ಪರಿಸರವನ್ನು ಪ್ರೀತಿಸಿದರೆ, ಅದು ನಮ್ಮನ್ನು ಪ್ರೀತಿಸುತ್ತದೆ
Team Udayavani, Jun 5, 2020, 4:00 PM IST
ಸಾಂದರ್ಭಿಕ ಚಿತ್ರ
ಪ್ರತಿ ವರ್ಷ ಜೂನ್ 5 ಬಂತೆಂದರೆ ಸಾಕು ವಿಶ್ವದಲ್ಲಿ ಪರಿಸರ ಪ್ರೇಮಿಗಳ ಸಂಖ್ಯೆ ಹೆಚ್ಚಾಗುತ್ತದೆ. ವಾಟ್ಸಪ್ ಸ್ಟೇಟಸ್‌ಗಳಲ್ಲಿ, ಫೇಸ್ಬುಕ್ ಇನ್ಸ್ಟಾಗ್ರಾಮ್ ಪೋಸ್ಟ್ ಗಳಲ್ಲಿ, ಸರಕಾರಿ ಕಾರ್ಯಕ್ರಮಗಳಲ್ಲಿ, ವಿವಿಧ ಸಂಘ ಸಂಸ್ಥೆಗಳು ಕೈಗೊಳ್ಳುವ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಿದ ಪರಿಸರ ಪ್ರೇಮಿಗಳು ಸಂಜೆಯಾಗುವ ವೇಳೆಗೆ ಮರೆಯಾಗಿ ಹೋಗುತ್ತಾರೆ! ಏಕೆಂದರೆ ಜೂ.5 ‘ವಿಶ್ವ ಪರಿಸರ ದಿನ’.
ಪರಿಸರ ನಮಗೆ ಸರ್ವಸ್ವವನ್ನೂ ಕೊಟ್ಟಿದೆ. ಉಸಿರಾಡಲು ಗಾಳಿ, ಕುಡಿಯಲು ನೀರು, ಸೇವಿಸಲು ಆಹಾರ, ವಾಸಿಸಲು ಶುಭ್ರ ವಾತಾವರಣ, ಬೆಳೆ ಬೆಳೆಯಲು ಭೂಮಿ, ಅದಕ್ಕೆ ಸಹಕಾರಿಯಾಗುವ ಮಳೆ, ಮನುಕುಲ ಮಾತ್ರವಿದ್ದರೆ ಆತನಿಗೆ ಏಕಾಂಗಿತನ ಕಾಡಬಹುದೆಂದು ಲಕ್ಷಲಕ್ಷ ಜೀವರಾಶಿಗಳು. ಇಷ್ಟೆಲ್ಲವನ್ನು ಕೊಟ್ಟ ಪರಿಸರವನ್ನೊಮ್ಮೆ ನಿಷ್ಕಲ್ಮಶ ಹೃದಯದಿಂದ ಪ್ರೀತಿಸಿ ನೋಡಿ, ಅದೂ ಪ್ರೀತಿಸುತ್ತದೆ! ಅದನ್ನು ರಕ್ಷಿಸಿ ನೋಡಿ, ನಮ್ಮನ್ನು ರಕ್ಷಿಸುತ್ತದೆ! ಒಂದು ವೇಳೆ ಪ್ರೀತಿಸದೆ, ರಕ್ಷಿಸದೆ ನಮ್ಮ ಸ್ವಾರ್ಥವನ್ನು ನೀಗಿಸಲು ಭಕ್ಷಿಸಲು ಮುಂದಾದರೆ, ಪರಿಸರ ಪ್ರಳಯ ರುದ್ರನಾಗಿ ಸೃಷ್ಠಿಯ ನಾಶಕ್ಕೆ ಮುಂದಾಗುವುದರಲ್ಲಿ ಅಚ್ಚರಿ ಪಡಬೇಕಾಗಿಲ್ಲ. ಇದಕ್ಕೆ ಅನೇಕ ನಿದರ್ಶನಗಳು ನಮ್ಮ ಕಣ್ಣೆದುರಿಗೇ ಇವೆ.
ಪರಿಸರವನ್ನು ಉಳಿಸಬೇಕೆನ್ನುವ ಕಾರಣಕ್ಕಾಗಿ 1972ರಲ್ಲಿ “ಪರಿಸರ ದಿನ”ವನ್ನು ಆಚರಿಸಬೇಕೆನ್ನುವ ನಿರ್ಣಯವನ್ನು ವಿಶ್ವಸಂಸ್ಥೆ ತೆಗೆದುಕೊಂಡಿದ್ದು ಪರಿಸರವನ್ನು ಉಳಿಸಬೇಕೆನ್ನುವ ಧ್ಯೇಯದಿಂದಾದರೂ, ಅದರ ನಾಶವಾಗುತ್ತಿದೆ ಮತ್ತು ನಮ್ಮಿಂದಲೇ ಆಗುತ್ತಿದೆ ಎಂಬ ಎಚ್ಚರಿಕೆಯನ್ನೂ ಕೊಟ್ಟಿತು. ಆದರೆ ನಾವು ಎಚ್ಚೆತ್ತು ಕೊಂಡಿಲ್ಲ.
ಪ್ರತಿ ವರ್ಷ 10 ಬಿಲಿಯನ್ ಹೆಕ್ಟರ್ ಕಾಡನ್ನು ನಾಶ ಮಾಡುತ್ತಿದ್ದೇವೆ! ಭೂಮಿ ಸೃಷ್ಟಿಯಾದಾಗಿನಿಂದ ಇರುವಷ್ಟೇ ನೀರು ಈಗಲೂ ಇದೆ, ಆದರೆ ಬಳಸಲು ಯೋಗ್ಯವಾಗಿಲ್ಲವಷ್ಟೆ! 1970 ರಿಂದ ಈಚೆಗೆ ಶೇ.53 ರಷ್ಟು ವನ್ಯಜೀವಿ ಸಂಕುಲದ ಸಾವಿಗೆ ಪ್ರಕೃತಿಯ ಮೇಲಿನ ನಮ್ಮ ದಬ್ಬಾಳಿಕೆ ಕಾರಣವಾಗಿದೆ. ವಿಶ್ವದ ಅಗ್ರಮಾನ್ಯ ನಗರಗಳು ವಾಸಿಸಲು ಯೋಗ್ಯವಾಗದಷ್ಟು ಅಭಿವೃದ್ಧಿ ಹೊಂದಿವೆ! ಇವೆಲ್ಲವೂ ನಾವು ಏಕದಿನ ಪರಿಸರ ಪ್ರೇಮಿಗಳಾದ ಕಾರಣದಿಂದ ಸಂಭವಿಸಿದ್ದು. ತನ್ನ ಸರ್ವಸ್ವವನ್ನು ನಮ್ಮ ಉಳಿವಿಗಾಗಿ ಧಾರೆಯೆರೆದ ಪ್ರಕೃತಿಗೆ ಇದೇನಾ ನಮ್ಮ ಕೊಡುಗೆ? ಚಿಂತಿಸುವ ಅಗತ್ಯತೆ ಇದೆ.
ನಾವು ಪರಿಸರಕ್ಕೆ ಯಾವೆಲ್ಲ ರೀತಿಯಲ್ಲಿ ಹಾನಿ ಮಾಡಬಹುದೋ, ಎಲ್ಲಾ ರೀತಿಯಲ್ಲೂ ಹಾನಿ ಮಾಡಿ ಆಗಿದೆ. ಇನ್ನು ಅದನ್ನು ರಕ್ಷಿಸುವ ಹೊಣೆಯಷ್ಟೆ ನಮ್ಮದು. ಹೇಗೆ ರಕ್ಷಿಸಬಹುದೆಂಬ ಪ್ರಶ್ನೆ ಮೂಡುವವರು, ನಮ್ಮಿಂದ ಪರಿಸರಕ್ಕೆ ಹಾನಿಯಾಗದಂತೆ ಬದುಕಿದರಾಯ್ತು. ಪ್ರಕೃತಿಯನ್ನು ತನ್ನಷ್ಟಕ್ಕೇ ಬಿಟ್ಟರೆ ಸಾಕು ಅದು ವೃದ್ಧಿಸುತ್ತದೆ ಎನ್ನುವುದು ಕೊರೋನಾ ಕಲಿಸಿದ ಪಾಠಗಳಲ್ಲೊಂದು. ಪಂಜಾಬಿನ ಜಲಂಧರ್ ನಿಂದ ಹಿಮಾಲಯ ಕಂಗೊಳಿಸಿದ್ದು, ಸಾವಿರಾರು ಕೋಟಿ ಖರ್ಚು ಮಾಡಿದರೂ ಶುದ್ದವಾಗದ ಯಮುನೆಯಂತಹ ನದಿಗಳು ತನ್ನಷ್ಟಕ್ಕೇ ಶುಭ್ರಗೊಂಡಿದ್ದು, ನಾವೆಲ್ಲರೂ ನಶಿಸಿಯೇ ಹೋಯ್ತೆಂದು ಭಾವಿಸಿದ್ದ ಜೀವಿಗಳು ಹೊಸ ಚೈತನ್ಯದೊಂದಿಗೆ ಮರಳಿ ಕಂಗೊಳಿಸಿದ್ದು, ಉಸಿರಾಡಲಾಗದಷ್ಟು ಮಲಿನಗೊಂಡಿದ್ದ ಆಕಾಶ, ಯಾವ ತಂತ್ರಜ್ಞಾನವನ್ನೂ ಬಳಸದೆ ತಿಳಿಯಾದಂತಹ ಉದಾಹರಣೆಗಳೇ ಇದಕ್ಕೆ ಸಾಕ್ಷಿ.
ಇನ್ನು ಪರಿಸರ ದಿನದ ಪ್ರಯುಕ್ತ ಗಿಡಗಳನ್ನು ನೆಟ್ಟರೆ ಸಾಲದು, ಅವುಗಳನ್ನು ಪೋಷಿಸುವ ಅಗತ್ಯತೆ ಹೆಚ್ಚಿದೆ. ಏಕೆಂದರೆ ಭಾರತದಲ್ಲಿ ವನಮಹೋತ್ಸವದ ಹೆಸರಲ್ಲಿ ನೆಡುವ ಗಿಡಗಳೆಲ್ಲಾ ಬೆಳೆದು ನಿಂತಿದ್ದರೆ ಈಗಿರುವ ಮರಗಳು ದುಪ್ಪಟ್ಟಾಗುತಿತ್ತು! ಭಾರತದಲ್ಲಾಗುವ ಮಳೆ ನೀರನ್ನು ಸಂಗ್ರಹಿಸಲು ನಾವು ಶಕ್ತರಾದರೆ ಮತ್ತು ನೀರಿನ ಮೂಲಗಳಾದ ನದಿ, ಸರೋವರ, ಕೆರೆ, ಬಾವಿಗಳನ್ನು ಉಳಿಸಿಕೊಂಡರೆ ಕುಡಿಯುವ ಮತ್ತು ಬಳಸುವ ನೀರಿಗೆ ಕೊರತೆ ಇರುವುದಿಲ್ಲ! ಕಾಡನ್ನು ಬೆಳೆಸಲಾಗದಿದ್ದರೂ ಅದನ್ನು ತನ್ನಷ್ಟಕ್ಕೆ ಬಿಟ್ಟರೆ ಅದುವೇ ಬೆಳೆಯುತ್ತದೆ ಮತ್ತು ಅಲ್ಲಿರುವ ಜೀವಿಗಳು ನಮಗೆ ತೊಂದರೆ ಕೊಡದೆ ಸುರಕ್ಷಿತವಾಗಿರುತ್ತವೆ. ಕಾರ್ಖಾನೆಗಳು, ವಾಹನಗಳಾದಿಯಾಗಿ ಹೊರಹೊಮ್ಮುವ ವಿಷಾನಿಲಗಳನ್ನು ಪ್ರಕೃತಿಗೆ ಹಾನಿಯಾಗದಂತೆ ತಂತ್ರಜ್ಞಾನಗಳು ತಡೆಯುವ ಸಾಮರ್ಥ್ಯವನ್ನು ಗಳಿಸಿದರೆ ಶುಭ್ರವಾದ ಗಾಳಿಯನ್ನೇ ಉಸಿರಾಡಬಹುದು. ನಾವು ಬಳಸುವ ವಸ್ತುಗಳೆಲ್ಲವೂ ಪರಿಸರಕ್ಕೆ ಹಾನಿ ಮಾಡದಿದ್ದರೆ ನಿಜಕ್ಕೂ ಅದ್ಭುತ ಬದಲಾವಣೆಯನ್ನು ತರಲು ಸಾಧ್ಯವಾಗುತ್ತದೆ. ಯೋಚಿಸಿ. ಎಲ್ಲವೂ ನಮ್ಮ ಕೈಯಲ್ಲೇ ಇದೆ.
ಇನ್ನು ಸರ್ಕಾರಗಳು ತರುವ ಯೋಚನೆಗಳು ಪರಿಸರಕ್ಕೆ ಪೂರಕವಾಗಿರಬೇಕು. ಈಗಾಗಲೇ ಚಾಲ್ತಿಯಲ್ಲಿರುವ ‘ನದಿಗಳನ್ನು ಉಳಿಸೋಣ’,’ಕಾವೇರಿಯ ಕೂಗು’,’ವೃಷಭಾವತಿಯ ಕೊನೆಯ ಕಣ್ಣೀರು’ ಮುಂತಾದ ಸಾಮಾಜಿಕ ಕಾರ್ಯಗಳಿಗೆ ಬಲತುಂಬೋಣ. ಈ ನಾಡಿನ ಬಹುದೊಡ್ಡ ಆಸ್ತಿ ಯುವಶಕ್ತಿ. ನಾವುಗಳು ಪರಿಸರ ರಕ್ಷಕರಾಗೋಣ. ಈ ನಾಡಿನಲ್ಲಿರುವ ಲಕ್ಷಾಂತರ ಶಾಲಾ ಕಾಲೇಜುಗಳು ನೀರನ್ನು ಸಂಗ್ರಹಿಸುವ ಮತ್ತು ಗಿಡಗಳನ್ನು ನೆಡುವ ಕೈಂಕಾರ್ಯಕ್ಕೆ ಮುಂದಾಗಿ ವಿದ್ಯಾರ್ಥಿ ಸಮೂಹಕ್ಕೆ ಪ್ರೇರಣೆಯನ್ನೊದಗಿಸಿದರೆ ಅದುವೇ ಪರಿಸರವನ್ನುಳಿಸುವ ಬಹುದೊಡ್ಡ ಚಳುವಳಿಯಾದರೆ ಅಚ್ಚರಿಪಡಬೇಕಾಗಿಲ್ಲ. ಕೊನೆಯದಾಗಿ ಸರ್ಕಾರಗಳು ಪರಿಸರದ ರಕ್ಷಣೆಗಾಗಿ ಕಠಿನ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಮತ್ತದನ್ನು ಪಾಲಿಸುವ ಮೂಲಕ ಪರಿಸರ ಕಂಟಕರಿಗೆ ಬಿಸಿಮುಟ್ಟಿಸುವುದಕ್ಕೆ ಮುಂದಾಗಬೇಕು. ಆಗ ‘ವಂದೆ ಮಾತರಂ’ ನಲ್ಲಿ ವರ್ಣಿಸಲಾದ ‘ಸುಜಲಾಂ, ಸುಫಲಾಂ,ಮಲಯಜ ಶೀತಲಾಂ, ಸಸ್ಯಶ್ಯಾಮಲಾಂ, ಮಾತರಂ’ ಎನ್ನುವ ಭಾರತ ಉಳಿಯಲು ಸಾಧ್ಯವಾಗುತ್ತದೆ.
ಅರುಣ್ ಕಿರಿಮಂಜೇಶ್ವರ, ವಿವೇಕಾನಂದ ಕಾಲೇಜು, ಪುತ್ತೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.