ಯಾಂತ್ರಿಕ ಮೀನುಗಾರಿಕೆ ಬಹುತೇಕ ಮುಕ್ತಾಯ
ಚಂಡಮಾರುತ ಭೀತಿ, ಮುಂಗಾರು ಅಬ್ಬರ
Team Udayavani, Jun 4, 2020, 5:37 AM IST
ಗಂಗೊಳ್ಳಿ: ಈ ಋತುವಿನ ಯಾಂತ್ರೀಕೃತ ಮೀನುಗಾರಿಕೆಗೆ ಜೂ. 14ರ ವರೆಗೆ ಅವಕಾಶವಿದ್ದರೂ, ಒಂದೆಡೆ ಚಂಡ ಮಾರುತ, ಮತ್ತೂಂದೆಡೆ ಮುಂಗಾರು ಆರಂಭ ಆಗುತ್ತಿರುವುದರಿಂದ ಗಂಗೊಳ್ಳಿ ಯಲ್ಲಿ ಬಹುತೇಕ ಮೀನುಗಾರಿಕೆ ಮುಕ್ತಾಯದ ಹಂತದಲ್ಲಿದೆ.
ಪ್ರತಿ ವರ್ಷ ಮೇ 31ಕ್ಕೆ ಮೀನುಗಾರಿಕೆ ಋತು ಮುಕ್ತಾಯಗೊಳ್ಳುತ್ತಿದ್ದು, ಆದರೆ ಈ ಬಾರಿ ಲಾಕ್‌ಡೌನ್‌ನಿಂದಾಗಿ ಮೀನುಗಾರಿಕೆಗೆ ಅಡ್ಡಿಯಾಗಿದ್ದರಿಂದ ಕೇಂದ್ರ ಸರಕಾರ ಸ್ವಲ್ಪ ಮಟ್ಟಿಗೆ ವಿನಾಯಿತಿ ನೀಡಿ, ಜೂ. 14ರ ವರೆಗೆ ಅವಕಾಶ ಕಲ್ಪಿಸಿತ್ತು. ಆದರೆ ಈಗಾಗಲೇ ಚಂಡಮಾರುತದ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜೂ. 4ರ ವರೆಗೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.
ಶೇ. 80ರಷ್ಟು ಅಂತ್ಯ
ಜೂ.ರ ಅನಂತರ ಆರಂಭವಾದರೂ ಮುಂಗಾರು ಆರಂಭವಾಗುವುದರಿಂದ ಮತ್ತಷ್ಟು ಅಪಾಯ ಎದುರಾಗುವ ಸಂಭವವಿದ್ದು, ಆ ಹಿನ್ನೆಲೆಯಲ್ಲಿ ಗಂಗೊಳ್ಳಿ ಬಂದರಿನಲ್ಲಿ ಈಗಾಗಲೇ ಬಹುತೇಕ ಅಂದರೆ ಶೇ. 75ರಿಂದ 80ರಷ್ಟು ಬೋಟುಗಳು, ದೋಣಿಗಳು ಮೀನುಗಾರಿಕೆಯನ್ನು ಮುಗಿಸಿ, ದಡದಲ್ಲಿ ಲಂಗರು ಹಾಕಿವೆ. ಈಗ ಇಲ್ಲಿನ ಮ್ಯಾಂಗನೀಸ್ ವಾರ್ಫ್‌ನಲ್ಲಿ ಬೋಟುಗಳನ್ನು ಸಮುದ್ರದಿಂದ ದಡದತ್ತ ಎಳೆದು ತರುವ ಕಾರ್ಯದಲ್ಲಿ ಮೀನುಗಾರರು ನಿರತರಾಗಿದ್ದಾರೆ. ಅದಲ್ಲದೆ ಮಳೆ ನೀರು ಬೀಳದಂತೆ ಮತ್ತೆ ತಟ್ಟಿಯನ್ನು ಕಟ್ಟುವ ಕಾರ್ಯ ಕೂಡ ಭರದಿಂದ ಸಾಗಿದೆ.
ನೀರಸ ಋತು
ಹಿಂದಿನೆಲ್ಲ ವರ್ಷಗಳಿಗಿಂತಲೂ ಈ ವರ್ಷ ಮೀನುಗಾರರಿಗೆ ನಿರಾಶಾದಾಯಕ ವರ್ಷವಾಗಿತ್ತು. ಅನೇಕ ಬಾರಿ ಮೀನುಗಾರಿಕೆಗೆ ತೆರಳಿದರೂ ಮೀನಿಲ್ಲದೆ ಬರಿಗೈಯಲ್ಲಿ ಬರುವಂತಾಗಿತ್ತು. ಅದರಲ್ಲೂ ಗಂಗೊಳ್ಳಿಯಲ್ಲಿ ಹೆಚ್ಚಾಗಿ ಸಿಗುತ್ತಿದ್ದ ಬೂತಾಯಿ (ಬೈಗೆ) ಈ ಬಾರಿ ಕಡಿಮೆ ಪ್ರಮಾಣದಲ್ಲಿ ಬಲೆಗೆ ಬಿದ್ದಿದ್ದು, ಇಲ್ಲಿನ ಮೀನುಗಾರರಿಗೆ ಭಾರೀ ಹೊಡೆತ ನೀಡಿದೆ. ಇನ್ನು ಲಾಕ್‌ಡೌನ್‌ನಿಂದಾಗಿ ಕೆಲ ಕಾಲ ಮೀನುಗಾರಿಕೆ ಸ್ಥಗಿತಗೊಂಡಿದ್ದು, ಇದರಿಂದ ಸೀಸನ್‌ನಲ್ಲೇ ಸಂಕಷ್ಟ ತಂದೊಡ್ಡಿತ್ತು. ಇದರೊಂದಿಗೆ ಅನ್ಯ ರಾಜ್ಯದವರ ಲೈಟ್ ಫಿಶಿಂಗ್ ಆತಂಕ, ಆಗಾಗ ಬರುವ ಹವಾಮಾನ ವೈಪರೀತ್ಯದಿಂದಾಗಿ ಈ ಋತು ನೀರಸವಾಗುತ್ತು ಎನ್ನುವುದು ಮೀನುಗಾರರ ಅಭಿಪ್ರಾಯ.
ವಾರ್ಷಿಕ ವಹಿವಾಟು
ಈ ವರ್ಷದಲ್ಲಿ ಕುಂದಾಪುರ ತಾಲೂಕಿನ ಗಂಗೊಳ್ಳಿ, ಮರವಂತೆ, ತ್ರಾಸಿ, ಕೊಡೇರಿ, ಉಪ್ಪುಂದ, ಮಡಿಕಲ್, ಶಿರೂರು ಮತ್ತಿತರ ಕಡೆಗಳಲ್ಲಿ ಒಟ್ಟು 18,675 ಮೆಟ್ರಿಕ್ ಟನ್ ಮೀನು ಸಂಗ್ರಹವಾಗಿದ್ದು, 29,855 ಲಕ್ಷ ರೂ. ವಾರ್ಷಿಕ ವಹಿವಾಟು ಆಗಿದೆ.
ಶುರುವಾಗಿಲ್ಲ
ಮೀನುಗಾರಿಕೆ ಬಂದರಿನ 2ನೇ ಹರಾಜು ಪ್ರಾಂಗಣದ ಜೆಟ್ಟಿ ಕುಸಿದು ವರ್ಷಗಳು ಕಳೆದರೂ, 12 ಕೋ.ರೂ. ಅನುದಾನ ಮಂಜೂರಾದರೂ ಕೂಡ ಈ ಮೀನುಗಾರಿಕೆ ಋತು ಮುಗಿಯುವುದರೊಳಗೆ ಕಾಮಗಾರಿ ಮಾತ್ರ ಆರಂಭಗೊಂಡಿಲ್ಲ. ಮುಂದಿನ ಮೀನುಗಾರಿಕೆ ಋತು ವಿನ ಆರಂಭದ ವೇಳೆ ಕಾಮಗಾರಿ ಶುರುವಾಗುವುದು ಅನುಮಾನ.
ನಿರಾಶಾದಾಯಕ
ಈ ವರ್ಷವಿಡೀ ಮೀನು ಗಾರರಿಗೆ ಅಷ್ಟೇನೂ ಆಶಾ ದಾಯಕವಾಗಿರಲಿಲ್ಲ. ಆದರೆ ಲಾಕ್‌ಡೌನ್ ಮುಗಿದ ಬಳಿಕದ 10-15 ದಿನಗಳ ಮೀನುಗಾರಿಕೆ ವಹಿವಾಟು ಉತ್ತಮವಾಗಿಯೇ ಇತ್ತು. ಇದಷ್ಟೇ ಮೀನುಗಾರರಿಗೆ ಸ್ವಲ್ಪ ಸಮಾಧಾನವೆನ್ನಬಹು. ಆದರೆ ಜನ ವರಿಯಿಂದ ಸಿಗಬೇಕಾದ ಡೀಸೆಲ್ ಸಬ್ಸಿಡಿ ಇನ್ನೂ ಸಿಕ್ಕಿಲ್ಲ. ನಮಗೆ ಸಹಾಯಧನವಂತೂ ಘೋಷಿಸಿಲ್ಲ. ಕನಿಷ್ಠ ನೀಡಬೇಕಿರುವ ಹಣವನ್ನಾದರೂ ಸರಿಯಾದ ಸಮಯಕ್ಕೆ ನೀಡಲಿ.
– ಬಸವ ಖಾರ್ವಿ, ಮೀನುಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.