ಪಂಪ್‌ವೆಲ್ ಬಸ್ ನಿಲ್ದಾಣಕ್ಕೆ ಸಂಪುಟ ಅನುಮೋದನೆ
Team Udayavani, May 15, 2020, 9:05 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಮಂಗಳೂರಿನ ಪಂಪ್‌ವೆಲ್‌ನಲ್ಲಿ ಇಂಟಿಗ್ರೇಟೆಡ್ ಟ್ರಾನ್ಸ್ ಪೋರ್ಟ್ ಹಬ್ ನಿರ್ಮಾಣ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ದೊರಕಿದ್ದು, ಕೆಲವು ದಿನಗಳಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಸಂಪುಟದ ಅನುಮೋದನೆ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಪಾಲಿಕೆ ಮೇಯರ್ ದಿವಾಕರ ಪಾಂಡೇಶ್ವರ ಮೊದಲಾದವರು ಗುರುವಾರ ಪಂಪ್‌ವೆಲ್ ಬಸ್ ನಿಲ್ದಾಣದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ವಾಣಿಜ್ಯ ಕೇಂದ್ರ ಮಂಗಳೂರಿನಲ್ಲಿ ಬೆಳೆಯುತ್ತಿರುವ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಬದಲಿ ಬಸ್ ನಿಲ್ದಾಣದ ಆವಶ್ಯಕತೆಯಿದೆ ಎನ್ನುವುದು ಸಾರ್ವಜನಿಕರ ಬೇಡಿಕೆಯಾಗಿತ್ತು. ಪಂಪ್‌ವೆಲ್ ಬಳಿ ಮನಪಾ ಕಾದಿರಿಸಿದ ಸುಮಾರು 7.23 ಎಕರೆ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಪಿಪಿಪಿ ಮಾದರಿಯಲ್ಲಿ 445 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುವುದು.
ನಿಲ್ದಾಣದಲ್ಲಿ ಏನೇನಿರಲಿದೆ?
180 ಬಸ್ ಬೇ ಗಳೊಂದಿಗೆ ಬಸ್ ಟರ್ಮಿನಲ್, ಖಾಸಗಿ ಮತ್ತು ಕೆಎಸ್ಸಾರ್ಟಿಸಿ ಸೇವೆ ಮತ್ತು ದೂರದ ಪ್ರಯಾಣದ ಬಸ್ ವ್ಯವಸ್ಥೆಯೂ ಆ ಪರಿಸರದಲ್ಲಿ ಲಭ್ಯವಿರಲಿದೆ. ಇದು ರಾಜ್ಯದಲ್ಲೇ ವಿನೂತನ ಮಾದರಿ ಬಸ್ ನಿಲ್ದಾಣ ನಿರ್ಮಾಣವಾಗಿ ಮುಂದಿನ ದಿನಗಳಲ್ಲಿ ಈ ಸೇವೆ ಲಭ್ಯವಾಗಲಿದೆ. ಇದರಲ್ಲಿ ಸುಮಾರು 10 ಲಕ್ಷ ಚದರ ಅಡಿ ವಿಸ್ತೀರ್ಣದ ಶಾಪಿಂಗ್ ಮಾಲ್, ಕಚೇರಿ ಸ್ಥಳ, ನಗರದ ಜನರಿಗಾಗಿ ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್ ವ್ಯವಸ್ಥೆ ಆಗಲಿದೆ. ಇವೆಲ್ಲವೂ ಆದ ಬಳಿಕ ಗುತ್ತಿಗೆ ಪಡೆದವರು 40 ವರ್ಷಗಳ ಕಾಲ ಅದನ್ನು ನಿರ್ವಹಿಸಿ ಅನಂತರ ನಿಲ್ದಾಣವನ್ನು ಮಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಬೇಕು ಎಂಬುದು ನಿಯಮ. ಅನುಮೋದನೆ ದೊರೆತ ಅನಂತರ 3 ವರ್ಷಗಳ ಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು.
ಸ್ಥಾಯೀ ಸಮಿತಿ ಅಧ್ಯಕ್ಷೆ ಪೂರ್ಣಿಮಾ, ಪಾಲಿಕೆ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು, ಶಕಿಲಾ ಕಾವಾ, ಮನೋಹರ್ ಕದ್ರಿ, ಕಾವ್ಯ ನಟರಾಜ್, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಜೆ. ಸುರೇಂದ್ರ, ರೂಪಾ ಡಿ. ಬಂಗೇರ, ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.