ಚಾಮರಾಜನಗರ ವ್ಯಾಪ್ತಿಯ ಅರಣ್ಯದಲ್ಲಿ ಮೊದಲ ಬಾರಿಗೆ ಕಂಡು ಬಂದ ತೋಳ
Team Udayavani, May 10, 2020, 11:20 AM IST
ಚಾಮರಾಜನಗರ: ಜಿಲ್ಲಾ ವ್ಯಾಪ್ತಿಯ ಅರಣ್ಯದಲ್ಲೇ ಇದೇ ಮೊದಲ ಬಾರಿಗೆ ತೋಳವೊಂದು ಕಂಡು ಬಂದಿದ್ದು, ಕಾವೇರಿ ವನ್ಯ ಜೀವಿ ಧಾಮದಲ್ಲಿ ನೇಚರ್ ಕನ್ಸರ್ವೇಶನ್ ಫೌಂಡೇಶನ್‌ನ ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ತಂಡದವರು ಅಳವಡಿಸಿದ್ದ ಕ್ಯಾಮರಾ ಟ್ರ್ಯಾಪ್‌ನಲ್ಲಿ ತೋಳ ಪತ್ತೆಯಾಗಿದೆ.
ಚಿರತೆಗಳ ಕುರಿತು ಅಧ್ಯಯನಕ್ಕಾಗಿ ಸಂಜಯ್ ಗುಬ್ಬಿ ತಂಡ ಕಾವೇರಿ ವನ್ಯಜೀವಿಧಾಮದ ಕೊತ್ತನೂರು ವಲಯದಲ್ಲಿ ಈ ತೋಳ ಕಂಡುಬಂದಿದೆ.
ಒಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುವ ತೋಳಗಳು, ಕರ್ನಾಟಕದಲ್ಲಿ ಹಾವೇರಿ, ಕೊಪ್ಪಳ, ತುಮಕೂರು, ರಾಯಚೂರು, ಬಳ್ಳಾರಿ ಮತ್ತಿತರ ಜಿಲ್ಲೆಗಳಲ್ಲಿ ಕಂಡು ಬರುತ್ತವೆ. ಇವು ಹೆಚ್ಚಾಗಿ ಒಣ ಹುಲ್ಲುಗಾವಲು, ಕುರುಚಲು ಕಾಡುಗಳಲ್ಲಿ ಮತ್ತು ಬಹಳ ಅಪರೂಪವಾಗಿ ಎಲೆ ಉದುರುವ ಕಾಡುಗಳಲ್ಲಿ ಕಂಡು ಬರುತ್ತವೆ. ಇವುಗಳ ವ್ಯಾಪ್ತಿ ಹಲವಾರು ರಾಜ್ಯಗಳಲ್ಲಿದ್ದರೂ ಆವಾಸಸ್ಥಾನದ ನಾಶ ಮತ್ತು ಪ್ರತಿಕಾರದ ವಧೆಗೆ ಬಲಿಯಾಗುತ್ತಿವೆ. ಭಾರತದಲ್ಲಿ ಇವುಗಳ ಸಂಖ್ಯೆ ಹುಲಿಗಳಿಗಿಂತಲೂ ಕಡಿಮೆಯಿರಬಹುದು. ಇವುಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಶೆಡ್ಯೂಲ್- 1 ರಲ್ಲಿ ಸಂರಕ್ಷಿತವಾಗಿವೆ.
ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಕಾವೇರಿ ಮತ್ತು ಮಲೈ ಮಹದೇಶ್ವರ ವನ್ಯಜೀವಿಧಾಮಗಳು, ಬಿಳಿಗಿರಿರಂಗನಬೆಟ್ಟ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹಿಂದೆ ಕೈಗೊಂಡ ಯಾವುದೇ ಅಧ್ಯಯನಗಳಲ್ಲೂ ತೋಳಗಳು ದಾಖಲಾಗಿರಲಿಲ್ಲ. ಈ ದಾಖಲೆಯೊಡನೆ, ದಕ್ಷಿಣ ಭಾರತದಲ್ಲಿ ನಾಯಿ ಜಾತಿಗೆ ಸೇರಿರುವ ಎಲ್ಲಾ ನಾಲ್ಕು ಪ್ರಭೇದಗಳ (ಸೀಳು ನಾಯಿ, ತೋಳ, ಗುಳ್ಳೆ ನರಿ, ಮತ್ತು ಕಪ್ಪಲು ನರಿ) ವನ್ಯಜೀವಿಗಳು ಈಗ ಚಾಮರಾಜನಗರ ಜಿಲ್ಲೆಯಲ್ಲಿ ದಾಖಲಾದಂತಾಗಿದೆ.
ಸಂಜಯ್ ಗುಬ್ಬಿಯವರು ಚಿರತೆಗಳ ಕುರಿತು ನಡೆಸುತ್ತಿರುವ ಅಧ್ಯಯನದಿಂದ ಇನ್ನಿತರ ಹಲವಾರು ವನ್ಯಜೀವಿಗಳ ಬಗ್ಗೆ ಮಹತ್ವವಾದ ಮಾಹಿತಿಗಳು ದೊರಕುತ್ತಿವೆ. ಈ ಹಿಂದೆ, 2014ರಲ್ಲಿ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ತರಕರಡಿಯನ್ನು ಕಾವೇರಿ ವನ್ಯಜೀವಿಧಾಮದಲ್ಲಿ ದಾಖಲಿಸಿದ್ದಾರೆ.
2015ರಲ್ಲಿ ಹುಲ್ಲೆಕರುಗಳ ಇರುವಿಕೆಯನ್ನು ತುಮಕೂರು ಜಿಲ್ಲೆಯಲ್ಲಿ ದಾಖಲಿಸಲಾಯಿತು ಮತ್ತು ಆ ಪ್ರದೇಶವನ್ನು ಸರ್ಕಾರವು ಬುಕ್ಕಾಪಟ್ಟಣ ಚಿಂಕಾರಾ ವನ್ಯಜೀವಿ ಧಾಮವೆಂದು ಘೋಷಿಸಿತು. ಈ ದಾಖಲೆ, ದಕ್ಷಿಣ ಭಾರತದಲ್ಲಿ ಹುಲ್ಲೆಕರಗಳು ಸಿಗುವ ಮಿತಿಯನ್ನು ವಿಸ್ತರಿಸಿತು. ಕರ್ನಾಟಕದಲ್ಲಿ ವಿರಾಜಪೇಟೆ ತಾಲ್ಲೂಕಿನಲ್ಲಿ ಬಿಟ್ಟರೆ ಇನ್ನೆಲ್ಲೂ ದಾಖಲಾಗದಿದ್ದ ಕಂದು ಮುಂಗಸಿಯನ್ನು 2018ರಲ್ಲಿ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದಾಖಲಿಸಿ, ಇದರ ಈಶಾನ್ಯ ಮಿತಿ ವಿಸ್ತರಿಸಿದ್ದನ್ನೂ ಈ ಅಧ್ಯಯನದ ಮೂಲಕ ದಾಖಲಿಸಲಾಗಿದೆ.
ಅಧ್ಯಯನ ತಂಡದಲ್ಲಿ ಸಂದೇಶ್ ಅಪ್ಪು ನಾಯ್ಕ್, ಗಿರೀಶ್, ಜ್ಞಾನೇಂದ್ರ, ಪೂರ್ಣೇಶ ಮತ್ತಿತರರು ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.