ಸಡಿಲವಾಗುತ್ತಿದೆ ನಿರ್ಬಂಧದ ಸರಪಳಿ
ಬಹುತೇಕ ದೇಶಗಳಲ್ಲಿ ತೆರವಾಗುತ್ತಿದೆ ಲಾಕ್‌ಡೌನ್ ; ನಮ್ಮಲ್ಲೂ ಅನ್‌ಲಾಕ್ ಪ್ರಕ್ರಿಯೆ ಶುರು
Team Udayavani, Jun 2, 2020, 6:40 AM IST
ರಷ್ಯಾ ರಾಜಧಾನಿ ಮಾಸ್ಕೋದ ಮಾರುಕಟ್ಟೆಯಲ್ಲಿ ಇಬ್ಬರು ಯುವತಿಯರು ಫೇಸ್‌ಶೀಲ್ಡ್ ಧರಿಸಿ ಬೆಂಚ್‌ನಲ್ಲಿ ಕುಳಿತಿರುವುದು.
ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೋವಿಡ್-19 ಎಂಬ ಅಗೋಚರ ವೈರಸ್ ಬಹುತೇಕ ಎಲ್ಲ ದೇಶಗಳನ್ನೂ ಸ್ತಬ್ಧಗೊಳಿಸಿದ್ದು ಸತ್ಯ. ಆದರೆ, ಈಗ ಸೋಂಕಿನ ಪ್ರಭಾವ ಮುಂದುವರಿದಿದ್ದರೂ, ಒಂದೊಂದೇ ದೇಶಗಳು ಲಾಕ್‌ಡೌನ್‌ನ ಸರಪಳಿಯಿಂದ ತಮ್ಮನ್ನು ತಾವು ಬಿಡಿಸಿಕೊಳ್ಳುತ್ತಾ ಬರುತ್ತಿವೆ. ಬಹುತೇಕ ದೇಶಗಳಲ್ಲಿ ಮೇ ಆರಂಭದಿಂದಲೇ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ನಮ್ಮ ದೇಶದಲ್ಲೂ ಹಂತ ಹಂತವಾಗಿ ನಿರ್ಬಂಧ ತೆರವುಗೊಳಿಸುವುದಾಗಿ ಘೋಷಿಸಿರುವ ಕೇಂದ್ರ ಸರಕಾರ, ಸೋಮವಾರದಿಂದಲೇ ಅನ್‌ಲಾಕ್ 1 ಜಾರಿ ಮಾಡಿದೆ.
ಅಮೆರಿಕ
ಕೋವಿಡ್-19 ಹಾಟ್‌ಸ್ಪಾಟ್ ದೇಶಗಳ ಪೈಕಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿನ ವ್ಯಾಪಿಸುವಿಕೆ ವಿವಿಧ ಪ್ರಾಂತ್ಯಗಳಲ್ಲಿ ಭಿನ್ನ ಭಿನ್ನವಾಗಿರುವ ಕಾರಣ, ಅದಕ್ಕೆ ಅನುಗುಣವಾಗಿಯೇ ಲಾಕ್‌ಡೌನ್ ತೆರವು ಪ್ರಕ್ರಿಯೆ ಆರಂಭಿಸಲಾಗಿದೆ. ಮೇನಲ್ಲಿಯೇ ಬಹುತೇಕ ಪ್ರಾಂತ್ಯಗಳಲ್ಲಿ ಸೀಮಿತ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಕೋವಿಡ್-19 ಕೇಂದ್ರಸ್ಥಾನ ನ್ಯೂಯಾರ್ಕ್ ಹೊರತುಪಡಿಸಿ ಉಳಿದೆಡೆ ಈಗ ಬಹುತೇಕ ಚಟುವಟಿಕೆಗಳು ಆರಂಭವಾಗಿವೆ. ಧಾರ್ಮಿಕ ಕೇಂದ್ರಗಳು, ಸಲೂನ್, ಚಿಲ್ಲರೆ ಮಳಿಗೆಗಳನ್ನು ತೆರೆಯಲಾಗಿವೆ. 35 ಪ್ರಾಂತ್ಯಗಳಲ್ಲಿ ರೆಸ್ಟಾರೆಂಟ್, ಬಾರ್ ಸೇರಿದಂತೆ ಆವಶ್ಯಕವಲ್ಲದ ವಹಿವಾಟುಗಳು ಪುನಾರಂಭಗೊಂಡಿವೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆಯಂಥ ನಿಯಮ ಕಡ್ಡಾಯಗೊಳಿಸಲಾಗಿದೆ. ನ್ಯೂಯಾರ್ಕ್ ನಲ್ಲಿ ಲಾಕ್ ಡೌನ್ ಮುಂದುವರಿದಿದ್ದು, ಜೂ.8ರಂದು ನಿರ್ಬಂಧ ಮೊದಲ ಹಂತದಲ್ಲಿ ತೆರವಾಗುವ ಸಾಧ್ಯತೆಯಿದೆ.
ಜರ್ಮನಿ
ಜರ್ಮನಿ ಸರಕಾರವು ಲಾಕ್‌ಡೌನ್ ತೆರವು ನಿರ್ಧಾರವನ್ನು ಆಯಾ ಪ್ರಾಂತ್ಯಗಳ ಸರಕಾರಕ್ಕೆ ಬಿಟ್ಟಿದೆ. ಜತೆಗೆ, ಯಾವುದೇ ಪ್ರದೇಶದಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಳವಾದರೆ, ಮತ್ತೆ ನಿರ್ಬಂಧ ಜಾರಿ ಮಾಡಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ. ಜನರಿಗೆ ಪರಸ್ಪರ ಸಂಪರ್ಕಿಸಲು, ಒಟ್ಟು ಸೇರಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಅಂಗಡಿಗಳು, ಸಣ್ಣ ಉದ್ದಿಮೆಗಳನ್ನು ಈಗಾಗಲೇ ತೆರೆಯಲಾಗಿದೆ. ಪದವಿ ತರಗತಿಗಳು ಹಾಗೂ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆ-ಕಾಲೇಜುಗಳಿಗೆ ಬರಲು ಅನುಮತಿ ನೀಡಲಾಗಿದೆ.
ಇಟಲಿ
ಸೋಂಕಿನ ವ್ಯಾಪಿಸುವಿಕೆಯ ವೇಗಕ್ಕೆ ಸ್ವಲ್ಪಮಟ್ಟಿಗೆ ಕಡಿವಾಣ ಬಿದ್ದ ಬಳಿಕ, ಅಂದರೆ ಮೇ ಆರಂಭದಲ್ಲಿ ಇಟಲಿಯಾದ್ಯಂತ ಲಾಕ್‌ಡೌನ್ ಸಡಿಲಿಕೆ ಮಾಡುತ್ತಾ ಬರಲಾಗಿದೆ. ಮೇ 4ರಂದು ನಿರ್ಮಾಣ ಕಾಮಗಾರಿ, ಪಾರ್ಕ್‌ಗಳು, ಉತ್ಪಾದನಾ ಚಟುವಟಿಕೆಗಳು ಆರಂಭವಾಗಿವೆ. ಮೇ 18ರಿಂದ ಚಿಲ್ಲರೆ ಮಳಿಗೆಗಳು, ಲೈಬ್ರರಿ, ಮ್ಯೂಸಿಯಂಗಳನ್ನು ತೆರೆಯಲಾಗಿದೆ. ಪ್ರಸಕ್ತ ವಾರದಿಂದ ರೆಸ್ಟಾರೆಂಟ್, ವಿವಿಧ ಪ್ರದೇಶಗಳ ನಡುವೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾರ್ಚ್‌ನಲ್ಲಿ ಇಟಲಿಯಲ್ಲಿ ಕೊರೊನಾ ಅಟ್ಟಹಾಸ ಉತ್ತುಂಗಕ್ಕೇರಿತ್ತು.
ಯು.ಕೆ.
ಕೋವಿಡ್-19 ವಿರುದ್ಧದ ಹೋರಾಟ ಇನ್ನೂ ಹಲವು ತಿಂಗಳ ಕಾಲ ಮುಂದುವರಿಯಲಿದೆ ಎಂಬ ಸತ್ಯವನ್ನು ಜನರ ಮುಂದಿಟ್ಟಿರುವ ಯು.ಕೆ. ಪ್ರಧಾನಿ ಬೋರಿಸ್ ಜಾನ್ಸನ್, ಮೇ ಆರಂಭದಲ್ಲೇನಿರ್ಬಂಧ ಸಡಿಲಿಕೆ ಮಾಡುತ್ತಾ ಬಂದರು. ಸಾಮಾಜಿಕ ಅಂತರ ಕಾಪಾಡಿಕೊಂಡೇ ಪಿಕ್‌ನಿಕ್ ಹೋಗಲು, ಸಭೆಗಳಲ್ಲಿ ಭಾಗವಹಿಸಲು ಅನುಮತಿ ನೀಡಿದರು. ಶೈಕ್ಷಣಿಕ ಸಂಸ್ಥೆಗಳು ಮತ್ತು ಅನಗತ್ಯ ರಿಟೇಲ್ ಮಳಿಗೆಗಳನ್ನು ಇನ್ನೂ ತೆರೆಯಲಾಗಿಲ್ಲ. ಜೂನ್ ಮಧ್ಯದಲ್ಲಿ ಇವುಗಳಿಗೂ ಅನುಮತಿ ಸಿಗಲಿದೆ. ರೆಸ್ಟಾರೆಂಟ್, ಸಲೂನ್, ಹೋಟೆಲ್, ಸಿನೆಮಾ, ಧಾರ್ಮಿಕ ಕೇಂದ್ರಗಳ ಬಾಗಿಲುಗಳು ಜುಲೈಯಲ್ಲಿ ತೆರೆಯಲಿವೆ.
ಸ್ಪೇನ್
ಎಪ್ರಿಲ್ ಅಂತ್ಯದಿಂದಲೇ 4 ಹಂತದಲ್ಲಿ ಲಾಕ್‌ಡೌನ್ ತೆರವು ಕಾರ್ಯತಂತ್ರ ಘೋಷಿಸಲಾಗಿತ್ತು. ಮೊದಲ ಹಂತದಲ್ಲಿ ಸೀಮಿತ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಯಿತು. ಅನಂತರದ ಹಂತದಲ್ಲಿ, ಷರತ್ತುಬದ್ಧವಾಗಿ ಸಣ್ಣ ವ್ಯಾಪಾರಗಳಿಗೆ, ಹೊಟೇಲ್‌ಗಳಿಗೆ ಅನುಮತಿ ನೀಡಲಾಯಿತು. ಅನಂತರ, ರೆಸ್ಟಾರೆಂಟ್‌ಗಳು, ಬಳಿಕ ಸಿನಿಮಾ ಥಿಯೇಟರ್‌ಗಳನ್ನು ತೆರೆಯಲು ಒಪ್ಪಿಗೆ ನೀಡಲಾಯಿತು. ಜೂನ್ 2ನೇ ವಾರದಲ್ಲಿ 4ನೇ ಹಂತದ ಲಾಕ್ ಡೌನ್ ತೆರವು ಜಾರಿಯಾಗಲಿದ್ದು, ಎಲ್ಲ ಚಟುವಟಿಕೆಗಳೂ ಹಿಂದಿನಂತೆಯೇ ಪುನಾರಂಭಗೊಳ್ಳಲಿದೆ.
ಫ್ರಾನ್ಸ್
ಮೇ ಮಧ್ಯೆಯೇ ಮೊದಲ ಹಂತದ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಮಂಗಳವಾರ(ಜೂ.2) 2ನೇ ಹಂತದ ತೆರವು ಘೋಷಿಸಲಾಗುತ್ತದೆ. ಮೇ ಎರಡನೇ ವಾರದಲ್ಲಿ ಪ್ರಾಥಮಿಕ ಶಾಲೆಗಳು, ನರ್ಸರಿಗಳನ್ನು ತೆರೆಯಲಾಗಿದೆ. ಆದರೆ ಒಂದು ತರಗತಿಗೆ ಗರಿಷ್ಠ 15 ವಿದ್ಯಾರ್ಥಿಗಳೆಂದು ಮಿತಿ ಹಾಕಲಾಗಿದೆ. ಮಂಗಳವಾರದಿಂದ ರೆಸ್ಟಾರೆಂಟ್, ಕೆಫೆ, ಬಾರ್‌ಗಳ ಬಾಗಿಲು ತೆರೆಯಲಿವೆ. ಜೂನ್ ಅಂತ್ಯದಲ್ಲಿ ಸಿನಿಮಾ, ಜಿಮ್, ಈಜುಕೊಳಗಳಿಗೆ ಅವಕಾಶ ಕಲ್ಪಿಸುವ ನಿರೀಕ್ಷೆಯಿದೆ.
ಭಾರತದಲ್ಲೂ ಹಂತ ಹಂತದ ಅನ್ ಲಾಕ್
ಕಂಟೈನ್ಮೆಂಟ್ ವಲಯಗಳಲ್ಲಿ ಜೂ.30ರ ವರೆಗೂ ನಿರ್ಬಂಧ ಮುಂದುವರಿಯ ಲಿದ್ದು, ಉಳಿದೆಡೆ ಜೂ.8ರಿಂದ ಹಂತ ಹಂತವಾಗಿ ಲಾಕ್ ಡೌನ್ ತೆರವಾಗಲಿದೆ. ಗಮನಾರ್ಹ ಸಂಗತಿಯೆಂದರೆ, ಐರೋಪ್ಯ ಒಕ್ಕೂಟ, ಅಮೆರಿಕ ಸಹಿತ ಹಲವು ದೇಶಗಳು ತಮ್ಮಲ್ಲಿನ ಸೋಂಕಿತರ ದೈನಂದಿನ ಸಂಖ್ಯೆ ಇಳಿಮುಖವಾದ ಅಥವಾ ಸ್ಥಿರವಾದ ಬಳಿಕವೇ ನಿರ್ಬಂಧಗಳನ್ನು ಸಡಿಲಿಸುತ್ತಾ ಬಂದಿವೆ.
ವಿವಿಧ ರಾಜ್ಯಗಳ ಪರಿಸ್ಥಿತಿ ಹೀಗಿದೆ
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸೋಮವಾರದಿಂದ ಸಲೂನ್, ಮಾರುಕಟ್ಟೆಗಳನ್ನು ತೆರೆಯಲಾಗಿದೆ. ಜೂ.8ರವರೆಗೂ ದಿಲ್ಲಿ ಗಡಿಯನ್ನು ಮುಚ್ಚುವುದಾಗಿ ಸಿಎಂ ಕೇಜ್ರಿವಾಲ್ ಘೋಷಿಸಿದ್ದಾರೆ. ದಿಲ್ಲಿಯಿಂದ ಬೇರೆಡೆಗೆ ಸೋಂಕು ವ್ಯಾಪಿಸದಂತೆ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಜೂ.30ರವರೆಗೂ ವಿಸ್ತರಿಸಲಾಗಿದ್ದರೂ, ಕೆಲವು ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆಂಧ್ರಪ್ರದೇಶವು ಸದ್ಯಕ್ಕೆ ಅಂತಾರಾಜ್ಯ ಪ್ರಯಾಣಕ್ಕೆ ಅನುಮತಿ ನೀಡುವುದಿಲ್ಲ ಎಂದು ಘೋಷಿಸಿದೆ. ಒಡಿಶಾದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ, ಅನ್‌ಲಾಕ್ ಪ್ರಕ್ರಿಯೆ ಆರಂಭಿಸಲಾಗಿದೆ. ಹಲವು ಚಟುವಟಿಕೆ ಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಅಂತಾರಾಜ್ಯ ಬಸ್ ಸೇವೆ ಪುನಾರಂಭಿಸಲು ಸರಕಾರ ಮುಂದಾಗಿದೆ. ಗೋವಾದಲ್ಲಿ ವೈರಸ್ ವ್ಯಾಪಿಸುವಿಕೆಗೆ ಕಡಿವಾಣ ಬಿದ್ದಿರುವ ಕಾರಣ ಇನ್ನಷ್ಟು ರಿಲ್ಯಾಕ್ಸೇಷನ್ ಕಲ್ಪಿಸುತ್ತೇವಾದರೂ, ಅಂತಾರಾಜ್ಯ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ. ಪಶ್ಚಿಮ ರೆ. ಚಂಡಿಗಡದಲ್ಲಿ ಜೂ.30ರವರೆಗೆ ಲಾಕ್ ಡೌನ್ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.