ನನೆಗುದಿಗೆ ಬಿದ್ದ ಕಾಮಗಾರಿಗಳಿಗೆ ಮರುಜೀವ
Team Udayavani, Jun 5, 2020, 6:04 AM IST
ಸರ್ಕಾರ ಸಂಪನ್ಮೂಲ ಕ್ರೋಡೀಕರಣಕ್ಕೆ ಅಗತ್ಯ ಯೋಜನೆಗಳನ್ನು ರೂಪಿಸಲು ಮುಂದಾಗಿದೆ. ಅದರಲ್ಲಿ ಬಿಡಿಎ ಸ್ವತ್ತುಗಳ ಮಾರಾಟವೂ ಒಂದಾಗಿದೆ. ಬಿಡಿಎ ನೂತನ ಆಯುಕ್ತ ಡಾ.ಎಚ್.ಆರ್. ಮಹಾದೇವ್ ಅಧಿಕಾರ ಸ್ವೀಕರಿಸಿದ್ದು, ಪ್ರಸ್ತುತ ಸಂದರ್ಭದಲ್ಲಿ ಜವಾಬ್ದಾರಿ ಹೆಚ್ಚಿದೆ. ಅದನ್ನು ನಿರ್ವಹಿಸುವ ಕುರಿತು ಹೊಸ ಯೋಜನೆಗಳ ಅನೇಕ ವಿಚಾರಗಳನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದು ಆನ್‌ಲೈನ್ ಮಾರಾಟ, ಸಂಕೀರ್ಣ ನಿರ್ಮಾಣ ಕುರಿತಂತೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ನಗರದಲ್ಲಿ ನನೆಗುದಿಗೆ ಬಿದ್ದ ಕಾಮಗಾರಿಗಳಿಗೆ ಮರುಜೀವ ನೀಡಲು ಆದ್ಯತೆ. ಯೋಜನೆಗಳ ತ್ವರಿತ ಅನುಷ್ಠಾನ, ಕಚೇರಿ ಕೆಲಸಗಳಿಗೆ ಚುರುಕು ಮುಟ್ಟಿಸಲು ಹೆಚ್ಚುವರಿ ಸಿಬ್ಬಂದಿ ನೇಮಕ. ಬೆಂಗಳೂರಿನ ಅಗತ್ಯಕ್ಕೆ ತಕ್ಕಂತೆ ಯೋಜನೆ ರೂಪಿಸಲು ಒತ್ತು. ಸಂಪನ್ಮೂಲ ಕ್ರೋಡೀಕರಣಕ್ಕೆ ಶ್ರಮಿಸಲಾಗುವುದು. ಇದು ಬಿಡಿಎ ನೂತನ ಆಯುಕ್ತ ಡಾ.ಎಚ್.ಆರ್. ಮಹಾದೇವ್ ಅವರ ಸ್ಪಷ್ಟ ನುಡಿ. ಬಿಡಿಎ ಕಚೇರಿಯಲ್ಲಿ ಗುರುವಾರ ಆಯುಕ್ತರಾಗಿ ಪ್ರಮಾಣ ವಚನ ಸ್ವೀಕರಿಸಿದ ಅವರು “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ, ಜನರಿಗೆ ಆನ್‌ಲೈನ್‌ನಲ್ಲೇ ಮಾಹಿತಿ ಹಾಗೂ ಆನ್‌ಲೈನ್ ಮೂಲಕವೇ ಜನರಿಗೆ ಮಾಹಿತಿ ರವಾನೆ, ಬಿಡಿಎ ನಿರ್ಮಿಸುವ ಫ್ಲಾಟ್‌ಗಳಿಗೆ ಬೇಡಿಕೆ ಹೆಚ್ಚಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಸಂದರ್ಶನದ ಸಂಕ್ಷಿಪ್ತ ವಿವರ ಹೀಗಿದೆ.
* ಭೂ ಸ್ವಾಧೀನ, ಬಡಾವಣೆ ಅಭಿವೃದ್ಧಿ, ನಿವೇಶನ ನಿರ್ಮಾಣ ಹಾಗೂ ಹಂಚಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಕೈಗೊಳ್ಳುವ ಕ್ರಮವೇನು?
ಭೂ ಸ್ವಾಧೀನಪಡಿಸಿಕೊಂಡ ತಕ್ಷಣ ಬಡಾವಣೆ ಅಭಿವೃದ್ಧಿಪಡಿಸಿ, ನಿವೇಶನ ಹಂಚಿಕೆ ಮಾಡಿದರೆ ಪ್ರಾಧಿಕಾರಕ್ಕೆ ಆದಾಯ ಬರಲಿದೆ. ಈ ಕಾರ್ಯಗಳಿಗೆ ಸಿಬ್ಬಂದಿ ಅಗತ್ಯವಿದೆ. ಆದರೆ, ನಮ್ಮಲ್ಲಿ ಸಿಬ್ಬಂದಿ ಕೊರತೆ ಇರುವುದು ಕಂಡು ಬಂದಿದ್ದು, ಹೆಚ್ಚುವರಿ ನೇಮಕಕ್ಕೆ ಕ್ರಮವಹಿಸಲಾಗುವುದು. ನಿವೇಶನ ಹಂಚಿಕೆ ಪ್ರಕ್ರಿಯೆ ಸೇರಿ ಇನ್ನಿತರೆ ಕೆಲಸಗಳನ್ನು ಆನ್‌ಲೈನ್ ಮೂಲಕ ನಡೆಸಲು ಚಿಂತಿಸಲಾಗಿದೆ.
* ಭವಿಷ್ಯದ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ರೂಪಿಸುತ್ತಿರುವ ಯೋಜನೆಗಳೇನು?
ಯಾವುದೇ ಯೋಜನೆ ರೂಪಿಸಬೇಕು ಎಂದರೆ ಇಲ್ಲಿನ ಸ್ಥಿತಿ – ಗತಿ ತಿಳಿಯಬೇಕು. ಆದ್ದರಿಂದ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿ ಗಳೊಂದಿಗೆ ಚರ್ಚಿಸಿ ರೂಪುರೇಷೆ ಸಿದ್ಧಪಡಿಸಲಾಗುವುದು. ಇಂದಿನಿಂದಲೇ ಪ್ರಾಧಿಕಾರದ ಒಂದೊಂದು ವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಿ, ವಿಭಾಗದ ಬಗ್ಗೆ ಮಾಹಿತಿ ಕಲೆ ಹಾಕಲಾಗು ವುದು. ಭವಿಷ್ಯದ ಬೆಳವಣಿಗೆ ದೃಷ್ಟಿಯಿಂದ ಯೋಜನೆ ಸಿದ್ಧಪಡಿಸಲಾಗುವುದು.
* ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೂ ಆದ್ಯತೆ ನೀಡುವಿರಾ?
ಪ್ರಾಧಿಕಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು 15 ದಿನದಲ್ಲಿ ಅರಿಯಲಾಗುವುದು. ಬೆಂಗಳೂರಿನ ಅಗತ್ಯ ಏನು ಎಂಬುದನ್ನು ಅರಿತು ಯೋಜನೆ ರೂಪಿಸಲಾಗುವುದು. ವಾಣಿಜ್ಯ ಸಂಕೀರ್ಣಗಳ ಅಗತ್ಯ ಕಂಡುಬಂದರೆ ಅವುಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಇದು ಪ್ರಾಧಿಕಾರದ ಆದಾಯದ ಮೂಲವಾಗಿದೆ. ಪ್ರಾಧಿಕಾರದ ವೆಬ್ ಸೈಟ್ ಆಧುನೀಕರಣಕ್ಕೆ ತಕ್ಕಂತೆ ರೂಪಿಸಲಾಗುವುದು. ಎಲ್ಲೆಲ್ಲಿ ಖಾಲಿ ನಿವೇಶನಗಳಿವೆ, ಎಷ್ಟು ಬೆಲೆ ಎಂಬ ಬಗ್ಗೆ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗುವುದು. ಈ ಸಂಬಂಧ ಸೂಕ್ತ ಛಾಯಾಚಿತ್ರಗಳನ್ನು ಪ್ರಕಟಿಸಲಾಗುವುದು.
* ಬಹುಮಹಡಿ ವಸತಿ ಗೃಹ ನಿರ್ಮಾಣದಲ್ಲಿ ವಸತಿ ಮಂಡಳಿಯೇ ಪೈಪೋಟಿ ಇರುವಂತಿದ್ದು, ಇದನ್ನು ಹೇಗೆ ನಿಭಾಯಿಸುವಿರಿ?
ಬಿಡಿಎ ಫ್ಲಾಟ್‌ಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಬೇಡಿಕೆ ಇಲ್ಲ ಎಂಬುದು ಗೊತ್ತಾಗಿದೆ. ಇದಕ್ಕಾಗಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಬಿಡಿಎ ಫ್ಲಾಟ್ ಗಳಿಗೂ ಬೇಡಿಕೆ ಹೆಚ್ಚುವಂತೆ ಮಾಡಲಾಗುವುದು. ಬಿಡಿಎ ಅಪಾರ್ಟ್‌ಮೆಂಟ್‌ಗಳ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಂಡು, ನಮ್ಮ ಬಳಿ ಎಷ್ಟು ಫ್ಲಾಟ್ ಗಳು ಲಭ್ಯವಿದೆ ಎಂದು ಜನರಿಗೆ ತಿಳಿಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಗೃಹ ಸಾಲದ ವ್ಯವಸ್ಥೆ ಕಲ್ಪಿಸಲಾಗುವುದು.
* ಪೆರಿಫರಲ್ ರಿಂಗ್ ರಸ್ತೆ ಯೋಜನೆ ನನೆಗುದಿಗೆ ಬಿದ್ದಿದ್ದು, ರೈತರಿಗೆ ಭೂ ಪರಿಹಾರ ನೀಡಿಲ್ಲ. ಈ ಬಗ್ಗೆ ಏನು ಕ್ರಮ?
ಬಿಡಿಎಯಿಂದ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಮರುಜೀವ ನೀಡಲಾಗುವುದು. ಪೆರಿಫರಲ್ ರಿಂಗ್ ರಸ್ತೆ ಯೋಜನೆ ಸಂಬಂಧ ಅಧಿಕಾರಿಗಳಿಂದ ವರದಿ ಪಡೆದು, ಶೀಘ್ರವೇ ಕಾಮಗಾರಿ ಆರಂಭಿಸಲು ಕ್ರಮ ಜರುಗಿಸಲಾಗುವುದು. ರೈತರಿಗೆ ಅನ್ಯಾಯವಾಗದಂತೆ ಪರಿಹಾರ ನೀಡಲು ಕ್ರಮವಹಿಸಲಾಗುವುದು. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗುವುದು.
ಅಧಿಕಾರ ಸ್ವೀಕಾರ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಡಾ. ಎಚ್. ಆರ್. ಮಹಾದೇವ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಆಯುಕ್ತ ಡಾ. ಜಿ.ಸಿ. ಪ್ರಕಾಶ್ ಅವರು ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕಾರದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಎಚ್. ಆರ್. ಮಹಾದೇವ್, ಉತ್ತಮವಾಗಿ ಕೆಲಸ ನಿರ್ವಹಿಸುವ ಮೂಲಕ ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸೂಚನೆ ನೀಡಿದರು.
* ಮಂಜುನಾಥ ಗಂಗಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.