ಕಲಿಕೆಯ ಸಮಸ್ಯೆಯಿರುವ ಮಕ್ಕಳಲ್ಲಿ ವಾಕ್ ಶ್ರವಣ ತಜ್ಞರು ಮತ್ತು ಫಿಸಿಯೋಥೆರಪಿ ತಜ್ಞರ ಪಾತ್ರ
Team Udayavani, May 31, 2020, 5:01 AM IST
ಕಲಿಕಾ ಸಮಸ್ಯೆ (Learning Disability -ಎಲ್.ಡಿ.) ಯು ಕಲಿಕೆಯ ಸಮಸ್ಯೆಗಳನ್ನು ವಿವರಿಸಲು ಬಳಸುವ ಪದ. ಇದು ವೈವಿಧ್ಯಮಯ ಅಸ್ವಸ್ಥತೆಗಳ ಗುಂಪನ್ನು ಸೂಚಿಸುತ್ತದೆ. ಕಲಿಕಾ ತೊಂದರೆ ಹೊಂದಿರುವ ಮಕ್ಕಳಿಗೆ ಈ ಕೆಳಗಿನ ಒಂದು ಅಥವಾ ಹೆಚ್ಚಿನ ಕೌಶಲಗಳೊಂದಿಗೆ ತೊಂದರೆ ಉಂಟಾಗಬಹುದು: ಓದುವುದು, ಬರೆಯುವುದು, ಕೇಳುವುದು, ಮಾತನಾಡುವುದು, ತಾರ್ಕಿಕತೆ ಮತ್ತು ಗಣಿತ. ಎಲ್‌ಡಿ ಹೊಂದಿರುವ ಹೆಚ್ಚಿನವರು ಸರಾಸರಿಗಿಂತ ಹೆಚ್ಚಿನ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಇದನ್ನು ಡಿಸ್ಲೆಕ್ಸಿಯಾ ಎಂದು ಕರೆಯುತ್ತಾರೆ. ಈ ತೊಂದರೆಗೆ ಸಂಬಂಧಿಸಿದಂತೆ ನೀವು ಕೇಳಬಹುದಾದ ಇತರ ಪದಗಳು: ಭಾಷೆ ಆಧಾರಿತ ಕಲಿಕಾ ನ್ಯೂನತೆಗಳು ಅಥವಾ ನಿರ್ದಿಷ್ಟ ಕಲಿಕೆಯ ಅಸ್ವಸ್ಥತೆ.
ಈ ತೊಂದರೆಗಳಿಗೆ
ಕಾರಣಗಳು ಏನು?
ಈ ತೊಂದರೆಗಳಿಗೆ ಹಲವು ಕಾರಣಗಳಿವೆ. ಹೆಚ್ಚಿನ ಸಂದರ್ಭಗಳಲ್ಲಿ ಇದು ಯಾವ ಕಾರಣದಿಂದ ಬರುತ್ತದೆ ಎಂದು ತಿಳಿದಿಲ್ಲ. ಆದರೆ ಅನೇಕ ಸಂದರ್ಭಗಳಲ್ಲಿ ಕಲಿಕಾ ಸಮಸ್ಯೆ ಹೊಂದಿರುವ ಮಕ್ಕಳು ಅಂತಹುದೇ ಕಲಿಕೆಯ ತೊಂದರೆಗಳನ್ನು ಹೊಂದಿರುವ ಪೋಷಕರು ಅಥವಾ ಸಂಬಂಧಿಕರನ್ನು ಹೊಂದಿರುತ್ತಾರೆ. ಇತರ ಅಪಾಯಕಾರಿ ಅಂಶಗಳು: ಕಡಿಮೆ ಜನನ ತೂಕ ಮತ್ತು ಅವಧಿಪೂರ್ವ ಜನನ, ಅಥವಾ ಬಾಲ್ಯದಲ್ಲಿ ಗಾಯ ಅಥವಾ ಅನಾರೋಗ್ಯ.
ಮಗುವಿಗೆ ಕಲಿಕಾ ಸಮಸ್ಯೆ
ಇದೆ ಎಂದು ಆರಂಭದಲ್ಲೇ ಹೇಗೆ
ತಿಳಿಯುವುದು?
ಕಲಿಕೆಯಲ್ಲಿ ಅಸಮರ್ಥತೆ ಯಾರಿಗೂ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಆದಾಗ್ಯೂ, ನಿಮ್ಮ ಮಗುವಿಗೆ ಸಹಾಯದ ಅಗತ್ಯವಿದೆ ಎಂದು ಅರ್ಥೈಸುವ ಕೆಲವು ಚಿಹ್ನೆಗಳು ಇವೆ.
ಆರಂಭದಲ್ಲಿ ಈ ಮಕ್ಕಳಲ್ಲಿ ಮಾತು ಮತ್ತು ಭಾಷೆಯ ಸಮಸ್ಯೆಗಳು ಕಂಡುಬರುತ್ತವೆ. ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಓದುವ ಮತ್ತು ಬರೆಯುವ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮ್ಮ ಮಗು ಈ ಕೆಳಗಿನ ಯಾವುದೇ ಚಿಹ್ನೆಗಳನ್ನು ಹೊಂದಿದೆಯೇ ಎಂದು ಗಮನಿಸಿ, ನಿಮ್ಮ ಮಗುವಿನ ವೈದ್ಯರಿಗೆ ತಿಳಿಸಿ.
ಶಾಲೆಗೆ ಹೋಗುವ ಮುಂಚೆ
ಕಂಡು ಬರುವ ಮಾತಿನ
ಸಮಸ್ಯೆಗಳು ಯಾವುವು? (ಅನಂತರ ಈ ಮಕ್ಕಳಲ್ಲಿ ಕಲಿಕಾ ಸಮಸ್ಯೆ ಕಾಣಿಸಬಹುದು)
ಭಾಷಾ ಬೆಳವಣಿಗೆಯಲ್ಲಿ ವಿಳಂಬ
– ಸಾಧಾರಣ 2 ವರ್ಷ ವಯಸ್ಸಿನ ಹೊತ್ತಿಗೆ, ಯಾವುದೇ ಮಗುವಿಗೆ ಸಣ್ಣ ನುಡಿಗಟ್ಟುಗಳಲ್ಲಿ ಅಥವಾ ಸಣ್ಣ ವಾಕ್ಯಗಳಲ್ಲಿ ಮಾತನಾಡಲು ಸಾಧ್ಯವಾಗುತ್ತದೆ. ತೊಂದರೆ ಇರುವ ಮಕ್ಕಳಲ್ಲಿ ಭಾಷಾ ಬೆಳವಣಿಗೆಯಲ್ಲಿ ವಿಳಂಬವಾಗುತ್ತದೆ.
– 3 ವರ್ಷ ವಯಸ್ಸಿನ ಹೊತ್ತಿಗೆ ಮಗು ಸಾಕಷ್ಟು ಮಾತನಾಡಬೇಕು. ಇದರಿಂದ ವಯಸ್ಕರು ಮಗು ಹೇಳುವ ಮಾತನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ತೊಂದರೆ ಹೊಂದಿರುವ ಮಕ್ಕಳ ಮಾತು ಅರ್ಥವಾಗುವುದಿಲ್ಲ.
ಬಣ್ಣಗಳು, ಆಕಾರಗಳು, ಅಕ್ಷರಗಳು ಮತ್ತು ಸಂಖ್ಯೆಗಳನ್ನು ಕಲಿಯುವಲ್ಲಿ ತೊಂದರೆ ಸಾಮಾನ್ಯವಾಗಿ 5 ವರ್ಷ ವಯಸ್ಸಿನ ಹೊತ್ತಿಗೆ, ಸಹಜವಾಗಿ ಬೆಳೆಯುತ್ತಿರುವ ಮಗುವಿಗೆ ತನ್ನ ಬಟ್ಟೆಗಳನ್ನು ಬಟನ್ ಮಾಡಲು, ಕಾಗದದಿಂದ ಆಕಾರಗಳನ್ನು ಕತ್ತರಿಸಲು ಸಾಧ್ಯವಾಗುತ್ತದೆ. ವೃತ್ತ, ಚೌಕ ಅಥವಾ ತ್ರಿಕೋನವನ್ನು ನಕಲು ಮಾಡಲು ಸಾಧ್ಯವಾಗುತ್ತದೆ. ಆದರೆ ಎಲ್‌ಡಿ ಹೊಂದಿರುವ ಮಕ್ಕಳಿಗೆ ಸಮನ್ವಯದಲ್ಲಿ ತೊಂದರೆ ಇರಬಹುದು.
3 ರಿಂದ 5 ವರ್ಷ ವಯಸ್ಸಿನ ನಡುವೆ, ಸಹಜವಾಗಿ ಬೆಳೆಯುತ್ತಿರುವ ಮಗುವಿಗೆ ಒಂದು ಕಡೆ ಕುಳಿತುಕೊಂಡು ಸಣ್ಣ ಕಥೆಯನ್ನು ಕೇಳಲು ಸಾಧ್ಯವಾಗುತ್ತದೆ. ಮಗು ಬೆಳೆದಂತೆ, ಹೆಚ್ಚು ಸಮಯದವರೆಗೆ ಗಮನ ಹರಿಸಲು ಸಾಧ್ಯವಾಗುತ್ತದೆ. ಆದರೆ ಎಲ್‌ಡಿ ಹೊಂದಿರುವ ಮಕ್ಕಳಲ್ಲಿ ಗಮನ ಕಡಿಮೆ ಇರುವುದು ಕಾಣಿಸಬಹುದು. ಉಚ್ಚಾರ ದೋಷ ಮತ್ತು ಉಗ್ಗುವಿಕೆ ಇರುವ ಮಕ್ಕಳಲ್ಲಿ ಶಾಲೆಗೆ ಹೋಗುವಾಗ ಕಲಿಕಾ ದೋಷ ಕಾಣಿಸಬಹುದು.
ಶಾಲೆಗೆ ಹೋಗುವ ಮಕ್ಕಳಲ್ಲಿ
ಕಾಣಿಸುವ ಮಾತಿನ ತೊಂದರೆಗಳು
ಯಾವುವು?
– ಈ ಮಕ್ಕಳಿಗೆ ಹೊಸ ಹೊಸ ಪದಗಳನ್ನು ಕಲಿಯಲು ತೊಂದರೆ, ಭಾಷೆಯನ್ನು ಸಾಮಾನ್ಯ ಸಂಭಾಷಣೆಯಲ್ಲಿ ಬಳಕೆ ಮಾಡಲು ತಿಳಿಯದೆ ಇರುವುದು, ಕಥೆಯನ್ನು ಪುನರಾವರ್ತನೆ ಮಾಡುವುದರಲ್ಲಿ ತೊಂದರೆ, ಧ್ವನಿಯನ್ನು ಬೇಕಾದಂತೆ ಬಳಕೆ ಮಾಡುವಲ್ಲಿ ತೊಂದರೆ, ಜೋಕ್‌ಗಳನ್ನು ಅರ್ಥ ಮಾಡಿಕೊಳ್ಳಲು, ನಿರ್ದೇಶನಗಳನ್ನು ಅನುಸರಿಸಲು, ಸರಿಯಾದ ವ್ಯಾಕರಣವನ್ನು ಬಳಸಲು ತೊಂದರೆಗಳಿರುತ್ತವೆ. ಸರಿಯಾದ ಶಬ್ದವನ್ನು/ಪದ ಉಪಯೋಗಿಸಿ ಯೋಚನೆಗಳನ್ನು ವ್ಯಕ್ತಪಡಿಸಲು ತೊಂದರೆ ಇರುತ್ತದೆ. ಉದಾಹರಣೆಗೆ, ಪೆನ್ನು ಎಂದು ಹೇಳುವ ಬದಲು ಬರೆಯಲು ಉಪಯೋಗಿಸುವ ಸಾಧನ ಎನ್ನುವುದು ಅಥವಾ ಮಾತನಾಡುವಾಗ ಹೆಚ್ಚಿನ ಸಮಯ ತೆಗೆದುಕೊಳ್ಳುವುದು.
– ಹೊಸ ಹೊಸ ಪದಗಳನ್ನು ಗ್ರಹಿಸಲು ತೊಂದರೆ (ಉದಾಹರಣೆಗೆ, ತರಗತಿಯಲ್ಲಿ ಹೇಳಿಕೊಟ್ಟ ಪಾಠದ ಪದಗಳು ಅಥವಾ ಪುಸ್ತಕಗಳಲ್ಲಿ ನೋಡುವ ಹೊಸ ಪದಗಳು), ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ಉತ್ತರಿಸುವುದರಲ್ಲಿ ತೊಂದರೆ, ಕೇಳಿದ ಮತ್ತು ಓದಿದ ಆಜ್ಞೆಗಳನ್ನು ಪಾಲಿಸುವುದರಲ್ಲಿ ತೊಂದರೆ, ಓದಿದ್ದನ್ನು ಅರ್ಥ ಮಾಡಿಕೊಳ್ಳಲು ತೊಂದರೆ, ಪದ್ಯದಲ್ಲಿರುವ ಪದಗಳನ್ನು ಕಲಿಯಲು/ಪ್ರಾಸ ಪದಗಳನ್ನು ಕಲಿಯಲು ತೊಂದರೆ ಇರುತ್ತದೆ.
– ಭಾಷಾ ಬಳಕೆ ಅಥವಾ ಭಾಷೆಯ ವಾಸ್ತವಿಕತೆಯು ಕಲಿಕಾ ದೋಷ ಇರುವ ಮಕ್ಕಳಲ್ಲಿ ಸಾಮಾಜಿಕ ಸಂವಹನ ಮತ್ತು ಸಾಮಾಜಿಕ ಸ್ವೀಕಾರದಲ್ಲಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಭಾಷೆಯ ಜಾಗೃತ ಅರಿವು (Metalinguistic awareness) ಮತ್ತು ಧ್ವನಿವಿಜ್ಞಾನದ ಅರಿವು phonological awareness) ಇದಕ್ಕೆ ಬೇಕಾಗುವ ಅಗತ್ಯವಾದ ಪೂರ್ವಾಪೇಕ್ಷಿತ ಅಂಶಗಳು ಎಂದು ಗುರುತಿಸಲಾಗಿದೆ. ಕಲಿಕಾ ದೋಷ ಹೊಂದಿರುವ ಮಕ್ಕಳಲ್ಲಿ ಇವುಗಳ ತೊಂದರೆಗಳು ಸಾಮಾನ್ಯವಾಗಿ ಇರುತ್ತದೆ. ಆದೇಶಗಳನ್ನು ಅನುಸರಿಸಲು, ನಿಜಾಂಶಗಳನ್ನು ಕಲಿಯಲು ಮತ್ತು ಮಾಹಿತಿಯನ್ನು ನೆನಪಿಡಲು, ಪದಗಳನ್ನು ಓದಲು, ಉಚ್ಚರಿಸಲು, ಸ್ಪಷ್ಟವಾಗಿ ಬರೆಯಲು (ಕಳಪೆ ಕೈಬರಹ ಇರಬಹುದು), ಗಣಿತದ ಲೆಕ್ಕಾಚಾರಗಳು ಅಥವಾ ಪದ ಸಮಸ್ಯೆಗಳನ್ನು ಬಗೆಹರಿಸಲು, ಶಾಲೆಯ ಕೆಲಸಗಳ ಮೇಲೆ ಗಮನ ಕೇಂದ್ರೀಕರಿಸಲು ಮತ್ತು ಮುಗಿಸಲು (ಬಹಳಷ್ಟು ಹಗಲುಗನಸು ಕಾಣಬಹುದು), ಮಾಹಿತಿಯನ್ನು ಸ್ಪಷ್ಟವಾಗಿ ವಿವರಿಸಿ ಹೇಳಲು ಅಥವಾ ಬರೆಯಲು ಕಷ್ಟವಾಗುವುದು. ಮಾತನಾಡುವ ಭಾಷೆಯ ಶಬ್ದಗಳಿಗೆ ಪ್ರತಿಕ್ರಿಯಿಸುವುದಿಲ್ಲ, ಏನು ಹೇಳಲಾಗುತ್ತಿದೆ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು, ಶಬ್ದಗಳಿಗೆ ಅತಿಯಾದ ಸೂಕ್ಷ್ಮತೆ, ಏಕಕಾಲಿಕ ಶಬ್ದಗಳನ್ನು ಪ್ರತ್ಯೇಕಿಸುವಲ್ಲಿ ತೊಂದರೆ ಇರುತ್ತದೆ. ಕಲಿಕಾ ಸಮಸ್ಯೆಯನ್ನು ಸಂಕೀರ್ಣಗೊಳಿಸುವ ಮತ್ತೂಂದು ಸಮಸ್ಯೆ ಎಂದರೆ ದ್ವಿಭಾಷಾ / ಬಹುಭಾಷಾ ಸಿದ್ಧಾಂತ
ಸಾಮಾನ್ಯವಾಗಿ ಕಂಡುಬರುವ
ಕಲಿಕಾ ತೊಂದರೆಗಳು ಯಾವುವು?
ಕಲಿಕಾ ತೊಂದರೆ ಹೊಂದಿರುವ ಪ್ರತೀ ಮಗುವೂ ಈ ಪ್ರಕಾರಗಳಲ್ಲಿ ಅಚ್ಚುಕಟ್ಟಾಗಿ ಹೊಂದಿಕೊಳ್ಳುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಎಚ್ಚರಿಕೆಯಿಂದ ಗುರುತಿಸುವುದು ಮುಖ್ಯ.
ಓದುವಿಕೆಯ ಸಮಸ್ಯೆ: ಅಕ್ಷರಗಳ ಹೆಸರುಗಳು ಮತ್ತು ಅವುಗಳು ಮಾಡುವ ಸದ್ದುಗಳನ್ನು ನೆನಪಿಟ್ಟುಕೊಳ್ಳಲು, ಶಬ್ದಗಳು ಅಕ್ಷರಗಳಿಂದ ಮಾಡಲ್ಪಟ್ಟಿವೆ ಎಂದು ಅರ್ಥಮಾಡಿಕೊಳ್ಳಲು, ಪದಗಳನ್ನು ಸರಿಯಾದ ವೇಗದಲ್ಲಿ ಮತ್ತು ಸರಿಯಾಗಿ ಓದಲು ಹಾಗೂ ಅಕ್ಷರಗಳ ಕಾಗುಣಿತವನ್ನು ಓದಲು ಕಷ್ಟವೆನಿಸುತ್ತದೆ.
ಓದುವಾಗ ಉಂಟಾಗುವ ತಪ್ಪುಗಳು: ಊಹಿಸದಂಥ ಪದಗಳು (ಉದಾಹರಣೆ: “ಕುರ್ಚಿ’ ಪದವನ್ನು “ಚಾಕು’ ಎಂದು ಓದಬಹುದು), ಪದ ಮಿಶ್ರಣಗಳಲ್ಲಿ ಮತ್ತು ದೀರ್ಘ ಪದಗಳನ್ನು ಓದುವಲ್ಲಿ ಮಗುವಿಗೆ ತೊಂದರೆ ಇರಬಹುದು. ಪದಗಳನ್ನು ರಚಿಸುವಾಗ ಅಕ್ಷರ ಜೋಡಿಸುವಿಕೆ ಮತ್ತು ಕ್ರಮದಲ್ಲಿ ತೊಂದರೆ ಇರುವುದು (ಉದಾ: “ಕಪಟ’ ಎಂದು ಓದುವ ಬದಲು “ಕಟಪ’ ಎಂದು ಓದುವುದು).
ಬರವಣಿಗೆಯ ಸಮಸ್ಯೆ: ಪೆನ್ ಅಥವಾ ಪೆನ್ಸಿಲ್ ಬಳಸಲು, ಅಕ್ಷರಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ನೆನಪಿಸಿಕೊಳ್ಳಲು, ಆಕಾರಗಳನ್ನು ನಕಲು ಮಾಡುವುದು, ರೇಖೆಗಳನ್ನು ಚಿತ್ರಿಸುವುದು, ಆಲೋಚನೆಗಳು- ಭಾವನೆಗಳನ್ನು ಕಾಗದದಲ್ಲಿ ಸಂಘಟಿಸುವುದು ಮತ್ತು ಬರೆಯುವುದು, ಕಾಗುಣಿತ ಮತ್ತು ವಿರಾಮಚಿಹ್ನೆ ಬಳಸಲು ತೊಂದರೆ, ಅಕ್ಷರಗಳನ್ನು ಬರೆಯುವಾಗ ಅದಲು ಬದಲು ಮಾಡುವುದು.
ಗಣಿತದ ಸಮಸ್ಯೆ: ಆಕಾರಗಳನ್ನು ಗುರುತಿಸುವುದು ಮತ್ತು ಚಿತ್ರಿಸುವುದು, ಸಂಖ್ಯೆ ಮೌಲ್ಯಗಳು, ಪ್ರಮಾಣ ಮತ್ತು ಕ್ರಮದಂತಹ ಗಣಿತ ಪರಿಕಲ್ಪನೆಗಳು, ಸಮಯ, ಹಣ ಮತ್ತು ಅಳತೆಯನ್ನು ಅರ್ಥಮಾಡಿಕೊಳ್ಳುವುದು, ಭಿನ್ನರಾಶಿಗಳು, ಶೇಕಡಾವಾರು, ಬೀಜಗಣಿತ ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುವ ತೊಂದರೆಗಳು. ಇದರೊಂದಿಗೆ ಅಂಕೆಗಳನ್ನು ಬರೆಯಲು ತೊಂದರೆ ಇರುತ್ತದೆ. ಕೂಡಿಸುವುದು, ಕಳೆಯುವುದು (+/-) ಕಷ್ಟವಾಗುತ್ತದೆ.
ಇದಲ್ಲದೆ ವರ್ಣಮಾಲೆ ಮತ್ತು ಸಂಖ್ಯೆಗಳನ್ನು ಕಲಿಯಲು/ಕಾಗುಣಿತ ಗುರುತಿಸುವುದರಲ್ಲಿ ತೊಂದರೆ, ಯಾವಾಗಲೂ ಅಂದಾಜು ಮಾಡುವುದು, ಪದೇ ಪದೇ ಒಂದೇ ಶಬ್ದವನ್ನು ಹೇಳುವುದು. ಓದುವಾಗ ಓದುವ ಸಾಲಿನಲ್ಲಿ ಬೆರಳಿಟ್ಟುಕೊಂಡು ಓದುವುದು ಅಥವಾ ಹಿಂಜರಿಯುತ್ತಾ ಓದುವುದು, ತಪ್ಪಾಗಿ ಉಚ್ಚರಿಸುವುದು, ಎಡ -ಬಲದ ತೊಂದರೆ, ಸಮಯ ಕೋಷ್ಟಕಗಳನ್ನು ನೆನಪಿಟ್ಟುಕೊಳ್ಳಲು /ಸಮಯ ಹೇಳುವುದರಲ್ಲಿ ತೊಂದರೆ- ಇವುಗಳನ್ನೆಲ್ಲ ಈ ಮಕ್ಕಳಲ್ಲಿ ಕಾಣಬಹುದು.
ಕಲಿಕಾ ಸಮಸ್ಯೆ ಇರುವ ಮಕ್ಕಳಲ್ಲಿ ಯಾವ ಯಾವ ದೈಹಿಕ ತೊಂದರೆಗಳು ಇರುತ್ತವೆ?
ಕಲಿಕೆಯ ಸಮಸ್ಯೆಯಿರುವ ಮಕ್ಕಳು ಕಲಿಯಲು, ಅರ್ಥ ಮಾಡಿಕೊಳ್ಳಲು, ಓದಲು, ಸಂಭಾಷಿಸಲು ಬರೆಯಲು, ಗಣಿತದ ಲೆಕ್ಕಾಚಾರಗಳನ್ನು ಮಾಡಲು ಕಷ್ಟಪಡುತ್ತಾರೆ. ಸಹಜವಾಗಿ ಇಂತಹ ಮಕ್ಕಳ ನಿರ್ವಹಣೆಯಲ್ಲಿ ವಾಕ್ ಶ್ರವಣ ತಜ್ಞರ ಪಾತ್ರ ಪ್ರಮುಖವಾಗಿರುತ್ತದೆ. ಶಾಲೆಗೆ ದಾಖಲಾತಿಯ ಅನಂತರ ಗುರುತಿಸಲ್ಪಡುವ ಇಂತಹ ಸಮಸ್ಯೆಗಳಿರುವ ಮಕ್ಕಳು ವಯಸ್ಸಿಗೆ ಸಹಜವಾದ ಚಲನೆಗೆ ಸಂಬಂಧಿಸಿದ ಬೆಳವಣಿಗೆಯ ಮೈಲುಗಲ್ಲುಗಳನ್ನು ಅಂದರೆ ನಡೆಯುವ, ಓಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.
ಫಿಸಿಯೋಥರಪಿಯ ಅಗತ್ಯ ಪಾಲಕರು, ಶಿಕ್ಷಕರ ಪ್ರಕಾರ ಇರುವುದಿಲ್ಲ. ಆದರೆ ವಾಸ್ತವದಲ್ಲಿ ಇಂತಹ ಮಕ್ಕಳಲ್ಲಿ ದೈಹಿಕ ಕಾರ್ಯಕ್ಷಮತೆಗೆ ಸಂಬಂಧಿಸಿದ ತೊಂದರೆಗಳು ಸ್ವಲ್ಪ ಮಟ್ಟಿಗೆ ಅಥವಾ ಪೂರ್ತಿ ಮಟ್ಟಕ್ಕೆ ಇರುತ್ತವೆ. ಇವುಗಳಲ್ಲಿ ಮುಖ್ಯವಾದುವು:
ಪೂರ್ಣ ಚಲನೆಯ ಕೌಶಲಗಳು
(Gross motor skills) ಅಂದರೆ ದೈನಂದಿನ ಚಟುವಟಿಕೆಗಳಾದ ನಡೆಯುವುದು, ಓಡುವುದು, ಹಾರುವುದು, ಟೊಂಕ ಹಾಕುವುದು, ಹಗ್ಗ ಜಿಗಿತ, ಸೈಕ್ಲಿಂಗ್, ಈಜುವುದು- ಇಂತಹ ಕೌಶಲಗಳನ್ನು ಗಳಿಸುವುದರಲ್ಲಿ ವಿಳಂಬವಾಗುವುದು. ಯಾಕೆಂದರೆ ಈ ಕೌಶಲಗಳಿಗೆ ಇಡೀ ದೇಹದ ಭಾಗಗಳ ಸಂತುಲಿತ ಚಲನೆ ಬೇಕಾಗುತ್ತದೆ. ಇವುಗಳನ್ನು ಮಾಡಲು ದೇಹದ ಪ್ರಮುಖ ದೊಡ್ಡ ಮಾಂಸಖಂಡಗಳ ಅಗತ್ಯ ಇರುತ್ತದೆ ಮತ್ತು ಕೈ ಮತ್ತು ಕಣ್ಣುಗಳ ಸಂಯೋಜನೆಯ ಅಗತ್ಯ ಕೂಡ ಇರುತ್ತದೆ. ಈ ರೀತಿಯ ವಿಳಂಬದಿಂದ ಮೈದಾನದಲ್ಲಿ ಸಹಪಾಠಿಗಳೊಂದಿಗೆ ಸರಿಸಮವಾಗಿ ಆಟವಾಡುವುದು, ಹೊಸ ರೀತಿಯ ದೈಹಿಕ ಕೌಶಲಗಳನ್ನು ಗಳಿಸುವುದು ಅವರಿಗೆ ಕಷ್ಟವಾಗುತ್ತದೆ. ಅಸಮರ್ಪಕ ಭಂಗಿ, ಅಸಮತೋಲನ, ಜಡತ್ವ ಕಂಡುಬರುತ್ತವೆ. ಈ ಸಮಸ್ಯೆಗಳಿಗೆ ಕೆಳಗೆ ತಿಳಿಸಿದ ನಾನಾ ವಿಧದ ಚಲನೆಯ, ಸಂವೇದನೆಯ ಅಥವಾ ಮೂಳೆ ಮಾಂಸಖಂಡಗಳ ತೊಂದರೆಗಳು ಕಾರಣವಾಗಿರುತ್ತವೆ.
ಮಾಂಸಖಂಡಗಳ ಗಡಸುತನ ಕಡಿಮೆ ಇರುವುದು (Low muscle Tone): ಕಲಿಕೆಯ ಸಮಸ್ಯೆಯಿರುವ ಮಕ್ಕಳಲ್ಲಿ ಈ ತೊಂದರೆ ಇದ್ದಲ್ಲಿ ಅವರು ಚಲನೆಗೆ, ಚಲನ ಕೌಶಲಗಳಿಗೆ ಸಾಧಾರಣ ಮಕ್ಕಳಿಗಿಂತ ಅಧಿಕ ಬಲ ಮತ್ತು ಅಧಿಕ ಶಕ್ತಿ ಉಪಯೋಗಿಸಬೇಕಾಗುತ್ತದೆ. ಸಂದುಗಳು ಹೆಚ್ಚು ಸಡಿಲವಾಗಿರುತ್ತವೆ. ಕಡಿಮೆ ಸಹಿಷ್ಣುತೆ ಇರುತ್ತದೆ. ಈ ಮಕ್ಕಳಲ್ಲಿ ಬೇಗನೇ ಸುಸ್ತಾಗುವುದು, ಅಸಮರ್ಪಕ ಭಂಗಿ, ಕುಳಿತು ಮಾಡುವ ಕೆಲಸಗಳನ್ನು ಇಷ್ಟ ಪಡುವುದು, ಸ್ಪರ್ಧಾತ್ಮಕ ಆಟೋಟಗಳಲ್ಲಿ ಕಡಿಮೆ ಭಾಗವಹಿಸುವುದು ಮುಂತಾದುವು ಕಂಡುಬರುತ್ತವೆ.
ಚಲನೆಯನ್ನು ನಿಖರವಾಗಿ ಸಮಯಕ್ಕೆ ಸರಿಯಾಗಿ ಸಂಯೋಜಿಸುವ ಮತ್ತು ಕಾರ್ಯಗತಗೊಳಿಸುವ ಸಾಮರ್ಥ್ಯ (Motor learning Difficulties) ಕಡಿಮೆ ಇರುತ್ತದೆ. ಇದು ಜಡತ್ವ ಅಥವಾ ಮುಜುಗರದ ರೀತಿಯಲ್ಲಿ ಪ್ರಕಟವಾಗುತ್ತದೆ. ಪದೇ ಪದೆ ಬೀಳುವ, ಆಧಾರ ತಪ್ಪುವ, ಸಮನ್ವಯದ ತೊಂದರೆಗಳು ಕಂಡುಬರುತ್ತವೆ.
ಕಡಿಮೆ ಬಲ ಮತ್ತು ತಾಳಿಕೊಳ್ಳುವಿಕೆ (Poor strength and endurance) : ಇದು ಎಷ್ಟು ಹೊತ್ತಿನವರೆಗೆ ಮಗುವಿನ ಮಾಂಸಖಂಡಗಳು ಕೆಲಸ ಮಾಡಬಲ್ಲವು ಎಂಬುದಕ್ಕೆ ಸಂಬಂಧಿಸಿದೆ. ಮುಖ್ಯವಾಗಿ ಪ್ರಧಾನ ಮಾಂಸಖಂಡಗಳು ಅಂದರೆ, ಹೊಟ್ಟೆಯ ಮತ್ತು ಬೆನ್ನಿನ ಮಾಂಸಖಂಡಗಳ ಭಾಗವಹಿಸುವಿಕೆ ಕಡಿಮೆ ಇದ್ದಲ್ಲಿ ಮಾಂಸಖಂಡಗಳನ್ನು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಬಳಸಿಕೊಳ್ಳಲು ಕಷ್ಟವಾಗುವುದು. ದೈನಂದಿನ ಚಟುವಟಿಕೆಗಳಾದ ಭಾರವಾದ ಶಾಲೆಯ ಚೀಲಗಳನ್ನು ಹೊರುವುದು, ಪೆನ್, ಪೆನ್ಸಿಲ್ ಹಿಡಿದುಕೊಳ್ಳುವುದು ಕಷ್ಟವಾಗುತ್ತದೆ.
ಅಸಮರ್ಪಕ ಭಂಗಿ (Poor posture): ಇದು ಲೋ ಮಸಲ್ ಟೋನ್ ಅಥವಾ ಗಡಸು ಕಡಿಮೆ ಇರುವುದರಿಂದ ಮತ್ತು ಬಲ ಕಡಿಮೆ ಇರುವುದರಿಂದ ಉಂಟಾಗುತ್ತದೆ. ಇದು ಮಗು ಮೇಲು ಮಟ್ಟದ ಚಲನ ಕೌಶಲಗಳನ್ನು ಕಲಿಯುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದು ಮಗು ತರಗತಿಯಲ್ಲಿ ಭಾಗವಹಿಸುವ ಅಥವಾ ಚಟುವಟಿಕೆಗಳ ಕಡೆಗೆ ಗಮನಹರಿಸುವುದರ ಮೇಲೆ ಪರಿಣಾಮ ಬೀರುತ್ತದೆ.
ವಿಳಂಬವಾದ ಸಮತೋಲನದ ಪ್ರತಿಕ್ರಿಯೆಗಳು (Delayed Balance reactions): ಸಮತೋಲನ ಅಂದರೆ ಒಂದು ಕೆಲಸದ ಸಮಯದಲ್ಲಿ ದೇಹದ ಸ್ಥಿತಿಯನ್ನು ನಿಯಂತ್ರಿಸುವ ಸಾಮರ್ಥ್ಯ. ಉದಾಹರಣೆಗೆ, ಕುರ್ಚಿಯಲ್ಲಿ ಕುಳಿತುಕೊಳ್ಳುವುದು, ನಡೆಯುವುದು, ಒಂದೇ ಗೆರೆಯ ಮೇಲೆ ನಡೆಯುವುದು. ಸಮತೋಲನ ತಪ್ಪಿದಾಗ ನೇರವಾಗಿ ನಿಲ್ಲಲು ಬೇಕಾಗುವ ಸ್ವಯಂಚಾಲಿತ ಪ್ರತಿಕ್ರಿಯೆಗಳು, ಬೀಳುತ್ತಿರುವಾಗ ಪೆಟ್ಟಾಗುವುದನ್ನು ತಪ್ಪಿಸಲು ಬೇಕಾಗುವ ರಕ್ಷಣಾ ಪ್ರತಿಕ್ರಿಯೆಗಳು ಮುಂತಾದ ಚಟುವಟಿಕೆಗಳು ಕಡಿಮೆ ಇರುತ್ತವೆ.
ಈ ಮಕ್ಕಳಿಗೆ ಯಾರೆಲ್ಲ ಸಹಾಯ ಮಾಡಬಹುದು?
ಪೋಷಕರು, ಅಧ್ಯಾಪಕರು, ವಿಶೇಷ ತರಬೇತಿ ಹೊಂದಿದ ಅಧ್ಯಾಪಕರು, ಮಾನಸಿಕ ತಜ್ಞರು, ವಾಕ್ ಶ್ರವಣ ತಜ್ಞರು, ದೈಹಿಕ (ಫಿಸಿಯೋಥೆರಪಿ) ತಜ್ಞರು ಮತ್ತು ಆಕ್ಯುಪೇಶನಲ್ ಥೆರಪಿ ತಜ್ಞರು ಸಹಾಯ ಮಾಡಬಹುದು. ಆದರೆ ಇಂತಹ ಮಕ್ಕಳ ಸಮಗ್ರ ಯೋಗಕ್ಷೇಮಕ್ಕೆ ಎಲ್ಲ ತಜ್ಞರ ಸಂಘಟಿತ ಸಹಾಯ ಅತೀ ಅಗತ್ಯವಿದೆ.
ಕಲಿಕಾ ದೋಷವನ್ನು ಎಷ್ಟು ಬೇಗನೆ
ಕಂಡು ಹಿಡಿಯಬಹುದು?
ಈ ತೊಂದರೆಯನ್ನು ಶಾಲೆಗೆ ಹೋಗುವ ಮುನ್ನ ಕಂಡುಹಿಡಿಯುವುದು ಉತ್ತಮ. ಬೇಗನೆ ಕಂಡುಹಿಡಿದು, ಓದಲು ಮತ್ತು ಬರೆಯಲು ಸರಿಯಾದ ತರಬೇತಿಯನ್ನು ಕೊಟ್ಟರೆ ಮಗುವು ಮುಂದೆ ಶಾಲೆಯಲ್ಲಿ ಕಲಿಯುವಿಕೆಗೆ ಚೆನ್ನಾಗಿ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.
ಕಲಿಕಾ ದೋಷ ಇರುವ ಮಕ್ಕಳಲ್ಲಿ
ವಾಕ್ ಶ್ರವಣ ತಜ್ಞರ ಪಾತ್ರವೇನು?
ನಿಮ್ಮ ಮಗುವಿಗೆ ಕಲಿಕೆಯಲ್ಲಿ ಏಕೆ ತೊಂದರೆ ಇದೆ ಎಂದು ನೋಡಲು ಕೆಲವು ಪರೀಕ್ಷೆಗಳನ್ನು ಮಾಡಲಾಗುತ್ತದೆ. ನಿಮ್ಮ ಮಗು ಎಷ್ಟು ಚೆನ್ನಾಗಿ ಆಲಿಸುತ್ತದೆ, ಮಾತನಾಡುತ್ತದೆ, ಓದುತ್ತದೆ ಮತ್ತು ಬರೆಯುತ್ತದೆ ಎಂಬುದನ್ನು ವಾಕ್ ಶ್ರವಣ ತಜ್ಞರು ಪರೀಕ್ಷಿಸಬಹುದು. ವಾಕ್ ಶ್ರವಣ ತಜ್ಞರು ಕಿರಿಯ ಮತ್ತು ಹಿರಿಯ ಮಕ್ಕಳೊಂದಿಗೆ ವಿಭಿನ್ನ ಕೌಶಲಗಳನ್ನು ಪರೀಕ್ಷಿಸಬಹುದು. ಕಲಿಕಾ ಸಮಸ್ಯೆಯಿರುವ ಮಕ್ಕಳ ಚಿಕಿತ್ಸೆಯು ನಿಮ್ಮ ಮಗುವಿಗೆ ಏನು ಬೇಕೋ ಅದನ್ನು ಅವಲಂಬಿಸಿರುತ್ತದೆ. ವಾಕ್ ಶ್ರವಣ ತಜ್ಞರು ಅದನ್ನು ಗುರುತಿಸಿ ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ನೀಡುತ್ತಾರೆ. ಮಗುವಿಗೆ ನೀವು ಮನೆಯಲ್ಲಿ ಏನು ಹೇಳಿಕೊಡಬಹುದೆಂಬುದಕ್ಕೆ ಕೆಲವು ಉದಾಹರಣೆಗಳೆಂದರೆ: ಪುಸ್ತಕಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಹೇಳಿಕೊಡಿ. ಇದು ಪುಟಗಳನ್ನು ಹೇಗೆ ತಿರುಗಿಸಬೇಕು ಮತ್ತು ಪುಟದಲ್ಲಿ ಪದಗಳನ್ನು ಹೇಗೆ ಅನುಸರಿಸಬೇಕು ಎಂಬುದನ್ನು ಒಳಗೊಂಡಿದೆ. ಅಕ್ಷರಗಳಿಗೆ ಹೊಂದಿಕೆಯಾಗುವ ಶಬ್ದಗಳು, ಕಥೆಯನ್ನು ಕೇಳಿದ ಅನಂತರ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳುವುದು ಮತ್ತು ಬರೆಯುವುದು, ಮಗು ಕಥೆಯನ್ನು ಪುನಃ ಹೇಳಲು, ಅನಂತರ ಸಾರಾಂಶವನ್ನು ಬರೆಯಲು, ಇತರ ಕೌಶಲಗಳನ್ನು ಕಲಿಯಲು ಮತ್ತು ಲಿಖೀತ ಪದಗಳನ್ನು ಬಳಸಲು ಪ್ರೋತ್ಸಾಹಿಸಿರಿ.
ಕಲಿಕಾ ದೋಷ ಇರುವ ಮಕ್ಕಳಲ್ಲಿ ಫಿಸಿಯೋಥೆರಪಿ
ತಜ್ಞರ ಪಾತ್ರವೇನು? ನಿಮ್ಮ ಮಗುವಿಗೆ ದೈಹಿಕ
ತೊಂದರೆಗಳು ಇವೆ ಎಂದು ಹೇಗೆ ಗುರುತಿಸುವುದು?
ಬೆಳವಣಿಗೆಯ ಮೈಲುಗಲ್ಲುಗಳನ್ನು ತಲುಪಲು ವಿಳಂಬವಾಗುವುದು, ದೈಹಿಕ ಚಟುವಟಿಕೆಗಳಿಂದ ದೂರವಿರುವುದು, ಸ್ವಲ್ಪ ಸಮಯ ಮಾತ್ರ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು, ಸಮಾನ ವಯಸ್ಸಿನ ಮಕ್ಕಳಿಗಿಂತ ಕಡಿಮೆ ಕ್ಷಮತೆ ತೋರುವುದು, ಬೇಗನೆ ಸುಸ್ತಾಗುವುದು, ಗಂಟು ಅಥವಾ ಮಾಂಸಖಂಡದ ನೋವು, ಭಂಗಿಯನ್ನು ಕಾಯ್ದುಕೊಳ್ಳಲು ಮಾಡಲು ಕಷ್ಟಪಡುವುದು, ಸುಲಭವಾಗಿ ಬೀಳುವುದು, ಆಧಾರ ತಪ್ಪಿದಾಗ ಬೇಗನೆ ಹಿಂದಿನ ಸ್ಥಿತಿಗೆ ಮರಳಲು ಆಗದೆ ಇರುವುದು, ರೋಬೋಟ್‌ನಂತೆ ನಡೆಯುವುದು, ಆಟೋಟಗಳನ್ನು ದೂರ ಮಾಡುವುದು, ಸಮಾನ ವಯಸ್ಕರಿಗಿಂತ ಸೈಕ್ಲಿಂಗ್, ಮರ ಹತ್ತುವುದು, ಈಜುವುದರಲ್ಲಿ ಹಿಂದಿರುವುದು, ಉಯ್ನಾಲೆಯಂತಹ ಎತ್ತರದ ಜಾಗಗಳನ್ನು ದೂರ ಮಾಡುವುದು, ಒಂದು ಕಾಲಿನ ಮೇಲೆ ನಿಂತು ಮಾಡಬೇಕಾದ ಚಟುವಟಿಕೆಗಳನ್ನು ಕುಳಿತು ಮಾಡುವುದು, ಮೆಟ್ಟಿಲು ಹತ್ತಲು, ಏರುತಗ್ಗು ಇರುವ ನೆಲದ ಮೇಲೆ ನಡೆಯಲು ಕಷ್ಟಪಡುವಂತಹ ಸಮಸ್ಯೆಗಳು ಕಂಡುಬರಬಹುದು.
ಕಲಿಕೆಯ ಸಮಸ್ಯೆಯಿರುವ ಎಲ್ಲ ಮಕ್ಕಳಿಗೆ ಫಿಸಿಯೋಥೆರಪಿಯ ಅಗತ್ಯ ಇರದೇ ಇರಬಹುದು. ಮೊದಲನೆಯದಾಗಿ, ಪ್ರಾಥಮಿಕ ಕೂಲಂಕಷವಾದ ಪರೀಕ್ಷೆ ಬೇಕಾಗುತ್ತದೆ. ಇದು ನಮಗೆ ನಿಖರವಾದ ಅಡ್ಡಿಗಳನ್ನು ಮತ್ತು ಮಿತಿಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಈ ಸಮಯದಲ್ಲಿ ಬಲಹೀನತೆ, ಚಲನೆಯ ಪರಿಮಿತಿ ಕಡಿಮೆಯಾಗಿರುವುದು, ಬದಲಾದ ಕ್ರಿಯಾತ್ಮಕ ಚಲನೆಯ ಮಾದರಿ, ಕ್ರಿಯಾತ್ಮಕ ಚಲನೆಯ ಸಾಮರ್ಥ್ಯಗಳನ್ನು ಗುರುತಿಸಲಾಗುವುದು. ಆಧಾರ ಮತ್ತು ಸಂಯೋಜನೆಯ ಮಟ್ಟವನ್ನು ತಿಳಿದುಕೊಳ್ಳಲಾಗುವುದು. ಇಲ್ಲಿ ಮಗುವಿನ ಬೆಳವಣಿಗೆಯ ಮೈಲುಗಲ್ಲುಗಳನ್ನು ಆಧಾರವಾಗಿಟ್ಟುಕೊಂಡು ಪರೀಕ್ಷೆ ಮಾಡಲಾಗುವುದು. ಅನಂತರ ವೈಯಕ್ತಿಕ ಫಿಸಿಯೋಥೆರಪಿ ತರಬೇತಿ ಕೊಡಲಾಗುವುದು. ನಮ್ಮ ಮುಖ್ಯ ಗುರಿಗಳೆಂದರೆ, ಮಕ್ಕಳಲ್ಲಿ ವಿಶ್ವಾಸ ಮತ್ತು ತನ್ನಲ್ಲಿ ನಂಬಿಕೆ ಹುಟ್ಟುವಂತೆ ಮಾಡುವುದು, ಬಲ ಜಾಸ್ತಿ ಮಾಡುವುದು, ಸಡಿಲತೆಯನ್ನು ನಿರ್ವಹಿಸುವುದು, ಚಲನ ಮಾದರಿಗಳನ್ನು ಮಾಡುವುದು, ಸಮತೋಲನ ಮತ್ತು ಸಂಯೋಜನೆಯ ತರಬೇತಿ, ಜೀವನದ ಗುಣಮಟ್ಟವನ್ನು ಸುಧಾರಿಸುವುದು. ನಿಮ್ಮ ಮಗುವಿಗೆ ಮಾತು, ಭಾಷೆಯ ಹಾಗೂ ಕಲಿಕಾ ಸಮಸ್ಯೆಗಳಿವೆ ಎಂದು ನೀವು ಭಾವಿಸಿದರೆ ವಾಕ್ ಶ್ರವಣ ತಜ್ಞರನ್ನು ಸಂಪರ್ಕಿಸಿ. ಯಾವುದೇ ದೈಹಿಕ ಸಾಮರ್ಥ್ಯದ ಕೊರತೆ ಇದೆ ಎಂದು ಭಾವಿಸಿದರೆ ಫಿಸಿಯೋಥೆರಪಿ ತಜ್ಞರನ್ನು ಸಂಪರ್ಕಿಸಿ.
-ಡಾ| ವೀಣಾ ಕೆ.ಡಿ.
ಅಸೋಸಿಯೇಟ್ ಪ್ರೊಫೆಸರ್,
ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗ,
ಎಂಸಿಎಚ್‌ಪಿ, ಮಾಹೆ, ಮಣಿಪಾಲ
ಶುಭಾ ರಮಾನಾಥ ನಾಯಕ್
ಅಸಿಸ್ಟೆಂಟ್ ಲೆಕ್ಚರರ್, ಫಿಸಿಯೋಥೆರಪಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ಹೊಸ ಸೇರ್ಪಡೆ
Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ
Congress Session: ಬೆಳಗಾವಿ ಕಾಂಗ್ರೆಸ್ ಅಧಿವೇಶನ ಜ.21ಕ್ಕೆ ಮರುನಿಗದಿ
ಎಎನ್‌ಎಫ್‌ಗೆ ಸಿಗದ ನಕ್ಸಲರು ಸಿಎಂಗೆ ಸಿಕ್ಕಿದ್ದು ಹೇಗೆ?: ಶಾಸಕ ಸುನೀಲ್ ಕುಮಾರ್
Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.