ಅನ್‌ಲಾಕ್ ಆಗುವತ್ತ ಜೀವನ ; ದೇಶದ ಹಲವೆಡೆ ಆಂಶಿಕ ಚಟುವಟಿಕೆ ಶುರು
ವ್ಯಾಪಾರ ಕೈಗಾರಿಕೆೆ ನಿಧಾನಕ್ಕೆ ಆರಂಭ
Team Udayavani, May 5, 2020, 6:10 AM IST
ನವದೆಹಲಿ: ನವದೆಹಲಿಯಲ್ಲಿ ಮತ್ತೆ ಶುರುವಾಯಿತು ಟ್ರಾಫಿಕ್ ಜಾಮ್, ಸಹಜ ಸ್ಥಿತಿಗೆ ಮರಳಿದಂತೆ ಕಂಡುಬಂದ ಕೇರಳ, ಚೆನ್ನೈನಲ್ಲಿ ಚಿಗುರೊಡೆದ ವಾಣಿಜ್ಯ ಚಟುವಟಿಕೆ, ಮೊದಲು ನಮ್ಮನ್ನ ಮನೆಗೆ ಕಳಿಸಿಕೊಡಿ ಎಂದ ವಲಸೆ ಕಾರ್ಮಿಕರು, ಅಸ್ಸಾಂನಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಸಡಿಲಿಕೆ, ಅಂಗಡಿಗಳು ತೆರೆದಿದ್ದರೂ ಖರೀದಿಗೆ ಬಾರದ ಜನ, ಒಡಿಶಾದ ಕೆಂಪು ವಲಯಗಳಲ್ಲಿ ಬದಲಾಗದ ಪರಿಸ್ಥಿತಿ, ಗುಜರಾತ್‌ನ ಆರು ಪ್ರಮುಖ ನಗರಗಳನ್ನು ಆವರಿಸಿದ ಲಾಕ್‌ಡೌನ್ ನಿಶ್ಶಬ್ದ, ಬ್ಯಾಂಕ್‌ಗಳ ಮುಂದೆ ಸರತಿ ಸಾಲು, ರಸ್ತೆಗಿಳಿದ ಐಸ್‌ಕ್ರೀಂ ಗಾಡಿಗಳು…
ಇದು ಮೂರು ಹಂತದ, 40 ದಿನಗಳ ಲಾಕ್‌ಡೌನ್ ನಿರ್ಬಂಧ ಸಡಿಲಿಸಿದ ಬಳಿಕ ಸೋಮವಾರ ದೇಶದ ವಿವಿಧ ಭಾಗಗಳಲ್ಲಿ ಕಂಡುಬಂದ ಚಿತ್ರಣ. ಇದು ಜೀವನ, ಜೀವನೋಪಾಯಕ್ಕೆ ಸಂಬಂಧಿಸಿದ ಚಿತ್ರಣವಾದರೆ, ಬಾರ್‌ಗಳ ಎದುರು ಕಿಕ್ಕಿರಿದು ನಿಂತಿದ್ದ ಪಾನಪ್ರಿಯರ ಮುಖದಲ್ಲಿ ಮರುಭೂಮಿಯಲ್ಲಿ ನೀರಿನ ಸೆಲೆ ಸಿಕ್ಕಷ್ಟೇ ಸಂತೋಷವಿತ್ತು.
ತಿಂಗಳಿಗೂ ಹೆಚ್ಚು ಕಾಲ ಕೋವಿಡ್ ಲಾಕ್‌ಡೌನ್ ಎಂಬ ದಿಗ್ಬಂಧನಕ್ಕೊಳಗಾಗಿ ಮನೆಯಲ್ಲೇ ಇದ್ದು ದಾರಿ ತಪ್ಪಿದವರಂತಾಗಿದ್ದ ದೇಶವಾಸಿಗಳು ಸೋಮವಾರ ನಿರ್ಬಂಧಗಳು ಸಡಿಲಾಗಿ, ಸರ್ಕಾರಿ, ಖಾಸಗಿ ಕಚೇರಿ, ವಾಣಿಜ್ಯ, ವ್ಯಾಪಾರ ಚಟುವಟಿಕೆ ಆರಂಭವಾಗುತ್ತಿದ್ದಂತೆ ಉತ್ಸಾಹದಿಂದ ರಸ್ತೆಗಿಳಿದರು.
ನವದೆಹಲಿಯಲ್ಲಿ ಬೆಳಗಿನಿಂದಲೇ ವಾಣಿಜ್ಯ ಚಟುವಟಿಕೆಗಳು ಆರಂಭವಾಗಿ, ಕೆಲವೇ ನೌಕರರೊಂದಿಗೆ ಕಚೇರಿಗಳು ಕಾರ್ಯಾರಂಭ ಮಾಡಿದವು. ಆದರೂ, ಸಂಚಾರ ದಟ್ಟಣೆಯ ಸೋಂಕು ಮಾತ್ರ ದಿಲ್ಲಿಯನ್ನು ಕಾಡದೇ ಬಿಡಲಿಲ್ಲ.
ಈ ನಡುವೆ ವಾರಗಳಿಂದ ಬಾಕಿ ಉಳಿದಿದ್ದ ಹಣದ ವಹಿವಾಟು ಪೂರ್ಣಗೊಳಿಸಲು ಬ್ಯಾಂಕ್‌ಗಳ ಮುಂದೆ ಜನ ಸಾಲಾಗಿ ನಿಂತಿದ್ದರು. ಬಿಸಿಲಲ್ಲಿ ನಿಂತು ಬೆವರಿದವರ ತನು ತಂಪಾಗಿಸಲು ಐಸ್‌ಕ್ರೀಂ ಗಾಡಿಗಳು ಆಗಾಗ ಬಂದು ಹೋಗುತ್ತಿದ್ದವು.
ಸೇಲಾಗದ ಮದ್ಯ: ಲಾಕ್‌ಡೌನ್ ಸಡಿಲಾಗಿ ಕೇರಳದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದಂತೆ ಕಂಡರೂ ಮದ್ಯದಂಗಡಿ ತೆರೆಯಲು ಅವಕಾಶ ನೀಡದ ಕಾರಣ ಪಾನಪ್ರಿಯರಿಗೆ ಭಾರೀ ಬೇಸರ ಉಂಟಾಯಿತು. ಉಳಿದಂತೆ ಇತರೆ ಅಂಗಡಿಗಳಲ್ಲಿ ವಹಿವಾಟು ನಡೆಸುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರಿಂದ ಹೊರಗೆ ಅಷ್ಟಾಗಿ ಜನ ಕಂಡುಬರಲಿಲ್ಲ. ಕಟ್ಟಡ ನಿರ್ಮಾಣ, ಕೈಗಾರಿಕೆ, ಬ್ಯಾಂಕಿಂಗ್ ಚಟುವಟಿಕೆಗಳು ಪುನರಾರಂಭ ಗೊಂಡವು.
ಗುಜರಾತ್‌ನಲ್ಲಿ ಗಲಿಬಿಲಿ: ಬೇರೆ ರಾಜ್ಯಗಳಿಗೆ ಹೋಲಿಸಿದರೆ ಗುಜರಾತ್ ಚಿತ್ರಣ ಕೊಂಚ ಭಿನ್ನವಾಗಿತ್ತು. ಕೆಂಪುವಲಯದಲ್ಲಿ ಬರುವ ಆರು ಪ್ರಮುಖ ನಗರಗಳನ್ನು ಹೊರತುಪಡಿಸಿ ಬೇರೆಲ್ಲಾ ಕಡೆ ವಾಣಿಜ್ಯ, ವ್ಯಾಪಾರ ನಡೆಯಿತು. ಬಹುತೇಕ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಜನ ರಸ್ತೆಗಿಳಿದು ವ್ಯಾಪಾರ, ವಹಿವಾಟಿನಲ್ಲಿ ತೊಡಗಿದ್ದರು. ಸೂರತ್ ಜಿಲ್ಲೆಯ ಗ್ರಾಮವೊಂದರಲ್ಲಿ ವಲಸೆ ಕಾರ್ಮಿಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಈ ನಡುವೆ ರಾಜ್‌ಕೋಟ್‌ನಲ್ಲಿ ತವರಿಗೆ ತೆರಳಲಾಗದೆ ಬೇಸರಗೊಂಡ ವಲಸೆ ಕಾರ್ಮಿಕರು ಕೇಶ ಮುಂಡನ ಮಾಡಿಸಿಕೊಂಡು ಪ್ರತಿಭಟಿಸಿದರು.
ತಮಿಳುನಾಡಲ್ಲೂ ತಮ್ಮನ್ನು ತವರಿಗೆ ಕಳಿಸಿಕೊಡುವಂತೆ ವಲಸೆ ಕಾರ್ಮಿಕರು ಅಧಿಕಾರಿಗಳ ಜತೆ ವಾಗ್ವಾದ ನಡೆಸಿದರು. ಅಸ್ಸಾಂನಲ್ಲಿ ಬಹುತೇಕ ಅಂಗಡಿ, ಮುಂಗಟ್ಟುಗಳು ತೆರೆದಿದ್ದವಾದರೂ ವ್ಯಾಪಾರ ಮಂಕಾಗಿತ್ತು. ಕರ್ಫ್ಯೂ ಜಾರಿಯಲ್ಲಿದ್ದ ಕಾರಣ ಅಂಗಡಿಗಳ ಬಾಗಿಲು ಪೂರ್ಣ ತೆರೆದಿರಲಿಲ್ಲ.
ಇನ್ನು ಒಡಿಶಾದಲ್ಲಿ ಕಿತ್ತಳೆ ಹಾಗೂ ಹಸಿರು ವಲಯಗಳಲ್ಲಿ ಬಹುತೇಕ ಎಲ್ಲ ವಾಣಿಜ್ಯ ಚಟುವಟಿಕೆಗಳು ಆರಂಭವಾದವು. ಆದರೆ ಕೆಂಪು ವಲಯಗಳಲ್ಲಿನ ಜನರಿಗೆ ಲಾಕ್‌ಡೌನ್ ನಿರ್ಬಂಧ ಸಡಿಲಿಕೆಯ ಸಿಹಿ ಸಿಗಲಿಲ್ಲ. ಆಂಧ್ರಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದಂತೆ ಕಂಡುಬಂತು.
ಮರಳಿ ದುಡಿಮೆಯ ಹಳಿಗೆ
ದಿನದ ದುಡಿಮೆ ನಂಬಿಕೊಂಡಿರುವ ಲಕ್ಷಾಂತರ ಮಂದಿಗೆ ಲಾಕ್‌ಡೌನ್ ಸಡಿಲಿಕೆ ಮೊದಲ ದಿನವೇ ವರವಾಗಿ ಪರಿಣಮಿಸಿತು. ಸಗಟು ವ್ಯಾಪಾರಿ ಮಳಿಗೆಗಳು, ದಿನಸಿ ಅಂಗಡಿ, ಎಲೆಕ್ಟ್ರಾನಿಕ್ ಮಳಿಗೆಗಳಲ್ಲಿ ಸಾಮಗ್ರಿ ಸಾಗಿಸುವ ಕೆಲಸ ಗಿಟ್ಟಿಸಿಕೊಂಡ ದಿನಗೂಲಿ ಕಾರ್ಮಿಕರ ಮೊಗದಲ್ಲಿ ಮಂದಹಾಸ ಕಂಡಿತು.
ತಳ್ಳುಗಾಡಿಗಳಲ್ಲಿ ಸಣ್ಣಪುಟ್ಟ ವಸ್ತು, ತರಕಾರಿ, ಹಣ್ಣು ಮಾರುವವರು, ಐಸ್‌ಕ್ರೀಮ್ ವ್ಯಾಪಾರಿಗಳು, ಮನೆಗೆ ಲಸದವರು, ಧೋಬಿಗಳು ದುಡಿಮೆಯ ಹಳಿಗೆ ಮರಳಿದರು. ಸಾರಿಗೆ ಸೌಲಭ್ಯ ಇಲ್ಲದಿದ್ದರೂ ಮನೆಯಿಂದ ನಡೆದು ಬಂದ ಕಾರ್ಮಿಕರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದುದು ಕಂಡುಬಂತು.
ಕಾಂಗ್ರೆಸ್ V/S ಬಿಜೆಪಿ
ವಲಸೆ ಕಾರ್ಮಿಕರಿಗಾಗಿ ಶುರು ಮಾಡಲಾಗಿರುವ ಶ್ರಮಿಕ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಟಿಕೆಟ್‌ಗೆ ಶುಲ್ಕ ಪಡೆದುಕೊಳ್ಳಲಾಗುತ್ತಿದೆ ಎಂಬ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ‘ಟಿಕೆಟ್ ಹಣ ಕೊಡಲು ಅಶಕ್ತರಾಗಿರುವ ಕೂಲಿಯಾಳುಗಳ ಟಿಕೆಟ್ ದರವನ್ನು ಅವರು ಯಾವ ರಾಜ್ಯಗಳಿಗೆ ಪಯಣಿಸುತ್ತಾರೋ ಆ ರಾಜ್ಯಗಳಲ್ಲಿರುವ ಕಾಂಗ್ರೆಸ್ ಘಟಕ ಭರಿಸುತ್ತದೆ’ ಎಂದು ಘೋಷಿಸಿದ್ದಾರೆ. ಅದಕ್ಕೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಸಂಭಿತ್ ಪಾತ್ರಾ, ‘ಕಾರ್ಮಿಕರನ್ನು ಉಚಿತವಾಗಿಯೇ ಅವರ ಊರುಗಳಿಗೆ ಕರೆದೊಯ್ಯಲಾಗುತ್ತಿದೆ. ಕಾಂಗ್ರೆಸ್ ಇದನ್ನು ವೃಥಾ ವಿವಾದವಾಗಿ ಪರಿವರ್ತಿಸುತ್ತಿದೆ’ ಎಂದಿದ್ದಾರೆ.
ಕೇಂದ್ರದ ಸ್ಪಷ್ಟನೆ: ಶುಲ್ಕ ವಿವಾದದ ಬಗ್ಗೆ ಸ್ಪಷ್ಟನೆ ನೀಡಿರುವ ರೈಲ್ವೆ ಸಚಿವಾಲಯ ಮತ್ತು ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಖಾತೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಕೇಂದ್ರ ಸರ್ಕಾರ ಶೇ.85, ಆಯಾ ರಾಜ್ಯ ಸರ್ಕಾರಗಳು ಶೇ.15ರಷ್ಟು ವೆಚ್ಚ ಭರಿಸುತ್ತಿವೆ. ಅವರಿಗೆ ಊಟ, ನೀರಿನ ಬಾಟಲಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಬಹುತೇಕ ದೇಶಗಳಲ್ಲಿ ಲಾಕ್ ಡೌನ್ ಸಡಿಲಿಕೆ
ಜಗತ್ತಿನ ಅನೇಕ ದೇಶಗಳು ದೀರ್ಘಾವಧಿಯ ಲಾಕ್ ಡೌನ್ ಸಡಿಲಿಕೆ ಮಾಡಿವೆ. ಕಳವಳಕಾರಿ ಅಂಶವೆಂದರೆ ಎಲ್ಲಾ ದೇಶಗಳಲ್ಲೂ ಸೋಂಕಿತರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ.
ಲಾಕ್‌ಡೌನ್ ವಿಸ್ತರಿಸುತ್ತಾ ಹೋದರೆ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆ ಎಂಬ ಭಯದಿಂದ ಬಹುತೇಕ ದೇಶಗಳು ನಿರ್ಬಂಧ ಸಡಿಲಿಸಿ, ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಿವೆ. ಭಾರೀ ಸಾವು ನೋವು ಕಂಡ ಇಟಲಿಯಲ್ಲೂ ಪಾರ್ಕುಗಳು ಹಾಗೂ ಉದ್ಯಾನಗಳನ್ನು ಸೋಮವಾರ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.
ಸ್ಪೇನ್ ನಲ್ಲಿ ಸಾಮಾಜಿಕ ಅಂತರ ನಿಯಮ ಜಾರಿಯಲ್ಲಿರುವಂತೆಯೇ, ಜನರು ಮನೆ ಗಳಿಂದ ಹೊರಬಂದಿದ್ದಾರೆ.
ಅಮೆರಿಕದಲ್ಲೂ ನ್ಯೂಜೆರ್ಸಿ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ಆರ್ಥಿಕ ಚಟುವಟಿಕೆಗಳು ಪುನಾರಂಭಗೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ..ಮೀನುಗಾರಿಕಾ ದೋಣಿಯಲ್ಲಿದ್ದ 6 ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.