ಕಟ್ಟಡ ವಿಸ್ತೀರ್ಣ ದರದಲ್ಲಿ ಅವ್ಯವಹಾರ: ನಷ್ಟ
Team Udayavani, Jun 13, 2020, 5:47 AM IST
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕಟ್ಟಡಗಳ ವಿಸ್ತೀರ್ಣ ಪತ್ತೆಗೆ ನಡೆಸಲಾದ ಟೋಟಲ್ ಸ್ಟೇಷನ್ ಸರ್ವೇಯಲ್ಲಿ ಬೆಳಕಿಗೆ ಬಂದ “ವ್ಯತ್ಯಾಸ’ಕ್ಕೆ ದರ ನಿಗದಿ ಮಾಡುವಲ್ಲಿ ನಡೆದ ಅವ್ಯವಹಾರದ ಪ್ರಾಥಮಿಕ ಹಂತದ ಶ್ವೇತಪತ್ರವನ್ನು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಅವರು ಶುಕ್ರವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಮಂಡನೆ ಮಾಡಿದರು. ಈ ಅವ್ಯಹಾರದಿಂದ ಪಾಲಿಕೆಗೆ ಒಟ್ಟು 41.47 ಕೋಟಿ ರೂ. ನಷ್ಟವುಂಟಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ನಗರದಲ್ಲಿ ಆಸ್ತಿ ತೆರಿಗೆ ಮಾಲೀಕರು ಸ್ವಯಂ ಘೋಷಿತ ಆಸ್ತಿ ತೆರಿಗೆ ವ್ಯವಸ್ಥೆಯಡಿ (ಎಸ್‌ಎಎಸ್) ತಪ್ಪು ಮಾಹಿತಿ ನೀಡಿರುವುದನ್ನು ಪತ್ತೆ ಹಚ್ಚುವ ಉದ್ದೇಶದಿಂದ ಬಿಬಿಎಂಪಿ ಟೋಟಲ್ ಸ್ಟೇಷನ್ ಸರ್ವೇ (ಟಿಎಸ್‌ಎಸ್) ಯೋಜನೆಯನ್ನು ಪರಿಚಯಿಸಿತ್ತು. ಆದರೆ, ಇದರಲ್ಲಿಯೂ ಅವ್ಯವಹಾರ ನಡೆದಿದ್ದು, ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವುದ ರಿಂದ ಪಾಲಿಕೆಗೆ ಕೋಟ್ಯಾಂತರ ರೂ. ನಷ್ಟವುಂಟಾಗಿದೆ ಎಂದು ವಿರೋಧ ಪಕ್ಷದ ಮಾಜಿ ನಾಯಕ ಪದ್ಮನಾಭರೆಡ್ಡಿ ಅವರು ಆರೋಪಿಸಿದ್ದರು.
ಈ ಸಂಬಂಧ ಬಿಬಿಎಂಪಿ ಆಯುಕ್ತರು ಪ್ರತ್ಯೇಕ ಉಪ ಸಮಿತಿ ರಚನೆ ಮಾಡಿದ್ದರು. ವರದಿಯನ್ನು ಶುಕ್ರವಾರ ನಡೆದ ಪಾಲಿಕೆ ಸಭೆಯಲ್ಲಿ ಮಂಡನೆ ಮಾಡಲಾಯಿತು. ಆದರೆ, ಇದು ಅಪೂರ್ಣ ವರದಿ ಇದಕ್ಕಿಂತ ಹೆಚ್ಚು ಮೊತ್ತದ ನಷ್ಟವುಂಟಾಗಿದೆ. ಮಹದೇವಪುರ ಸೇರಿದಂತೆ ಕೆಲವು ವಲಯಗಳ ಕಟ್ಟಡಗಳಿಗೆ ಸಂಬಂಧಿಸಿದಂತೆ ಪಾರದರ್ಶಕತೆ ಕಾಯ್ದುಕೊಂಡಿಲ್ಲ ಎಂದು ದೂರಿದರು. ಒಟ್ಟಾರೆಯಾಗಿ 321 ಕೋಟಿಗೂ ಹೆಚ್ಚು ನಷ್ಟವುಂಟಾಗಿದೆ. ಸಮಗ್ರ ವರದಿ ನೀಡಬೇಕು ಎಂದು ಪದ್ಮನಾಭರೆಡ್ಡಿ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಇನ್ನು 15 ದಿನಗಳ ಒಳಗಾಗಿ ಸಂಪೂರ್ಣ ವರದಿಯನ್ನು ಕೌನ್ಸಿನ್ ಸಭೆಗೆ ಮಂಡಿಸುವುದಾಗಿ ಹೇಳಿದರು.
ನಗರದಲ್ಲಿನ ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೇ ನಡೆದ ನಂತರದ ಎಸ್ ಎಎಸ್ ಹಾಗೂ ಟಿಎಸ್‌ಎಸ್‌ನಲ್ಲಿನ ವ್ಯತ್ಯಾಸದ ಆಧಾರದ ಮೇಲೆ ಆಸ್ತಿ ತೆರಿಗೆ ಪರಿಷ್ಕರಿಸಿ ಪರಿಷ್ಕೃತ ವಿಶೇಷ ಸೂಚನಾ ಪತ್ರ ನೀಡಲಾಗುತ್ತಿದೆ. ಆದರೆ, ಈ ರೀತಿ ಮರು ಪರಿಶೀಲನೆ ಮಾಡುವ ಹಂತದಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದು 2019ರ ಅಕ್ಟೋಬರ್‌ನಲ್ಲಿ ಬೆಳಕಿಗೆ ಬಂದಿತ್ತು. ಹೀಗಾಗಿ, ಈ ಸಂಬಂಧ ಆಂತರಿಕ ತನಿಖೆ ನಡೆದಿದ್ದು, ಅವ್ಯವಹಾರದ ಬಗ್ಗೆ ಆಯುಕ್ತರು ಶ್ವೇತಪತ್ರಹೊರಡಿಸಿದ್ದಾರೆ.
ಶ್ವೇತ ಪತ್ರದಲ್ಲಿ ಏನಿದೆ ?: ಟೋಟಲ್ ಸ್ಟೇಷನ್ ಸರ್ವೇ ನಂತರದ ವ್ಯತ್ಯಾಸ ಮೊತ್ತ ನಿಗದಿ ಮಾಡುವುದರಲ್ಲಿ ಅವ್ಯವಹಾರ ನಡೆದಿದ್ದು, ಪಾಲಿಕೆಗೆ ಒಟ್ಟು 41.41ಕೋಟಿ ರೂ. ನಷ್ಟವುಂಟಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಕಟ್ಟಡಗಳಿಂದ ದುಪ್ಪಟ್ಟು ದಂಡ ಹಾಗೂ ಶೇ.2 ರಷ್ಟು ಬಡ್ಡಿ ಸಂಗ್ರಹಿಸಲು ನಿರ್ಧರಿಸಲಾಗಿದೆ. ಪೂರ್ವ ವಲಯದಲ್ಲಿ ಒಟ್ಟು 9 ಕಟ್ಟಡಗಳಿಗೆ ಸಂಬಂಧಿಸಿದಂತೆ ಸರ್ವೇ ವ್ಯತ್ಯಾಸ ಕಂಡುಬಂದಿದ್ದು, ಆಸ್ತಿ ತೆರಿಗೆ ಪುನರ್ ವಿಂಗಡಿಸಲಾಗಿದೆ.
ಇದರಿಂದ ಒಟ್ಟು 35.14 ಕೋಟಿ ರೂ. ಆದಾಯ ವ್ಯತ್ಯಾಸ ಕಂಡುಬಂದಿದೆ ಎಂದು ಉಪ ಸಮಿತಿ ವರದಿ ನೀಡಿದೆ. ಈ ಪ್ರಕರಣಗಳಲ್ಲಿ ಮಾಲೀಕರು ಪಾವತಿಸಿರುವ ಆಸ್ತಿ ತೆರಿಗೆ ಮೊತ್ತವನ್ನು ಕಳೆದು ವ್ಯತ್ಯಾಸದ ಮೊತ್ತದ ಜತೆಗೆ ದುಪ್ಪಟ್ಟು ದಂಡ ಹಾಗೂ ಶೇ.2 ರಷ್ಟು ಬಡ್ಡಿ ಮೊತ್ತವನ್ನು ಪಾವತಿಸುವಂತೆ ಸೂಚನೆ ನೀಡಲಾಗಿದೆ. ಇದೇ ರೀತಿ ಎಲ್ಲ ಪ್ರಕರಣಗಳಲ್ಲಿಯೂ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಬೊಮ್ಮನಹಳ್ಳಿಯಲ್ಲಿ ಎರಡು ಕಟ್ಟಡಗಳಿಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಇದರಿಂದ 3.98 ಕೋಟಿ ರೂ. ವ್ಯತ್ಯಾಸ ಕಂಡುಬಂದಿದೆ.
ಯಲಹಂಕದಲ್ಲಿ 12 ಕಟ್ಟಡಗಳ ಪ್ರಕರಣಕ್ಕೆ ಸಂಬಂಧಿಸಿದಂತೆ 6.35 ಲಕ್ಷ ರೂ. ವ್ಯತ್ಯಾಸ ಕಂಡುಬಂದಿದೆ. ಇನ್ನು ದಕ್ಷಿಣ ವಲಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ 1.17 ಲಕ್ಷ ರೂ. ನಷ್ಟವುಂಟಾಗಿರುತ್ತದೆ. ಅಲ್ಲದೆ, ವ್ಯತ್ಯಾಸ ಮೊತ್ತದಲ್ಲಿ ಶೇ.5 ಪ್ರಮಾಣಕ್ಕಿಂತ ಕಡಿಮೆ ವ್ಯತ್ಯಾಸ ಕಂಡುಬಂದಿದೆ. ಉಳಿದಂತೆ ಮಹದೇವಪುರದಲ್ಲಿ ಯಾವುದೇ ವಿಶೇಷ ಪತ್ರ ನೀಡಿಲ್ಲ. ಕಡತದಲ್ಲೇ ಇದ್ದು,ಅಪೀಲು ನಿರ್ಧಾರಗಳನ್ನು ಜಾರಿ ಮಾಡಿಲ್ಲ. ಹೀಗಾಗಿ, ಮಹದೇವಪುರ ವ್ಯಾಪ್ತಿಯಲ್ಲಿನ ಕಟ್ಟಡಗಳಿಂದ ಯಾವುದೇ ನಷ್ಟವುಂಟಾಗಿಲ್ಲ ಎಂದು ವರದಿ ನೀಡಲಾಗಿದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.