ಬೆಂಗಳೂರಿನ ವಾಯುಮಾಲಿನ್ಯ: ಕೃಷಿ,ತ್ಯಾಜ್ಯ ಮತ್ತು ಕೈಗಾರಿಕಾ ಕ್ಷೇತ್ರಗಳ ತೆರೆಮರೆಯ ಕೊಡುಗೆ
ಇಂಧನ ಸಂಬಂಧಿತ ಹೊರಸೂಸುವಿಕೆಯಲ್ಲಿ ವಿದ್ಯುತ್ ಬಳಕೆಯ ವಲಯವು ಪ್ರಮುಖವಾದುದಾಗಿದೆ.
Team Udayavani, Jun 3, 2020, 5:56 PM IST
ಬೆಂಗಳೂರು: ಬೆಂಗಳೂರು ನಗರದ ವಾಯುಮಾಲಿನ್ಯಕ್ಕೆ ರಸ್ತೆ ಸಾರಿಗೆ ಕ್ಷೇತ್ರ ಮಾತ್ರವಲ್ಲದೆ ಬಹುಪಾಲು ಇತರ ಕೆಲವು ವಲಯಗಳೂ ತಮ್ಮದೇ ಕೊಡುಗೆಯನ್ನು ನೀಡುತ್ತಿರುವ ಕುಖ್ಯಾತಿಗೂ ಪಾತ್ರವಾಗಿವೆ. ಗೃಹೋಪಯೋಗಿ ಸಾಮಾಗ್ರಿಗಳು, ವಿದ್ಯುತ್ ವಲಯ, ಕೈಗಾರಿಕೆಗಳು, ತ್ಯಾಜ್ಯ, ಕೃಷಿ ಮತ್ತು ಜಾನುವಾರುಗಳು ಕೂಡಾ ನಗರದ ವಾಯುಮಾಲಿನ್ಯ ಮಟ್ಟಕ್ಕೆ ಗಮನಾರ್ಹವಾಗಿ ಕಾರಣವಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸಯನ್ಸ್ ಅಧ್ಯಯನದ ಪ್ರಕಾರ, ಬೆಂಗಳೂರು ನಗರದಲ್ಲಿ ರಸ್ತೆ ಸಾರಿಗೆ ಕ್ಷೇತ್ರವು 43.48% ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ಹೊರಸೂಸುತ್ತಿದ್ದರೆ, ಗೃಹಬಳಕೆ ಕ್ಷೇತ್ರವು 21.59%, ವಿದ್ಯುತ್ ಬಳಕೆ ವಲಯವು 15.46%, ಕೈಗಾರಿಕೆಗಳಿಂದ 12.31%, ತ್ಯಾಜ್ಯಗಳಿಂದ 5.73%, ಕೃಷಿ ಹಾಗೂ ಜಾನುವಾರಗಳಿಂದ 1.31% ಪ್ರಮಾಣದಲ್ಲಿದೆ. ಈ ಶೇಖಡವಾರು ಲೆಕ್ಕಾಚಾರವನ್ನು ಸಾಮಾನ್ಯವಾಗಿ ವಾತಾವರಣದಲ್ಲಿರುವ ರಾಸಾಯನಿಕಗಳ ಮಾಲಿನ್ಯವನ್ನು ಅಲೆಯುವುದಕ್ಕೆ ಬಳಸಲಾಗುತ್ತದೆ.
ಬೃಹತ್ ಬೆಂಗಳೂರಿನಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯ ಪ್ರಮಾಣದ ವಿವರ (ಚಾರ್ಟ್ – ಐಐಎಸ್‍ಸಿ)
ಐಐಎಸ್‍ಸಿಯ ಸೆಂಟರ್ ಫಾರ್ ಇಕಾಲಾಜಿಕಲ್ ಸಯನ್ಸ್ (ಸಿಇಎಸ್)ನ ಅಧ್ಯಯನ ಪ್ರಕಾರ, ಇಂಧನ ವಲಯದಿಂದ 3085 ಜಿಜಿಯಷ್ಟು ಇಂಗಾಲದ ಡೈಆಕ್ಸೈಡನ್ನು ಹೊರಸೂಸುತ್ತದೆ. (1 ಜಿ.ಜಿ. = 10 ಲಕ್ಷ ಕಿಲೋಗ್ರಾಮ್). ಇದೇ ಸಂದರ್ಭದಲ್ಲಿ ಗೃಹವಲಯವು 4273.81 ಜಿ.ಜಿ., ರಸ್ತೆ ಸಾರಿಗೆ ಕ್ಷೇತ್ರದಿಂದ 8606 ಜಿ.ಜಿ., ಕೈಗಾರಿಕಾ ವಲಯದಿಂದ 2437 ಜಿ.ಜಿ., ಕೃಷಿ ಕ್ಷೇತ್ರದಿಂದ 118.96 ಜಿ.ಜಿ., ಜಾನುವಾರುಗಳಿಂದ 139.66 ಜಿ.ಜಿ. ಮತ್ತು ತ್ಯಾಜ್ಯ ವಲಯದಿಂದ 1134.52 ಜಿ.ಜಿ. ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ನಡೆಯುತ್ತಿದೆ ಎಂದು ಅಧ್ಯಯನ ತಿಳಿಸಿದೆ.
ವಿದ್ಯುತ್ ಬಳಕೆ
ಐಐಎಸ್‍ಸಿಯ ಸಿಇಎಸ್‍ನ ಅಧ್ಯಯನದ ಪ್ರಕಾರ ಇಂಧನ ಸಂಬಂಧಿತ ಹೊರಸೂಸುವಿಕೆಯಲ್ಲಿ ವಿದ್ಯುತ್ ಬಳಕೆಯ ವಲಯವು ಪ್ರಮುಖವಾದುದಾಗಿದೆ.
ಗೃಹವಲಯದಲ್ಲಿನ ಅಡುಗೆಗಾಗಿ ಬಳಕೆಯಾಗುವ ಇಂಧನ ಹಾಗೂ ಕೈಗಾರಿಕೆಗಳಲ್ಲಿ ಬಳಕೆಯಾಗುವ ವಿವಿಧ ಯಂತ್ರಗಳಿಂದ ಪರಿಸರದಲ್ಲಿ ಹಸಿರುಮನೆ ಅನಿಲದ ಹೊರಸೂಸುವಿಕೆಗೆ ಮುಖ್ಯ ಕಾರಣವಾಗುತ್ತದೆ. ಕಬ್ಬಿಣ ಮತ್ತು ಉಕ್ಕಿನ ಉದ್ಯಮ, ಸಿಮೆಂಟ್, ರಸಗೊಬ್ಬರ ಮತ್ತು ರಾಸಾಯನಿಕ ಉತ್ಪಾದನಾ ಘಟಕಗಳಿಂದಲೂ ದೊಡ್ಡಮಟ್ಟಿನ ಹಸಿರುಮನೆ ಅನಿಲದ ಬಿಡುಗಡೆಯಾಗುತ್ತಿದೆ.
ಐಐಎಸ್‍ಸಿಯ ಸಿಇಎಸ್‍ನ ಪ್ರಾಧ್ಯಾಪಕ ಡಾ. ಟಿ.ವಿ. ರಾಮಚಂದ್ರ ಅವರ ಪ್ರಕಾರ, ಗೃಹ ಮತ್ತು ಕೈಗಾರಿಕಾ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ಹೆಚ್ಚಿನ ಪ್ರಮಾಣದ ವಿದ್ಯುತ್ ಬಳಕೆಯಾಗುತ್ತಿದೆ. ಗಾಜಿನ ಹೊದಿಕೆಯನ್ನು ಕಟ್ಟಡಗಳ ಮುಂಬಾಗಕ್ಕೆ ಅಳವಡಿಸುವುದು ಟ್ರೆಂಡ್ ಆಗಿರುವ ಈಗಿನ ದಿನಗಳಲ್ಲಿ, ಇಂತಹ ಕಟ್ಟಡಗಳಲ್ಲಿ ಜನರು ಸಾಮಾನ್ಯ ಕಟ್ಟಡಗಳಿಗಿಂತ 10 ಪಟ್ಟು ಹೆಚ್ಚಿನ ವಿದ್ಯುತ್ ಬಳಸುತ್ತಿರುವುದು ವಿದ್ಯುತ್ ಬಳಕೆಯ ಹೆಚ್ಚಳದಲ್ಲಿ ದೊಡ್ಡಪಾತ್ರವನ್ನು ನಿರ್ವಹಿಸುತ್ತಿದೆ.
ಸಾಮಾನ್ಯ ಕಟ್ಟಡಗಳಲ್ಲಿರುವ ಪ್ರತಿ ವ್ಯಕ್ತಿಗೆ ವರ್ಷವೊಂದಕ್ಕೆ 750 ರಿಂದ 1,450 ಯುನಿಟ್ ವಿದ್ಯುತ್ ಬಳಕೆಯಾದರೆ, ಗಾಜಿನ ಹೊದಿಕೆಯನ್ನು ಬಳಸಿರುವ ಕಟ್ಟಡದಲ್ಲಿರುವ ಪ್ರತಿ ವ್ಯಕ್ತಿಗೆ ವರ್ಷಕ್ಕೆ 14,000 ದಿಂದ 16,000 ಯುನಿಟ್ ವಿದ್ಯುತ್ ಬಳಕೆಯಾಗುತ್ತಿದೆ. ಹೆಚ್ಚೆಚ್ಚು ವಿದ್ಯುತ್ ಬಳಕೆಯು ಹೆಚ್ಚಿನ ಪ್ರಮಾಣದ ಇಂಗಾಲದ ಹೊರಸೂಸುವಿಕೆಗೆ ಕಾರಣವಾಗುತ್ತದೆ ಎಂದು ಮಾಹಿತಿ ನೀಡುತ್ತಾರೆ ಡಾ. ಟಿ.ವಿ. ರಾಮಚಂದ್ರ.
ಗಾಜಿನ ಮುಂಬಾಗದ ಹೊದಿಕೆಯನ್ನು ಕಟ್ಟಡಗಳಿಗೆ ಅಳವಡಿಸುವುದರಿಂದ ಕಟ್ಟಡ ಗುತ್ತಿಗೆದಾರರಿಗೆ ಕಡಿಮೆ ವೆಚ್ಚ ತಗಲುತ್ತದೆ ಮತ್ತು ಗಾಜಿನ ಗೋಡೆಗಳಿಗೆ ಕಾಂಕ್ರೀಟ್ ಗೋಡೆಗಳಿಗಿಂತ ಕಡಿಮೆ ಸ್ಥಳವನ್ನು ಸಾಕಾಗುವುದರಿಂದ ಹೆಚ್ಚಿನ ಸ್ಥಳಕ್ಕಾಗಿ ಹೆಚ್ಚುವರಿ ಹಣ ಗಳಿಕೆಯೂ ಇದರ ಹಿಂದಿರುವ ಉದ್ದೇಶವೆನ್ನುತ್ತಾರೆ ಅವರು.
ಕೃಷಿ ವಲಯದ ಮೀಥೆನ್ ಉತ್ಪತ್ತಿ
ಕೃಷಿ ಸಂಬಂಧಿತ ಚಟುವಟಿಕೆಗಳಿಂದ ಹೊರಸೂಸುವ ಇಂಗಾಲದ ಡೈಆಕ್ಸೈಡ್‍ನ ವಿಷಯಕ್ಕೆ ಬಂದರೆ ಭಾರತದಲ್ಲಿಯೇ ಬೆಂಗಳೂರು ಎರಡನೇ ಅತಿಹೆಚ್ಚು ಕಲುಷಿತಗೊಳ್ಳುತ್ತಿರುವ ನಗರವಾಗಿದೆ. ಸಿಇಎಸ್‍ನ ಅಧ್ಯಯನ ಪ್ರಕಾರ ಭತ್ತದ ಕೃಷಿಯಿಂದ ಮೀಥೇನ್ ಹೊರಸೂಸುವಿಕೆ ಮತ್ತು ಮಣ್ಣಿನ ನಿರ್ವಹಣೆಯಿಂದಾಗಿ ಹೊರಸೂಸುವ ನೈಟ್ರೋಸ್ ಆಕ್ಸೈಡ್‍ಗಳು ಬಿಡುಗಡೆಯಾಗುವ ಮೂಲಕ ಹಸಿರುಮನೆ ಅನಿಲಕ್ಕೆ ಕಾರಣವಾಗಿದೆ ಎಂಬುದನ್ನು ಎತ್ತಿತೋರಿಸಿದೆ.
ಡಾ. ರಾಮಚಂದ್ರ ಅವರ ಪ್ರಕಾರ, ಕೃಷಿಯಲ್ಲಿ ಇಂಗಾಲದ ಹೊರಸೂಸುವಿಕೆಗೆ ಹೊಲದಲ್ಲಿರುವ ಸಾವಯವ ವಸ್ತುಗಳು ಕಾರಣವಾಗುತ್ತವೆ ಮತ್ತು ಕೊಯ್ಲಿನ ನಂತರ ಸಾಮಾನ್ಯವಾಗಿ ಹೊಲದಲ್ಲಿ ಉಳಿದ ಅವಶೇಷಗಳನ್ನು ಸುಡಲಾಗುತ್ತದೆ. ಇದು ಮಾಲಿನ್ಯಕಾರಕ ಅನಿಲಗಳ ಹೊರಸೂಸುವಿಕೆಗೆ ಪ್ರಮುಖ ಕಾರಣವಾಗುತ್ತದೆ. ಭತ್ತ ಹಾಗೂ ಕಬ್ಬಿನ ಗದ್ದೆಗಳಿಗೆ ಯಥೇಚ್ಚವಾದ ನೀರು ಬಿಡುವುದರಿಂದ ಅದರಲ್ಲಿ ಮಿಥೇನ್ ಅನಿಲ ಉತ್ಪತ್ತಿಯಾಗುತ್ತದೆ. ಹೀಗಾಗಿ ಅಲ್ಲಿ ಹಸಿರುಮನೆ ಅನಿಲದ ಉತ್ಪತ್ತಿಗೆ ಕಾರಣವಾಗುತ್ತದೆ.
ಜಾನುವಾರು ವಲಯಗಳಲ್ಲಿ ಕೂಡಾ ದನಗಳು ಸಾಮಾನ್ಯವಾಗಿ ಸಾವಯವ ವಸ್ತುಗಳನ್ನು ಸೇವಿಸುತ್ತವೆಯಾದ್ದರಿಂದ ಇವುಗಳಲ್ಲಿ ನಡೆಯುವ ಜೀರ್ಣಕಾರಿ ಪ್ರಕ್ರಿಯೆಯಿಂದಲೂ ಮಿಥೇನ್ ಉತ್ಪತ್ತಿಗೆ ಕಾರಣವಾಗುತ್ತದೆ. “ಜಾನುವಾರುಗಳು ಸಗಣಿ ಹಾಕಿದಾಗ ಮತ್ತು ಜನರು ಅದನ್ನು ಬಳಸಿ ಗೊಬ್ಬರ ತಯಾರಿಸಿದಾಗಲೂ ಮಿಥೇನ್ ಉತ್ಪತ್ತಿಯು ಮತ್ತೂ ಮುಂದುವರಿಯುತ್ತದೆ” ಎನ್ನುತ್ತಾರೆ ಡಾ. ರಾಮಚಂದ್ರ.
ಹೆಚ್ಚು ಬಳಕೆ, ಅತಿಹೆಚ್ಚು ತ್ಯಾಜ್ಯ
ತ್ಯಾಜ್ಯ ಕ್ಷೇತ್ರದಿಂದ ಅತಿಹೆಚ್ಚು ಸಿಒ2 ಹೊರಸೂಸುವಲ್ಲಿ ದೆಹಲಿ ಮತ್ತು ಮುಂಬಯಿ ನಂತರ ಬೆಂಗಳೂರು ನಗರವು ದೇಶದಲ್ಲೇ 3ನೇ ಸ್ಥಾನಿಯಾಗಿದೆ. ಮಹಾನಗರ ಪಾಲಿಕೆಯ ಘನತ್ಯಾಜ್ಯ, ಗೃಹಬಳಕೆಯ ತ್ಯಾಜ್ಯನೀರು, ಕೈಗಾರಿಕಾ ತ್ಯಾಜ್ಯನೀರು ಇವುಗಳಿಂದ ಮಿಥೇನ್ ಹಾಗೂ ನೈಟ್ರೋಜನ್ ಡೈಆಕ್ಸೈಡ್ ಅನಿಲಗಳು ಅಧಿಕ ಪ್ರಮಾಣದಲ್ಲಿ ಬಿಡುಗಡೆಯಾಗುತ್ತವೆ.
ಗೃಹ ಮತ್ತು ಕೈಗಾರಿಕಾ ವಲಯದಿಂದ ಘನತ್ಯಾಜ್ಯ ಹಾಗೂ ದ್ರವ ತ್ಯಾಜ್ಯವು ಸೃಷ್ಟಿಯಾಗುತ್ತದೆ. ಘನತ್ಯಾಜ್ಯವು ಮುಖ್ಯವಾಗಿ 70-80%ದಷ್ಟು ಸಾವಯವ ವಸ್ತುಗಳನ್ನು ಹೊಂದಿರುತ್ತದೆ. ಹೀಗಾಗಿ ಘನತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸದೇ ಇದ್ದಾಗ ಮಿಥೇನ್ ಉತ್ಪತ್ತಿಗೆ ಕಾರಣವಾಗುತ್ತದೆ.
ಜನರು ದ್ರವರೂಪದ ತ್ಯಾಜ್ಯವನ್ನು ಜಲಮೂಲಗಳಿಗೆ ಬಿಡುವುದರಿಂದ ಅವುಗಳ ನೀರು ಆಮ್ಲಜನಕ ರಹಿತ ಸ್ಥಿತಿಗೆ ತಲುಪುತ್ತವೆ. ಆದ್ದರಿಂದಲೇ ಆ ನೀರಿನಲ್ಲಿ ಮಿಥೇನ್ ಹಾಗೂ ನೈಟ್ರೋಜನ್ ಡೈ ಆಕ್ಸೈಡ್ ಉತ್ಪಾದನೆಗೆ ಕಾರಣವಾಗುತ್ತದೆ ಎನ್ನುತ್ತಾರೆ ಡಾ. ರಾಮಚಂದ್ರ.
ಪರಿಸರವಾದಿ ಸಂದೀಪ್ ಅನಿರುದ್ಧನ್ ಅವರ ಪ್ರಕಾರ ಕೈಗಾರೀಕರಣದಿಂದಲೇ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. “ಅತಿಹೆಚ್ಚು ಬಳಕೆಯ ಜೀವನಶೈಲಿಯು ಸಾಮೂಹಿಕ ಉತ್ಪಾದನೆಗೆ ಕಾರಣವಾಗಿದೆ ಮತ್ತು ಇದರಿಂದ ಇಂಧನಗಳ ಹೆಚ್ಚು ಬಳಕೆಯಾಗುತ್ತಿದೆ. ಮೊದಲನೇಯದಾಗಿ ಕೈಗಾರೀಕರಣ, ಬಳಕೆ ಅಥವಾ ಗ್ರಾಹಕೀಕರಣ ಎರಡನೇಯದು ಮತ್ತು ಮೂರನೇಯದಾಗಿ ಮಾರುಕಟ್ಟೆ ಆರ್ಥಿಕತೆಯಾಗಿದೆ. ಮಾರುಕಟ್ಟೆ ಆರ್ಥಿಕತೆಯು ನಮ್ಮನ್ನು ಹೆಚ್ಚೆಚ್ಚು ಉತ್ಪಾದಿಸುವಂತೆ ಮಾಡುತ್ತಿದೆ. ಏಕೆಂದರೆ ಕಂಪೆನಿಗಳು ಹೆಚ್ಚೆಚ್ಚು ಬೆಳೆಯಬೇಕಿದೆ” ಎನ್ನುತ್ತಾರವರು.
“ನಾವು ಹೊಸ ಮಾದರಿಯನ್ನು ಹುಡುಕಬೇಕಿದೆ. ಆದರೆ ರಸಗೊಬ್ಬರಗಳನ್ನು ಬಳಸದಿರುವ ನೈಸರ್ಗಿಕ ಕೃಷಿಗಿಂತ ಬೇರೆ ಯಾವುದೇ ಉತ್ತಮ ಆಯ್ಕೆಗಳಿಲ್ಲ”
“ನೈಸರ್ಗಿಕ ಕೃಷಿಯಲ್ಲಿ ಈ ಕಂಪೆನಿಗಳಿಗೆ ಯಾವುದೇ ಲಾಭವಿಲ್ಲ. ಹೀಗಾಗಿಯೇ ಇಂತಹ ಸನ್ನಿವೇಶಗಳ ಸೃಷ್ಟಿಗೆ ಇದು ಕಾರಣವಾಗಿದೆ. ನಾವೀಗಲೇ ಇದನ್ನು ಸರಿಪಡಿಸದೇ ಇದ್ದರೆ ಇದೇ ಸ್ಥಿತಿಯು ಮುಂದುವರಿಯುತ್ತದೆ. ಯಾರೂ ಕೂಡಾ ನೈಸರ್ಗಿಕ ಕೃಷಿಯನ್ನು ಪ್ರೋತ್ಸಾಹಿಸಲು ಮುಂದಾಗುವುದಿಲ್ಲ” ಎಂದು ಅನಿರುದ್ಧ ಉಲ್ಲೇಖಿಸುತ್ತಾರೆ.
“ಆರ್ಥಿಕತೆ, ಪರಿಸರ ವಿಜ್ಞಾನ ಎರಡೂ ವಾಯು ಮಾಲಿನ್ಯಕ್ಕೆ ಕಾರಣವಾಗಿದೆ. ಇದರ ಜೊತೆಗೆ ನಮ್ಮ ಆರೋಗ್ಯವು ಈ ಎಲ್ಲದಕ್ಕೂ ನೇರ ಸಂಬಂಧವನ್ನು ಹೊಂದಿದೆ” ಎಂದು ಪ್ರತಿಕ್ರಿಯಿಸುತ್ತಾರೆ ಸಂದೀಪ್. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‍ಪಿಸಿಬಿ)ಯ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ. ಹೆಚ್. ಲೋಕೇಶ್ವರಿ ಅವರು ‘ಪ್ರತಿ ವಲಯದಿಂದ ಮಾಲಿನ್ಯ ಕಾರಣವಾಗುವ ಹೊರಸೂಸುವಿಕೆಯನ್ನು ಕಡಿಮೆಗೊಳಿಸಲು ಕೆಎಸ್‍ಪಿಸಿಬಿಯು 44 ಅಂಶಗಳ ಕ್ರಿಯಾ ಯೋಜನೆಯನ್ನು ಬಿಡುಗಡೆ ಮಾಡಿದೆ’ ಎಂದು ಹೇಳಿದ್ದಾರೆ. “ಕೈಗಾರಿಕೆಗಳು ಹಾಗೂ ಇತರ ಉದ್ಯಮಗಳಿಂದ ಮಾಲಿನ್ಯ ಹೊರಸೂಸುವಿಕೆ ಹಾಗೂ ತ್ಯಾಜ್ಯ ಬಿಡುಗಡೆಯ ಬಗ್ಗೆ ನಾವು ನಿಗಾ ಇಡುತ್ತಿದ್ದೇವೆ ಮತ್ತು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡು ಬಂದಲ್ಲಿ ನಾವು ಸೂಕ್ತ ಕ್ರಮಕೈಗೊಳ್ಳುತ್ತೇವೆ” ಎನ್ನುತ್ತಾರವರು.
ವರದಿ : ಕಪಿಲ್ ಕಾಜಲ್( ವರದಿಗಾರರ ಸಂಪರ್ಕ ಜಾಲವಾಗಿರುವ 101reporters.com ನ ಸದಸ್ಯರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.