ವಿಶ್ವ ಪರಿಸರ ದಿನ: ನಾವು ಪರಿಸರಸ್ನೇಹಿಯಾಗೋಣ
ಪರಿಸರ ರಕ್ಷಣೆ ಕೋವಿಡ್-19 ಕಲಿಸಿದ ಪಾಠ
Team Udayavani, Jun 5, 2020, 6:30 AM IST
ಅಗತ್ಯಗಳಿಗಷ್ಟೇ ಸಂಪನ್ಮೂಲ ಬಳಸಿ ಭವಿಷ್ಯಕ್ಕೆ ಉಳಿಸಿ ಬದುಕುವುದು ನಮ್ಮ ಹಿರಿಯರು ಪಾಲಿಸಿದ ಆಚರಣೆ. ಅದನ್ನೇ ನಾವೂ ಅನುಸರಿಸಬೇಕೆಂಬುದೇ ಕೊರೊನಾ ಕಲಿಸಿದ ಪಾಠದ ತಿರುಳು. ವಿಶ್ವ ಪರಿಸರ ದಿನವಾದ ಇಂದು ನಮ್ಮ ಬದುಕನ್ನು ಪರಿಸರಸ್ನೇಹಿಯಾಗಿಸುವ ಪ್ರತಿಜ್ಞೆ ತೊಡೋಣ.
ವಾಯು ಮಾಲಿನ್ಯ, ಸಾಗರ ಮಾಲಿನ್ಯ, ಜಾಗತಿಕ ತಾಪಮಾನ ಹೆಚ್ಚಳ ಮತ್ತು ವಿಶ್ವಾದ್ಯಂತ ಹೆಚ್ಚುತ್ತಿರುವ ಜನಸಂಖ್ಯೆಯ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ, ಜತೆಯಲ್ಲಿ ಪರಿಸರ ಸಂರಕ್ಷಣೆಗೆ ಪಣ ತೊಡುವ ಉದ್ದೇಶದಿಂದ 1974ರಲ್ಲಿ ವಿಶ್ವಸಂಸ್ಥೆಯು ಪ್ರತೀ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸುವ ನಿರ್ಧಾರ ಕೈಗೊಂಡಿತು. ಅದರಂತೆ ಪ್ರತೀ ವರ್ಷವೂ ಪರಿಸರ ಸಂರಕ್ಷಣೆ ಕುರಿತಾಗಿನ ಧ್ಯೇಯವೊಂದನ್ನು ಇರಿಸಿಕೊಂಡು ಪರಿಸರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಈ ವರ್ಷದ ಪರಿಸರ ದಿನಾಚರಣೆ ಒಂದಿಷ್ಟು ಮಹತ್ವವನ್ನು ಪಡೆದುಕೊಂಡಿದೆ. ವಿಶ್ವದ ಬಹುತೇಕ ರಾಷ್ಟ್ರಗಳ ಜನರನ್ನು ಕೋವಿಡ್-19 ಹೆಮ್ಮಾರಿಯಂತೆ ಕಾಡುತ್ತಿರುವುದರಿಂದ ಜನ ರಲ್ಲಿ ಪರಿಸರದ ಬಗೆಗೆ ಒಂದಿಷ್ಟು ಕಾಳಜಿ ಮೂಡುವಂತೆ ಮಾಡಿದೆ. ವಾಯುಮಾಲಿನ್ಯದಿಂದಾಗಿ ಮನುಷ್ಯ ಮಾತ್ರ ವಲ್ಲದೆ ಜೀವಸಂಕುಲ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದೆ.
ಈ ಸಮಸ್ಯೆ ಶತಮಾನಗಳಿಂದ ನಮ್ಮನ್ನು ಕಾಡುತ್ತಲೇ ಬಂದಿದ್ದರೂ ಪ್ರತೀ ವರ್ಷ ಹೆಚ್ಚುತ್ತಲೇ ಸಾಗಿದೆ. ಇತ್ತೀಚಿನ ವರ್ಷಗಳಲ್ಲಂತೂ ಇದು ಅತಿರೇಕಕ್ಕೆ ತಲುಪಿದ್ದು, ಸಮಸ್ತ ಜೀವಜಗತ್ತಿಗೆ ಅಪಾಯವನ್ನು ತಂದೊಡ್ಡಿದೆ. ವರ್ಷಗಳು ಉರುಳಿದಂತೆಯೇ ಜಾಗತಿಕ ತಾಪಮಾನದಲ್ಲಿ ಏರಿಕೆಯಾಗುತ್ತಿದ್ದು, ಇದರಿಂದಾಗಿ ಹಿಮನದಿಗಳು ಕರಗುತ್ತಿದ್ದರೆ ಸಮುದ್ರ ಮಟ್ಟ ಹೆಚ್ಚುತ್ತಲಿದೆ. ವಾಯು, ಜಲ ಮಾಲಿನ್ಯ ಮತ್ತು ಮಣ್ಣಿನ ಸವಕಳಿ ಯಿಂದಾಗಿ ಪರಿಸರದ ಮೇಲೆ ಭಾರೀ ಪರಿಣಾಮಗಳು ಉಂಟಾಗುತ್ತಿವೆ. ಕಳೆದ ಹಲವಾರು ದಶಕಗಳಿಂದ ಈ ಬಗ್ಗೆ ಭೂವಿಜ್ಞಾನಿಗಳು, ಪರಿಸರ ತಜ್ಞರು ಎಚ್ಚ ರಿಕೆ ನೀಡುತ್ತಲೇ ಬಂದಿದ್ದರೂ ಸರಕಾರಗಳಾಗಲೀ ಜನರಾಗಲೀ ಇದನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ.
ಆದರೆ ಕೋವಿಡ್-19 ಮಹಾ ಮಾರಿ ಬಹುತೇಕ ವಿಶ್ವವನ್ನು ಆವರಿಸಿಕೊಂಡ ಬಳಿಕ ವೈರಸ್‌ನ ಪಸರಿಸುವಿಕೆಯನ್ನು ತಡೆ ಯುವ ಯತ್ನವಾಗಿ ಹಲವಾರು ರಾಷ್ಟ್ರಗಳು ಲಾಕ್‌ಡೌನ್‌ನ ಮೊರೆ ಹೊಕ್ಕವು. ಜನರು ತಿಂಗಳುಗಳ ಕಾಲ ಮನೆಗಳಲ್ಲಿಯೇ ಉಳಿಯುವಂತಾಯಿತು. ಇದರಿಂದಾಗಿ ಪರಿಸರದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ಕಾಣುವಂತಾಗಿದೆ.
ವಾಯುಮಾಲಿನ್ಯ ಪ್ರಮಾಣ ಇಳಿಕೆ
ಬಹುತೇಕ ರಾಷ್ಟ್ರಗಳು ವೈರಸ್ ಹರಡುವಿಕೆಯ ಪ್ರಮಾಣ ತಗ್ಗಿಸಲು ಸಾಧ್ಯವಾದಷ್ಟು ಮನೆಯೊಳಗೇ ಉಳಿಯುವಂತೆ ಜನರಿಗೆ ಸೂಚಿಸಿದವು. ಕೆಲವೆಡೆ ಜನಸಂಚಾರ ನಿಯಂತ್ರಣಕ್ಕೆ ಬಿಗಿ ಕಾನೂನು ಜಾರಿಗೊಳಿಸ ಲಾಯಿತು. ಇದರಿಂದ ವಾಹನ ಸಂಚಾರ, ರೈಲು, ವಿಮಾನಯಾನ ಎಲ್ಲವೂ ಸ್ಥಗಿತಗೊಂಡವು. ಬಹು ತೇಕ ಕೈಗಾರಿಕೆಗಳು ಮುಚ್ಚಲ್ಪಟ್ಟವು. ಇವೆ ಲ್ಲದರ ಪರಿಣಾಮ ವಾಗಿ ವಾಯು ಮಾಲಿನ್ಯ ಪ್ರಮಾಣದಲ್ಲಿ ತೀವ್ರ ಇಳಿಕೆ ಕಂಡುಬಂದಿತು.
ಜಲ ಗುಣಮಟ್ಟದಲ್ಲಿ ಏರಿಕೆ
ಲಾಕ್‌ಡೌನ್ ಜಾರಿಯ ಬಳಿಕ ಸಾಗರ, ನದಿಗಳಲ್ಲಿ ಹಡಗು, ಬೋಟ್‌ಗಳ ಸಂಚಾರ ಸ್ಥಗಿತಗೊಂಡಿತು. ಜಲಸಾರಿಗೆ ಅಕ್ಷರಶ ಸ್ತಬ್ಧವಾಯಿತು. ಇದರಿಂದಾಗಿ ಜಲ ಮಾಲಿನ್ಯದ ಪ್ರಮಾಣ ಕಡಿಮೆಯಾಯಿತು. ವೆನಿಸ್‌ನಂಥ ಪ್ರದೇಶದಲ್ಲಿ ಸಾಗರದ ನೀರು ಎಷ್ಟು ಪರಿಶುದ್ಧ ವಾಯಿತೆಂದರೆ ನೀರಿನ ಹರಿವಿನಲ್ಲಿ ಮೀನುಗಳನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಯಿತು. ಸಾಗರ, ನದಿಗಳಲ್ಲಿ ಮಾನವ ಚಟುವಟಿಕೆಗಳು ಕಡಿಮೆಯಾಗುತ್ತಿದ್ದಂತೆಯೇ ಅವು ಸ್ವಲ್ಪ ಮಟ್ಟಿಗಾದರೂ ಮಾಲಿನ್ಯಮುಕ್ತವಾದವು.
ವನ್ಯಜೀವಿಗಳ ಮೇಲೆ ಪರಿಣಾಮ
ಮಾನವನ ಓಡಾಟ ಅತೀ ವಿರಳವಾದ್ದರಿಂದ ವನ್ಯ ಜೀವಿಗಳ ಸಹಿತ ಪ್ರಾಣಿಗಳು ಅರಣ್ಯ ಪ್ರದೇಶ ಮಾತ್ರವಲ್ಲದೆ ಜನವಸತಿ ಪ್ರದೇಶಗಳಲ್ಲಿಯೂ ಸ್ವತ್ಛಂದವಾಗಿ ಓಡಾಟ ನಡೆಸಿದ ದೃಶ್ಯಗಳು ಹಲವೆಡೆ ಕಂಡುಬಂದವು.
ಜನಸಂಚಾರ ಮತ್ತು ಮಾನವ ಹಸ್ತಕ್ಷೇಪ ಕಡಿಮೆ ಯಾಗುತ್ತಿದ್ದಂತೆಯೇ ಶುದ್ಧ ಗಾಳಿ ಮತ್ತು ನೀರಿನ ಲಭ್ಯತೆಯಿಂದಾಗಿ ಗಿಡಗಳು ಕೂಡ ಸೊಂಪಾಗಿ ಬೆಳೆಯಲು ಸಾಧ್ಯವಾಯಿತು. ವಾತಾವರಣದಲ್ಲಿ ಸಹಜವಾಗಿಯೇ ಶುದ್ಧ ಆಮ್ಲಜನಕದ ಪ್ರಮಾಣ ಹೆಚ್ಚಿತು. ತೀರ ಮಾತ್ರ ವಲ್ಲದೆ ನದಿಯ ಒಡಲಿನಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆಯಾಗಲು ಈ ಲಾಕ್‌ಡೌನ್ ಪರೋಕ್ಷವಾಗಿ ಕಾರಣ ವಾಗಿದ್ದು ಇದರಿಂದ ನೀರು ಸರಾಗವಾಗಿ ಹರಿಯು ವಂತಾಗಿದೆ. ಪರಿಸರದ ಉಳಿವಿನ ದೃಷ್ಟಿಯಿಂದ ಇದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ.
ಕೋವಿಡ್ ಕಲಿಸಿದ ಪಾಠ
ಮನುಕುಲವನ್ನು ಕೋವಿಡ್-19 ಇನ್ನಿಲ್ಲದಂತೆ ಕಾಡು ತ್ತಿದ್ದರೂ ಈ ಕಾಯಿಲೆ ನಮಗೆ ಹಲವಾರು ಪಾಠಗಳನ್ನು ಕಲಿಸಿಕೊಟ್ಟಿದೆ. ಭೂಮಿಯ ಮೇಲೆ ಆಧಿಪತ್ಯವನ್ನು ಸ್ಥಾಪಿಸ ಹೊರಟ ನಮಗೆ ಈ ಭೂಮಿಯಲ್ಲಿ ನಾವೇನು ಎಂಬುದನ್ನು ತೋರಿಸಿ ಕೊಟ್ಟಿದೆ. ಈ ಬಾರಿಯ ವಿಶ್ವ ಪರಿಸರ ದಿನಕ್ಕೆ ಹೆಚ್ಚೇನೂ ಪ್ರಚಾರದ ಅಗತ್ಯವಿಲ್ಲ. 2-3 ತಿಂಗಳುಗಳ ಹಿಂದೆ ಈ ನೆಲದ ಮೇಲೆ ನಾವು ಹೇಗೆ ಬದುಕುತ್ತಿದ್ದೆವು, ಈಗ ನಮ್ಮ ಜೀವನಶೈಲಿ ಹೇಗಿದೆ ಎಂಬ ಬಗ್ಗೆ ಕೆಲವು ನಿಮಿಷಗಳ ಕಾಲ ಯೋಚಿಸಿದರೆ ಪರಿಸರ ಸಂರಕ್ಷಣೆಯ ಅನಿವಾರ್ಯತೆ ಏನು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುತ್ತದೆ. ಮುಂದಿನ ದಿನಗಳಲ್ಲಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಾವು ಗೆಲ್ಲಬಹುದು. ಆದರೆ ಕಾಲಚಕ್ರ ಮಾತ್ರ ಉರುಳುತ್ತಿರುತ್ತದೆ. ವೈರಸ್‌ಗಳು ಹೊಸರೂಪದಲ್ಲಿ ಮನುಕುಲವನ್ನು ಕಾಡಬಹುದು. ಈ ಕಾರಣಕ್ಕಾಗಿ ನಮ್ಮ ಮುಂದಿನ ಜನಾಂಗಕ್ಕಾದರೂ ಪರಿಸರವನ್ನು ರಕ್ಷಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ನಮ್ಮ ಕೈಲಾದಷ್ಟು ಪ್ರಯತ್ನವನ್ನು ನಾವು ನಡೆಸಬೇಕಿದೆ.
ನೆಲ, ಜಲ, ವಾಯು.. ಈ ಮೂರೂ ಮುನಿದರೆ ಇಡೀ ಜೀವಸಂಕುಲಕ್ಕೆ ಕುತ್ತು ಖಚಿತ. ಪರಿಸರದ ಮೇಲಣ ನಮ್ಮ ಪ್ರತಿ ಕ್ರೌರ್ಯವೂ ಜೀವ ಜಗತ್ತಿನ ಅವನತಿಗೆ ನಾಂದಿ ಎಂಬುದನ್ನು ನಾವು ಮರೆಯದಿರೋಣ.
01. ಮರಗಿಡಗಳು ನಮ್ಮ ಜೀವನದ ಒಂದು ಭಾಗವಾಗಿರಬೇಕು. ಸ್ವಚ್ಛತೆಯ ನೆಪದಲ್ಲಿ ಮನೆಯ ಸುತ್ತಮುತ್ತಲಿನ ಮರಗಿಡಗಳನ್ನು ಕಡಿದು ಮೈದಾನವಾಗಿಸುವುದು ಬೇಡ. ಮನೆಯ ಅಂಗಳದಲ್ಲಿ ರುವ ಮರವನ್ನು ಉಳಿಸಿಕೊಂಡು ಹೂದೋಟ ಅಥವಾ ಕೈತೋಟ ನಿರ್ಮಿಸಿದಲ್ಲಿ ಸಹಜತೆ ಇನ್ನಷ್ಟು ಹೆಚ್ಚುತ್ತದೆ.
02. ಮನೆಯಿಂದ ಹೊರಗೆ ಕಾಲಿಟ್ಟ ತತ್‌ಕ್ಷಣ ವಾಹನಗಳನ್ನು ಅವಲಂಬಿಸುವ ಬದಲು ಕಾಲ್ನಡಿಗೆ ಅಥವಾ ಸೈಕಲ್ ತುಳಿಯುವುದು ನಮ್ಮ ಆರೋಗ್ಯ ಮಾತ್ರವಲ್ಲದೆ ಪರಿಸರದ ಹಿತದೃಷ್ಟಿಯಿಂದಲೂ ಒಳ್ಳೆಯದು.
03. ಮಕ್ಕಳನ್ನು ಶಾಲೆಗೆ ಬಿಡಲು ಅಥವಾ ವಾಪಸ್ ಕರೆತರಲು ಪ್ರತಿನಿತ್ಯ ಸ್ವಂತ ವಾಹನವನ್ನು ಬಳಸುವ ಬದಲು ಸಾಧ್ಯವಾದಷ್ಟು ನಡಿಗೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಥವಾ ವಿದ್ಯುತ್ ಚಾಲಿತ ಪರಿಸರಸ್ನೇಹಿ ವಾಹನಗಳ ಮೊರೆ ಹೋಗೋಣ.
04. ನಮ್ಮ ಮನೆಗಳಲ್ಲಿ ಸಾಧ್ಯವಾದಷ್ಟು ಸೌರ ಅಥವಾ ಪವನ ಶಕ್ತಿ ಆಧಾರಿತ ವಿದ್ಯುತ್‌ಬಳಸಲು ಆದ್ಯತೆ ನೀಡೋಣ. ಅಸಾಧ್ಯವಾದಲ್ಲಿ ಸುತ್ತಮುತ್ತಲಿನ ನಿವಾಸಿಗಳು ಅಥವಾ ಆ ಪ್ರದೇಶದ ಸ್ಥಳೀಯರ ಜತೆಗೂಡಿ ಇಂಥ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ರಕ್ಷಣೆಗೆ ಪ್ರಯತ್ನಿಸೋಣ.
05. ಸಾಧ್ಯವಾದಷ್ಟು ಮರುಬಳಕೆಯ ವಸ್ತುಗಳ ಖರೀದಿ ನಮ್ಮದಾಗಲಿ. ಗಾಜಿನ ಬಾಟಲ್‌ಗಳು, ಮರು ಬಳಕೆಯ ಬ್ಯಾಗ್, ಕಪ್‌ಗ್ಳ ಬಳಕೆ ನಮ್ಮ ಹವ್ಯಾಸವಾಗಲಿ. ಪ್ಲಾಸ್ಟಿಕ್ ವಸ್ತುಗಳಿಗೆ ಶಾಶ್ವತ ವಿದಾಯ ಹೇಳ್ಳೋಣ.
06. ಮನೆಯಲ್ಲಿನ ಜೈವಿಕ ತ್ಯಾಜ್ಯಗಳನ್ನು ಗೊಬ್ಬರವಾಗಿ ಸಂಸ್ಕರಿಸಿ ನಮ್ಮ ಹೂದೋಟ ಅಥವಾ ಕೈತೋಟಗಳಿಗೆ ಬಳಕೆ ಮಾಡೋಣ.
07. ಸಾವಯವ ತರಕಾರಿ, ಬೇಳೆಕಾಳು, ಧಾನ್ಯಗಳ ಖರೀದಿಗೆ ಹೆಚ್ಚಿನ ಆದ್ಯತೆ ನೀಡೋಣ. ಇದರಿಂದ ನಮ್ಮ ಆರೋಗ್ಯದ ರಕ್ಷಣೆ ಸಾಧ್ಯ ಮಾತ್ರವಲ್ಲದೆ ಸ್ಥಳೀಯ ಕೃಷಿಕರಿಗೆ ನಾವು ಒಂದಿಷ್ಟು ಸಹಾಯ ಮಾಡಿದಂತಾಗುತ್ತದೆ. ಅಲ್ಲದೆ ಕನಿಷ್ಠ ಸ್ಥಳೀಯ ಮಟ್ಟದಲ್ಲಾದರೂ ಸ್ವಾವಲಂಬಿ ಬದುಕು ನಮ್ಮದಾಗಲಿ.
08. ಜೀವ ಸಂಕುಲಕ್ಕೆ ಜೀವದ ಸೆಲೆಯಾಗಿರುವ ನೀರಿನ ಸದ್ಬಳಕೆ, ಸಂರಕ್ಷಣೆ, ಮರುಪೂರಣಕ್ಕೆ ಹೆಚ್ಚಿನ ಆದ್ಯತೆ ನೀಡೋಣ.
09. ನಮ್ಮ ಸುತ್ತಮುತ್ತಲಿನ ಪ್ರಾಚೀನ ಮತ್ತು ಸಾಂಪ್ರದಾಯಿಕ ನೀರಿನ ಮೂಲಗಳ ರಕ್ಷಣೆ ನಮ್ಮ ಕರ್ತವ್ಯವಾಗಲಿ, ಇದು ಇಂದಿನ ತುರ್ತೂ ಸಹ.
10. ಪರಿಸರ ವಿಷಯವನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಮೂಲಕ ಮುಂದಿನ ತಲೆಮಾರಿನಲ್ಲಿ ಎಳವೆಯಿಂದಲೇ ಪರಿಸರದ ಬಗೆಗೆ ಕಾಳಜಿ ಮೂಡಿಸುವಂತೆ ಸರಕಾರ, ಶಾಲೆಗಳು ಹಾಗೂ ಆಡಳಿತ ವ್ಯವಸ್ಥೆಯನ್ನು ಆಗ್ರಹಿಸೋಣ.
11. ಕಡಿಮೆ ಬಳಕೆ, ಮರು ಬಳಕೆ, ಪುನರುತ್ಪಾದನೆ..ಇವು ಮೂರು ನಮ್ಮ ಧ್ಯೇಯವಾಗಿರಲಿ.
12. ಪರಿಸರ ಸಂರಕ್ಷಣೆ ಕೇವಲ ಬಾಯಿಮಾತಿಗೆ ಸೀಮಿತವಾಗಿದ್ದರೆ ಶೋಭೆ ತಾರದು. ನಮ್ಮ ದೈನಂದಿನ ಚಟುವಟಿಕೆಗಳ ಭಾಗವಾಗಿರಲಿ.
13. ಪ್ರತಿ ಪ್ರಾಣಿಗೂ ಮನುಷ್ಯನ ಹಾಗೆಯೇ ಈ ಭೂಮಿಯ ಮೇಲೆ ಬದುಕುವ ಹಕ್ಕಿದೆ ಎಂಬುದನ್ನು ಮರೆಯದಿರೋಣ. ಪ್ರಾಣಿಗಳ ವಾಸಸ್ಥಾನಗಳನ್ನು ನಾವು ಅತಿಕ್ರಮಿಸದಿದ್ದಲ್ಲಿ ಅವು ನಮ್ಮ ತಂಟೆಗೆ ಎಂದೂ ಬರಲಾರವು.
14. ಈ ಪರಿಸರ ನಮ್ಮ ಜನಾಂಗಕಷ್ಟೇ ಸೀಮಿತವಲ್ಲ, ಮುಂದಿನ ಜನಾಂಗಕ್ಕೂ ಇದನ್ನು ಉಳಿಸುವ ಮಹತ್ತರ
ಗುರಿ ಹಾಗೂ ಹೊಣೆಗಾರಿಕೆ ನಮ್ಮದೇ.
ತೈಲ ಸೋರಿಕೆ ಪರಿಸರದ ಮೇಲೆ ತೀವ್ರ ತೆರನಾದ ಹಾನಿಯನ್ನುಂಟು ಮಾಡುತ್ತದೆ. ಇದು ನೆಲ, ಜಲ, ವಾಯು ಈ ಮೂರೂ ಮಾಲಿನ್ಯಕ್ಕೀಡಾಗಿ ಜೀವ ಸಂಕುಲಕ್ಕೆ ಅಪಾಯ ತಂದೊಡ್ಡುತ್ತಿದೆ. ಜಾಗತಿಕ ತಾಪಮಾನ ಹೆಚ್ಚಳ ಮತ್ತು ಸಮುದ್ರ ಮಾಲಿನ್ಯದಲ್ಲೂ ಇದರ ಪಾತ್ರ ಅತ್ಯಂತ ಹೆಚ್ಚು. ತೈಲ ಸೋರಿಕೆಗೆ ಕಡಿವಾಣ ಹಾಕಲು ಇನ್ನಷ್ಟು ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ.
ಪರಿಸರ ಹಾನಿ ಎಂದಾಕ್ಷಣ ನೆನಪಿಗೆ ಬರುವುದು ಪ್ಲಾಸ್ಟಿಕ್. ಹಲವು ದಶಕಗಳಿಂದ ಈ ಬಗ್ಗೆ ತಜ್ಞರು, ಸರಕಾರ ಆದಿಯಾಗಿ ಎಲ್ಲರೂ ಮಾತನಾಡುತ್ತಲೇ ಬಂದಿದ್ದರೂ ಪ್ಲಾಸ್ಟಿಕ್‌ಗೆ ಸಮರ್ಪಕವಾದ ಪರ್ಯಾಯವಿನ್ನೂ ಸಿಕ್ಕಿಲ್ಲ. ಇಷ್ಟು ಮಾತ್ರವಲ್ಲದೆ ಪ್ಲಾಸ್ಟಿಕ್ ತ್ಯಾಜ್ಯಗಳ ಸಮರ್ಪಕ ವಿಲೇವಾರಿಯೂ ಇನ್ನೂ ಬಾಯಿಮಾತಿನಲ್ಲೇ ಉಳಿದಿದೆ. ಇದು ಇಡೀ ವಿಶ್ವ ಎದುರಿಸುತ್ತಿರುವ ಸಮಸ್ಯೆಯಾಗಿದ್ದು, ಇಡೀ ವಿಶ್ವವೇ ಒಟ್ಟಾಗಿ ಯೋಚಿಸಬೇಕಿದೆ.
ಕೃಷಿ, ಗಣಿಗಾರಿಕೆ, ಕಾಗದಗಳ ಉತ್ಪಾದನೆಯಾದಿಯಾಗಿ ಕೈಗಾರಿಕೆಗಾಗಿ ಅರಣ್ಯನಾಶ ನಿರಂತರವಾಗಿ ಸಾಗುತ್ತಿದೆ. ಇದರಿಂದ ವನ್ಯಜೀವಿ ಮತ್ತು ಜೀವವೈವಿಧ್ಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತಿವೆ. ಹಾಲಿ ಇರುವ ಅರಣ್ಯ ಪ್ರದೇಶಗಳನ್ನು ಸಂರಕ್ಷಿಸುವ ಜತೆಯಲ್ಲಿ ವಿಸ್ತರಣೆಗೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುವ ತುರ್ತು ಅಗತ್ಯವಿದೆ.
ಜೀವವೈವಿಧ್ಯ
ರಕ್ಷಣೆ ಆದ್ಯತೆಯಾಗಲಿ
1972ರಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 5 ವಿಶ್ವ ಪರಿಸರ ದಿನ ಎಂದು ಘೋಷಿಸಲಾಯಿತು. 1974ರಲ್ಲಿ ಮೊದಲ ಬಾರಿಗೆ ವಿಶ್ವ ಪರಿಸರ ದಿನ ಆಚರಣೆ ಪ್ರಾರಂಭಿಸಲಾಯಿತು.
ಈ ವರ್ಷದ ಧ್ಯೇಯ
ಪ್ರತೀ ವರ್ಷ ಒಂದು ಧ್ಯೇಯವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಮನುಕುಲ ಉಳಿಯ ಬೇಕಾದರೆ ಜೀವ ವೈವಿಧ್ಯದ ಅಗತ್ಯ ಇದ್ದೇ ಇದೆ. ಈ ಬಾರಿ ಅನೇಕ ಪ್ರಕೃತಿ ವಿಕೋಪಗಳು ಘಟಿಸಿದ್ದು, ಬ್ರೆಜಿಲ್, ಅಮೆರಿಕ ಮತ್ತು ಆಸ್ಟ್ರೇಲಿಯಾಗಳಲ್ಲಿ ನಡೆದ ಕಾಡ್ಗಿಚ್ಚುಗಳಿಂದ ಲಕ್ಷಾಂತರ ಪ್ರಾಣಿಗಳು ಸಜೀವ ದಹನಗೊಂಡಿವೆ. ಅಲ್ಲದೆ ಸದ್ಯ ಕೋವಿಡ್-19 ಇಡೀ ವ್ಯವಸ್ಯೆಯನ್ನೇ ಹೈರಾಣು ಮಾಡಿದ್ದು, ಇದರ ಮಧ್ಯೆ ಚಂಡ ಮಾರುತ, ಮಿಡತೆ ಕಾಟಗಳು ಎದುರಾಗಿವೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿ ವಿಶ್ವಸಂಸ್ಥೆ ಜೀವ ವೈವಿಧ್ಯದ ಮಹತ್ವವನ್ನು ಮನಗಂಡಿದ್ದು, 2020ರ ವರ್ಷಕ್ಕೆ “ಜೀವವೈವಿಧ್ಯದ ಅಗತ್ಯ ಮತ್ತು ಅಸ್ತಿತ್ವ’ ಅನ್ನುಧ್ಯೇಯವಾಗಿ ಘೋಷಿಸಿದೆ. ಮನುಷ್ಯನ ಚಟುವಟಿಕೆ ಗಳಿಂದ ಆಗುತ್ತಿರುವ ಜೀವವೈವಿಧ್ಯ ನಾಶದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಇದರಿಂದಾಗಿ ಇತರ ಜೀವ ಸಂಕುಲಗಳ ಮೇಲಾಗುವ ಪರಿಣಾಮಗಳ ಬಗ್ಗೆ ಎಚ್ಚರಿಸುವುದೂ ಇದರಲ್ಲಿ ಸೇರಿದೆ.
ಜೀವವೈವಿಧ್ಯವೇ ಏಕೆ ?
ಏಕೆ ಜೀವವೈವಿಧ್ಯವನ್ನೇ ಧ್ಯೇಯವನ್ನಾಗಿ ಘೋಷಿಸ ಲಾಗಿದೆ ಎಂಬುದಕ್ಕೆ ವಿವರಣೆ ನೀಡಿರುವ ವಿಶ್ವಸಂಸ್ಥೆ, ಜೀವವೈವಿಧ್ಯದ ಉಳಿವಿನಲ್ಲಿ ಮನುಕುಲದ ಉಳಿವು ಅಡಗಿದೆ ಎಂದು ಹೇಳಿದೆ. ಜೀವವೈವಿಧ್ಯ ಭೂಮಿ ಮೇಲಿನ ಪ್ರತಿ ಜೀವಿ ಗಳನ್ನು ಪೋಷಿಸುವ ಅಂಗರಕ್ಷಕವಾಗಿದೆ. ಪರಿಶುದ್ಧ ಗಾಳಿ ಮತ್ತು ನೀರು, ಪೌಷ್ಟಿಕ ಆಹಾರಗಳು, ವೈಜ್ಞಾನಿಕ ತಿಳಿವಳಿಕೆ, ನೈಸರ್ಗಿಕ ಔಷಧ ಮೂಲಗಳು, ನೈಸರ್ಗಿಕ ರೋಗ ನಿರೋಧಕತೆ ಮತ್ತು ಹವಾಮಾನ ಬದಲಾವಣೆಯನ್ನು ತನ್ನ ಅಂಗೈಯಲ್ಲಿಟ್ಟುಕೊಂಡು ರಕ್ಷಿಸುತ್ತಿರುವ ಜೀವವೈವಿಧ್ಯ ವ್ಯವಸ್ಥೆಯ ಕಿಂಚಿತ್ ಏರುಪೇರಾದರೂ ಇಡೀ ಮನುಕುಲ ಅಸ್ತವ್ಯಸ್ತ ಆಗುವ ಸಾಧ್ಯತೆ ಇದೆ. ಕೋವಿಡ್-19ನಂತಹ ರೋಗ ರುಜಿನಗಳಿಗೂ ಮೂಲಕಾರಣ ಜೀವವೈವಿಧ್ಯದಲ್ಲಿನ ಏರುಪೇರು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.