ಸಮುಚ್ಚಯಕ್ಕೆ ನುಗ್ಗಿದ ಮಳೆ ನೀರು: 50 ಲಕ್ಷ ರೂ. ಅಧಿಕ ನಷ್ಟ
Team Udayavani, Jun 12, 2020, 5:13 AM IST
ಉಡುಪಿ: ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದುಕೊಂಡಿದ್ದು, ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಮಣಿಪಾಲ ಸಿಂಡಿಕೇಟ್ ಸರ್ಕಲ್ ಸಮೀಪದ ಹೆದ್ದಾರಿ ಬದಿಯ ಪ್ರೀಮಿಯರ್ ಎನ್‌ಕ್ಲೇವ್ ಸಮುಚ್ಚಯದ ಆವರಣದೊಳಗೆ ಚರಂಡಿ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿದೆ.
ಉಡುಪಿ-ಮಣಿಪಾಲ ಮಧ್ಯದ ಹೆದ್ದಾರಿಯನ್ನು ಇತ್ತೀಚೆಗೆ ಅಭಿವೃದ್ಧಿ ಪಡಿಸಲಾಗಿದೆ. ಸಿಂಡಿಕೇಟ್ ಸರ್ಕಲ್ ಬಳಿ ರಸ್ತೆ ಕಾಂಕ್ರೀಟ್ ಕಾಮಗಾರಿ ಪೂರ್ತಿಗೊಂಡರೂ, ಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ನೀರು ಹರಿಯಲು ಸೂಕ್ತ ಚರಂಡಿ ಇಲ್ಲದಿರುವ ಕಾರಣ ಬುಧವಾರ ರಾತ್ರಿಯ ಮಳೆಗೆ ನೀರು ಸಮುಚ್ಚಯದ ಎದುರಿನ ಚರಂಡಿಯಿಂದ ಮೇಲೆದ್ದು ಪ್ರವೇಶ ಗೇಟ್ ಮೂಲಕ ಆವರಣದೊಳಕ್ಕೆ ಹರಿದಿದೆ.
ಸಮುಚ್ಚಯಕ್ಕೆ ಬಳಸಲ್ಪಡುವ ಜನರೇಟರ್ ರೂಂ ಗೂ ನೀರು ನುಗ್ಗಿದೆ. ನೀರಿನ ಒತ್ತಡಕ್ಕೆ 63 ಕೆ.ವಿ. ಸಾಮರ್ಥ್ಯದ ಜನರೇಟರ್ ಹಾಗೂ ಜನರೇಟರ್ ಕೊಠಡಿ ಎಲ್ಲವೂ ನೀರಿಗೆ ಜರಿದಿದೆ. ಪಕ್ಕದಲ್ಲೇ ವಿದ್ಯುತ್ ಪರಿವರ್ತಕ ಕೂಡ ಇದ್ದು, ಅದಕ್ಕೂ ಹಾನಿಯಾಗಿದೆ. ಪರಿವರ್ತಕದ ಕಂಬ, ಅವಶೇಷಗಳು, ಜನರೇಟರ್ ಕೊಠಡಿ, ಇನ್ನಿತರ ಭಾಗಗಳು ಎಲ್ಲವೂ 100 ಮೀ ನಷ್ಟು ದೂರದವರೆಗೆ ನೀರಿನಲ್ಲಿ ಹೋಗಿದೆ. ಸುಮಾರು 50 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ತಪ್ಪಿದ ಅನಾಹುತ
ವಿದ್ಯುತ್ ಪರಿವರ್ತಕಕ್ಕೆ ನೀರು ತಾಗಿದ ತತ್‌ಕ್ಷಣವೇ ವಿದ್ಯುತ್ ಕಡಿತವಾಗಿದ್ದು, ಇದರಿಂದ ಭಾರಿ ಅನಾಹುತ ತಪ್ಪಿದೆ. ಜನರೇಟರ್‌ನಿಂದ ಕಟ್ಟಡದ ಒಳಕ್ಕೆ ಜೋಡಿಸಿಕೊಂಡ ಪೈಪ್‌ಗ್ಳ ಸೆಳೆತಕ್ಕೆ ಕಟ್ಟಡ ಒಳಗಿನ ಯೂನಿಟ್‌ಗೂ ಹಾನಿಯಾಗಿದೆ.
ಕುಸಿದು ಬೀಳುವ ಆತಂಕ
ಹೆದ್ದಾರಿ ಬದಿಯಲ್ಲಿ ಇರುವ ಸಮುಚ್ಚಯದಲ್ಲಿ 32 ಅಪಾರ್ಟ್‌ಮೆಂಟ್ ಹಾಗೂ 3 ಕಮರ್ಷಿಯಲ್ ಕೊಠಡಿಗಳಿದ್ದು ಹಿಂದಿನ ಪ್ರದೇಶ ಪ್ರಪಾತದಂತಿದೆ. ಮೊದಲ ಮಳೆಗೆ ಸಮುಚ್ಚಯದ ಹಿಂಭಾಗದ ಪಾರ್ಕಿಂಗ್ ಸ್ಥಳ ಬಿರುಕುಬಿಟ್ಟಿದ್ದು, ಮತ್ತಷ್ಟೂ ಜರಿಯುವ ಹಂತದಲ್ಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.