ಭ್ರಾತೃತ್ವದ ಸಂದೇಶ ಸಾರುವ ಈದ್-ಉಲ್-ಫಿತರ್
Team Udayavani, May 24, 2020, 5:30 AM IST
ಜಗತ್ತಿನ ಮುಸ್ಲಿಮರು ಒಂದು ತಿಂಗಳು ಕಠಿನ ಉಪವಾಸ ವ್ರತ ಆಚರಿಸಿದ ಅನಂತರ ಸಮಾರೋಪ ಎಂಬಂತೆ ಶವ್ವಾಲ್ ತಿಂಗಳ ಪ್ರಾರಂಭದಂದು ಈದ್-ಉಲ್-ಫಿತರ್ ಆಚರಿಸುತ್ತಾರೆ. ಈದ್ -ಉಲ್-ಫಿತರ್ ಭ್ರಾತೃತ್ವದ ಸಂದೇಶ ಬಿತ್ತುವ ಹಬ್ಬ. ಪರಸ್ಪರ ಸಡಗರ, ಸಂತೋಷ ಹಂಚಿಕೊಳ್ಳಲು ಹಬ್ಬಗಳು ಪೂರಕ. ಜನರನ್ನು ಬೆಸೆಯುವ ಬಂಧವಾಗಿ, ಪ್ರೀತಿಯ ಪ್ರತೀಕವಾಗಿ ಸೌಹಾರ್ದ, ಸೋದರತೆಯ ಭರವಸೆ ಇಮ್ಮಡಿಗೊಳಿಸುವುದರ ಜತೆಗೆ ಕಷ್ಟ, ದುಃಖ, ದುಮ್ಮಾನಗಳಿಗೆ ಎದುರಾಗಿ ಆತ್ಮವಿಶ್ವಾಸ ಮೂಡಿಸುತ್ತವೆ. ಎಲ್ಲರನ್ನೂ ಒಂದುಗೂಡಿಸುವ ಹಬ್ಬಗಳಿಗೆ ತಮ್ಮದೇ ಹಿನ್ನೆಲೆ ಇರುತ್ತದೆ. ಜಗತ್ತಿನ ಮುಸ್ಲಿಮರು ಇಂದು ಈದ್-ಉಲ್-ಫಿತರ್ ಸಂಭ್ರಮದಲ್ಲಿದ್ದಾರೆ. ಕೋವಿಡ್-19 ಆಘಾತದಿಂದಾಗಿ ಜಗತ್ತಿನ ಎಲ್ಲರೂ ನೋವಿನಲ್ಲಿರುವ ಈ ಸಂದರ್ಭ ಹಬ್ಬವನ್ನು ಸರಳವಾಗಿ ಆಚರಿಸಬೇಕಾಗಿದೆ ಎಂಬ ಸಂದೇಶವನ್ನು ಧಾರ್ಮಿಕ ನಾಯಕರು ರವಾನಿಸಿದ್ದಾರೆ.
ಹಜರತ್ ಉಮರ್ (ರ.ಆ) ಆಡಳಿತ ಕಾಲದಲ್ಲಿ ತಾವೂನ್ ಎಂಬ ವಭಾ (ಸಾಂಕ್ರಾಮಿಕ ಕಾಯಿಲೆ) ಬಂದಾಗ ಪ್ರವಾದಿ ಮುಹಮ್ಮದ್ (ಸ.ಆ) ಅವರ ಸಂದೇಶವನ್ನು ಪಾಲಿಸಲು ತಿಳಿಸಿದ್ದರು. ಅದು ಇಂದಿನ ಲಾಕ್ ಡೌನ್ ರೀತಿಯಲ್ಲೇ ಇದೆ ಎಂಬುದು ವಿಶೇಷ. “ಅಲ್ಲಿದ್ದವರು ಅಲ್ಲೇ ಇರಿ, ಪ್ರವಾಸಗಳನ್ನು ಕೈಗೊಳ್ಳಬೇಡಿ, ರೋಗಿಗಳಿಗೆ ಗುಣಮುಖರಾಗಲು ಪ್ರಾರ್ಥಿಸಿರಿ’ ಎಂದು ಹೇಳಿದ್ದರು ಎಂದು ಹದೀಸ್‌ಗಳಲ್ಲಿ ಉಲ್ಲೇಖೀಸಲಾಗಿದೆ.
ಫಿತರ್ ಝಕಾತ್
ಫಿತರ್ ಝಕಾತ್ ಎಂಬ ದಾನ ವಿತರಿಸುವುದು ಕಡ್ಡಾಯ ಮತ್ತು ಇದು ರಂಝಾನ್ ಹಬ್ಬದ ವೈಶಿಷ್ಟ್ಯ. ಬಡವರ, ದೀನರ ಹಸಿವು ನೀಗಿಸುವ ಸಂಕೇತವೂ ಇದರಲ್ಲಿ ಅಡಗಿದೆ. ಪ್ರತಿಯೊಬ್ಬ ವ್ಯಕ್ತಿ ನಿರ್ದಿಷ್ಟ ಪ್ರಮಾಣದ ಫಿತರ್ ಝಕಾತ್ ನಡೆಸುವುದು ಕಡ್ಡಾಯವಾಗಿದ್ದು, ಇದನ್ನು ಈದ್-ಉಲ್-ಫಿತರ್ ನಮಾಜಿಗೆ ಹೋಗುವ ಮೊದಲು ದಾನ ಮಾಡಬೇಕಾಗಿದೆ. ಉಪವಾಸದ ತಿಂಗಳಲ್ಲಿ ಪ್ರತೀ ದಿನ ಬೆಳಗ್ಗೆ ಸುಮಾರು 4.30ರಿಂದ ಸೂರ್ಯಾಸ್ತದ ವರೆಗೂ ಅನ್ನಾಹಾರಗಳನ್ನು ತ್ಯಜಿಸಿ, ಕೆಡುಕುಗಳಿಂದ ದೂರ ಉಳಿದು ಕುರಾನ್ ಪಠಣ, ನಮಾಜ್‌ಗಳು, ತರಾವೀಹ್, ಝಿಕರ್ ಸ್ವಲಾತ್ ಮೂಲಕ ಅಲ್ಲಾಹುವಿಗೆ ಅರ್ಪಿಸಬೇಕು. ಹಾಗೆಯೇ ವ್ರತದ ಸಂದರ್ಭದಲ್ಲಿ ಆದ ಪ್ರಮಾದಗಳಿಗೆ ಫಿತರ್ ಝಕಾತ್ ನೀಡುವುದಾಗಿದೆ. ಸಮಾಜದಲ್ಲಿ ಇಂದು ಕೆಲವು ಮುಸ್ಲಿಂ ಸಂಘಟನೆಗಳಿಂದ ದಾನವಸ್ತುಗಳನ್ನು ಸಂಗ್ರಹಿಸಿ ಬಡವರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆಯೂ ಇದೆ. ಸಂಪತ್ತಿನ ಕೇಂದ್ರೀಕರಣವನ್ನು ಇಸ್ಲಾಂ ವಿರೋಧಿಸುತ್ತದೆ. ಶ್ರೀಮಂತನನ್ನು ದಾನ ಮಾಡುವುದಕ್ಕೆ ಪ್ರೇರೇಪಿಸುತ್ತದೆ. ಇಸ್ಲಾಮಿನ 5 ಪ್ರಧಾನ ಕರ್ಮಗಳಲ್ಲಿ ಒಂದಾಗಿದೆ ಝಕಾತ್.
ಸೋಂಕು ಪ್ರಸರಣ ತಡೆಗೆ ಸಹಕರಿಸಿದ ಸಮಾಜ
ಈದ್ ದಿನದಂದು ಆಲಿಂಗನ, ಹಸ್ತಲಾಘವ, ಖೀರು (ಸಿಹಿ ತಿಂಡಿ) ತಿನ್ನಿಸುವುದು, ಮಾಂಸಾಹಾರ ಸೇವಿಸುವುದು, ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ಸೇವಿಸಿ ಸಂಭ್ರಮಿಸುವುದು ಪ್ರಮುಖವಾಗಿರುತ್ತದೆ. ಇಂದಿನ ಆಧುನಿಕ ಸಮಾಜದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಪ್ರೀತಿಯನ್ನು ಸಮುದಾಯದವರೊಂದಿಗೆ ಮತ್ತು ಸಮಾಜದೊಂದಿಗೆ ಹಂಚಿಕೊಳ್ಳಬಹುದಾಗಿದೆ. ಅತಿವೇಗದಲ್ಲಿ ಹರಡುತ್ತಿರುವ ಕೋವಿಡ್-19ವನ್ನು ನಿಯಂತ್ರಿಸಲು ಬದಲಾದ ದಿನಚರಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗದೆ ಸರಕಾರದ ಆದೇಶಗಳನ್ನು ಪಾಲಿಸುತ್ತಾ ಉಪವಾಸ ವ್ರತಾಚರಣೆ ಮತ್ತು ಎಲ್ಲ ಆರಾಧನೆ (ನಮಾಜ್, ಜುಮ್ಮಾ ನಮಾಜ್, ತರಾವೀಃ ಇತ್ಯಾದಿ)ಗಳನ್ನು ಮನೆಯಲ್ಲಿಯೇ ನಿರ್ವಹಿಸಿ ಅದ್ಭುತ ಸಂಯಮವನ್ನು ಮುಸ್ಲಿಂ ಸಮಾಜ ಪ್ರದರ್ಶಿಸಿದೆ.
ರಂಝಾನ್ ತಿಂಗಳಲ್ಲಿ ಪ್ರದರ್ಶಿಸಿದ ತ್ಯಾಗ, ಸಂಯಮಕ್ಕೆ ಕಿರೀಟದಂತೆ ಇಂದು ಹಬ್ಬವನ್ನು ಮನೆಯಲ್ಲಿಯೇ ಆಚರಿಸಿ, ಮನೆ ಮಂದಿಯೊಂದಿಗೆ ಸಂಭ್ರಮಿಸುವುದು ಸಮಾಜ ಮತ್ತು ಸಮುದಾಯದ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಡುವೆ ರೋಗಿಗಳು, ಕೋವಿಡ್ ವಾರಿಯರ್‌ಗಳು, ವೈದ್ಯಕೀಯ ಸಿಬಂದಿ, ಪೊಲೀಸರಿಗಾಗಿ ಪ್ರಾರ್ಥಿಸುವುದು ಕೂಡ
ನಮ್ಮೆಲ್ಲರ ಕರ್ತವ್ಯ.
ಕುರಾನ್ ಸಂದೇಶ
ಕೆಡುಕನ್ನು ಒಳಿತಿನ ಮೂಲಕ ಎದುರಿಸಿ ಪರಸ್ಪರ ಪ್ರೀತಿ, ವಿಶ್ವಾಸದ ಮೂಲಕ ಜಾಗತಿಕ ಮಟ್ಟದಲ್ಲಿ ಮನುಷ್ಯ-ಮನುಷ್ಯನ ನಡುವಿನ ಸಂಬಂಧ ವೃದ್ಧಿಗೆ ಪ್ರೇರಣೆಯಾಗಲು ಹಳಸಿದ ಸಂಬಂಧಗಳು ಮರು ಜೋಡಣೆಯಾಗಬೇಕಾಗಿದೆ. ಪ್ರೀತಿ, ವಿಶ್ವಾಸದ ಮೂಲಕ ಜಗತ್ತನ್ನೇ ಗೆದ್ದ ಪ್ರವಾದಿ ಮುಹಮ್ಮದ್ (ಸ.ಆ) ಅವರ ಸಂದೇಶ ನಮಗೆಲ್ಲ ಮಾರ್ಗದರ್ಶನವಾಗಬೇಕಾಗಿದೆ.
– ಎಂ.ಎ. ಗಫೂರ್
ಮಾಜಿ ಅಧ್ಯಕ್ಷರು ಕೆಎಂಡಿಸಿ, ಕರ್ನಾಟಕ
“ನಿಮ್ಮಲ್ಲಿ ಯಾರಿಗಾದರೂ ಮರಣ ಬರುವ ಮುನ್ನ ನಾನು ನಿಮಗೆ ಏನನ್ನು ನೀಡಿರುವೆನೋ ಅದರಿಂದ ಖರ್ಚು ಮಾಡಿರಿ’ ಇದಕ್ಕೆ ತಪ್ಪಿದರೆ ಮರಣವು ಬಂದುಬಿಟ್ಟಾಗ ಅವನು, ನನ್ನೊಡೆಯಾ ನೀನು ನನಗೆ ಒಂದಷ್ಟು ಹೆಚ್ಚು ಕಾಲ ಅವಕಾಶವನ್ನೇಕೆ ಕೊಟ್ಟಿಲ್ಲ? ಕೊಟ್ಟಿದ್ದರೆ ನಾನು ದಾನ ಧರ್ಮ ಮಾಡುತ್ತಿದ್ದೆ ಮತ್ತು ಸಜ್ಜನರ ಪಾಲಿಗೆ ಸೇರುತ್ತಿದ್ದೆ ಎನ್ನುವನು.
– ಕುರಾನ್ ಅಧ್ಯಾಯ (63:10)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.