ದಲಿತ ಪದ ಬಳಕೆ ನಿಷೇಧ ಆದೇಶಕ್ಕೆ ಆಕ್ಷೇಪ
Team Udayavani, Jun 6, 2020, 11:50 AM IST
ಸಾಂದರ್ಭಿಕ ಚಿತ್ರ
– ದಲಿತ ಎನ್ನುವುದು ಕೇವಲ ಎಸ್‌ಸಿ-ಎಸ್‌ಟಿ ಸಮುದಾಯಗಳಿಗೆ ಸೀಮಿತವಾಗಿ ಹುಟ್ಟಿರುವ ಪದವಲ್ಲ
– ರಾಜ್ಯ ಸರ್ಕಾರದ ಆದೇಶ ಮೂರ್ಖತನದ್ದು: ದಲಿತ ಮುಖಂಡರ ಅಭಿಪ್ರಾಯ
ಬೆಂಗಳೂರು: ಕೇಂದ್ರ ಸರ್ಕಾರದ ನಿರ್ದೇಶನದಂತೆ ಸರ್ಕಾರಿ ವ್ಯವಹಾರಗಳಲ್ಲಿ ದಲಿತ ಪದ ಬಳಕೆ ಮಾಡದಂತೆ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿರುವುದಕ್ಕೆ ದಲಿತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ದಲಿತ ಎನ್ನುವುದು ಕೇವಲ ಎಸ್‌ಸಿ -ಎಸ್‌ಟಿ ಸಮುದಾಯಗಳಿಗೆ ಸೀಮಿತವಾಗಿ ಹುಟ್ಟಿರುವ ಪದವಲ್ಲ. ಸಮಾಜದಲ್ಲಿ ದಮನಿತರು, ಶೋಷಣೆಗೊಳಗಾದ ಎಲ್ಲ ಸಮಾಜಗಳನ್ನು ಒಳಗೊಂಡ ವಿಶಾಲ ಅರ್ಥದಲ್ಲಿ ಹುಟ್ಟಿಕೊಂಡಿದ್ದು, ಸಮಾಜದಲ್ಲಿನ ಶೋಷಣೆಯ ವಿರುದ್ಧ ಶೋಷಿತ ಸಮುದಾಯಗಳ ಸ್ವಾಭಿಮಾನದ ಪ್ರತೀಕವಾಗಿ, ಶೋಷಣೆಯಿಂದ ಹೊರ ಬರಲು ದಲಿತ ಪದ ಮತ್ತು ಸಂಘಟನೆಗಳು ಹುಟ್ಟಿಕೊಂಡಿವೆ ಎಂದು ದಲಿತ ಸಂಘಟನೆಗಳ ಮುಖಂಡರು ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಯಾವ ಉದ್ದೇಶದಿಂದ ಈ ರೀತಿ ಆದೇಶ ಹೊರಡಿಸಿದ್ದಾರೋ ಗೊತ್ತಿಲ್ಲ. ಸರ್ಕಾರಿ ವ್ಯವಹಾರಗಳಲ್ಲಿ ಹಾಗೂ ಜಾತಿ ನಿಂದನೆ ಪ್ರಕರಣಗಳಲ್ಲಿ ದಲಿತ ಪದ ಬಳಕೆ ಮಾಡದಿದ್ದರೆ ಪ್ರಕರಣವೇ ಅನ್ವಯ ಆಗುವುದಿಲ್ಲ. ನಿರ್ದಿಷ್ಟ ಜಾತಿಯ ಹೆಸರು ಉಲ್ಲೇಖ ಮಾಡಿದರೆ ಮಾತ್ರ ಜಾತಿ ನಿಂದನೆ ಪ್ರಕರಣ ಊರ್ಜಿತ ಆಗುತ್ತದೆ. ರಾಜ್ಯ ಸರ್ಕಾರದ ಈ ಆದೇಶ ಮೂರ್ಖತನ. ಇದನ್ನು ವಾಪಸ್ ಪಡೆಯಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮೋಹನ್ ರಾಜ್ ಅಭಿಪ್ರಾಯ ಪಟ್ಟಿದ್ದಾರೆ.
ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ (ಅಂಬೇಡ್ಕರ್ ವಾದ) ಮಾವಳ್ಳಿ ಶಂಕರ್ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ದಲಿತ ಪದ ಬಳಕೆ ಮಾಡದಂತೆ ಹೇಳುವ ಅಧಿಕಾರ ಯಾವುದೇ ಸರ್ಕಾರಕ್ಕೆ ಇಲ್ಲ. ಸರ್ಕಾರಿ ವ್ಯವಹಾರಗಳಲ್ಲಿ ದಲಿತ ಪದವನ್ನು ಯಾರೂ ಬಳಕೆ ಮಾಡುವುದಿಲ್ಲ. ಒಂದು ವೇಳೆ ಅಲ್ಲಿ ಬಳಕೆ ಮಾಡಬಾರದು ಎಂದರೆ ಅದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ, ನಮ್ಮ ಹೋರಾಟದ ಅಸ್ಮಿತೆಯಾಗಿರುವ ದಲಿತ ಪದ ಬಳಕೆ ಹಾಗೂ ನಮ್ಮ ಸಂಘಟನೆಗಳ ಹೆಸರು ಬದಲಾಯಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಅಲ್ ಇಂಡಿಯಾ ದಲಿತರ ಆಕ್ಷನ್ ಕಮಿಟಿ ಅಧ್ಯಕ್ಷ ಚಿ.ನಾ.ರಾಮು, ಸರ್ಕಾರಿ ಆದೇಶದಲ್ಲಿ ಪದ ಬಳಕೆ ಮಾಡುವಂತಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಹೈಕೋರ್ಟ್ ಆದೇಶವಿದೆ. ಸಂಘ ಸಂಸ್ಥೆಗಳು ಹಾಗೂ ಹೋರಾಟ ಮಾಡುವವರಿಗೆ ಬಳಸಬಾರದು ಎಂದು ಆದೇಶದಲ್ಲಿ ಇಲ್ಲ. ಹೀಗಾಗಿ ಸರ್ಕಾರಿ ಆದೇಶದಲ್ಲಿ ಮಾತ್ರ ಬಳಕೆ ಮಾಡುವಂತಿಲ್ಲ. ಇದರಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಆದೇಶದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.