ನಾಳೆಯಿಂದ ಹುಬ್ಬಳ್ಳಿ ಲಾಕ್‌ಡೌನ್ ಸಡಿಲಿಕೆ
ಸೀಲ್‌ಡೌನ್ ಪ್ರದೇಶ ಹೊರತುಪಡಿಸಿ ಆದೇಶ ಹೊರಡಿಸಲು ಡಿಸಿಗೆ ಸೂಚನೆ
Team Udayavani, May 10, 2020, 10:15 AM IST
ಧಾರವಾಡ: ಮೇ 11ರಿಂದ ಹುಬ್ಬಳ್ಳಿಯ ಸೀಲ್‌ಡೌನ್ ಪ್ರದೇಶ ಹೊರತುಪಡಿಸಿ ಉಳಿದೆಡೆ ವಾಣಿಜ್ಯ, ವಹಿವಾಟುಗಳನ್ನು ನಡೆಸಲು ಅವಕಾಶ ಕಲ್ಪಿಸಲು ಆದೇಶ ಹೊರಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕೋವಿಡ್ ನಿಯಂತ್ರಣ ಮತ್ತು ಲಾಕ್‌ಡೌನ್ ಸಡಿಲಿಕೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್ ನಿಯಂತ್ರಣಕ್ಕಾಗಿ ಜಾರಿಯಾಗಿರುವ ಲಾಕ್‌ಡೌನ್‌ನಿಂದ ಹುಬ್ಬಳ್ಳಿ ಶಹರ ಹೊರತುಪಡಿಸಿ ಜಿಲ್ಲಾದ್ಯಂತ ಈಗಾಗಲೇ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಿವೆ. ಅಂಗಡಿ ಮತ್ತು ಮುಂಗಟ್ಟುಗಳ ಕಾಯ್ದೆ ಪ್ರಕಾರ ಸ್ಥಾಪನೆಯಾಗಿರುವ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆಯ ವಾಣಿಜ್ಯ, ವಹಿವಾಟುಗಳು ಈಗಾಗಲೇ ಜಿಲ್ಲೆಯ ಧಾರವಾಡ, ಕಲಘಟಗಿ, ಅಳ್ನಾವರ, ಕುಂದಗೋಳ, ಅಣ್ಣಿಗೇರಿ ಹಾಗೂ ನವಲಗುಂದ ತಾಲ್ಲೂಕುಗಳಲ್ಲಿ ಪುನರಾರಂಭವಾಗಿವೆ.
ಮುಂಬರುವ ಮೇ 11ರಿಂದ ಹುಬ್ಬಳ್ಳಿಯ ಸೀಲ್‌ಡೌನ್ ಪ್ರದೇಶ ಹೊರತುಪಡಿಸಿ ಉಳಿದ ಎಲ್ಲಾ ಕಡೆಗಳಲ್ಲೂ ಕಿರಾಣಿ ಅಂಗಡಿ, ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇರಿದಂತೆ ವಿವಿಧ ವ್ಯಾಪಾರ ಚಟುವಟಿಕೆಗಳ ಪ್ರಾರಂಭಕ್ಕೆ ವಾರದ ಎಲ್ಲಾ ದಿನಗಳಲ್ಲಿಯೂ ಅವಕಾಶ ಕಲ್ಪಿಸಿ ಸಮರ್ಪಕ ಆದೇಶ ಹೊರಡಿಸಬೇಕು ಎಂದು ಜಿಲ್ಲಾಧಿ ಕಾರಿಗಳಿಗೆ ಸೂಚಿಸಿದರು.
ಲಾಕ್‌ಡೌನ್ ಸಡಿಲಿಕೆಯ ಈ ಅವಕಾಶವನ್ನು ಜಿಲ್ಲೆಯ ಜನತೆ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು. ದೇಶದ ಹಿತಕ್ಕಾಗಿ ಪ್ರಧಾನಮಂತ್ರಿಗಳು 41 ದಿನಗಳ ಲಾಕ್‌ಡೌನ್ ಜಾರಿಗೊಳಿಸಿದ್ದಾರೆ. ಕೋವಿಡ್ ನಿಯಂತ್ರಣ ಜೊತೆಗೆ ದೇಶದ ಭವಿಷ್ಯ, ಆರ್ಥಿಕ ಸಮತೋಲನ ಕಾಪಾಡಿಕೊಳ್ಳುವ ಹೊಣೆಗಾರಿಕೆಯೂ ಇರುವುದರಿಂದ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಲಾಕ್‌ಡೌನ್‌ನಿಂದ ಕೆಲ ಆರ್ಥಿಕ ಚಟುವಟಿಕೆಗಳಿಗೆ ವಿನಾಯ್ತಿನೀಡಲಾಗುತ್ತಿದೆ. ಈ ವಿನಾಯ್ತಿಯನ್ನು ಜನತೆ ಮನಬಂದಂತೆ ಬಳಸಬಾರದು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಅನಗತ್ಯ ತಿರುಗಾಟಕ್ಕೆ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು. ಮಾಸ್ಕ್ ಧರಿಸದೇ ಇದ್ದರೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ ವಿಧಿಸುವ ಕಾರ್ಯ ಚುರುಕುಗೊಳಿಸಬೇಕು. ಜನತೆ ಸಹಕರಿಸಿದರೆ ಕೋವಿಡ್ ನಿಯಂತ್ರಣ ಸುಲಭ ಸಾಧ್ಯವಾಗುತ್ತದೆ ಎಂದರು.
ಖಾಸಗಿ ಆಸ್ಪತ್ರೆಗಳು ಸಮರ್ಪಕವಾಗಿ ಸೇವೆ ನೀಡದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಎಸ್‌ಡಿಎಂ ಸೇವೆ ಪ್ರಾರಂಭಿಸಿದೆ. ಈ ಕುರಿತು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರೊಂದಿಗೆ ಮಾತನಾಡಿದಾಗ ಅವರು ಸರ್ಕಾರದೊಂದಿಗೆ ಎಲ್ಲಾ ಸಹಕಾರ ನೀಡಲು ಎಸ್‌ಡಿಎಂ ಆಸ್ಪತ್ರೆಗೆ ನಿರ್ದೇಶನ ನೀಡಿದ್ದಾರೆ ಎಂದರು.
ಹೊರ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್: ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಹೊರರಾಜ್ಯಗಳಿಂದ ಬರುವ ಜನರಿಗೆ ಈಗ ಅವಕಾಶ ದೊರೆತಿದೆ. ಎಲ್ಲರನ್ನೂ ಕೃಷಿ ವಿವಿ ಆವರಣದಲ್ಲಿ ತಪಾಸಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ತಮಿಳುನಾಡು ಹಾಗೂ ದೆಹಲಿ ರಾಜ್ಯಗಳಿಂದ ಬರುವ ಎಲ್ಲರನ್ನೂ ಸರ್ಕಾರಿ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದರು.
ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರಠಾಣಿ ಮಾತನಾಡಿ, ಸದ್ಯ ಕಿಮ್ಸ್ ಹೊರರೋಗಿ ವಿಭಾಗದಲ್ಲಿ 800, ಒಳರೋಗಿ 500 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ತುರ್ತು ಚಿಕಿತ್ಸಾ ಘಟಕದಲ್ಲಿಯೂ ರೋಗಿಗಳಿದ್ದಾರೆ. ಕೋವಿಡ್ ಪ್ರಯೋಗಾಲಯದಲ್ಲಿ ಪ್ರತಿನಿತ್ಯ ಸುಮಾರು 250ಕ್ಕೂ ಹೆಚ್ಚು ವರದಿಗಳು ಸಿದ್ಧವಾಗುತ್ತಿವೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರಾಯೋಗಿಕ ಪ್ಲಾಸ್ಮಾ ಥೆರಪಿ ಕೈಗೊಳ್ಳಲು ಐಸಿಎಂಆರ್‌ನಿಂದ ಕಿಮ್ಸ್‌ಗೆ ಅನುಮೋದನೆ ದೊರೆತಿದೆ ಎಂದರು.
ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಕುಸುಮಾವತಿ ಶಿವಳ್ಳಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ, ಶ್ರೀನಿವಾಸ ಮಾನೆ, ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್, ಎಸ್ಪಿ ವರ್ತಿಕಾ ಕಟಿಯಾರ್, ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ಯಶವಂತ ಮದೀನಕರ್, ಕಿಮ್ಸ್‌ನ ಡಾ| ಲಕ್ಷ್ಮೀಕಾಂತ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ ಇದ್ದರು.
ಕೆಲ ಕಠಿಣ ನಿರ್ಬಂಧ ಅನಿವಾರ್ಯ : ದೇಶದಲ್ಲೆಡೆ ಇರುವಂತೆ ಇಲ್ಲಿಯೂ ಮಾಲ್, ಮಾರುಕಟ್ಟೆ ಸಂಕೀರ್ಣಗಳು, ಬಾರ್, ರೆಸ್ಟೋರೆಂಟ್, ಜಿಮ್, ಧಾರ್ಮಿಕ ಚಟುವಟಿಕೆಗಳು, ಸಭೆ, ಸಮಾರಂಭಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಸೀಲ್‌ಡೌನ್ ಪ್ರದೇಶ ಹೊರತುಪಡಿಸಿ ಉಳಿದೆಡೆ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನೂ ಕೈಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ಶೇ.25 ರಷ್ಟು ಕೈಗಾರಿಕಾ ಚಟುವಟಿಕೆಗಳು ಪುನರಾರಂಭವಾಗಿವೆ. ಸಂಜೆ 7:00ಗಂಟೆ ನಂತರ ಬೆಳಗಿನ 7:00ರ ವರೆಗೆ ಲಾಕ್‌ಡೌನ್ ನಿರ್ಬಂಧ ಜಾರಿಯಾಗುವುದರಿಂದ ಈ ಅವ ಧಿಯಲ್ಲಿ ಕೈಗಾರಿಕೆಗಳು ರಾತ್ರಿ ಪಾಳಿಯ ಕಾರ್ಮಿಕರ ವಿಶ್ರಾಂತಿಗೆ ತಮ್ಮ ಆವರಣದಲ್ಲಿಯೇ ಅವಕಾಶ ಕಲ್ಪಿಸಲಾಗುವುದು. ವಿವಿಧ ಬಡಾವಣೆಗಳಿಗೆ ತರಕಾರಿ ಪೂರೈಕೆ ಮುಂದುವರಿಯಲಿ. ಇದರಿಂದ ಜನಸಂದಣಿ ನಿಯಂತ್ರಣವಾಗುತ್ತದೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.