ಕರಾವಳಿಯಲ್ಲಿ ಎಸೆಸೆಲ್ಸಿ ಪರೀಕ್ಷೆಗೆ ಸಿದ್ಧತೆ
ದ.ಕ.: 30,605, ಉಡುಪಿ: 14,034 ವಿದ್ಯಾರ್ಥಿಗಳು
Team Udayavani, May 5, 2020, 5:55 AM IST
ಸಾಂದರ್ಭಿಕ ಚಿತ್ರ.
ಮಂಗಳೂರು/ ಉಡುಪಿ: ಲಾಕ್‌ಡೌನ್ ಸಮಯಾವಧಿ ಮುಗಿಯಲು ಇನ್ನೆರಡು ವಾರಗಳಿರುವಂತೆಯೇ ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆಗೆ ಸಿದ್ಧತೆ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30,605 ವಿದ್ಯಾರ್ಥಿಗಳು, ಉಡುಪಿ ಜಿಲ್ಲೆಯಲ್ಲಿ ಒಟ್ಟು 14,034 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ.
ಮಾ. 27ರಿಂದ ಎ. 9ರ ವರೆಗೆ ಈ ವರ್ಷದ ಎಸೆಸೆಲ್ಸಿ ಪರೀಕ್ಷೆ ನಡೆಯುವ ಘೋಷಣೆ ಯಾಗಿದ್ದರೂ ಕೋವಿಡ್-19 ಆತಂಕದ ಹಿನ್ನೆಲೆಯಲ್ಲಿ ಮಾ. 23ರಿಂದ ದೇಶದಲ್ಲಿ ಲಾಕ್‌ಡೌನ್ ಆದ ಪರಿಣಾಮ ಎಸೆಸೆಲ್ಸಿ ಪರೀಕ್ಷೆ ಮುಂದೂಡಲ್ಪಟ್ಟಿದೆ. ಇದೀಗ ಮೇ 17ರವರೆಗೂ ಲಾಕ್‌ಡೌನ್ ವಿಸ್ತರಣೆ ಯಾಗಿದ್ದು, ಈ ನಡುವೆ ಎಸೆಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುವಂತೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಲಾಖೆ ಹಾಗೂ ಶಿಕ್ಷಕರಿಗೆ ಸೂಚನೆ ನೀಡಿದ್ದು, ಸೋಮವಾರದಿಂದಲೇ ಸಿದ್ಧತೆ ಆರಂಭವಾಗಿದೆ.
ದ.ಕ. ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಒಟ್ಟು 30,605 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 16,140 ಮಂದಿ ಬಾಲಕರು, 14,465 ಬಾಲಕಿಯರು. 91 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಕೋವಿಡ್-19 ಆತಂಕದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ಕೋಣೆಗಳನ್ನು ಹೆಚ್ಚಳ ಮಾಡುಲಾಗುವುದು.
ನಿರಂತರ ಸಂಪರ್ಕ
ಲಾಕ್‌ಡೌನ್ ಅವಧಿಯಲ್ಲಿ ವಿದ್ಯಾರ್ಥಿಗಳೊಂದಿಗೆ ನಿರಂತರವಾಗಿ ಶಿಕ್ಷಕರು ಸಂಪರ್ಕದಲ್ಲಿದ್ದಾರೆ. ದೂರವಾಣಿ ಕರೆ ಮಾಡಿ ಮಾತನಾಡಿಸುವುದು, ಗೊಂದಗಳ ನಿವಾರಣೆ ಬಗ್ಗೆ ಒತ್ತು ಕೊಡುತ್ತಿದ್ದಾರೆ. ಚಂದನವಾಹಿನಿಯಲ್ಲಿ ಪ್ರತಿದಿನ ಎಸೆಸೆಲ್ಸಿ ಪುನರ್‌ಮನನ ಬಿತ್ತರವಾಗುತ್ತದೆ. ಯೂಟ್ಯೂಬ್ ನಲ್ಲಿಯೂ ಮಕ್ಕಳ ವಾಣಿ ಪ್ರಸಾರ ವಾಗುತ್ತಿದ್ದು, ಮಕ್ಕಳಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದು ಸಾಧ್ಯವಾಗದಿದ್ದರೂ ಶಿಕ್ಷಕರು ಪಠ್ಯಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಉಡುಪಿಯಲ್ಲಿ ಸಿದ್ಧತೆ
ಉಡುಪಿ ಜಿಲ್ಲೆಯಲ್ಲಿ 13,028 ರೆಗ್ಯೂಲರ್, 484 ರೆಗ್ಯೂಲರ್ ಪುನರಾವರ್ತಿತ ವಿದ್ಯಾರ್ಥಿಗಳು, 376 ಖಾಸಗಿ ಮತ್ತು 146 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ಸೇರಿದಂತೆ ಒಟ್ಟು 14,034 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ.
ಜಿಲ್ಲೆಯಲ್ಲಿ 20 ಕ್ಲಸ್ಟರ್ ಸಹಿತ, 29 ಕ್ಲಸ್ಟರ್ ರಹಿತ ಮತ್ತು 2 ಖಾಸಗಿ ಪರೀಕ್ಷಾ ಕೇಂದ್ರ ಸೇರಿದಂತೆ ಒಟ್ಟು 51 ಪರೀಕ್ಷಾ ಕೇಂದ್ರಗಳನ್ನು ತೆರೆಯುವ ಬಗ್ಗೆ ಈ ಹಿಂದೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ ಕೋವಿಡ್-19ದಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇದರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ.
ಸಿಬಂದಿಗೆ ತರಬೇತಿ
ಪರೀಕ್ಷಾ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುವ ಸಿಬಂದಿಗೆ ಅಗತ್ಯ ತರಬೇತಿ ನೀಡುವಂತೆ ಡಿಡಿಪಿಐ ಅವರಿಗೆ ಸೂಚಿಸಲಾಗಿದೆ. ಎಸೆಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸುವ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಕೊಠಡಿಗಳ ಸಂಖ್ಯೆ ಹೆಚ್ಚಳ ಸಹಿತ ಅಗತ್ಯ ವಸ್ತುಗಳಾದ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಕಡ್ಡಾಯವಾಗಿ ಇಡುವಂತೆ ಸೂಚನೆ ಇದೆ.
ಸಂಚಾರ ಆರಂಭವಾದ ಬಳಿಕವೇ ಪರೀಕ್ಷೆ
ಸುದೀರ್ಘ ರಜೆಯ ಕಾರಣ ದೂರ ದೂರುಗಳ ವಿದ್ಯಾರ್ಥಿಗಳು ಊರಿಗೆ ತೆರಳಿರುವ ಸಾಧ್ಯತೆ ಇದೆ. ಎಷ್ಟು ಮಂದಿ ಹೋಗಿದ್ದಾರೆ ಎನ್ನುವ ಮಾಹಿತಿ ಇಲಾಖೆ ಬಳಿ ಇಲ್ಲ. ಲಾಕ್‌ಡೌನ್ ತೆರವಾಗಿ ಸಂಚಾರ ಆರಂಭವಾದ ಬಳಿಕವಷ್ಟೇ ಪರೀಕ್ಷೆ ನಡೆ ಯುವುದರಿಂದ ಅಂತಹ ವಿದ್ಯಾರ್ಥಿಗಳಿಗೆ ತೊಂದರೆಯಾಗದು. ಮಳೆಗಾಲದಲ್ಲಿ ಪರೀಕ್ಷೆ ಆರಂಭವಾಗಿ ಹವಾಮಾನ ಬದಲಾವಣೆ ಅಥವಾ ಇನ್ಯಾವುದೋ ಕಾರಣದಿಂದ ಅನನು ಕೂಲತೆ ಉಂಟಾದಲ್ಲಿ ಅದನ್ನು ಇಲಾಖೆ ಗಮನಕ್ಕೆ ತಂದಲ್ಲಿ ತತ್‌ಕ್ಷಣವೇ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡ ಲಾಗುವುದು. ವಿದ್ಯಾರ್ಥಿಗಳು ಈಗಿನಿಂದಲೇ ತಯಾರಿ ಯಲ್ಲಿ ತೊಡಗಿಸಿಕೊಂಡರೆ ಉತ್ತಮ.
– ಮಲ್ಲೇಸ್ವಾಮಿ, ಶೇಷಶಯನ ಕಾರಿಂಜ,
ದ.ಕ., ಉಡುಪಿ ಡಿಡಿಪಿಐಗಳು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.