ಸಡಿಲಿಕೆ ಜತೆ ನಿರ್ಬಂಧ ಸವಾಲು..!
Team Udayavani, May 19, 2020, 6:52 AM IST
ಬೆಂಗಳೂರು: ಲಾಕ್‌ಡೌನ್ ಬಹುತೇಕ ಎಲ್ಲ ಕ್ಷೇತ್ರಗಳಿಗೂ ಸಡಿಲಿಕೆಯಾಗಿದ್ದು, ಮಂಗಳವಾರದಿಂದ ನಗರ ಸುಮಾರು 50 ದಿನಗಳ ನಂತರ ಸಹಜ ಸ್ಥಿತಿಯತ್ತ ಮರಳುತ್ತಿದೆ. ಎಂದಿನಂತೆ ಸರ್ಕಾರಿ ಬಸ್‌ಗಳು ರಸ್ತೆಗಿಳಿಯಲಿವೆ. ಜನ ಯಾವುದೇ ಅಡತಡೆಗಳಿಲ್ಲದೆ ಎಲ್ಲೆಂದರಲ್ಲಿ ನಿಶ್ಚಿಂತವಾಗಿ ಸಂಚರಿಸಲಿದ್ದಾರೆ. ಹೊರ ಜಿಲ್ಲೆಗಳಿಂದಲೂ ಇಲ್ಲಿಗೆ ಬರಲಿದ್ದಾರೆ. ವ್ಯಾಪಾರ-ವಹಿವಾಟು ಯಥಾಸ್ಥಿತಿಗೆ ಮರಳಲಿದೆ. ಈ ಸಡಿಲಿಕೆಗೆ ಸರ್ಕಾರ ಕೆಲವು ನಿರ್ಬಂಧಗಳನ್ನೂ ವಿಧಿಸಿದ್ದು, ಅದರ ನಿರ್ವಹಣೆ ಸ್ಥಳೀಯ ಸಂಸ್ಥೆಗಳಿಗೆ ಸವಾಲಾಗಿದೆ. ಯಾಕೆಂದರೆ, ಒಂದೆಡೆ ಹೀಗೆ ಲಾಕ್‌ಡೌನ್ ತೆರವುಗೊಳಿಸಲಾಗಿದೆ.
ಮತ್ತೂಂದೆಡೆ ಕಂಟೈನ್ಮೆಂಟ್ ವಲಯಗಳೂ ಇವೆ. ಆ ವಲಯಗಳ ನಿವಾಸಿಗಳು ಸಮೂಹ ಸಾರಿಗೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಕಾಣಿಸಿಕೊಂಡರೆ, ಅವರನ್ನು ಹೇಗೆ ಗುರುತಿಸಲಾಗುತ್ತದೆ? ಪ್ರತಿಯೊಬ್ಬರೂ ಗುರುತಿನಚೀಟಿ ಇಟ್ಟುಕೊಂಡು ಓಡಾಡುವುದು ಕಡ್ಡಾಯಗೊಳಿಸಲಿದೆಯೇ? ಒಂದು ವೇಳೆ ಹೌದಾದರೆ, ಹೆಜ್ಜೆ-ಹೆಜ್ಜೆಗೂ ತಪಾಸಣೆ ನಡೆಸಲಾಗುತ್ತದೆಯೇ? ವಾಹನದಟ್ಟಣೆ ಹೆಚ್ಚಿರುವ ಸಂದರ್ಭದಲ್ಲಿ ಅದು ಸಾಧ್ಯವೇ? ಪ್ರತಿ ಕಿ.ಮೀ.ಗೆ ಬಸ್ ತಂಗುದಾಣಗಳಿವೆ. ಅಲ್ಲಿ ಬಸ್ ಏರುವ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ಹೇಗೆ ಮಾಡಲಾಗುತ್ತದೆ? ಅಲ್ಲಿ ಸರದಿಯಲ್ಲಿ ನಿಲ್ಲುವಂತೆ ಸೂಚಿಸುವವರು ಯಾರು? ಇಂತಹ ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಇಲ್ಲ. ಈ ನಿಟ್ಟಿನಲ್ಲಿ ಬಿಎಂಟಿಸಿ, ಬಿಬಿಎಂಪಿಯಂತಹ ಸ್ಥಳೀಯ ಸಂಸ್ಥೆಗಳ ಜತೆಗೆ ಸಾರ್ವಜನಿಕ ಹೊಣೆಗಾರಿಕೆ ಕೂಡ ಮುಖ್ಯವಾಗಿದೆ.
ಪ್ರತಿ ತಂಗುದಾಣಗಳಲ್ಲಿ ಸ್ವಯಂಪ್ರೇರಿತ ಸಾಮಾಜಿಕ ಅಂತರ ಹಾಗೂ ಸರದಿಯಲ್ಲಿ ನಿಂತು ಬಸ್ ಏರುವುದು, ಕಂಟೈನ್ಮೆಂಟ್ ವಲಯದಲ್ಲಿರುವವರು ನಿಯಮ ಉಲ್ಲಂ ಸಿ ಹೊರಬರದಂತೆ ಎಚ್ಚರ ವಹಿಸುವ ಅವಶ್ಯಕತೆ ಇದೆ. ಆಗ ಮಾತ್ರ ಈ ಸಡಿಲಿಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸರಳೀಕರಣಗೊಳ್ಳಲಿದೆ. ಇಲ್ಲದಿದ್ದರೆ, ನಿರ್ಬಂಧಗಳು ಮತ್ತೆ ಕಟ್ಟಿಹಾಕುವ ಸಾಧ್ಯತೆ ಇದೆ. ಸಡಿಲಿಕೆ ಬೆನ್ನಲ್ಲೇ ಕಚೇರಿ, ಕಂಪನಿಗಳು, ಸಂಘ-ಸಂಸ್ಥೆಗಳು ಬಹುತೇಕ ತಮ್ಮ ಎಲ್ಲ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿವೆ. ಹಾಗಾಗಿ, ಒಂದೂವರೆ ತಿಂಗಳ “ಗೃಹ ಬಂಧನ’ದಿಂದ ಬಿಡುಗಡೆಗೊಂಡು ಸ್ನೇಹಿತರು, ಸಹೋದ್ಯೋಗಿಗಳು ಮುಖಾಮುಖೀ ಆಗಲಿದ್ದಾರೆ. ಉದ್ಯಾನಗಳಲ್ಲಿ ವಾಯುವಿಹಾರ ಮಾಡಲಿದ್ದಾರೆ. ಆದರೆ, ಇದೆಲ್ಲದರ ನಡುವೆ ಸಾಮಾಜಿಕ ಅಂತರ ಮಾತ್ರ ಮುಂದುವರಿಯಲಿದೆ.
ಭಾನುವಾರ ನಗರದಲ್ಲಿ ಲಾಕ್‌ಡೌನ್: ನಗರದಲ್ಲಿ ಕಂಟೈನ್ಮೆಂಟ್ ವ್ಯಾಪ್ತಿಯಲ್ಲಿರುವ 17 ವಾರ್ಡ್‌ಗಳನ್ನು ಹೊರತುಪಡಿಸಿ, ಉಳಿದ 181 ವಾರ್ಡ್‌ಗಳಲ್ಲೂ ಲಾಕ್‌ಡೌನ್ ಸಡಿಲಿಕೆ ಇರಲಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ತಿಳಿಸಿದ್ದಾರೆ. ಲಾಕ್‌ಡೌನ್ ವಿನಾಯಿತಿಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಸದ್ಯ ನಗರದಲ್ಲಿ 17 ವಾರ್ಡ್‌ಗಳನ್ನು ಕಂಟೈನ್ಮೆಂಟ್ ವ್ಯಾಪ್ತಿಯಲ್ಲಿ ಗುರುತಿಸಲಾಗಿದ್ದು, ಈ ಭಾಗದಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ದೇಶನ ನೀಡಿದ್ದಾರೆ.
ಹೀಗಾಗಿ, ಕಂಟೈನ್ಮೆಂಟ್ ಭಾಗದಲ್ಲಿ ಯಾರು ಒಳಗೆ ಹೋಗುವಂತಿಲ್ಲ ಮತ್ತು ಹೊರಕ್ಕೆ ಬರುವಂತಿಲ್ಲ ಎನ್ನುವ ನಿರ್ಬಂಧ ಇಲ್ಲಿ ಮುಂದುವರಿಯಲಿದೆ. ಭಾನುವಾರ ನಗರದಲ್ಲಿ ಲಾಕ್‌ಡೌನ್ ಜಾರಿಯಲ್ಲಿ ಇರಲಿದೆ. ಯಾವುದೇ ಅಂಗಡಿ ತೆರೆಯಲು ಅವಕಾಶವಿರುವುದಿಲ್ಲ. ಸಾರಿಗೆ ಸಂಚಾರಕ್ಕೂ ಅವಕಾಶ ಇರುವುದಿಲ್ಲ ಎಂದರು. ಕಂಟೈನ್ಮೆಂಟ್ ಹೊರತು ಪಡಿಸಿ 181 ವಾರ್ಡ್‌ಗಳಲ್ಲಿ ಲಾಕ್‌ಡೌನ್‌ಗೆ ವಿನಾಯಿತಿ ಅನ್ವಯಿಸಲಿದೆ.ಆದರೆ, ಚಲನಚಿತ್ರಮಂದಿರ, ರೆಸ್ಟೋರೆಂಟ್, ಮಾಲ್, ಕ್ಲಬ್, ಪಬ್‌ಗಳ ಪ್ರಾರಂಭಕ್ಕೆ ಅವಕಾಶ ಇಲ್ಲ. ಉಳಿದಂತೆ ಎಲ್ಲ ಅಂಗಡಿಗಳನ್ನು ತೆಗೆಯಲು ಅವಕಾಶ ಕಲ್ಪಿಸಲಾಗಿದೆ. ಪಾರ್ಕ್‌ಗಳಲ್ಲಿ ಬೆಳಗ್ಗೆ 7ರಿಂದ 9 ಮತ್ತು ಸಂಜೆ 4 ರಿಂದ 7ರವರೆಗೆ ತೆರೆದಿರಲಿದ್ದು, ಸಂಜೆ 7 ಗಂಟೆಯಿಂದ 7 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಹೇಳಿದರು.
ಶುಭ ಕಾರ್ಯಗಳಿಗೆ ಸರ್ಕಾರದ ಮುಹೂರ್ತ: ಬೇಸಿಗೆಯಲ್ಲಿ ಮುದುವೆ ಮತ್ತಿತರ ಸಮಾರಂಭಗಳಿಗೆ ಲಾಕ್‌ಡೌನ್ ಬ್ರೇಕ್ ಹಾಕಿತ್ತು. ಸರ್ಕಾರದ ಸಡಿಲಿಕೆ ಹಿನ್ನೆಲೆಯಲ್ಲಿ ಮೇ ಕೊನೆಯ ವಾರ ಹಾಗೂ ಜೂನ್‌ನಲ್ಲಿ ಹೆಚ್ಚು ಶುಭ ಕಾರ್ಯಗಳು ನಡೆ ಯುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್ ಮತ್ತು ಮೇನಲ್ಲಿ ಶುಭ ಸಮಾರಂಭಗಳು ಅದರಲ್ಲೂ ಮದುವೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದ್ದವು. ಆದರೆ, ಲಾಕ್‌ಡೌನ್‌ನಿಂದ ಬಹುತೇಕ ಎಲ್ಲವೂ ಮುಂದೂಡಲ್ಪಟ್ಟಿದ್ದವು.
ಶುಭ ಕಾರ್ಯಗಳಿಗೆ ಜೂನ್ ಅಂತ್ಯದವರೆಗೆ ಮುಹೂರ್ತಗಳಿರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚು ಶುಭ ಸಮಾರಂಭಗಳು ನಡೆಯಲಿದ್ದು, ಕಲ್ಯಾಣ ಮಂಟಪಗಳಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಮಾಸ್ಕ್ ಸ್ಯಾನಿಟೈಜರ್ ಸಹಿತವಾಗಿ ಸೂಕ್ತ ಸುರಕ್ಷತಾ ನಿಯಮಗಳೊಂದಿಗೆ ಶುಭ ಸಮಾರಂಭಗಳಿಗೆ 50 ಮಂದಿ ಸೇರಬಹುದು. ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಿಲ್ಲ. ಜೂನ್ ಅಂತ್ಯದವರೆಗೂ ಶುಭ ಮುಹೂರ್ತ ಇರುವುದರಿಂದ ಅನೇಕರಿಗೆ ಅನುಕೂಲ ಆಗಲಿದೆ. ಲಾಕ್‌ಡೌನ್ ಅವಧಿಯಲ್ಲಿ ಮುಂದೂಡಿರುವ ಶುಭ ಕಾರ್ಯಕ್ರಮಗಳನ್ನು ಬಹುತೇಕರು ಜೂನ್ ಅಂತ್ಯದೊಳಗೆ ಮುಗಿಸಿಕೊಳ್ಳಬಹುದು ಎಂದು ಆಧ್ಯಾತ್ಮಿಕ ಚಿಂತಕ ವಿಠಲ ಆಚಾರ್ಯ ಅಭಿಪ್ರಾಯಪಟ್ಟರು.
ಸಿಎಂ ಭೇಟಿಗೆ ಪಬ್ ಅಸೋಸಿಯೇಷನ್ ನಿರ್ಧಾರ: ಸುರಕ್ಷತಾ ಕ್ರಮಗಳ ನಡುವೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ಬಾರ್ ಆಂಡ್ ರೆಸ್ಟೋರೆಂಟ್‌ಗಳಲ್ಲಿ ಕೇವಲ ಪಾರ್ಸೆಲ್‌ಗಳಿಗೆ ಅವಕಾಶ ನೀಡಲಾಗಿದೆ. ಬೆಳಗ್ಗೆ 7ರಿಂದ ರಾತ್ರಿ ಏಳು ಗಂಟೆವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಪಾರ್ಸೆಲ್ ಮಾತ್ರ ಕೊಡಬೇಕು ಎಂದು ಸೂಚಿಸಲಾಗಿದೆ. ಇನ್ನು ನಗರದ ಪಬ್‌ಗಳ ಕಾರ್ಯಚಟುವಟಿಕೆಗಳಿಗೆ ಅವಕಾಶವಿಲ್ಲ. ಹೀಗಾಗಿ ಮಂದಿನ ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಪಬ್ ತೆರೆಯಲು ಅವಕಾಶ ನೀಡುವಂತೆ ಕೋರುತ್ತೇವೆ ಎಂದು ಪಬ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಸದಸ್ಯರೊಬ್ಬರು ಮಾಹಿತಿ ನೀಡಿದರು.
ಪಾಸು ಹೊಂದಿದವರಿಗೆ ಮಾತ್ರ ಬಸ್: ನಗರದ ಸಂಚಾರ ನಾಡಿ ಬಿಎಂಟಿಸಿ ಬಸ್ ಸಂಚಾರಕ್ಕೆ ಸರ್ಕಾರ ಅವಕಾಶ ನೀಡಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಮೊದಲ ಹಂತದಲ್ಲಿ ಸುಮಾರು ಎರಡು ಸಾವಿರ ಬಸ್‌ಗಳು ರಸ್ತೆಗಿಳಿಯಲಿವೆ. ಆದರೆ, ಪಾಸು ಹೊಂದುವವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಸಿಗಲಿದೆ. ನಗದು ವ್ಯವಹಾರ ಕಡಿಮೆಗೊಳಿಸುವ ಉದ್ದೇಶದಿಂದ 70 ರೂ. ಗಳ ದಿನದ ಪಾಸು, 300 ರೂ. ಮೊತ್ತದ ವಾರದ ಪಾಸು ಹಾಗೂ ಎಂದಿನ ಮಾಸಿಕ ಪಾಸು ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ಈ ಪಾಸುಗಳನ್ನು ಪಡೆಯ ಬೇಕಾಗುತ್ತದೆ.
ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಬಸ್ ಸೇವೆ ಇರಲಿದೆ. ಈಗಾಗಲೇ 15 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯ ಆರೋಗ್ಯ ಪರೀಕ್ಷೆ (ಥರ್ಮಲ್ ಸ್ಕ್ರೀನಿಂಗ್) ಮಾಡಲಾಗಿದೆ. ಮಂಗಳವಾರದ ವೇಳೆಗೆ ಇನ್ನೂ ಹೆಚ್ಚು ಸಿಬ್ಬಂದಿಯ ಪರೀಕ್ಷೆ ನಡೆಸಿದ ನಂತರ ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೆಚ್ಚು ಜನ ಸಂಚರಿಸುವ ಅಥವಾ ದಟ್ಟಣೆ ಪ್ರದೇಶಗಳಲ್ಲಿ ಮೊದಲು ಸೇವೆ ನೀಡಲಾಗುವುದು. ಕ್ರಮೇಣ ಉಳಿದ ಭಾಗಗಳಲ್ಲಿ ಸೇವೆ ವಿಸ್ತರಿಸಲಾಗುವುದು. ಬಸ್‌ನಲ್ಲಿ ನಿಂತು ಪ್ರಯಾಣಿಸಲು ಅವಕಾಶ ಇರುವುದಿಲ್ಲ. ಎಲ್ಲ ಪ್ರಯಾಣಿಕರು ಮುಖಗವಸು ಧರಿಸುವುದು ಕಡ್ಡಾಯ. ಮಾಸ್ಕ್ ಹಾಕಿಕೊಳ್ಳದವರ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ
Udupi: ಪೊಲೀಸ್ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.