೀಡಿದೆ. ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಮನವಿಗೆ ಸ್ಪಂದಿಸಿ ಭಾಲ್ಕಿ ಕ್ಷೇತ್ರಕ್ಕೆ ಉಚಿತವಾಗಿ 50 ಸಾವಿರ ಪಾರ್ಲೆ-ಜಿ ಬಿಸ್ಕೆಟ್ ಪ್ಯಾಕೇಟ್ ನೀಡಿದೆ.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ದತ್ತು ಕೇಂದ್ರದಲ್ಲಿ ಅನಾಥ, ವಿಶೇಷ ಚೇತನ ಮಕ್ಕಳಿಗೆ ಪಾರ್ಲೆ-ಜಿ ಬಿಸ್ಕೆಟ್‌ಗಳನ್ನು ಶಾಸಕರು ಖುದ್ದಾಗಿ ವಿತರಿಸಿದ್ದಾರೆ. ಪಾರ್ಲೆ-ಜಿ ಬಿಸ್ಕೆಟ್‌ನಲ್ಲಿ ಪೌಷ್ಟಿಕಾಂಶ ಅಂಶಗಳಿದ್ದು, ಈ ಬಿಸ್ಕೆಟ್ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ.
ನನ್ನ ಮನವಿಗೆ ಸ್ಪಂದಿಸಿ ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಪಾರ್ಲೆ-ಜಿ ಸಾಥ್ ನೀಡಿದ್ದು, ಲಾಕ್ ಡೌನ್ ಸಂಕಷ್ಟದಲ್ಲಿರುವ ಬಡವರು, ಕೂಲಿ ಕಾರ್ಮಿಕರು, ಮಕ್ಕಳು, ನಿರ್ಗತಿಕರು, ಭಿಕ್ಷುಕರಿಗೆ ವಿತರಿಸಲು ತಾಲೂಕಿಗೆ 50 ಸಾವಿರ ಬಿಸ್ಕೆಟ್ ಪ್ಯಾಕೇಟ್ ಉಚಿತವಾಗಿ ನೀಡಿರುವುದು ಸಂತಸ ತಂದಿದೆ ಎನ್ನುತ್ತಾರೆ ಶಾಸಕ ಖಂಡ್ರೆ.
2 ಲಕ್ಷ ದೇಣಿಗೆ, ಪಿಪಿಇ ಕಿಟ್ ವಿತರಣೆ: ಕೋವಿಡ್ ವೈರಸ್ ನಿಯಂತ್ರಣಕ್ಕಾಗಿ ಕೆಪಿಸಿಸಿ ಆರಂಭಿಸಿರುವ ಪರಿಹಾರ ನಿಧಿಗೆ ಕಾರ್ಯಾಧ್ಯಕ್ಷರಾಗಿರುವ ಖಂಡ್ರೆ 2 ಲಕ್ಷ ರೂ.ಗಳ ದೇಣಿಗೆಯನ್ನು ನೀಡಿದ್ದಾರೆ. ಇದಲ್ಲದೆ ಜೀವದ ಹಂಗು ತೊರೆದು ಕೋವಿಡ್-19 ವಿರುದ್ಧ ಸಮರ ಸಾರಿರುವ ವೈದ್ಯರುಗಳ ಬಗ್ಗೆ ಈಶ್ವರ ಖಂಡ್ರೆ ವಹಿಸಿರುವ ಆರೋಗ್ಯದ ಕಾಳಜಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ವೈದ್ಯರುಗಳ ಆರೋಗ್ಯದ ರಕ್ಷಣೆಗಾಗಿ 1.5 ಲಕ್ಷಕ್ಕೂ ಅಧಿಕ ಮೌಲ್ಯದ ಪಿಪಿಇ ಕಿಟ್ ಖರೀದಿಸಿ ವಿತರಿಸಿದ್ದಾರೆ. ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ 50 ಮತ್ತು ಬೀದರನ ಬ್ರಿಮ್ಸ್ ಆಸ್ಪತ್ರೆಗೆ 20ಕ್ಕೂ ಅಧಿಕ ಪಿಪಿಇ ಕಿಟ್ ನೀಡಿದ್ದಾರೆ.
ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ನೀರು: ಮಳೆಯಾಶ್ರಿತ ಕ್ಷೇತ್ರವಾಗಿರುವ ಭಾಲ್ಕಿಯಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಬೇಸಿಗೆಯಿಂದಾಗಿ ಪಟ್ಟಣದ ವ್ಯಾಪ್ತಿಯ ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಪಟ್ಟಣ ಮಾತ್ರವಲ್ಲದೇ ಗ್ರಾಮೀಣ ಭಾಗದಲ್ಲಿಯೂ ಇದರ ತೀವ್ರತೆ ಅಧಿಕವಾಗಿದೆ.
ಲಾಕ್‌ಡೌನ್‌ನಂಥ ಗಂಭೀರ ಪರಿಸ್ಥಿತಿಯಲ್ಲಿ ಸರ್ಕಾರದಿಂದ ನೀರು ಪೂರೈಕೆಗಾಗಿ ಸಮರ್ಪಕ ಅನುದಾನ ಬರುತ್ತಿಲ್ಲ. ಇದನ್ನು ಮನಗಂಡ ಶಾಸಕ ಖಂಡ್ರೆ ಪಟ್ಟಣದಲ್ಲಿ ನೀರಿನ ದಾಹ ತಣಿಸಲು ಸ್ವಂತ ಖರ್ಚಿನಲ್ಲಿ ಟ್ಯಾಂಕರ್‌ಗಳ ಮೂಲಕ 15ಕ್ಕೂ ಅಧಿಕ ಬಡಾವಣೆಗಳಿಗೆ ನೀರು ಪೂರೈಸಿ ಭಗೀರಥ ಎನಿಸಿಕೊಂಡಿದ್ದಾರೆ.
ಇದರೊಟ್ಟಿಗೆ ಕ್ಷೇತ್ರದ ಯಾವುದೇ ಹಳ್ಳಿಗಳಲ್ಲಿಯೂ ನೀರಿನ ಕೊರತೆ ಎದುರಾಗದಂತೆ ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಸಾಧಿಸಿ ಮಾಹಿತಿ ಪಡೆಯುತ್ತಿದ್ದಾರೆ. ಅಗತ್ಯ ಕಡೆಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ನಿರ್ದೇಶನ ನೀಡಿದ್ದಾರೆ.
40 ಸಾವಿರ ತ್ರಿಬಲ್ ಲೇಯರ್ ಮಾಸ್ಕ್
ಮಹಾಮಾರಿ ವೈರಸ್ ತಿಂಗಳ ಹಿಂದೆಯೇ ಬೀದರ ಜಿಲ್ಲೆಗೆ ವಕ್ಕರಿಸಿ ಜನರಲ್ಲಿ ಭೀತಿ ಹೆಚ್ಚಿಸಿದೆ. ಈ ಸೋಂಕು ಭಾಲ್ಕಿ ಕ್ಷೇತ್ರದಲ್ಲಿ ಹರಡದಂತೆ ಆರಂಭದಿಂದಲೇ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ವಹಿಸಲು ಶ್ರಮಿಸಿದ್ದಾರೆ.
ಆಗಾಗ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ವ್ಯವಸ್ಥೆಗಳ ಬಗ್ಗೆ ಅವಲೋಕನ, ಮಾರ್ಗದರ್ಶನ ಮಾಡುತ್ತ ಬಂದಿದ್ದಾರೆ. ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರು, ಆರೋಗ್ಯ-ಪೊಲೀಸ್ ಸಿಬ್ಬಂದಿ ಮತ್ತು ಪೌರ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಶಾಸಕ ಖಂಡ್ರೆ ಅವರು ಈವರೆಗೆ ವೈಯಕ್ತಿಕವಾಗಿ 4 ಲಕ್ಷ ರೂ. ಮೌಲ್ಯದ 40 ಸಾವಿರ ತ್ರಿಬಲ್ ಲೇಯರ್ ಮಾಸ್ಕ್ ಗಳನ್ನು ನೀಡಿದ್ದಾರೆ.
ಅಷ್ಟೇ ಅಲ್ಲ ಎಲ್ಲ ರೀತಿಯ ವ್ಯಾಪಾರಿಗಳು, ವೈರಸ್ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಸಂಘ ಸಂಸ್ಥೆಗಳ ಸದಸ್ಯರಿಗೂ ಮಾಸ್ಕ್ ಗಳನ್ನು ವಿತರಿಸಿದ್ದಾರೆ. ನಿತ್ಯ ಗ್ರಾಮಗಳಿಗೆ ತೆರಳಿ ಸೋಂಕು ಹರಡದಂತೆ ವಹಿಸಬೇಕಾದ ಮುಂಜಾಗ್ರತೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಕೋವಿಡ್-19 ಪರೀಕ್ಷಾ ಕೇಂದ್ರ ಸ್ಥಾಪನೆಗೆ ಒತ್ತಡ
ಬೀದರ ಜಿಲ್ಲೆಯಲ್ಲಿ ಕೋವಿಡ್ ಸೋಂಕು ತಲ್ಲಣ ಮೂಡಿಸಿದ್ದು 15 ಜನರಲ್ಲಿ ಪಾಸಿಟಿವ್ ಬಂದಿದೆ. ಅದರಲ್ಲಿ 9 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಮಾದರಿ ಪರೀಕ್ಷೆಗಳ ಸಂಖ್ಯೆ ಹೆಚ್ಚಿದರೆ ಬೀದರ ಸೇರಿದಂತೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗುವ ಸಾಧ್ಯತೆ ಇದೆ.
ಬೀದರನಲ್ಲಿ ಕೋವಿಡ್-19 ಪರೀಕ್ಷಾ ಕೇಂದ್ರ ಆರಂಭಿಸಲು ರಾಜ್ಯ ಸರ್ಕಾರ ಘೋಷಿಸಿ ಮೂರು ವಾರ ಕಳೆದರೂ ಈವರೆಗೆ ಅನುಷ್ಠಾನಕ್ಕೆ ಬಂದಿಲ್ಲ. ಹಾಗಾಗಿ ಬೀದರ ಸೇರಿ ಪ್ರತಿ ಜಿಲ್ಲಾ ಕೇಂದ್ರಕ್ಕೊಂದು ಕೋವಿಡ್- 19 ಪರೀಕ್ಷಾ ಕೇಂದ್ರ ಸ್ಥಾಪಿಸಬೇಕು ಎಂದು ಸಿಎಂಗೆ ಪತ್ರ ಬರೆದು ನಿರಂತರವಾಗಿ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ.
ಕೋವಿಡ್ ತಡೆಗೆ ಕೇವಲ ಲಾಕ್‌ಡೌನ್ ಮಾತ್ರವೇ ಪರಿಹಾರವಲ್ಲ. ಜತೆಗೆ ಶಂಕಿತರ ಗಂಟಲು ದ್ರವ ತ್ವರಿತವಾಗಿ ಪರೀಕ್ಷೆ ಮಾಡುವುದು ಕೂಡ ಅಷ್ಟೆ ಪ್ರಮುಖವಾಗಿದೆ. ಪರೀಕ್ಷೆ ಮಂದಗತಿಯಲ್ಲಿ ಸಾಗಿದರೆ ಈ ಸೋಂಕನ್ನು ಸಂಪೂರ್ಣವಾಗಿ ನಿವಾರಿಸುವುದು ಕಷ್ಟ ಸಾಧ್ಯ.
ಈಗಾಗಲೇ ಸರಕಾರ ಸ್ವಲ್ಪ ಮಟ್ಟಿಗೆ ಪರೀಕ್ಷಾ ಕೇಂದ್ರ ಹೆಚ್ಚಿಸಿದರೂ ಕೂಡ ಇನ್ನೂ ಶಂಕಿತರ ಸೋಂಕು ಪರೀಕ್ಷೆಗಾಗಿ ಎರಡ್ಮೂರು ದಿನ ಕಾಯುವಂತಹ ಪರಿಸ್ಥಿತಿ ಇದೆ. ಇದರಿಂದ ಸೋಂಕು ಮತ್ತೂಬ್ಬರಿಗೆ ಹರಡುವ ಆತಂಕವಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕೋವಿಡ್-19 ಪರೀಕ್ಷಾ ಕೇಂದ್ರ ಪ್ರಾರಂಭಿಸುವಂತೆ ಮತ್ತೂಮ್ಮೆ ಸಿಎಂಗೆ ಪತ್ರ ಬರೆದು ಒತ್ತಡ ಹಾಕಿದ್ದಾರೆ.
ಜನಪರ ಕಾಳಜಿಯ ನಾಯಕ
ಸಂದಿಗ್ಧ ಸ್ಥಿತಿಯಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ತಾವು ನಿಜವಾದ ಜನಪರ ಕಾಳಜಿಯ ನಾಯಕ ಎಂಬುದನ್ನು ಸಾಬೀತು ಪಡಿಸಿದವರು ಭಾಲ್ಕಿಯ ಶಾಸಕ ಈಶ್ವರ ಖಂಡ್ರೆ. ಸದಾ ಹಸನ್ಮುಖಿಯಾಗಿರುವ ಖಂಡ್ರೆ ಅವರು ತಮ್ಮ ತಂದೆ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರು ತೋರಿದ ಮಾರ್ಗದಲ್ಲೇ ಮುನ್ನಡೆಯುತ್ತ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ.
ಕ್ಷೇತ್ರದ ಜನರಿಗೆ ಕಷ್ಟ ಎದುರಾದಾಗಲೆಲ್ಲ ಅವರಿಗೆ ನೆರವಾಗುತ್ತ ಜನಪರ ಕಾಳಜಿ ಮೆರೆದಿದ್ದಾರೆ. ಶಾಸಕ ಖಂಡ್ರೆ ಅವರು ಜಾಗೃತಿ ಮೂಡಿಸುತ್ತಿರುವ ಪರಿಣಾಮವೇ ಇಂದು ಕ್ಷೇತ್ರದಲ್ಲಿ ಒಂದೂ ಕೋವಿಡ್ ಸೋಂಕಿನ ಪ್ರಕರಣಗಳು ಕಂಡುಬಂದಿಲ್ಲ ಎನ್ನುವುದು ಸಮಾಧಾನಕರ ವಿಷಯ.
ಆದಾಗ್ಯೂ ಯಾವುದೇ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಲ್ಲಿ ಅವರಿಗೆ ಆರೋಗ್ಯ ಕೇಂದ್ರಗಳಲ್ಲಿ ತ್ವರಿತವಾಗಿ ಚಿಕಿತ್ಸೆ ಲಭ್ಯವಾಗುವಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆಗಾಗ ಆಸ್ಪತ್ರೆಗಳು, ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ಕೊಟ್ಟು ವ್ಯವಸ್ಥೆಗಳನ್ನು ಗಮನಿಸುತ್ತಿದ್ದಾರೆ.
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.