ಅಕಾಲ ಮಳೆ: ಸಾಂಕ್ರಾಮಿಕ ರೋಗ ಭೀತಿ
ಕೋವಿಡ್ ನಿಯಂತ್ರಣದಲ್ಲಿ ವೈದ್ಯಕೀಯ ಸಿಬ್ಬಂದಿ; ಇತರ ಸಾಂಕ್ರಾಮಿಕ ರೋಗಗಳ ಜಾಗೃತಿಗೆ ಹಿಂದೇಟು
Team Udayavani, May 5, 2020, 12:45 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದಲ್ಲಿ ನಿಗದಿಗಿಂತ ತುಸು ಮುಂಚಿತವಾಗಿಯೇ ಪೂರ್ವ ಮುಂಗಾರು ಮಳೆ ಶುರುವಾಗಿದೆ. ಈ ಅನಿರೀಕ್ಷಿತ ಮಳೆಯ ಬೆನ್ನಲ್ಲೇ ಡೆಂಘಿ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಕಾಡುತ್ತಿದ್ದು, ಕೋವಿಡ್ ವೈರಸ್ ನಿಯಂತ್ರಣದಲ್ಲಿ ನಿರತರಾಗಿರುವ ವೈದ್ಯಕೀಯ ಸಿಬ್ಬಂದಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಕಳೆದ ವರ್ಷ ಆಗಸ್ಟ್ ವೇಳೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಡೆಂಘಿ ಪ್ರಕರಣಗಳು ದೃಢಪಟ್ಟಿದ್ದವು. ಜನವರಿಯಿಂದ ಏಪ್ರಿಲ್‌ವರೆಗೆ ಒಟ್ಟು 320 ಡೆಂಘಿ ಪ್ರಕರಣಗಳು ದಾಖಲಾಗಿವೆ. ಉಳಿದ ವೇಳೆ ಈ ರೋಗಗಳಿಗೆ ಕಡಿವಾಣ ಹಾಕುವುದಕ್ಕೆ ಹೆಚ್ಚು ಶ್ರಮಿಸುತ್ತಿದ್ದ ಪಾಲಿಕೆ ಈಗ ಕೋವಿಡ್ ವಿರುದ್ಧ ಹೋರಾಟದಲ್ಲಿ ತೊಡಗಿದೆ.
ಈ ಮಧ್ಯೆ ಆಶಾ ಕಾರ್ಯಕರ್ತೆಯರು ಹಾಗೂಪಾಲಿಕೆ ಸಿಬ್ಬಂದಿ ಕೋವಿಡ್ ತಡೆ, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರು, ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯಲ್ಲಿ ಇರುವವರ ಆರೋಗ್ಯ ತಪಾಸಣೆ ಮತ್ತು ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಕಾರ್ಯಗಳ ನಡುವೆ ಉಳಿದ ಕಾಯಿಲೆಗಳಿಗೆ ಪತ್ರಿ ವರ್ಷದಂತೆ ಮನೆ-ಮನೆ ಸಮೀಕ್ಷೆ ಹಾಗೂ ಜಾಗೃತಿ ತ್ರಾಸದಾಯಕವಾಗಲಿದೆ.
ಆರೋಗ್ಯ ಸಿಬ್ಬಂದಿ ಸಾಮರ್ಥ್ಯ: ಬಿಬಿಎಂಪಿ ವ್ಯಾಪ್ತಿಯಲ್ಲಿ 600 ಜನ ಆಶಾ ಕಾರ್ಯಕರ್ತೆಯರು, 83 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 48 ಜಿಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಶುಶ್ರೂಷಕರು ಸೇರಿದಂತೆ 5-6 ಮಂದಿ ಸಿಬ್ಬಂದಿ ಇರುತ್ತಾರೆ. ಸದ್ಯ ಕೋವಿಡ್ ತುರ್ತು ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ನಗರದ ಕೆಲವು ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳಲು ಪಾಲಿಕೆ ಚಿಂತಿಸಿದೆ. ಅಲ್ಲದೆ, ಸೋಂಕು ತಡೆಯುವುದಕ್ಕೆ ಪೂರಕವಾಗಿ ಸಿಬ್ಬಂದಿ ನೇಮಿಸಿಕೊಳ್ಳುತ್ತಿದೆ. ಇದೆಲ್ಲದರ ಹೊರತಾಗಿಯೂ ಇತರೆ ರೋಗಗಳ ಬಗ್ಗೆ ಜಾಗೃತಿ ಕಾರ್ಯ ಕಡಿಮೆಯಿದೆ.
ರೋಗ ಲಕ್ಷಣಗಳದ್ದೂ ತಲೆನೋವು!: ಕೆಲವು ಸಾಂಕ್ರಾಮಿಕ ರೋಗಗಳು ಹಾಗೂ ಕೋವಿಡ್ ಸೋಂಕಿನ ಪ್ರಾಥಮಿಕ ಲಕ್ಷಣಗಳು ಸಹ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿವೆ. ಹೀಗಾಗಿ, ಇದು ಸಹ ಸವಾಲಾಗಿ ಮಾರ್ಪಟ್ಟಿದೆ. ಕೆಮ್ಮು, ನಗಡಿ, ಶೀತ ಹಾಗೂ ಜ್ವರದ ಲಕ್ಷಣಗಳು ಕಾಣಿಸಿಕೊಂಡರೆ ಇದು ಯಾವ ರೋಗ ಎಂದು ಗೊಂದಲ ಸೃಷ್ಟಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಬಿಬಿಎಂಪಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೈ-ಕೈ ನೋವು, ಜ್ವರ ಹಾಗೂ ಸುಸ್ತು ಸಂಬಂಧಿಸಿದ ಸಮಸ್ಯೆಗಳಿಗೆ ಮಾತ್ರ ಮಾತ್ರೆ ನೀಡಲಾಗುತ್ತಿದೆ. ನಗರದ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ನರ್ಸ್‌ಗಳು ಕಂಟೈನ್ಮೆಂಟ್ ಝೋನ್‌ಗಳಲ್ಲಿ ತಪಾಸಣೆಗೆ ಹೋಗುವ ಕಾರಣ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಎದುರಾಗಿದೆ. ಹೀಗಾಗಿ ಕೋವಿಡ್ ಸೋಂಕಿನ ಆತಂಕ ಈಗ ಉಳಿದ ರೋಗಗಳ ಮೇಲೂ ಪರೋಕ್ಷವಾಗಿ ಪ್ರಭಾವ ಬೀರುತ್ತಿದೆ.
ಮಾಹಿತಿ ನೀಡದ ವೈದ್ಯರು
ನಗರದಲ್ಲಿ ಕೋವಿಡ್ ಸೋಂಕು ಕಡಿವಾಣ ಸದ್ಯಕ್ಕೆ ಇರುವ ಬಹುದೊಡ್ಡ ಸವಾಲು ಇದಕ್ಕೆ ಕಡಿವಾಣ ಹಾಕುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ನಗರದಲ್ಲಿ ಕಾಲರಾ, ಎಚ್1ಎನ್1, ಚಿಕೂನ್‌ಗುನ್ಯಾ, ಹಾಗೂ ಟಿಬಿ ರೋಗ ಸೇರಿದಂತೆ ಬೇರೆ ಕಾಯಿಲೆ ಪ್ರಕರಣಗಳ ಬಗ್ಗೆ ನಿಖರ ಮಾಹಿತಿ ಸದ್ಯಕ್ಕೆ ನೀಡುವುದು ಬೇಡ ಎಂದು ಹಿರಿಯ ಅಧಿಕಾರಿಗಳು ಮೌಖಿಕ
ಸೂಚನೆ ನೀಡಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ರೋಗ ಹೆಚ್ಚುವ ಸಾಧ್ಯತೆ
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿದ್ದು, ನಗರದಲ್ಲೂ ಚದುರಿದಂತೆ, ಕೆಲವೆಡೆ ಧಾರಾಕಾರ ಮಳೆಯಾಗಲಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವರಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ. ಈ ಸಂಬಂಧ ಉದಯವಾಣಿಯೊಂದಿಗೆ ಮಾತನಾಡಿದ ಅವರು, ಮಧ್ಯ ಮಹಾರಾಷ್ಟ್ರದಿಂದ ತಮಿಳುನಾಡಿನ ಮಧ್ಯೆ ವಾಯುಭಾರ ಕುಸಿತ
ಉಂಟಾಗಲಿದೆ. ಇದರಿಂದ ನಗರದ ವಾತಾವರಣವೂ ಬದಲಾಗಲಿದೆ. ಅಲ್ಲಲ್ಲಿ ಚದುರಿದಂತೆ ಹಾಗೂ ಕೆಲವೆಡೆ ಧಾರಾಕಾರ, ಆಲಿಕಲ್ಲು ಮಳೆಯಾಗುವ ಸಾಧ್ಯತೆಯೂ ಇದೆ. ಆದರೆ, ಒಟ್ಟಾರೆ ಮಳೆ ಪ್ರಮಾಣ ಹೆಚ್ಚು ಇರುವುದಿಲ್ಲ. ಮುಂಗಾರು ಪೂರ್ವ ಮಳೆ ಮೇ. ಮತ್ತು ಜೂನ್‌ನಲ್ಲಿ ಆಗುತ್ತದೆ. ಈ ಬಾರಿ ಮುಂಗಾರು ಮಳೆ ವ್ಯಾಪಕವಾಗಿ ಆಗುವುದಿಲ್ಲ ಎಂದು ಹೇಳಿದರು. ಈ ರೀತಿ
ಚದುರಿದಂತೆ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಸಾಮಾನ್ಯವಾಗಿ ಜೋರು ಮಳೆ ಬಂದರೆ ನೀರು ನಿಲ್ಲುವ ಸಾಧ್ಯತೆ ಕಡಿಮೆ. ಆಗ್ಗಾಗೆ ಮಳೆ ಬಂದರೆ ನೀರು ಅಲ್ಲಲ್ಲಿ ನಿಲ್ಲುವ ಸಾಧ್ಯತೆ ಇರುತ್ತದೆ. ನೀರು ಸಂಗ್ರಹವಾಗಿ ಸೊಳ್ಳೆಗಳು ಉತ್ಪತ್ತಿಯಾದರೆ ರೋಗದ ಪ್ರಮಾಣ ಉಲ್ಬಣಿಸುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವೈದ್ಯರು.
ಡೆಂಘಿ, ಎಚ್1ಎನ್1 ಸೇರಿದಂತೆ ಎಲ್ಲ ಸಾಂಕ್ರಾಮಿಕ ರೋಗಗಳ ಬಗ್ಗೆಯೂ ನಿಗಾ ವಹಿಸಿದ್ದೇವೆ. ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಫಾಗಿಂಗ್ ಕಾರ್ಯಾಚರಣೆ ನಡೆದಿದೆ. ಈಗಾಗಲೇ ಕಂಟೈನ್ಮೆಂಟ್ ಝೋನ್ ಸೇರಿದಂತೆ ವಿವಿಧೆಡೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡುತ್ತಿದ್ದು, ರೋಗ ನಿಯಂತ್ರಣಕ್ಕೆ ಬರಲಿದೆ.
– ಡಾ.ವಿಜಯೇಂದ್ರ, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ
ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿದ್ದು, ನಗರದಲ್ಲೂ ಮಳೆಯಾಗಲಿದೆ. ಅಲ್ಲಲ್ಲಿ ಚದುರಿದಂತೆ ಹಾಗೂ ಕೆಲವೆಡೆ ಧಾರಾಕಾರ, ಆಲಿಕಲ್ಲು ಮಳೆಯಾಗಲಿದೆ. ಆದರೆ, ಒಟ್ಟಾರೆ ಮಳೆ ಪ್ರಮಾಣ ಹೆಚ್ಚು ಇರುವುದಿಲ್ಲ.
– ಶ್ರೀನಿವಾಸ್‌ರೆಡ್ಡಿ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ನಿರ್ದೇಶಕ
●ಹಿತೇಶ್ ವೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.