ಪ್ರಕರಣ ಹೆಚ್ಚಿದ್ದರೂ ಜೀವಹಾನಿ ಕಡಿಮೆ
Team Udayavani, May 12, 2020, 12:45 PM IST
ಬೆಳಗಾವಿ: ನೆರೆಯ ರಾಜ್ಯದಿಂದ ಜಿಲ್ಲೆಗೆ ಆಗಮಿಸುವ ಜನರ ತಪಾಸಣೆ ನಡೆಸಿದ ಬಳಿಕ ಅವರನ್ನು ಸಂಬಂಧಿಸಿದ ಜಿಲ್ಲೆಗಳಲ್ಲಿ ಕ್ವಾರಂಟೈನ್ ಮಾಡುವ ಅಗತ್ಯವಿದೆ ಎಂದು ಈಗಾಗಲೇ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ. ಕಾರಣ ಇನ್ನು ಮುಂದೆ ಬೆಳಗಾವಿಗೆ ಆಗಮಿಸುವ ಇತರೆ ಜಿಲ್ಲೆಯ ಜನರನ್ನು ಆಯಾ ಜಿಲ್ಲೆಯ ನೋಡಲ್ ಅಧಿಕಾರಿಗಳ ಮೂಲಕ ಕಳಿಸಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿಮಂದಿರದ ಆವರಣದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಬೇರೆ ರಾಜ್ಯಗಳಲ್ಲಿ ಮೃತಪಟ್ಟಿರುವವರನ್ನು ರಾಜ್ಯಕ್ಕೆ ಕರೆತರದೇ ಆಯಾ ರಾಜ್ಯಗಳಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ ಎಂದರು.
ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದರೂ ಸುದೈವದಿಂದ ಜೀವಹಾನಿ ಪ್ರಮಾಣ ಕಡಿಮೆಯಾಗಿದೆ. ಇದುವರೆಗೆ ವೆಂಟಿಲೇಟರ್ ಬಳಕೆ ಹಂತಕ್ಕೆ ಪರಿಸ್ಥಿತಿ ತಲುಪಿಲ್ಲ ಎಂದ ಅವರು, ಸೋಂಕಿತರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿ ನಕಾರಾತ್ಮಕ ವರದಿ ಬಂದ ಬಳಿಕ ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಿದ ಬಳಿಕ ಮನೆಗೆ ಕಳಿಸಬೇಕು ಎಂದರು.
ನಿರಂತರವಾಗಿ 45 ದಿನಗಳಿಗಿಂತ ಅಧಿಕ ಕಾಲ ಕಂಟೈನ್ಮೆಂಟ್ ಝೋನ್ ಆಗಿರುವ ಪ್ರದೇಶಗಳಲ್ಲಿ ಸ್ವಲ್ಪಮಟ್ಟಿಗೆ ವಿನಾಯಿತಿ ನೀಡುವುದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಕಳಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ ಜಗದೀಶ ಶೆಟ್ಟರ, ದಾನಿಗಳಿಂದ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿ ಕಂಟೈನ್ಮೆಂಟ್ ಝೋನ್ ನಲ್ಲಿ ವಿತರಿಸುವ ಬಗ್ಗೆಯೂ ಪರಿಶೀಲಿಸುವಂತೆ ಸೂಚಿಸಿದರು.
ಕೈಗಾರಿಕೆಗಳು ಮತ್ತು ಇತರೆ ವಾಣಿಜ್ಯ-ಆರ್ಥಿಕ ವಹಿವಾಟು ಆರಂಭಗೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಕೈಗಾರಿಕೆಗಳಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ನಿಗಾವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಕೋವಿಡ್-19 ಉಸ್ತುವಾರಿ ಅಧಿಕಾರಿ ರಾಜೇಂದ್ರ ಚೋಳನ್ ಮಾತನಾಡಿ ಕಳೆದ ಹತ್ತು ದಿನಗಳಲ್ಲಿ ಅತೀ ಹೆಚ್ಚು ಮಾದರಿ ಪರೀಕ್ಷೆ ಬೆಳಗಾವಿಯಲ್ಲಿ ನಡೆಸಲಾಗಿದ್ದು, ಇದುವರೆಗೆ ಸುಮಾರು7 ಸಾವಿರ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದು ಬೆಂಗಳೂರು ಹೊರತುಪಡಿಸಿದರೆ ಅತೀ ಹೆಚ್ಚಿನ ಸಂಖ್ಯೆಯಾಗಿದೆ ಎಂದರು.
ಹಿರೇಬಾಗೇವಾಡಿ, ಕುಡಚಿ ಪ್ರದೇಶದಲ್ಲಿ ಬಹುತೇಕರ ಮಾದರಿ ಸಂಗ್ರಹಿಸಲಾಗುತ್ತಿದೆ. ಸೋಂಕು ದೃಢಪಟ್ಟಿರುವ ಬಹುತೇಕ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು. ರಾಜ್ಯಸಭಾ ಸದಸ್ಯರಾದ ಡಾ. ಪ್ರಭಾಕರ್ ಕೋರೆ ಮಾತನಾಡಿ, ರಂಜಾನ್ ಹಿನ್ನೆಲೆಯಲ್ಲಿ ಸಮುದಾಯದ ಮುಖಂಡರು ಲಾಕ್ ಡೌನ್ ಇನ್ನೂ ಮುಂದುವರಿಸುವಂತೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು.
ಸಭೆಯಲ್ಲಿ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಅನಿಲ್ ಬೆನಕೆ, ಅಭಯ ಪಾಟೀಲ, ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಉಪಸ್ಥಿತರಿದ್ದರು.
22ರ ಬಳಿಕ ನಿಯಂತ್ರಣಕ್ಕೆ : ಸಭೆಯಲ್ಲಿ ಜಿಲ್ಲಾಧಿಕಾರಿ ಡಾ| ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ ಜಿಲ್ಲೆಯಲ್ಲಿ 250 ವಲಸೆ ಕಾರ್ಮಿಕರಿದ್ದು, ಅವರ ಕ್ವಾರಂಟೈನ್ ಗೆ ಆದ್ಯತೆ ನೀಡಲಾಗುವುದು. ಶೀಘ್ರ ಯಳ್ಳೂರ, ಪೀರನವಾಡಿ ಕಂಟೆ„ನ್ಮೆಂಟ್ ಝೋನ್ ಆದೇಶ ಡಿನೋಟಿಫೆ„ ಮಾಡಲಾಗುವುದು. ಮೇ 15 ರ ಬಳಿಕ ಬೆಳಗಾವಿ ನಗರದ ಕಂಟೈನ್ಮೆಂಟ್ ಝೋನ್ ಇರುವುದಿಲ್ಲ. ಜಿಲ್ಲೆಯಲ್ಲಿ ಹೋಟೆಲ್‌ನಲ್ಲಿ ಕ್ವಾರಂಟೈನ್ ಇದ್ದ 462 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಕುಡಚಿಯಲ್ಲಿ ಈಗಾಗಲೇ 1300 ಕ್ಕೂ ಅಧಿಕ ಜನರ ಗಂಟಲು ದ್ರವ ಪರೀಕ್ಷಿಸಲಾಗಿದೆ. ಯಾವುದೇ ಹೊಸ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗದಿದ್ದರೆ ಮೇ 22 ರ ಬಳಿಕ ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ವಿದ್ಯುತ್ ಬಿಲ್ ಹೊರೆಯಾಗದಿರಲಿ : ಈಗ ಎರಡು ತಿಂಗಳಿನ ವಿದ್ಯುತ್ ಬಿಲ್ ಒಮ್ಮೆಲೆ ನೀಡುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದ ಸಚಿವ ಶೆಟ್ಟರ, ಈ ಸಂಬಂಧ ಹೆಸ್ಕಾಂ ಹಿರಿಯ ಅಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿ ಸಾರ್ವಜನಿಕರಿಗೆ ಹೊರೆಯಾಗದಂತೆ ಕ್ರಮ ಕೈಗೊಳ್ಳಬೇಕು ಮತ್ತು ಕಂತುಗಳಲ್ಲಿ ಬಿಲ್ ಪಾವತಿಸಲು ಅನುಕೂಲ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ
Winter Session: ಇಂದಿನಿಂದ “ಉತ್ತರ’ ಅಧಿವೇಶನ; 3 ದಿನ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ
Belagavi: ಎರಡು ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ತಾಯಿ!; ಪ್ರಕರಣ ದಾಖಲು
Gruha Lakshmi Scheme ಹಣ ಕೂಡಿಟ್ಟು ಬೋರ್ ವೆಲ್ ಕೊರೆಸಿದ ಅತ್ತೆ-ಸೊಸೆ: ಸಚಿವೆ ಶ್ಲಾಘನೆ
Belagavi: ಹೋರಾಟ ಅಸಂವಿಧಾನಿಕ ಎಂದು ಸಮಾಜಕ್ಕೆ ಅವಮಾನ ಮಾಡಿದ ಸಿಎಂ: ಕೂಡಲಸಂಗಮ ಶ್ರೀ
MUST WATCH
ಹೊಸ ಸೇರ್ಪಡೆ
Tirumala:ಇನ್ಮುಂದೆ ಭಕ್ತರು ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು..!
Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ
Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ
Karnataka; ಸಿಸೇರಿಯನ್ ಹೆರಿಗೆ ತಡೆಯಲು ಹೊಸ ಕಾರ್ಯಕ್ರಮ ಘೋಷಿಸುತ್ತೇವೆ
Amazon,Flipkart ವಿರುದ್ಧ ತನಿಖೆ: ಸುಪ್ರೀಂನಿಂದ ಎಲ್ಲಾ ಪ್ರಕರಣಗಳು ಕರ್ನಾಟಕ ಹೈಕೋರ್ಟ್‌ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.