ಅಭ್ಯಾಸವೇ ಜೀವನ…
Team Udayavani, May 19, 2020, 6:04 AM IST
ಕಳೆದವಾರ, ಲಾಕ್‌ಡೌನ್ ಸಮಯವನ್ನು ಸದ್ಬಳಕೆ ಮಾಡಿಕೊಳ್ಳೋಕೆ ಸಿನಿಮಾ, ಶಾಸ್ತ್ರೀಯ 9 ಸಂಗೀತವನ್ನು ಹೇಗೆ ರಿಯಾಜ್ ಮಾಡಬೇಕು ಅನ್ನೋದನ್ನು ಹೇಳಲಾಗಿತ್ತು. ಈ ವಾರ, ವಾದ್ಯಗಳ ರಿಯಾಜ್ ಹೇಗೆ ಅನ್ನೋದನ್ನು ನಾಡಿನ ಖ್ಯಾತ ಸಂಗೀತ ಪಟುಗಳು ಇಲ್ಲಿ ವಿವರಿಸಿದ್ದಾರೆ.
ಕಾಯಾ, ವಾಚಾ, ಮನಸಾ ಕೂರಬೇಕು…: “ಈತನಕ ನಾವೇನು ಕಲ್ತೇವಿ, ಅದರೊಳಗ ನನಗೇನು ಬರೋದಿಲ್ಲ ಅನ್ನೋದನ್ನು ಗುರುತು ಮಾಡ್ಕೊಬೇಕ್ರಿ. ಗುರುಗಳು ಕಲಿಸಿದ್ದೆಲ್ಲ, ನಮಗೆ ಕೈ ಹತ್ತಿರಂಗಿಲ್ಲ. ಜೊತೆಗೆ, ಇವತ್ತಿನ ಕಾಲಘಟ್ಟದಾಗ ಗುರುಗಳು, ಶಿಷ್ಯನ ಅಸೋಸಿಯೇಷನ್ ಕಡಿಮೆ ಆಗೈತಿ. ಸಮಯ ಇರೋದಿಲ್ಲ. ಹೀಗಾಗಿ, ಶಿಷ್ಯನ ವೀಕ್‌ನೆಸ್ ಏನು ಅಂತ ಗುರು ತಿಳ್ಕೊಂಡು ತಿದ್ದೋದು, ಕಷ್ಟ ಆಗೈತಿ. ಅಸೋಸಿಯೇಷನ್ ಬಂದುಬಿಟ್ರೆ, ಹೇಗೆ ಪ್ರಾಕ್ಟೀಸ್ ಮಾಡಬೇಕು ಅನ್ನೋದು ತಿಳಿತಾ ಹೋಕ್ತದ. ನಮಗೇನು ಬರೋಲ್ಲ ಅನ್ನೋದು ಗುರುಗಳಿಗೆ ಚೆನ್ನಾಗಿ ಅರ್ಥ ಆಗಿರ್ತದೆ. ಹಿಂದೆಲ್ಲಾ ಅದನ್ನು ತೋರಿಸ್ಕೊಡೋರು. ಆಗೆಲ್ಲ ಸಮಯ ಇರ್ತಿತ್ತು.
ಆದರೆ, ಇವತ್ತು ಟೈಂ ಫ್ಯಾಕ್ಟರ್. ರಿಯಾಜ್‌ಗೂ ಸಮಯ ಸಿಗಂಗಿಲ್ಲ. ಹೀಗಾಗಿ, ನಾವೇ ಅದನ್ನು ಕಂಡ್ಕೊಬೇಕು. ಬಹಳಷ್ಟು ಜನ ಮಾಡೋ ತಪ್ಪೇನಂದ್ರ, ವಿಲಂಬ ಲಯದೊಳಗೆ ನಿಲ್ಲೋದಿಲ್ಲ. ಫಾಸ್ಟ್ ಆಗಿ ಬೇಕಾದ್ರ ನುಡಿಸಿಬಿಡ್ತಾರ. ಬುರ್ ಬುರ್ ಅಂತ ಮಜ ಕೊಡ್ತದಲ್ಲ, ಅದಕ್ಕ. ಫಾಸ್ಟ್ ಮೂಮೆಂಟ್ನಾಗ ಇರೋದರಿಂದ ಬ್ಯಾಲೆನ್ಸ್ ಸಿಕ್ತದೆ. ಆದ್ರೆ, ನಿಧಾನ ನುಡಿಸೋಕೆ ಇವರ ಕೈನಾಗೆ ಆಗಲ್ರಿ ನಿಮಗೆ ಸೈಕ್ಲಿಂಗ್ ಗೊತ್ತಲ್ಲ? ಫಾಸ್ಟಾಗಿ ತುಳಿಯೋವಾಗ ಸುಮಾರು ಹೊತ್ತು ಕೂರೋಕೆ ಅವಕಾಶ ಇರ್ತದ. ನಿಧಾನಕ್ಕೆ ತುಳಿಯೋಕೆ ಹೋದ್ರ ಬಿದ್ದೋಗ್ತಿವಿ. ಹಂಗೇನೇ ತಬಲ್ದಾಗೂ. ಸ್ಲೋ ನುಡಿಸೋಕೆ ಬಹಳ ಜನ ಇಷ್ಟ ಪಡಂಗಿಲ್ಲ. ಕೈ ಗುಣಧರ್ಮದ ಮೇಲೆ, ಎಲ್ಲಾ ಸರಿ ಐತಿ ಅನಿಸ್ತಿರಬಹುದು.
ಆದ್ರ, ಏನು ಪಾಠ ಇರ್ತದೋ, ಅದರೊಳಗಿನ ಅಕ್ಷರಗಳು ಕೈಗೆ ಹತ್ತಿರೋಂಗಿಲ್ಲ. ಅಕ್ಷರಕಾಲ ಅಂತ ಹೇಳ್ತೀವಲ್ಲ; ಅದು ಸರಿ ಇರೋದಿಲ್ಲ. ಎಲ್ಲೋ ಅಕ್ಷರ ಮಿಸ್ ಆಗ್ತಾ ಇರ್ತಾವು. ವೇಗವಾಗಿ ನುಡಿಸುವಾಗ, ತಾಳದ ಚೌಕಟ್ ನಾಗೆ ಹೆಂಗೋ ಓಡ್ತಾ ಇರ್ತಾವು. ಅದು ನಮಗ ಗೊತ್ತಾಗೊಲು. ತಿನ್ನಕಿನ್ನ… ಇದ್ರಾಗ “ನ’ ಅನ್ನೋದು ಚಾಟಿ ಮೇಲೆ ಬರಬೇಕು. ಗೊತ್ತಿಲ್ಲದಂಗೆ ಮೈದಾನದ ಮೇಲೆ ಎಲ್ಲೋ ನುಡಿಸ್ತಾ ಇರ್ತಾರ. “ನ’ ಬೇರೆ, “ನಾ’ ಬೇರೆ. ಈ ಬಗ್ಗೆ ಕ್ಲಾರಿಟಿ ಇರೋಲ್ಲ. ಎಷ್ಟೋ ಜನ ನುಡಿಸ್ತಾ ಹೋಗ್ತಾರೆ. ಈ ಐಬು ಕೈಯೊಳಗೇ ಉಳಿದುಬಿಡ್ತದ. ಅದನ್ನು ಹಾಗೇ ಕ್ಯಾರಿ ಮಾಡ್ತಾ ಹೋಗ್ತಾ ಇರ್ತಾವೆ. ಹೀಗಾಗಿ, ತಪ್ಪಾಯ್ತು ಅಂದರ, ಅದರ ಮೇಲೆ ಗಮನ ಕೊಟ್ಟು, ಪದೇಪದೆ ನುಡಿಸಿ ಪಳಗಬೇಕು. ವಿಚಾರ ತಿಳ್ಕೊಳಕ್ಕೆ ಬಹಳ ಕಷ್ಟ ಪಡಬೇಕು. ಮನಸ್ಸು ಮಾಡಬೇಕು, ಕಾಯಾ, ವಾಚಾ, ಮನಸಾ ಆಗಬೇಕು. ಓವರ್ ನೈಟ್ ಆಗೋದಿಲ್ಲ.
ಸಾಧನೆ ನಡೀತಾ ಇರ್ತದೆ. ಎಲ್ಲಾ ಕಲ್ತಿನಿ, ಬರ್ತದೆ ಅಂತೆಲ್ಲಾ ಮನಸ್ಸಿನಾಗೆ ಇಟ್ಕೊಂಡು ರಿಯಾಜ್ ಮಾಡಕ್ಕಾಗವಲು. ಕಲಾವಿದನಿಗೆ ಅತಪ್ತಿ ಇರಬೇಕು. ಆದ್ರೆ ಅದು ನೆಗೆಟಿವಿಟಿ ಆಗಬಾರದು. ಅಯ್ಯೋ, ನನಗ ಆ ಕಾಯ್ದೆ, ಚಕ್ರಧಾರ ನುಡಿಸೋಕೆ ಬರೋದಿಲ್ಲ ಅನ್ನೋದು ಮನಸ್ಸಿನಾಗೆ ನಿಲ್ಲಬಾರ್ದು. ಬರೋದಿಲ್ಲ ಅಂದ್ರ ಬರೋದೇ ಇಲಿ. ಎಷ್ಟೋ ಜನ, ಏನಪ್ಪಾ ಇದು, ಕೈ ಇಟ್ರೇ ಬರೋದಿಲ್ಲ, ನುಡಿಸೋಕೆ ಆಗ್ತಿಲ್ಲ ಅಂತೆಲ್ಲ ಅಂದೊತಾರ.. ನುಡಿಸ್ಕೆ ಕೂತ್ರ ಇವೆಲ್ಲ ಸಮಸ್ಯೆ ಅರ್ಥ ಆಗ್ತದ. ಆಗ ಕಚ್ಚಿ ಹಿಡಿದು ಕೂತರೆ, ಒಂದು ಹಂತಕ್ಕೆ ತಂದು ಬಿಡಬಹುದು. ಮಂದಿಗೆ ತಬಲ ತಾನ್ರಿ, ಸುಲಭವಾಗಿ ಕಲಿಯೋ ವಿದ್ಯೆ ಅನಿಸಬಹುದು. ಅದರೊಳಗ ದೊಡ್ಡ ಪ್ರಪಂಚ ಐತ್ರಿ. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಸಿನಿಮಾ ಸಂಗೀತ, ನಾಟಕ, ಭಜನ್, ತಂತಿ ವಾದ್ಯ, ಸೋಲೋ… ಹೀಗೆ ಎಲ್ಲದರೊಳಗೆ ಪೃಫೆಕ್ಟ್ ಆಗೋಕೆ ಯಾರಿಂದಲೂ ಸಾಧ್ಯ ಇಲಿ. ಇದೆಲ್ಲ ತಿಳಕೊಂಡು, ಅದರೊಳಗ ಮನಸ್ಸನ್ನು ನೆಟ್ಟು ಕೂರೋದನ್ನು ಮೊದಲು ಕಲೀಬೇಕು.
* ಪಂಡಿತ್ ರವೀಂದ್ರ ಯಾವಗಲ್, ಹಿರಿಯ ಹಿಂದೂಸ್ತಾನಿ ತಬಲಾ ವಾದಕರು
ಕಾನ್ಷಿಯಸ್ ಮೈಂಡ್‌ನಲ್ಲಿ ಅಭ್ಯಾಸ: ಅಭ್ಯಾಸ ಮಾಡುವಾಗ, ಮೊದಲು ಸರಿಯಾಗಿ ಕುಳಿತುಕೊಳ್ಳಬೇಕು. ಇರಿಸುಮುರಿಸಾಗುವಂತೆ ಕೂತ್ಕೊಂಡರೆ, ತುಂಬಾ ಹೊತ್ತು ಕೂರೋಕೆ ಆಗೋಲ್ಲ. ಗುರುಗಳು ಹೇಳಿಕೊಡುವ ರೀತಿಯಲ್ಲೇ ಕುಳಿತುಕೊಳ್ಳಬೇಕು. ನಮಗೆ ಮಜಲ್ ಮೆಮೊರಿ ಅಂತಿರುತ್ತದೆ. ಅದಕ್ಕಾಗಿ, ಬೇಸಿಕ್ ಪಾಠಗಳನ್ನು ನುಡಿಸಬೇಕು. ಆದಷ್ಟೂ, ಬೆಳಗಿನ ವೇಳೆಯನ್ನು ಅದಕ್ಕೋಸ್ಕರ ಮೀಸಲಾಗಿಡಬೇಕು. ಇಲ್ಲಿ ವಿಷಯ ನೋಡೋಕೆ ತುಂಬ ಸುಲಭವಾಗಿರುತ್ತದೆ. ಚೆನ್ನಾಗಿ ಕೇಳುತ್ತದೆ. ಅದರ ಕ್ಯಾರೆಕ್ಟರ್, ನುಡಿಸಾಣಿಕೆಯನ್ನು ಅರ್ಥ ಮಾಡಿಕೊಳ್ಳ ಬೇಕಾದರೆ, ಸಾವಿರಾರು ಸಲ ಅಭ್ಯಾಸ ಮಾಡಿದರೆ ಮಾತ್ರ ಸಾಧ್ಯವಾಗೋದು. ಅಂದರೆ, ಬೆರಳಿಗೆ ಮದಂಗದ ಪಾಠ, ನಡೆ ಅರ್ಥ ಆಗುತ್ತೆ. ಇಂಥ ಕಡೆ ಹೋಗಿ ಕೂತ್ಕೊಬೇಕು. ಇಷ್ಟು ಪ್ರಷರ್ ಕೊಟ್ಟಾಗ, ಆ ನಾದ ಬರುತ್ತದೆ ಅನ್ನೋದು ತಿಳಿಯುತ್ತದೆ. ಈ ನಾದ ಬರಿಸೋಕೆ ಸಾವಿರಾರು ಸಲ ಅಭ್ಯಾಸ ಮಾಡಬೇಕು. ಆಗ, ಮದಂಗಕ್ಕೂ- ಕೈಗೂ, ಅವಿನಾಭಾವ ಸಂಬಂಧ ಬೆಳೆಯುತ್ತದೆ. ಬಹಳ ಮುಖ್ಯವಾದ ವಿಚಾರ ಏನೆಂದರೆ, ಅಭ್ಯಾಸ ಮಾಡಿದರೆ ಸಾಲದು. ಕೇಳ್ಮೆ ಜ್ಞಾನ ಬೆಳೆಸಿಕೊಳ್ಳಬೇಕು. ವೇದಿಕೆ ಕಾರ್ಯಕ್ರಮಕ್ಕೆ ಹೋಗಿ, ಕೂತು ಕಲಿಯಬೇಕು. ಏಕೆಂದರೆ, ಏತಕ್ಕೆ ನುಡಿಸಿ¨ಾರೆ ಅಂತ ರೆಕಾರ್ಡಿಂಗ್‌ನಲ್ಲಿ ಗೊತ್ತಾಗಲ್ಲ. ಅಲ್ಲಿ ಕೇಳಿದ್ದನ್ನು ಮನೆಯಲ್ಲಿ ಪ್ರಾಕ್ಟೀಸ್ ಮಾಡಬೇಕು. ಒಂದೇ ಕೃತಿಗೆ ಇನ್‌ಡೋರ್‌ನಲ್ಲಿ ನುಡಿಸೋದೇ ಬೇರೆ, ಔಟ್‌ಡೋರ್‌ನಲ್ಲಿ ನುಡಿಸೋದೇ ಬೇರೆಯಾಗಿರುತ್ತದೆ. ಇದನ್ನೆಲ್ಲಾ ಗಮನಿಸಿ, ನಮ್ಮ ನುಡಿಸಾಣಿಕೆಯಲ್ಲಿ ಅಳವಡಿಸಬೇಕಾದರೆ, ಹೆಚ್ಚು ಹೆಚ್ಚು ಸಂಗೀತ ಕೇಳಬೇಕು. ನಂತರ, ಕಾನ್ಷಿಯಸ್ ಮೈಂಡ್‌ನಲ್ಲಿ ಅಭ್ಯಾಸ ಮಾಡಬೇಕು. ಸಬ್ ಕಾನ್ಷಿಯಸ್ ಮೈಂಡ್‌ಗೆ ಮನೋಧರ್ಮ ಸಂಗೀತ ತಿಳಿಯೋಕೆ ಬಿಡಬೇಕು. ಸಂಗೀತ ಕಿವಿ ಮೇಲೆ ಬಿದ್ದಷ್ಟೂ ವಾದ್ಯದ ಮೇಲೆ ಕೈ ಚೆನ್ನಾಗಿ ಓಡುತ್ತದೆ. ಈ ಸೋಶಿಯಲ್ ಮೀಡಿಯಾ ನೋಡಿ ಸಂಗೀತ ಕಲಿಯೋಕೆ ಆಗಲ್ಲ. ಮಾಹಿತಿಯನ್ನು ಗುರುಗಳೂ ಕೊಡ್ತಾರೆ. ಸೋಶಿಯಲ್ ಮೀಡಿಯಾ ಕೂಡ ಕೊಡುತ್ತದೆ. ಆದರೆ, ನಮ್ಮ ತಪ್ಪನ್ನು ಸರಿಮಾಡೋದು ಗುರುಗಳು, ಸೋಶಿಯಲ್ ಮೀಡಿಯಾ ಅಲ್ಲ. ಈ ಎಚ್ಚರ ಇಟ್ಕೊಂಡು ಅಭ್ಯಾಸ ಮಾಡಿದರೆ ಒಳ್ಳೆಯದು.
* ವಿದ್ವಾನ್ ಬಿ.ಸಿ. ಮಂಜುನಾಥ್, ಹಿರಿಯ ಮೃದಂಗ ವಾದಕರು
ಊಟ, ನಿದ್ದೆಯಂತೆ ಪ್ರಾಕ್ಟೀಸು!: ಪ್ರಾಕ್ಟೀಸ್ ಅನ್ನೋದು, ಊಟ, ನಿದ್ರೆಯಂತೆ ಆಗಬೇಕು. ಕಾಲೇಜಿಗೆ, ಆಫೀಸಿಗೆ ಹೋಗ್ತಿವಲ್ಲ; ಆ ಥರಾನೇ ಪ್ರಾಕ್ಟೀಸೂ ಆಗಬೇಕು. ಅದಕ್ಕೆ ಶ್ರದ್ಧೆ, ಶಿಸ್ತು ಇರಬೇಕು. ಇದು ಬರಬೇಕು ಅಂದರೆ, ಸಂಗೀತದ ಬಗ್ಗೆ ಪ್ಯಾಶನ್ ಹುಟ್ಟಬೇಕು. ಕುಂತರೂ, ನಿಂತರೂ, ಅದನ್ನೇ ಯೋಚೆ° ಮಾಡುತ್ತಿರಬೇಕು. ಹೆಚ್ಚಿನವರಿಗೆ, ಅಪ್ಪ- ಅಮ್ಮನ ಒತ್ತಾಯಕ್ಕೋ, ರಿಯಾಲಿಟಿ ಶೋನಲ್ಲಿ ನಾನೂ ಘಟಂ ನುಡಿಸಬೇಕು ಅನ್ನೋ ಆಸೆಯಿಂದಲೋ, ಸಂಗೀತದ ಮೇಲೆ ಆಸಕ್ತಿ ಹುಟ್ಟಿಬಿಡುತ್ತದೆ. ಅಷ್ಟಾದರೆ ಸಾಲದು. ಅದೇ ಪ್ಯಾಶನ್ ಆಗಬೇಕು. ಆಗ ಮಾತ್ರ ಪ್ರಾಕ್ಟೀಸ್ ಚೆನ್ನಾಗಿ ಆಗುವುದು. ಪ್ರಾಕ್ಟ್ರೀಸ್ ಅಂದರೆ, ಲಯದ ಜೊತೆಗೆ ಗೆಳೆತನ ಬೆಳೆಸುವುದು. ಇದಕ್ಕಾಗಿ ಆ್ಯಪ್‌ಗ್ಳು ಇವೆ.
ಅದರ ಜೊತೆಗೆ ಪ್ರಾಕ್ಟೀಸ್ ಮಾಡ್ತಾ ಹೋದರೆ, ತಾಳ ಬಿಗಿಯಾಗುತ್ತದೆ. ಪ್ರಾಕ್ಟೀಸ್ ಅಂದರೆ, ಒಂದೇ ದಿನ ಗಂಟೆಗಟ್ಟಲೆ ಕೂರುವುದಲ್ಲ. ಮೊದಲು ಅರ್ಧ ಗಂಟೆಯಿಂದ ಶುರು ಮಾಡಿ, ಐದೈದು ನಿಮಿಷ ಜಾಸ್ತಿ ಮಾಡ್ತಾ ಹೋಗಬೇಕು. ಆಗ, ಸಂಗೀತದ ಕಲಿಕೆಯಲ್ಲಿ ಆಸಕ್ತಿ, ಪ್ಯಾಶನ್ ಬೆಳೆಯುತ್ತದೆ. ಘಟಂ ವಾದ್ಯದಲ್ಲಿ ನಿಜವಾದ, ಪೃಫೆಕ್ಟ್ ಅನ್ನುವಂಥ ಟೋನ್ ಬರೋಕೆ, 8ರಿಂದ 10 ತಿಂಗಳ ಸತತ ಪ್ರಾಕ್ಟೀಸ್ ಅಗತ್ಯವಾಗಿ ಬೇಕು. ಅದರಲ್ಲಿ ನಾದ ಹುಟ್ಟಬೇಕಾದರೆ, ನಮ್ಮ ಕೈ ಅದರ ಜೊತೆ ಚೆನ್ನಾಗಿ ಪಳಗಬೇಕು. ಸಂಗೀತವೂ ಒಂದು ಭಾಷೆಯೇ. ಆರಂಭದಲ್ಲೇ ಒಂದು ಪ್ಯಾರಾಗ್ರಾಫ್ ಬರೆಯೋಕೆ ಹೇಗೆ ಆಗೋಲ್ಲವೋ, ಹಾಗೆಯೇ, ಸಂಗೀತದಲ್ಲೂ ಏಕಾಏಕಿ ಘಟಂ ನುಡಿಸೋಕೆ ಆಗೋಲ್ಲ.
ಅಕ್ಷರ ಕಲಿಯಬೇಕು. ಸಂಗೀತದಲ್ಲೂ ತಾ ದಿ ತೋಂ ನಂ ಅಂತ ಬಾಲ ಪಾಠ ಇದೆ. ಇದಕ್ಕೆ “ಕಿಟ’ ಅನ್ನೋ ಪದ ಜೋಡಣೆ ಮಾಡಿ, ಮುಂದುವರಿಸೋದು. ವಾಕ್ಯ ರಚನೆ, ಕತೆ ಬರೆಯೋದು, ಆಮೇಲೆ ನಮ್ಮದೇ ಸ್ಟೋರಿ. ಇದೇ ಪ್ಯಾಟ್ರನ್‌ನಲ್ಲೇ ಸಂಗೀತವನ್ನೂ ಕಲಿಯಬೇಕಾಗುತ್ತದೆ. ಪ್ರಾಕ್ಟೀಸ್ ಅನ್ನೋದು ಗುರುಗಳ ಮೇಲೆ ತೀರ್ಮಾನ ಆಗುತ್ತದೆ. ನನ್ನ ಪ್ರಕಾರ, “ತರಿಕಿಟ’ ಅನ್ನೋದು ಬಹಳ ಮುಖ್ಯ. ಇದನ್ನು ಗಂಟೆಗಟ್ಟಲೆ ನುಡಿಸಬೇಕು. ಒಂಥರಾ ಬೋರ್ ಆಗೋಕೆ ಶುರುವಾಗುತ್ತದೆ. ವಿಧಿ ಇಲ್ಲ. ಇದು ಬೆರಳಲ್ಲಿ ಕೂರಲೇಬೇಕು. ಈ ಪ್ರಯತ್ನದಲ್ಲಿ ಯಶಸ್ಸು ಕಾಣಲು ಏಕಾಗ್ರತೆ ಬೇಕು. ಸ್ವಲ್ಪ ಗಮನ ವಿಕೇಂದ್ರಿಕರಣ ಆದರೂ, ತಾಳ ಚೆಲ್ಲಾಪಿಲ್ಲಿಯಾಗಬಹುದು. ಹೀಗಾಗಿ, ಸಂಗೀತ, ಪ್ರಾಕ್ಟೀಸ್ ಅನ್ನೋದೆಲ್ಲಾ ಮೆಡಿಟೇಷನ್ ಇದ್ದಹಾಗೆ. ಇದನ್ನು ಹೆಚ್ಚು ಹೆಚ್ಚು ಮಾಡಿದಷ್ಟೂ ಸಂಗೀತ ನಮ್ಮೊಳಗೆ ಹೊಕ್ಕುತ್ತದೆ.
* ವಿದ್ವಾನ್ ಘಟಂ ಗಿರಿಧರ ಉಡಪ
* ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.