ನ್ಯೂಯಾರ್ಕ್: ಆಸ್ಪತ್ರೆಗಳೇ ಕೋವಿಡ್ ಹಾಟ್‌ಸ್ಪಾಟ್ಸ್
Team Udayavani, May 15, 2020, 4:15 PM IST
ನ್ಯೂಯಾರ್ಕ್: ಅಮೆರಿಕದಲ್ಲಿ ಕೋವಿಡ್ ಸೋಂಕಿನ ಅನುಮಾನ ಇದ್ದರೂ ಜನರು ಆಸ್ಪತ್ರೆಗಳಿಗೆ ಹೋಗಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳೇ ವೈರಸ್ ಹರಡುವ ಹಾಟ್‌ಸ್ಪಾಟ್‌ಗಳಾಗಿ ಬದಲಾಗಿರುವುದು ಇದಕ್ಕೆ ಕಾರಣ.
ನ್ಯೂಯಾರ್ಕ್ ನಗರದಲ್ಲಿ ಕೋವಿಡ್‌ನಿಂದ ಸಾವನ್ನಪ್ಪಿದವರ ಪೈಕಿ 5300 ಮಂದಿಗೆ ನರ್ಸಿಂಗ್ ಹೋಂಗಳಲ್ಲಿಯೇ ಸೋಂಕು ಅಂಟಿಕೊಂಡದ್ದು ಬಹಿರಂಗವಾಗಿದೆ. ಅಲ್ಲೀಗ ಆಸ್ಪತ್ರೆಗಳೇ ಸಾವಿನ ತಾಣಗಳಾಗಿ ಬದಲಾಗಿವೆ.
ಹೀಗಿದ್ದರೂ ತಮ್ಮ ಬಂಧುಗಳನ್ನು, ಪರಿವಾರದವರನ್ನು ಕಳೆದುಕೊಂಡವರು ಆಸ್ಪತ್ರೆಯ ವಿರುದ್ಧ ದಾವೆ ಹೂಡುವಂತಿಲ್ಲ. ಯಾವುದೇ ಸಾವಿಗೂ ಖಾಸಗಿ ನರ್ಸಿಂಗ್ ಹೋಂಗಳನ್ನು ಉತ್ತರದಾಯಿನ್ನಾಗಿ ಮಾಡಲಾಗಲಾರದ ಕಾನೂನನ್ನು ನ್ಯೂಯಾರ್ಕ್ ಸೇರಿ ಹಲವು ರಾಜ್ಯಗಳು ಜಾರಿಗೊಳಿಸಿವೆ. ಪರೋಕ್ಷವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಖಾಸಗಿ ನರ್ಸಿಂಗ್ ಹೋಂಗಳ ಬಲಿಷ್ಠ ಲಾಬಿಯನ್ನು ಬೆಂಬಲಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ನರ್ಸಿಂಗ್ ಹೋಂಗಳ ತಪ್ಪು ಇದ್ದರೂ ಕಾನೂನಿನ ರಕ್ಷಣೆಯಿರುವ ಕಾರಣ ಅವುಗಳು ನಿರಾಳವಾಗಿವೆ.
ಬಜೆಟ್ ಮಸೂದೆಗೆ ಮಧ್ಯಂತರದಲ್ಲಿ ಹೊಸ ನಿಯಮವೊಂದನ್ನು ಸೇರಿಸುವ ಮೂಲಕ ಖಾಸಗಿ ನರ್ಸಿಂಗ್ ಹೋಂಗಳ ರಕ್ಷಣೆಗೆ ಸರಕಾರಗಳು ಮುಂದಾಗಿವೆ. ವಿಚಿತ್ರವೆಂದರೆ ಅನೇಕ ಸಂಸದರಿಗೆ ಹೀಗೊಂದು ನಿಯಮ ಸೇರ್ಪಡೆಯಾಗಿರುವ ವಿಚಾರ ಗೊತ್ತಿರಲಿಲ್ಲ.
ಅಗತ್ಯಕ್ಕಿಂತ ಕಡಿಮೆ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬಂದಿ, ಅಸಮರ್ಪಕ ಸೌಲಭ್ಯಗಳು, ಆರಂಭದಲ್ಲಿ ಕೋವಿಡ್ ವೈರಸ್‌ನ ಅಪಾಯದ ಬಗ್ಗೆ ಅರಿವಿಲ್ಲದೆ ಹೋದದ್ದು ಈ ಮುಂತಾದ ಕಾರಣಗಳಿಂದ ಅಮೆರಿಕದ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಭಾರೀ ಪ್ರಮಾಣದ ಸಾವುಗಳು ಸಂಭವಿಸಿವೆ.
ಕೆಲವು ಖಾಸಗಿ ನರ್ಸಿಂಗ್ ಹೋಂ ಮತ್ತು ಆಸ್ಪತ್ರೆಗಳ ಸ್ಥಿತಿ ಬಡ ರಾಷ್ಟ್ರಗಳ ಸರಕಾರಿ ಆಸ್ಪತ್ರೆಗಳ ಸ್ಥಿತಿಗಿಂತಲೂ ಕಳಪೆಯಾಗಿತ್ತು. ಸಾಕಷ್ಟು ಬೆಡ್‌ಗಳು ಇಲ್ಲದೆ ರೋಗಿಗಳನ್ನು ಕಾರಿಡಾರ್, ಶೌಚಾಲಯದ ಪಕ್ಕದಲ್ಲೆಲ್ಲ ಮಲಗಿಸಲಾಗಿತ್ತು. ಶವಾಗಾರಗಳಲ್ಲಿ ಹೆಣಗಳನ್ನು ಇಡಲು ಜಾಗ ಸಾಲದೆ ಒಂದರ ಮೇಲೊಂದರಂತೆ ರಾಶಿ ಹಾಕಲಾಗಿತ್ತು ಎಂದು ಆಸ್ಪತ್ರೆಯ ಭಯಾನಕ ಚಿತ್ರಣಗಳನ್ನು ಬಿಚ್ಚಿಟ್ಟಿದ್ದಾರೆ ಗುಣಮುಖರಾಗಿರುವ ಓರ್ವ ಕೋವಿಡ್ ಸೋಂಕಿತ.
ಕೋವಿಡ್‌ನ ಹಾವಳಿ ಆರಂಭದ ಘಟ್ಟದಲ್ಲಿರುವಾಗ ಖಾಸಗಿ ನರ್ಸಿಂಗ್ ಹೋಂಗಳು ಮತ್ತು ಆಸ್ಪತ್ರೆಗಳು ಇದು ಭರ್ಜರಿ ವ್ಯವಹಾರವಾಗುವ ಲಕ್ಷಣ ಎಂದು ಹಿಗ್ಗಿದ್ದವು. ಆದರೆ ವೈರಸ್‌ನ ಪ್ರಸರಣ ತೀವ್ರಗೊಂಡು ಎಲ್ಲ ವೈದ್ಯಕೀಯ ಸೌಲಭ್ಯಗಳು ನೆಲಕಚ್ಚಿದಾಗಲೇ ಅವುಗಳಿಗೆ ತಾವೆಂಥ ಅಪಾಯಕಾರಿ ಘಟ್ಟಕ್ಕೆ ತಲುಪಿದ್ದೇವೆ ಎಂದು ಅರಿವಾದದ್ದು. ಟೆಸ್ಟಿಂಗ್ ಕಿಟ್, ವೈಯಕ್ತಿಕ ಸುರಕ್ಷಾ ಉಡುಗೆ, ಗೌನ್‌ಗಳ ತೀವ್ರ ಕೊರತೆ ಕಾಣಿಸಿಕೊಂಡಾಗ ವೈದ್ಯಕೀಯ ಸಿಬಂದಿಗಳು ಕಂಗಾಲಾದರು. ಕೊನೆಗೆ ಎನ್-95 ಮಾಸ್ಕ್ನಂಥ ತೀರಾ ಅಗತ್ಯ ಸುರಕ್ಷಾ ಸಾಧನಗಳು ಕೂಡ ಸಿಗುವುದಿಲ್ಲ ಎಂಬ ಪರಿಸ್ಥಿತಿ ತಲೆದೋರಿದಾಗ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರೇ ಹೆದರುವಂತಾಯಿತು. ಹೀಗಾಗಿ ಕೆಲವು ರೋಗಿಗಳನ್ನು ಗುಣಮುಖರಾಗುವ ಮೊದಲೇ ಮನೆಗೆ ಕಳುಹಿಸಿದ್ದೂ ಇದೆ.
ಪಿಪಿಇ ಉಡುಗೆಗಳು, ಮಾಸ್ಕ್ ಇನ್ನಿತರ ಸುರಕ್ಷಾ ಸಾಧನಗಳ ಕೊರತೆಯಿಂದಾಗಿ ಅನೇಕ ವೈದ್ಯರು ಮತ್ತು ವೈದ್ಯಕೀಯ ಸಿಬಂದಿಗಳೂ ಸಾವನ್ನಪ್ಪಿದ್ದಾರೆ. ಅಮೆರಿಕದ ಆರೋಗ್ಯ ಸೇವಾ ಕ್ಷೇತ್ರದ ಹುಳುಕುಗಳನ್ನೆಲ್ಲ ಈ ಒಂದು ವೈರಸ್ ಜಗಜ್ಜಾಹೀರುಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.