ಕೋವಿಡ್ -19 ತುರ್ತು ಪರಿಸ್ಥಿತಿ ಮತ್ತು ಹಿಮೋಡಯಾಲಿಸಿಸ್
ನಮಗಿದೆ ನಿಮ್ಮ ಕಾಳಜಿ ನಿಮಗೂ ಇರಲಿ ಸ್ವಂತ ಮತ್ತು ಸಾಮಾಜಿಕ ಜವಾಬ್ದಾರಿ
Team Udayavani, May 3, 2020, 5:55 AM IST
ಕೋವಿಡ್ -19 ವೈರಸ್‌ನಿಂದ ಉಂಟಾಗುವ ಕಾಯಿಲೆಯು ಸಾಂಕ್ರಾಮಿಕವಾಗಿದ್ದು, ಇದು ವಯಸ್ಸಾದವರಲ್ಲಿ, ಸಣ್ಣ ಮಕ್ಕಳಲ್ಲಿ ಮತ್ತು ಇತರ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಹೆಚ್ಚಿನ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ ಎಂದು ಈಗಾಗಲೇ ಎಲ್ಲರಿಗೂ ತಿಳಿದ ವಿಚಾರವಾಗಿದೆ. ಈ ಗುಂಪಿಗೆ ಹಿಮೋಡಯಾಲಿಸಿಸ್ ನಿರ್ವಹಣೆಯಲ್ಲಿರುವ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಹಂತ -5 ರಲ್ಲಿರುವ ವ್ಯಕ್ತಿಗಳೂ ಸೇರುತ್ತಾರೆ.
ಹಿಮೋಡಯಾಲಿಸಿಸ್ ಚಿಕಿತ್ಸೆ ಮಾಡಿಸಿಕೊಳ್ಳುವ ಹಲವು ವ್ಯಕ್ತಿಗಳಲ್ಲಿ ಮೂತ್ರಪಿಂಡ ವೈಫಲ್ಯದೊಂದಿಗೆ ಮಧುಮೇಹ, ರಕ್ತದೊತ್ತಡ, ಹೃದಯ ಮತ್ತು ಶ್ವಾಸಕೋಶ ಸಂಬಂಧಿತ ತೊಂದರೆಗಳೂ ಸಾಮಾನ್ಯವಾಗಿರುವುದರಿಂದ ಇವರಲ್ಲಿ ರೋಗನಿರೋಧಕ ಶಕ್ತಿಯು ಸಾಮಾನ್ಯ ಜನರಿಗೆ ಹೋಲಿಸಿದರೆ ತೀರಾ ಕಡಿಮೆ ಇರುತ್ತದೆ. ಹೀಗಾಗಿ ಇವರು ಬಲು ಬೇಗ ಸೋಂಕಿಗೆ ಒಳಗಾಗುತ್ತಾರೆ.
ಹೊರರೋಗಿಗಳ ವಿಭಾಗದಲ್ಲಿ ನಿಯಮಿತ ಹಿಮೋಡಯಾಲಿಸಿಸ್ ಚಿಕಿತ್ಸೆ ಪಡೆಯುವವರಿಗೆ ಅನಿವಾರ್ಯವಾಗಿ ಆಸ್ಪತ್ರೆಯ ಪರಿಸರಕ್ಕೆ ಆಗಾಗ್ಗೆ ಭೇಟಿ ನೀಡುತ್ತಿರಬೇಕಾಗುತ್ತದೆ. ಜತೆಗೆ ಡಯಾಲಿಸಿಸ್ ಸಮಯದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಇತರ ವ್ಯಕ್ತಿಗಳ ಸಂಪರ್ಕವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. ಈ ನಿಟ್ಟಿನಲ್ಲಿ ಹಿಮೋಡಯಾಲಿಸಿಸ್ ಚಿಕಿತ್ಸೆಗೆ ಒಳಪಡುವವರಿಗೆ ಕಾಳಜಿಯ ಮಾಹಿತಿ ಇಲ್ಲಿದೆ.
ನೀವು ನೆನಪಿಡಬೇಕಾದದ್ದು
1. ಕೋವಿಡ್-19 ಸೋಂಕಿನ ರೋಗ ಲಕ್ಷಣಗಳನ್ನು ತಿಳಿದುಕೊಳ್ಳಿ. ಧೈರ್ಯವಾಗಿರಿ, ಯಾವುದೇ ಗೊಂದಲ ಬೇಡ. ಆದರೆ ನಿರ್ಲಕ್ಷ್ಯ ಬೇಡ. ಎಚ್ಚರಿಕೆಯಿಂದಿರಿ ಮತ್ತು ಮುಂಜಾಗ್ರತೆ ವಹಿಸಿ ಒಂದು ವೇಳೆ ಒಬ್ಬ ವ್ಯಕ್ತಿಯು ಕೋವಿಡ್ -19 ವೈರಸ್ ಸೋಂಕಿಗೆ ತುತ್ತಾದರೆ ಅವನ /ಅವಳಲ್ಲಿ 2-14 ದಿನಗಳ ಅನಂತರ ಈ ಕೆಳಗಿನ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು:
-ಉಸಿರಾಟದ ತೊಂದರೆ (ದೇಹದಲ್ಲಿ/ ಶ್ವಾಸಕೋಶದಲ್ಲಿ ಅಧಿಕ ದ್ರವಾಂಶ ಇಲ್ಲದಿದ್ದರೂ ಕೂಡ)
-ಜ್ವರ
-ಕೆಮ್ಮು
-ಗಂಟಲು ನೋವು
-ತಲೆನೋವು/ ದೇಹದ ನೋವು ಸೇರಿದಂತೆ ಶೀತ ಮತ್ತು ಜ್ವರ ತರಹದ ರೋಗಲಕ್ಷಣ
2. ನೈರ್ಮಲ್ಯ ಮತ್ತು ಸಾಮಾಜಿಕ ಅಂತರವನ್ನು ಕಾಪಾಡುವಿಕೆಗಾಗಿ ಆರೋಗ್ಯ ಶಿಫಾರಸುಗಳನ್ನು ಅನುಸರಿಸಿ.
ಕೋವಿಡ್ -19 ವೈರಸ್ ಸೋಂಕಿಗೆ ಒಳಗಾದ ವ್ಯಕ್ತಿಯ ಜತೆಗೆ ಮುಖಾಮುಖೀಯಾಗುವ ಸಾಧ್ಯತೆಗಳು ತೀರಾ ಕಡಿಮೆಯಾಗಿದ್ದರೂ ಪ್ರತಿಯೊಬ್ಬರೂ ತಮ್ಮನ್ನು ಮತ್ತು ಜನ ಸಮುದಾಯ ಹಾಗೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸುರಕ್ಷಿತವಾಗಿಡಲು ಕ್ರಮಗಳನ್ನು ತೆಗೆದುಕೊಳ್ಳಲೇಬೇಕು ಎಂಬುದನ್ನು ನೆನಪಿಟ್ಟುಕೊಳ್ಳುವುದು ಒಳ್ಳೆಯದು.
ಆರೋಗ್ಯ ಶಿಫಾರಸುಗಳು ಹೀಗಿವೆ:
– 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯಿರಿ ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್ ಬಳಸಿ.
– ತೊಳೆಯದ ಕೈಗಳಿಂದ ನಿಮ್ಮ ಕಣ್ಣು, ಮೂಗು ಅಥವಾ
ಬಾಯಿಯನ್ನು ಸ್ಪರ್ಶಿಸುವುದನ್ನು ತಪ್ಪಿಸಿ.
-ಜನರ ಸಂಪರ್ಕಕ್ಕೆ ಬಂದಾಗ ಬಾಯಿ ಮತ್ತು ಮೂಗು ಮುಚ್ಚುವಂತೆ ಮಾಸ್ಕ್ ಧರಿಸಿ. ಕನಿಷ್ಠ ಒಂದು ಮೀಟರ್‌ಗಿಂತ ಅಧಿಕ ಅಂತರ ಕಾಯ್ದುಕೊಳ್ಳಿ.
-ನೀವು ಕೆಮ್ಮುವಾಗ ಮತ್ತು ಸೀನುವಾಗ ಟಿಶ್ಯು ಕಾಗದ ಅಥವಾ ಕರವಸ್ತ್ರದಿಂದ ಮೂಗು ಮತ್ತು ಬಾಯಿಯನ್ನು ಮುಚ್ಚಿ. ಅನಂತರ ಬಳಸಿದ ಟಿಶ್ಯು ಕಾಗದವನ್ನು ಕೂಡಲೇ ತುಂಬ ಜಾಗರೂಕತೆಯಿಂದ ಕಸದ ಬುಟ್ಟಿಯೊಳಗೆ ಹಾಕಿರಿ.
-ನೀವು ಆಗಾಗ್ಗೆ ಸ್ಪರ್ಶಿಸುವ ಯಾವುದೇ ವಸ್ತುಗಳು ಮತ್ತು ಮೇಲ್ಮೆ„ಗಳನ್ನು ಸ್ವತ್ಛಗೊಳಿಸಿ ಮತ್ತು ಸೋಂಕುರಹಿತಗೊಳಿಸಿ.
-ಕೆಮ್ಮು ಅಥವಾ ಸೀನುವಿಕೆಯಂತಹ ಅನಾರೋಗ್ಯ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳಿಂದ ಕನಿಷ್ಠ 6 ಅಡಿಗಿಂತ ಅಧಿಕ ಅಂತರ ಕಾಪಾಡಿಕೊಳ್ಳಿ.
– ಹಿಮೋಡಯಾಲಿಸಿಸ್ ಹೊರತುಪಡಿಸಿ ಮನೆಯಿಂದ ಹೊರಗೆ ಹೋಗುವುದನ್ನು ತಪ್ಪಿಸಿ ಸಾಧ್ಯವಾದಷ್ಟು ಮನೆಯಲ್ಲೇ ಇರಿ. ಮನೆಯಿಂದ ಹೊರಗೆ ಬರಲೇಬೇಕಾದ ಅನಿವಾರ್ಯತೆ ಬಂದಾಗ ತಪ್ಪದೆ ಮಾಸ್ಕ್ ಧರಿಸಿ. ಬಟ್ಟೆಯಿಂದ ಮಾಡಿದ ಮಾಸ್ಕ್ ಬಳಸಬಹುದು.
-ಮನೆಯಲ್ಲಿ/ ನೆರೆಹೊರೆಯಲ್ಲಿ ಯಾರಾದರೂ ಸಂಬಂಧಿಕರು/ ಸ್ನೇಹಿತರು ಇದ್ದರೆ ದಿನಸಿ ಸಾಮಾನು ಮತ್ತು ಅಗತ್ಯ ಔಷಧ ತರಿಸಿಕೊಳ್ಳಲು ಅವನ ಸಹಾಯ ಯಾಚಿಸಿ.
3. ನೆನಪಿಡಿ, ನೀವು ನಿಮ್ಮ ನಿಯಮಿತ ಹಿಮೋಡಯಾಲಿಸಿಸ್ ಮತ್ತು ತುರ್ತು ಅಗತ್ಯ ಚಿಕಿತ್ಸೆಯನ್ನು ತಪ್ಪಿಸಿಕೊಳ್ಳುವಂತಿಲ್ಲ.
ಹೌದು, ಹಿಮೋಡಯಾಲಿಸಿಸ್ ಮಾಡಿಕೊಳ್ಳುವವರಿಗೆ ಇದು ಅತ್ಯಂತ ಮುಖ್ಯವಾದ ಸಲಹೆ. ಏಕೆಂದರೆ ಒಂದು ಬಾರಿಯ ಹಿಮೋ ಡಯಾಲಿಸಿಸ್ ತಪ್ಪಿಸಿಕೊಳ್ಳುವುದು ಕೂಡ ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ನಿಮ್ಮ ಆರೋಗ್ಯವು ಹದಗೆಟ್ಟರೆ ಅದು ಇನ್ನೂ ಹೆಚ್ಚಿನ ಅಪಾಯವನ್ನುಂಟು ಮಾಡುತ್ತದೆ.
ಮೂತ್ರ ಪಿಂಡಗಳು ಮತ್ತು ಅವುಗಳ ಕಾರ್ಯ
ಮೂತ್ರಪಿಂಡಗಳು ಮಾನವನ ದೇಹದಲ್ಲಿನ ಮೂತ್ರಜನಕಾಂಗವ್ಯೂಹದ ಮುಖ್ಯ ಭಾಗಗಳಾಗಿವೆ. ಸಾಮಾನ್ಯವಾಗಿ ಆರೋಗ್ಯವಂತ ಮನುಷ್ಯರಲ್ಲಿ ಎರಡು ಮೂತ್ರಪಿಂಡಗಳಿರುತ್ತವೆ. ಪ್ರತೀ ಮೂತ್ರಪಿಂಡದ ಒಳಗೆ ಸುಮಾರು ಒಂದು ಮಿಲಿಯನ್ “ನೆಫ್ರಾನ್’ ಎಂದು ಕರೆಯಲ್ಪಡುವ ಸಣ್ಣ ಘಟಕಗಳು ಇರುತ್ತವೆ. ಪ್ರತಿಯೊಂದು ನೆಫ್ರಾನ್ ಕೂಡ “ಗ್ಲೋಮರುಲಸ್’ ಎಂದು ಕರೆಯಲ್ಪಡುವ ರಕ್ತವನ್ನು ಶೋಧಿಸುವ ಒಂದು ಸಣ್ಣ ಫಿಲ್ಟರ್‌ನಿಂದ ಕೂಡಿದೆ. ಮೂತ್ರಪಿಂಡದ ಮೂಲಕ ರಕ್ತ ಹಾದುಹೋಗುತ್ತಿದ್ದಂತೆ ತ್ಯಾಜ್ಯ ವಸ್ತುಗಳಾದ ಯೂರಿಯಾ, ಕ್ರಿಯಾಟಿನಿನ್ ಮತ್ತು ದೇಹದಲ್ಲಿ ಅಧಿಕ ಪ್ರಮಾಣದಲ್ಲಿ ಶೇಖರವಾಗಿರುವ ನೀರು ಮೂತ್ರ ರೂಪದಲ್ಲಿ ದೇಹದಿಂದ ಹೊರಹಾಕಲ್ಪಡುತ್ತವೆ.
ಮೂತ್ರಪಿಂಡಗಳು ವಿಫಲವಾದಾಗ ಏನಾಗುತ್ತದೆ?
ಮೂತ್ರಪಿಂಡಗಳು ಕಾರ್ಯನಿರ್ವಹಿಸಲು ವಿಫಲವಾದಾಗ ಶರೀರದಲ್ಲಿನ ತ್ಯಾಜ್ಯಗಳು ರಕ್ತದಲ್ಲಿ ಶೇಖರಣೆಯಾಗಿ ದೇಹದಲ್ಲೇ ಉಳಿಯುತ್ತವೆ. ಇದರಿಂದ ಮನುಷ್ಯನ ಆರೋಗ್ಯದಲ್ಲಿ ಏರುಪೇರಾಗಿ ಜೀವಕ್ಕೆ ಅಪಾಯ ಉಂಟಾಗುತ್ತದೆ. ಒಂದು ವೇಳೆ ಈ ಕಾಯಿಲೆ ತೀವ್ರವಾಗಿ ಪೂರ್ವಸ್ಥಿತಿಗೆ ಮರಳದಂತಾಗಿ, ಎರಡೂ ಮೂತ್ರಪಿಂಡಗಳು ಪೂರ್ಣವಾಗಿ ಘಾಸಿಗೊಂಡರೆ ಮುಂದೆ ಜೀವನ ನಿರ್ವಹಣೆಗೆ ಮೂತ್ರಪಿಂಡಗಳ ಕಾರ್ಯವನ್ನು ನಿರ್ವಹಿಸುವ ಬದಲಿ ಚಿಕಿತ್ಸೆಗಳಾದ ಹಿಮೋಡಯಾಲಿಸಿಸ್ /ಪೆರಿಟೋನಿಯಲ್ ಡಯಾಲಿಸಿಸ್ /ಕಿಡ್ನಿ ಕಸಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಹಿಮೋಡಯಾಲಿಸಿಸ್‌ನಲ್ಲಿ ಚಿಕಿತ್ಸೆಗೆ ಒಳಪಡುವವರ ದೇಹದಿಂದ ನಳಿಕೆಗಳ ಅಥವಾ ಸೂಜಿಗಳ ಮೂಲಕ ದೊಡ್ಡ ರಕ್ತನಾಳದಿಂದ ರಕ್ತವನ್ನು ತೆಗೆದು ಡಯಾಲಿಸಿಸ್ ಯಂತ್ರದ ಸಹಾಯದಿಂದ ಡಯಲೈಸರ್‌ಎಂಬ ಕೃತಕ ಮೂತ್ರಪಿಂಡದ ಪದರಗಳ ಮೂಲಕ ಹಾಯಿಸಿ ಶುದ್ಧೀಕರಿಸಿದ ರಕ್ತವನ್ನು ಮರಳಿ ದೇಹಕ್ಕೆ ಹಾಯಿಸಲಾಗುತ್ತದೆ. ಈ ರೀತಿ ಇದನ್ನು ವಾರಕ್ಕೆ 2ರಿಂದ 3 ಸಲ, ಪ್ರತಿಯೊಂದು ಬಾರಿಯೂ 4ರಿಂದ 5 ತಾಸುಗಳ ತನಕ ಜೀವನಪರ್ಯಂತ ಮಾಡಬೇಕಾಗುತ್ತದೆ (ಕಿಡ್ನಿಕಸಿಗೆ ಒಳಗಾಗದಿದ್ದಲ್ಲಿ). ಏಕೆಂದರೆ ಹಿಮೋಡಯಾಲಿಸಿಸ್ ಕಿಡ್ನಿ ಕಾಯಿಲೆಯನ್ನು ಗುಣಪಡಿಸುವುದಿಲ್ಲ, ಬದಲಿಗೆ ಜೀವನ ನಿರ್ವಹಣೆಗೆ ಮಾತ್ರ ಸಹಾಯ ಮಾಡುತ್ತದೆ.
ಹಾಗಾಗಿ ಹಿಮೋಡಯಾಲಿಸಿಸ್ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಾಮಾನ್ಯವಾಗಿ ಮಾಡುವ ನಿರಂತರವಾದ ಚಿಕಿತ್ಸಾಕ್ರಮವಾಗಿದೆ.
ಆದುದರಿಂದ ನಿಮ್ಮ ಚಿಕಿತ್ಸೆಯ ವೇಳಾಪಟ್ಟಿಯನ್ನು ನಿಮ್ಮ ಆದ್ಯತೆಗಳ ಮೇಲ್ಭಾಗದಲ್ಲಿ ಇರಿಸಿ ಮತ್ತು ಈ ಕೆಳಗಿನ ಸಲಹೆಗಳನ್ನು ಖಂಡಿತವಾಗಿಯೂ ಪಾಲನೆ ಮಾಡಿ
– ವೈಯಕ್ತಿಕ ಸ್ವತ್ಛತೆಗೆ ಹೆಚ್ಚಿನ ಪ್ರಾಮುಖ್ಯ ನೀಡಿ
-ಡಯಾಲಿಸಿಸ್ ಘಟಕವನ್ನು ಪ್ರವೇಶಿಸುವ ಮೊದಲು, ಡಯಾಲಿಸಿಸ್ ಘಟಕವನ್ನು ತೊರೆದ ಅನಂತರ ಮತ್ತು ಮನೆಗೆ ಪ್ರವೇಶಿಸುವ ಮೊದಲು ಕೈಗಳನ್ನು ತೊಳೆದುಕೊಳ್ಳಿ.
-ಮನೆಗೆ ಮರಳಿದ ಅನಂತರ ಸಂಪೂರ್ಣ ಸ್ನಾನ ಮಾಡುವುದು ಉತ್ತಮ.
-ನಿಮ್ಮ ಫೋನ್, ಕೀಗಳು, ಪರ್ಸ್ ಇತ್ಯಾದಿಗಳನ್ನು ಆಲ್ಕೋಹಾಲ್ / ಸ್ಯಾನಿಟೈಸರ್‌ನಿಂದ ಸ್ವತ್ಛಗೊಳಿಸಿ.
– ಮುಖಕ್ಕೆ ಮಾಸ್ಕ್ ಧರಿಸಿರಿ ಮತ್ತು ನಿಮಗೆ ಚಿಕಿತ್ಸೆ ನೀಡುವವರು ಕೂಡ ಮಾಸ್ಕ್ ಧರಿಸಿರುವುದನ್ನು ಖಾತ್ರಿ ಪಡಿಸಿಕೊಳ್ಳಿ.
-ಆರೋಗ್ಯ ಸಂಸ್ಥೆ ನೀಡಿರುವ ಎಲ್ಲ ಆರೋಗ್ಯ ಸಲಹೆ ಸೂಚನೆಗಳನ್ನು ಪಾಲಿಸಿರಿ.
-ನಿರ್ಧರಿಸಿದ ಡಯಾಲಿಸಿಸ್ ಅವಧಿಯನ್ನು ಕಡಿತಗೊಳಿಸದೆ ಚಿಕಿತ್ಸೆಯನ್ನು ಪೂರ್ಣವಾಗಿ ಮಾಡಿಸಿಕೊಳ್ಳಿರಿ. ಇದು ನಿಮ್ಮ ಹೆಚ್ಚುವರಿ ಡಯಾಲಿಸಿಸ್ ಮತ್ತು ಅನಾವಶ್ಯಕ ಆಸ್ಪತ್ರೆ ಭೇಟಿಯನ್ನು ತಪ್ಪಿಸುತ್ತದೆ.
-ಎರಡು ಡಯಾಲಿಸಿಸ್‌ನ ಅಂತರದಲ್ಲಿ ತೂಕದ ಹೆಚ್ಚಳವು ವೈದ್ಯರ ಸಲಹೆಯ ಮಿತಿಯಲ್ಲಿರುವಂತೆ ನೋಡಿಕೊಳ್ಳಿ.
-ಡಯಾಲಿಸಿಸ್ ಚಿಕಿತ್ಸಾ ಸಮಯದಲ್ಲಿ ಪ್ರತೀ ಬಾರಿ ಮರುಕಳಿಸುವ ತೊಂದರೆಗಳ ಬಗ್ಗೆ ವೈದ್ಯರ ಗಮನಕ್ಕೆ ತಂದು ಅದರ ನಿವಾರಣೆಗೆ ಸಲಹೆ ಪಡೆಯಿರಿ.
-ಡಯಾಲಿಸಿಸ್‌ಗೆ ಒಳಗಾಗುವಲ್ಲಿ ಮುಖ್ಯವಾಗಿರುವ ವಾಸ್ಕಾಲಾರ್ ಆ್ಯಕ್ಸೆಸ್ ಕೈ ಮತ್ತು ಕ್ಯಾಥೆಟರ್ ಬಗ್ಗೆ ಮುತುವರ್ಜಿ ವಹಿಸಿ.
-ವೈದ್ಯರ ಸಲಹೆಯಂತೆ ಔಷಧ ಸೇವಿಸಿ
-ವೈದ್ಯರ ಭೇಟಿಯನ್ನು ಡಯಾಲಿಸಿಸ್ ಸಮಯದಲ್ಲೇ ನಡೆಸಿ. ಉಳಿದಂತೆ ಇತರ ಸಲಹೆ ಸೂಚನೆಗಳನ್ನು ದೂರವಾಣಿಯ ಮೂಲಕ ಪಡೆದುಕೊಳ್ಳಿ.
– ಪ್ರಯಾಣಕ್ಕೆ ಸಾಧ್ಯವಾದಷ್ಟು ಸ್ವಂತ ವಾಹನದ ಬಳಕೆ ಮಾಡಿ. ಸಾರ್ವಜನಿಕ ಸಾರಿಗೆಯ ಬಳಕೆ ತಪ್ಪಿಸಿ. ಇತರ ರೋಗಿಗಳನ್ನು ಸಂಪರ್ಕಿಸಬೇಡಿ.
-ಸಾಧ್ಯವಾದಲ್ಲಿ ನಿಮ್ಮ ಆರೈಕೆಗೆ ಕುಟುಂಬದ ಒಬ್ಬರೇ ಆರೋಗ್ಯವಂತ ಸದಸ್ಯರನ್ನು ಆಯ್ಕೆ ಮಾಡಿ ಮತ್ತು ಅವರಿಗೂ ಮಾಸ್ಕ್ ಧರಿಸಲು ಹೇಳಿ.
-ಡಯಾಲಿಸಿಸ್ ಮತ್ತು ಇತರೆ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳ ಜಾಗ್ರತೆ ವಹಿಸಿ.
-ತುರ್ತು ಸಹಾಯ ದೂರವಾಣಿಯ ಮಾಹಿತಿ ನಿಮ್ಮ ಬಳಿ ಯಾವಾಗಲೂ ಇರಲಿ.
4. ನೀವು ಕೊರೊನಾ ರೋಗಲಕ್ಷಣಗಳನ್ನು
ಹೊಂದಿರುವಾಗ ಅಥವಾ ರೋಗಲಕ್ಷಣಗಳ ಬಗ್ಗೆ
ಖಚಿತವಾಗಿಲ್ಲದೆ ಇರುವಾಗ ಈ ರೀತಿ ಮಾಡಿ:
-ಪ್ರಾಮಾಣಿಕವಾಗಿರಿ ಮತ್ತು ಕರ್ನಾಟಕ ಸರಕಾರದ ಕೋವಿಡ್-19 ಸಹಾಯವಾಣಿಗೆ ಕರೆ ಮಾಡಿ ನಿಮ್ಮ ರೋಗಲಕ್ಷಣಗಳನ್ನು ಅವರಿಗೆ ವಿವರಿಸಿ ಮಾರ್ಗದರ್ಶನ ಪಡೆಯಿರಿ.
-ಕೇಂದ್ರ ಸರಕಾರದ ಸೂಚನೆಯಂತೆ ಆರೋಗ್ಯ ಸೇತು ಆಪ್ ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ.
-ಸಹಾಯ ಸಿಗುವವರೆಗೂ ಮನೆಯಲ್ಲೇ ಪ್ರತ್ಯೇಕವಾಗಿರಿ. ಮುಖ್ಯವಾಗಿ ವಯಸ್ಸಾದವರಿಂದ ಮತ್ತು ಮಕ್ಕಳಿಂದ ದೂರವಿರಿ.
-ರೋಗಲಕ್ಷಣಗಳು ತೀವ್ರವಾಗಿದ್ದರೆ ಸರಕಾರದ ಸಹಾಯ ಸಿಬಂದಿ ಕೋವಿಡ್-19 ಪರೀಕ್ಷೆ ಮತ್ತು ಚಿಕಿತ್ಸಾ ಸೌಲಭ್ಯಗಳಿರುವ ಹತ್ತಿರದ ಆಸ್ಪತ್ರೆಯನ್ನು ಸೂಚಿಸುತ್ತಾರೆ.
– ನಿಮ್ಮ ವೈದ್ಯಕೀಯ ವರದಿ ಮತ್ತು ಹಿಮೋಡಯಾಲಿಸಿಸ್ ಯಂತ್ರದ ಲಭ್ಯತೆಯ ಆಧಾರದ ಮೇಲೆ ಕ್ಲಿನಿಕ್ ತಂಡವು ನಿಮ್ಮ ಸಾಮಾನ್ಯ ದಿನಚರಿಯನ್ನು ಬದಲಾಯಿಸಬಹುದು. ಅದನ್ನು ದಯವಿಟ್ಟು ಅನುಸರಿಸಿ.
-ನೇರವಾಗಿ ಡಯಾಲಿಸಿಸ್ ಕೇಂದ್ರಕ್ಕೆ ಹೋಗಬೇಡಿ. ಡಯಾಲಿಸಿಸ್ ಸಿಬಂದಿಗೆ ಫೋನ್ ಮೂಲಕ ತಿಳಿಸಿ ಅವರ ಮಾರ್ಗದರ್ಶನ ಪಡೆಯಿರಿ ಮತ್ತು ಆಸ್ಪತ್ರೆಯ ನಿಯಮಾವಳಿಗಳನ್ನು ಗೌರವಿಸಿ.
5. ಈ ಸಮಯದಲ್ಲಿ ನಿಮ್ಮ ರಕ್ಷಣೆಗೆ
ನೀವೇ ಆದ್ಯತೆ ನೀಡಬೇಕು
ಖಂಡಿತವಾಗಿಯೂ ಹೌದು. ಏಕೆಂದರೆ ಈಗಿರುವ ಪರಿಸ್ಥಿತಿಯು ಪ್ರತಿಯೊಬ್ಬರನ್ನು ಒಂದಲ್ಲ ಒಂದು ಕಾರಣದಿಂದ ಒತ್ತಡಕ್ಕೆ ಒಳಗಾಗುವಂತೆ ಮಾಡಿದೆ. ಈ ಸಂದರ್ಭದಲ್ಲಿ ನಿಮ್ಮ ಸಹಕಾರವೂ ತುಂಬಾ ಮುಖ್ಯವಾಗುತ್ತದೆ. ಅದನ್ನು ಈ ರೀತಿಯಾಗಿ ಮಾಡಬಹುದು:
-ಪಥ್ಯಾಹಾರದ ಮೇಲೆ ಮೊದಲಿಗಿಂತಲೂ ಹೆಚ್ಚಿನ ಗಮನ ನೀಡಿ.
-ಸಾಧ್ಯವಾದಷ್ಟು ಮನೆಯಲ್ಲೇ ತಯಾರಿಸಿದ ಬಿಸಿ ಆಹಾರವನ್ನೇ ಸೇವಿಸಿ.
-ಹಣ್ಣು, ತರಕಾರಿಗಳ ಸೇವನೆ ವೈದ್ಯರ ಸಲಹೆಯಂತೆಯೇ ಇರಲಿ.
-ಶೀತಲ ಆಹಾರ, ದ್ರವ ಆಹಾರ ಮತ್ತು ಮಸಾಲೆಯುಕ್ತ ಆಹಾರವನ್ನು ತ್ಯಜಿಸುವುದು ಉತ್ತಮ.
-ಆಹಾರದಲ್ಲಿ ಕಡಿಮೆ ಉಪ್ಪಿನ ಬಳಕೆ ಮಾಡಿ.
-ಸುಳ್ಳು ವದಂತಿಗಳಿಗೆ ಕಿವಿ ಕೊಡದೆ ತಾಳ್ಮೆಯಿಂದಿರಿ ಮತ್ತು ಮಾನಸಿಕ ಸ್ತಿಮಿತ ಕಾಯ್ದುಕೊಳ್ಳಿರಿ.
-ಗುಣಾತ್ಮಕ ಚಿಂತನೆಯಿರಲಿ
6. ಸಾಮಾಜಿಕ ಸೋಂಕು ತಡೆಯುವಲ್ಲಿ ನಿಮ್ಮ
ಪಾತ್ರ ಮತ್ತು ಜವಾಬ್ದಾರಿಯ ಅರಿವಿರಲಿ.
-ನಿಮಗೆ ನೀಡಿದ ಸಾಮಾಜಿಕ ರಿಯಾಯಿತಿಗಳನ್ನು ದುರುಪಯೋಗ ಮಾಡದಿರುವುದು.
-ಅನಗತ್ಯ ಜನಸಂಪರ್ಕ ಮತ್ತು ಮಾತುಕತೆಗೆ ಅವಕಾಶ ನೀಡದಿರುವುದು.
-ನಿಮ್ಮ ಆರೋಗ್ಯ ಮತ್ತು ಚಿಕಿತ್ಸೆಯ ಬಗ್ಗೆ ಎಲ್ಲ ರೀತಿಯ ಮಾಹಿತಿ ಪಡೆಯುವುದಕ್ಕೆ ನಿಮಗೆ ಅಧಿಕಾರವಿದೆ ಎಂದು ತಿಳಿದುಕೊಳ್ಳುವುದು.
-ಆಸ್ಪತ್ರೆಯ ಖರ್ಚುವೆಚ್ಚದ ಬಗ್ಗೆಯೂ ಗಮನ ಇರಿಸುವುದು.
ಬದಲಾದ ಪರಿಸ್ಥಿತಿಯಲ್ಲಿ ಪಾಲಿಸಲೇಬೇಕಾದ ಮುಖ್ಯವಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ರೀತಿಯಲ್ಲಿ ಪಾಲಿಸುವುದರಿಂದ ಸ್ವ ಆರೋಗ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನೂ ಸಹ ಕಾಪಾಡಬಹುದು.
-ವೀಣಾ ಎನ್.ಕೆ.
ಅಸಿಸ್ಟೆಂಟ್ ಪ್ರೊಫೆಸರ್ ಮತ್ತು
ಪ್ರೋಗ್ರಾಮ್ ಕೊಆರ್ಡಿನೇಟರ್
ಆರ್‌ಆರ್‌ಟಿ ಮತ್ತು ಡಯಾಲಿಸಿಸ್ ಟೆಕ್ನಾಲಜಿ ವಿಭಾಗ , ಎಂಸಿಎಚ್‌ಪಿ, ಮಾಹೆ- ಮಣಿಪಾಲ
– ಮೇಘಾ ನಾಗರಾಜ ನಾಯಕ್
ಅಸಿಸ್ಟೆಂಟ್ ಪ್ರೊಫೆಸರ್
ಆರ್‌ಆರ್‌ಟಿ ಮತ್ತು ಡಯಾಲಿಸಿಸ್ ಟೆಕ್ನಾಲಜಿ ವಿಭಾಗ , ಎಂಸಿಎಚ್‌ಪಿ, ಮಾಹೆ- ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.