ಸಮಸ್ಯೆ – ಸವಾಲುಗಳನ್ನು ಮೆಟ್ಟಿ ನಿಲ್ಲುವ ವಿಶ್ವ ನಾಯಕ ಮೋದಿ
ಮೋದಿ 2.0: ವರುಷದ ಹಾದಿಯ ಹಿನ್ನೋಟ ; ಭರವಸೆಯ ಮುನ್ನೋಟ ; 'ಉದಯವಾಣಿ' ಸಂದರ್ಶನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು
Team Udayavani, Jun 14, 2020, 1:45 AM IST
ಕೇಂದ್ರ – ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರವಿರಬೇಕಾದರೆ ಮುಂದಿನ 4 ವರ್ಷಗಳಲ್ಲಿ ಕ್ಷೇತ್ರದ ಜನತೆ ಯಾವ ಮಾದರಿ ಅಭಿವೃದ್ಧಿ ನಿರೀಕ್ಷಿಸಬಹುದು?
ಕೇಂದ್ರದಿಂದ ಹಿಡಿದು ಮಹಾನಗರ ಪಾಲಿಕೆ ವರೆಗೆ ಜಿಲ್ಲೆಯಲ್ಲಿ ನಮ್ಮ ಪಕ್ಷದ ಸರಕಾರವಿದೆ. ಹೀಗಿ ರುವಾಗ, ನಮ್ಮಲ್ಲಿರುವ ಬಂದರು, ಹೆದ್ದಾರಿ, ವಿಮಾನ ನಿಲ್ದಾಣ ಹಾಗೂ ರೈಲ್ವೆ ಸೇವೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕೆಂಬ ಯೋಚನೆಯಿದೆ. ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯಕ್ಕೆ ಆದ್ಯತೆ ನೀಡುವ ಚಿಂತನೆಯಿದೆ. ಜಿಲ್ಲೆಯಲ್ಲಿ ಉದ್ಯಮಶೀಲತೆ ಹೆಚ್ಚಿಸಲು ಪ್ಲಾಸ್ಟಿಕ್ ಪಾರ್ಕ್, ಔಷಧ ಪಾರ್ಕ್ ಸ್ಥಾಪನೆಯಂಥ ಯೋಜನೆಗಳನ್ನು ಆದಷ್ಟು ಬೇಗ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ನಮ್ಮದೇ ಜಿಲ್ಲೆಯ ಡಿ.ವಿ. ಸದಾನಂದ ಗೌಡ ಅವರು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿದ್ದಾರೆ.ಆ ಮೂಲಕ, ಜಿಲ್ಲೆಯ ಸಾಮಾನ್ಯ ಜನರಿಗೂ ಉದ್ಯೋಗಾವಕಾಶ ಪಡೆಯುವಂತೆ ಪ್ರಯತ್ನಿಸಲಾಗುವುದು.
ಕೇಂದ್ರದಲ್ಲಿ 2ನೇ ಅವಧಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಒಂದು ವರ್ಷ ಪೂರ್ಣಗೊಳಿಸಿರುವ ಬಗ್ಗೆ ಏನು ಹೇಳಬಯಸುವಿರಿ?
ದೇಶದಲ್ಲಿ 2ನೇ ಅವಧಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಒಂದು ವರ್ಷ ಪೂರ್ಣಗೊಳಿಸಿರುವುದು ಬಹಳ ಖುಷಿ ವಿಚಾರ. ಸಮಸ್ಯೆ ಮತ್ತು ಸವಾಲನ್ನು ಮೆಟ್ಟಿಲಾಗಿಸಿಕೊಂಡು ಅದರ ಮೇಲೆ ನಿಂತು ಸಾಧನೆ ಮಾಡುವ ಸಾಮರ್ಥ್ಯ ನರೇಂದ್ರ ಮೋದಿ ಅವರಿಗಿದೆ. ಹೀಗಿರುವಾಗ, ದೇಶದ ಹತ್ತಾರು ಗಂಭೀರ ಸಮಸ್ಯೆಗಳ ನಡುವೆಯೂ ಇಡೀ ಜಗತ್ತು ಗುರುತಿಸುವ ರೀತಿ ಭಾರತ ಎದ್ದು ನಿಂತಿರುವುದಕ್ಕೆ ಮೋದಿ ಅವರ ನಾಯಕತ್ವವೂ ಒಂದು ಕಾರಣ. ಹಲವು ದಶಕದಿಂದ ಗಂಭೀರ ಸಮಸ್ಯೆಯಾಗಿ ಕಾಡುತ್ತಿದ್ದ ಕಾಶ್ಮೀರ ಕುರಿತ ಸಂವಿಧಾನದ 370ನೇ ವಿಧಿ ರದ್ದು, ತ್ರಿವಳಿ ತಲಾಕ್ ನಿಷೇಧ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಸಿಎಎ ಕಾಯ್ದೆ ಹೀಗೆ ಹಲವು ಐತಿಹಾಸಿಕ ತೀರ್ಮಾನಗಳು ಮೋದಿ ಅವರ ಒಂದು ವರ್ಷದ ಸರಕಾರದ ಪ್ರಮುಖ ಸಾಧನೆಗಳು.
ಕೋವಿಡ್ ಸಂಕಷ್ಟವನ್ನು ಭಾರತ ಎದುರಿಸಿದ ರೀತಿಗೆ ವಿಶ್ವ ನಾಯಕರೇ ಪ್ರಶಂಸೆ ವ್ಯಕ್ತಪಡಿಸಿರುವುದು ಹೆಮ್ಮೆಯ ವಿಚಾರವಲ್ಲವೇ?
ದೇಶದಲ್ಲಿ ಪ್ರಾಕೃತಿಕ ವಿಕೋಪ ನೆರೆ ಬಂದಿದ್ದು, ಆ ನಂತರದಲ್ಲಿ ಬಂದ ಆರ್ಥಿಕ ಸಂಕಷ್ಟದ ನಡುವೆಯೇ ಇದೀಗ ಕೋವಿಡ್-19 ಮಹಾಮಾರಿ ಹಿಂದೆಂದೂ ಕಂಡರಿಯದ ಸವಾಲು-ಸಮಸ್ಯೆಗಳನ್ನು ಸೃಷ್ಟಿಸಿವೆ. ಆದರೆ, ಕೋವಿಡ್ ನಿಯಂತ್ರಣದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಪ್ರಧಾನಿ ಮೋದಿಯ ಕಾರ್ಯವೈಖರಿ ಕೊಂಡಾಡಿದ್ದಾರೆ. ವೈದ್ಯಕೀಯವಾಗಿ ಮುಂದುವರಿದಿರುವ ಇಟಲಿ, ಅಮೆರಿಕದಂಥ ದೇಶಗಳೇ ಕೋವಿಡ್ ನಿಯಂತ್ರಣಕ್ಕೆ ಹರಸಾಹಸಪಡುತ್ತಿರಬೇಕಾದರೆ ಭಾರತ ಲಾಕ್‌ಡೌನ್‌ನಡಿ ತೆಗೆದುಕೊಂಡಿರುವ ದಿಟ್ಟ ಕ್ರಮಗಳಿಗೆ ಜಾಗತಿಕವಾಗಿ ಪ್ರಶಂಸೆ ವ್ಯಕ್ತವಾಗುತ್ತಿವೆ. ಈ ಪರಿಸ್ಥಿತಿಯಲ್ಲಿಯೂ ಚೀನಾವು ಗಡಿಯಲ್ಲಿ ಭಯದ ವಾತಾವರಣ ಸೃಷ್ಟಿಸಲು ಹೊರಟಾಗ, ಮೋದಿ ಅವರು ಒಂದೇ ದಿನದಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ಚೀನಾ ಕೂಡ ಇದೀಗ ಅಲ್ಲಿಂದ ಹಿಂದೆ ಸರಿದಿದೆ. ಈ ರೀತಿ ಜಗತ್ತಿನಲ್ಲಿ ಭಾರತವು ನಿರ್ಣಾಯಿಕ ಸ್ಥಾನಕ್ಕೇರುವ ಮೂಲಕ ವಿಶ್ವವೇ ಭಾರತದ ಮಾರ್ಗದರ್ಶನ ಬಯಸುತ್ತಿದ್ದು, ಅದಕ್ಕೆ ನರೇಂದ್ರ ಮೋದಿ ನಾಯಕತ್ವ ಮತ್ತು ಆಡಳಿತ ಕಾರಣ.
ಬಹಳ ಹತ್ತಿರದಿಂದ ನೋಡಿರುವಂತೆ ಮೋದಿ ಅವರ ಆಡಳಿತ ವೈಖರಿಯನ್ನು ಹೇಗೆ ವಿಶ್ಲೇಷಿಸುವಿರಿ?
ಮೋದಿ ವಿಶ್ವ ನಾಯಕನೂ ಹೌದು; ಮಾನವತಾವಾದಿಯೂ ಹೌದು. ರಾಜಕೀಯದಲ್ಲಿ ಬೆಳೆಯುವವರಿಗೆ ಅವರೊಬ್ಬ ಆದರ್ಶ ಗುರು. ರಾಜಕೀಯ ಚಿಂತನೆಯುಳ್ಳವರಿಗೆ ತಂದೆ ಸಮಾನವೂ ಹೌದು. ಲೋಕಸಭಾ ಸದಸ್ಯರನ್ನು ಮಾತನಾಡಿಸುವಾಗ ನಮ್ಮೆಲ್ಲರ ಮಾತು ಆಲಿಸುವ ವ್ಯವಧಾನ ಗುಣ ಅವರಲ್ಲಿದೆ. ಪ್ರತಿ ಬಾರಿಯೂ ರಾಷ್ಟ್ರ ಮತ್ತು ಕ್ಷೇತ್ರದ ಚಿಂತನೆಗಳ ಬಗ್ಗೆಯೇ ಮಾತನಾಡಿಸುತ್ತಾರೆ. ಮೋದಿಯ ಜೀವನ-ನಡೆಯೇ ನಮಗೆಲ್ಲರಿಗೆ ಒಂದು ಮಾದರಿ. ಅಷ್ಟೇಅಲ್ಲ, ಬಹಳ ನೆನಪು ಶಕ್ತಿ, ದಿಟ್ಟ ಹೆಜ್ಜೆಯಿಡುವ ಹಾಗೂ ಕಠಿಣ ತೀರ್ಮಾನ ತೆಗೆದುಕೊಳ್ಳುವ ಧೈರ್ಯವಂಥ ನಾಯಕರೂ ಹೌದು ಮೋದಿ.
ದಕ್ಷಿಣ ಕನ್ನಡಕ್ಕೆ ಹಲವು ಬಾರಿ ಬಂದಿರುವ ಮೋದಿಗೆ ಈ ಜಿಲ್ಲೆಯ ಬಗ್ಗೆಯೂ ಅಪಾರ ಪ್ರೀತಿಯಿದೆ? ಇದಕ್ಕೆ ವಿಶೇಷ ಕಾರಣವೇನು?
ತಾವು ಸಂಘಟನಾ ಕಾರ್ಯದರ್ಶಿಯಾಗಿದ್ದ ಕಾಲದಲ್ಲೇ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಹೋಗಿದ್ದ ದಿನ ಗಳನ್ನು ಈಗಲೂ ಮೆಲುಕು ಹಾಕುತ್ತಾರೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ನಾಲ್ಕೈದು ಬಾರಿ ಮಂಗಳೂರಿಗೆ ಬಂದಿದ್ದರು. ಇನ್ನು, ಅಡಿಕೆ ವ್ಯಾಪಾರ ವಿಚಾರವಾಗಿಯೂ ದ.ಕ. ಮತ್ತು ಗುಜರಾತ್ ನಡುವೆ ಹತ್ತಿರದ ಸಂಬಂಧವಿದ್ದು, ನಮ್ಮ ಜಿಲ್ಲೆ ಕೆಲವು ನಾಯಕರೊಂದಿಗೆ ಅಲ್ಲಿಗೆ ಹೋಗಿ ಅವರನ್ನು ಭೇಟಿ ಮಾಡುತ್ತಿದ್ದೆವು. ಆಗಲೂ ಮೋದಿ ಕರಾವಳಿಯ ಅಡಿಕೆ, ಮೀನುಗಾರಿಕೆ ಬಗ್ಗೆ ಉಲ್ಲೇಖೀಸುತ್ತಿದ್ದರು. ನಮ್ಮ ಜಿಲ್ಲೆಯಲ್ಲಿ ಅಪಾರ ರಾಷ್ಟ್ರ ಭಕ್ತಿ ಚಿಂತನೆಯ ಜನರಿರುವುದನ್ನು ಅವರು ಗುರುತಿಸಿದ್ದಾರೆ. ಗುಜರಾತ್‌ನಲ್ಲಿರುವ ನಮ್ಮ ಜಿಲ್ಲೆ ಜನರ ಬಗ್ಗೆಯೂ ಮೋದಿಗೆ ಚೆನ್ನಾಗಿ ಗೊತ್ತಿದೆ. ಈ ಎಲ್ಲ ಕಾರಣಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯವರು ಅಂದಾಗ ಮೋದಿಗೆ ಒಂದು ರೀತಿಯಲ್ಲಿ ವಿಶೇಷ ಪ್ರೀತಿ-ಅಭಿಮಾನವಿದೆ.
ಕೇಂದ್ರದಿಂದ ಕಳೆದ ಒಂದು ವರ್ಷದಲ್ಲಿ ದ.ಕ. ಕ್ಷೇತ್ರಕ್ಕೆ ಬಂದ ಪ್ರಮುಖ ಯೋಜನೆಗಳು ಯಾವುದು?
ಸಾಮಾನ್ಯವಾಗಿ ಆರಂಭದ ಒಂದು ವರ್ಷದಲ್ಲಿ ಕ್ಷೇತ್ರದ ಬದಲು ರಾಜ್ಯವನ್ನು ಕೇಂದ್ರೀಕರಿಸಿ ಕೇಂದ್ರ ಸರಕಾರವು ಹೊಸ ಯೋಜನೆಗಳನ್ನು ಮಂಜೂರು ಮಾಡುತ್ತದೆ. ಆದರೆ, ಮುಂದಿನ ನಾಲ್ಕು ವರ್ಷಗಳಲ್ಲಿ ಹಲವು ಯೋಜನೆಗಳ ಜತೆಗೆ ಹಾಲಿ ಯೋಜನೆಗಳಿಗೆ ಹೆಚ್ಚಿನ ಆರ್ಥಿಕ ಉತ್ತೇಜನ ದೊರೆಯುವ ವಿಶ್ವಾಸವಿದೆ. ಇನ್ನು, ಹಿಂದಿನ ಐದು ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಕೇಂದ್ರ ಸರಕಾರದಿಂದ ಮಂಗಳೂರು ಏರ್‌ಪೋರ್ಟ್ ಮೇಲ್ದರ್ಜೆಗೇರಿಸುವುದು, ಎರಡು ಚತುಷ್ಪಥ ರಸ್ತೆಗಳು, ಕುಳಾಯಿ ಜಟ್ಟಿ ನಿರ್ಮಾಣ, ಬಂದರು ಅಭಿವೃದ್ಧಿ, ಪ್ಲಾಸ್ಟಿಕ್ ಪಾರ್ಕ್ ಅನುಷ್ಠಾನ, ಕೋಸ್ಟ್‌ಗಾರ್ಡ್ ಯೋಜನೆ ಈಗಾಗಲೇ ಅನುಷ್ಟಾನಗೊಂಡಿದೆ.ಕುಲಶೇಖರ – ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ 39.42 ಕೋ.ರೂ. ವೆಚ್ಚದಲ್ಲಿ ಈಗಾಗಲೇ ನೂತನ ಸೇತುವೆ ನಿರ್ಮಾಣಗೊಂಡಿದೆ. ಮಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ ಮಂಜೂರುಗೊಂಡು ಅಭಿವೃದ್ದಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಹೀಗೆ ಹಲವು ಪ್ರಮುಖ ಯೋಜನೆಗಳಿಗೆ ಉತ್ತೇಜನ ದೊರೆತಿವೆ. ಮುದ್ರಾ ಯೋಜನೆಯಲ್ಲಿ ಇಡೀ ದೇಶಕ್ಕೆ ನಮ್ಮ ಜಿಲ್ಲೆ ಮಾದರಿಯಾಗಿದೆ. ಅನುದಾನ ಸದ್ಬಳಕೆ ಹಾಗೂ ಕೇಂದ್ರದ ಹೊಸ ಯೋಜನೆಗಳು ಭ್ರಷ್ಟಾಚಾರಗಳಿಲ್ಲದೆ ಅನುಷ್ಠಾನಗೊಳ್ಳುವಲ್ಲಿಯೂ ನಮ್ಮ ಜಿಲ್ಲೆ ಮುಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಿಮ್ಮ ಅಧಿಕಾರಾವಧಿಯೂ ವರ್ಷ ಸಮೀಪಿಸುತ್ತಿದ್ದು, ಇಷ್ಟು ದಿನಗಳ ಆ ಅನುಭವ ಹೇಗಿದೆ?
ದೇಶದಲ್ಲಿ ಈಗ ಸಾಧನೆಗಳ ಹಾದಿಯಲ್ಲಿ ಸಾಗುವ ಒಂದು ಸುಭದ್ರ ಸರಕಾರವಿದೆ. ರಾಜ್ಯದಲ್ಲಿಯೂ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಸರಕಾರವಿದೆ. ಯಡಿಯೂರಪ್ಪ ಹತ್ತಾರು ಹೋರಾಟ-ರೈತಪರ ಚಿಂತನೆ ಹೊಂದಿರುವ ಮುಖ್ಯಮಂತ್ರಿ. ಬಹಳ ಅನುಭವಿ ನಾಯಕರಾಗಿರುವ ಯಡಿಯೂರಪ್ಪನವರು ಮಾಸ್ ಲೀಡರ್. ಈ ರೀತಿ ಮೋದಿ ಮತ್ತು ಯಡಿಯೂರಪ್ಪನವರ ಆಡಳಿತ ಕಾರ್ಯವೈಖರಿಂದಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷದ ಮೇಲಿನ ಗೌರವ ಹೆಚ್ಚಾಗುತ್ತಿದೆ. ಇಂಥಹ ಸಂದರ್ಭದಲ್ಲಿ ನಾನು ರಾಜ್ಯಾಧ್ಯಕ್ಷನಾರುವುದಕ್ಕೆ ಬಹಳ ಹೆಮ್ಮೆಯಿದೆ. ಅಧ್ಯಕ್ಷನಾದ ಮೇಲೆ ರಾಜ್ಯದಲ್ಲಿ ಮೂರು ಬಾರಿ ಪ್ರವಾಸ ಮಾಡಿದಾಗ, ಜನರು ಬಿಜೆಪಿ ಪಕ್ಷಕ್ಕೆ ಬೆಂಗಾವಲಾಗಿ ನಿಂತಿರುವುದನ್ನು ಗಮನಿಸಿದ್ದೇನೆ. ಈ ಎಲ್ಲ ಕಾರಣಕ್ಕೆ ರಾಜ್ಯಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುವುದು ನನಗೆ ಸುಲಭವೆನಿಸಿದೆ. ರಾಷ್ಟ್ರ ಮಟ್ಟದಲ್ಲಿ ಅಧ್ಯಕ್ಷರಾಗಿ ಈ ಹಿಂದೆ ಅಮಿತ್ ಶಾ ಈಗ ಜೆ.ಪಿ. ನಡ್ಡಾ , ಸಂತೋಷ್ ಜಿ. ಅವರಂಥಹ ಹಿರಿಯ ನಾಯಕರ ಮಾರ್ಗದರ್ಶನವಿದೆ. ಇಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರೂ ಪಕ್ಷ ಹೇಗೆ ಸಾಗಬೇಕು; ಕಾರ್ಯಕರ್ತ ಹೇಗಿರಬೇಕು ಎಂಬಿತ್ಯಾದಿ ವಿಚಾರದ ಬಗ್ಗೆ ನನಗೆ ಅವರಿಂದ ನಿರಂತರ ಮಾರ್ಗದರ್ಶನ ದೊರೆಯುತ್ತಿದೆ. ಹೀಗಾಗಿ, ಇಂಥಹ ಹಿರಿಯರ ಮಾರ್ಗದರ್ಶನದಡಿ ರಾಜ್ಯದಲ್ಲಿ ಪಕ್ಷ ಸಂಘಟನೆ ಬಲಪಡಿಸುವ ಕಾರ್ಯ ಮಾಡುತ್ತಿದ್ದೇನೆ.
ಉಪ ಚುನಾವಣೆಯಿಂದ ಹಿಡಿದು ಹಲವು ಸಂದರ್ಭಗಳ ಸವಾಲು ನಿಮ್ಮ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸಿದೆಯೇ?
ಖಂಡಿತವಾಗಿಯೂ ; ಆದರೆ, ನಮ್ಮ ಪಕ್ಷ ವ್ಯಕ್ತಿ ಆಧಾರಿತವಲ್ಲ; ಬಿಜೆಪಿ ವೈಚಾರಿಕ ತತ್ವ ಆಧಾರಿತ ಪಕ್ಷ. ಇಲ್ಲಿ ಜವಾಬ್ದಾರಿಗಳನ್ನು ಕೊಟ್ಟಾಗ ಅವರ ವಯಸ್ಸು, ಆರ್ಥಿಕ ಶಕ್ತಿ ಇದ್ಯಾವುದೂ ನೋಡುವುದಿಲ್ಲ. ಬದಲಿಗೆ, ಆ ಜವಾಬ್ದಾರಿಗೆ ನಮ್ಮೆಲ್ಲ ನಾಯಕರು-ಮುಖಂಡರು, ಕಾರ್ಯ ಕರ್ತರು ಗೌರವ ಕೊಟ್ಟು ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಾರೆ. ನಾನು ರಾಜ್ಯಾಧ್ಯಕ್ಷನೆಂಬ ಕಾರಣಕ್ಕೆ ಎಲ್ಲರೂ ಆ ಸ್ಥಾನಕ್ಕೆ ಗೌರವ ಕೊಡುತ್ತಾರೆ. ಅದು ಪಕ್ಷಕ್ಕೆ ನೀಡುವ ಗೌರವೇ ಹೊರತು ನಳಿನ್ ಕುಮಾರ್‌ಗೆ ಅಲ್ಲ. ಇದು ನಮ್ಮ ಪಕ್ಷದ ವಿಶೇಷ. ಬೇರೆ ಪಕ್ಷಗಳಲ್ಲಿ ವ್ಯಕ್ತಿಗೆ, ಆತನ ಆರ್ಥಿಕ, ಜಾತಿ ಬಲ, ವೈಯಕ್ತಿಕ ಸಾಮರ್ಥ್ಯ-ಶಕ್ತಿಗೆ ಗೌರವವೇ ಹೊರತು ಸ್ಥಾನಕ್ಕಲ್ಲ. ಆದರೆ, ನಮ್ಮಲ್ಲಿ ಬೂತ್ ಮಟ್ಟದಿಂದ ಪಕ್ಷ ಬೆಳೆದಿರುತ್ತದೆ. ನಾನು ಕೂಡ ಸಾಮಾನ್ಯ ಕಾರ್ಯಕರ್ತ ನಾಗಿ ಬೆಳೆದು ಬಂದಿರುವ ಕಾರಣ ಎಲ್ಲರೂ ಈಗ ಪ್ರೀತಿ- ವಿಶ್ವಾಸದಿಂದ ಸಹಕಾರ ಮಾರ್ಗದರ್ಶನ ನೀಡುತ್ತಿದ್ದಾರೆ.
ಬೂತ್ ಮಟ್ಟದ ಕಾರ್ಯಕರ್ತನೊಬ್ಬ ರಾಜ್ಯಾಧ್ಯಕ್ಷ ನವರೆಗೆ ಬೆಳೆದ ಹಾದಿಯನ್ನು ನೆನಪಿಸಿಕೊಂಡಾಗ?
ನಾನು ದ.ಕ.ದ ಒಂದು ಕುಗ್ರಾಮದಿಂದ ಬಂದವನು. ಅದರಲ್ಲಿಯೂ ಒಂದು ದ್ವೀಪದಂತೆ ಇದ್ದ ಹಳ್ಳಿಗಾಡು ಪ್ರದೇಶ ನಮ್ಮದು. ಸಂಘದ ಸ್ವಯಂ ಸೇವಕನಾಗಿ ಬಂದವನು ನಾನು. ಅಲ್ಲಿ ನನಗೆ ರಾಷ್ಟ್ರವನ್ನು ಪೂಜಿಸುವುದನ್ನು ಕಲಿಸಿಕೊಟ್ಟಿದ್ದರು. ಹೀಗಾಗಿ, ರಾಷ್ಟ್ರಕ್ಕೆ ಬದ್ಧವಾಗಿ ಕೆಲಸ ಮಾಡುವ ಪ್ರಯತ್ನಗಳನ್ನು ಮಾಡುತ್ತಾ ಬಂದೆ. ಆಗ, ಸಂಘಟನೆ ನನ್ನನ್ನು ಗುರುತಿಸಿ ಜವಾಬ್ದಾರಿಗಳನ್ನು ನೀಡುತ್ತಾ ಬಂತು. ಅನಿವಾರ್ಯವಾಗಿ ಒಂದು ಸಂದರ್ಭದಲ್ಲಿ ರಾಜಕೀಯಕ್ಕೆ ಬರುವಂತೆ ಸೂಚಿಸಿತ್ತು. ಚುನಾವಣೆಗೆ ನಿಲ್ಲಲೇಬಾರದ್ದು ಅಂದುಕೊಂಡಿದ್ದೆ. ಆದರೆ, ಹಿರಿಯರ ಅಪೇಕ್ಷೆಯಂತೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಸಂಸದನಾದೆ. ಯಾವುದೊ ಒಂದು ನಂಬಿಕೆ ಮೇಲೆ ಪಕ್ಷವು ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿತ್ತು. ಆದರೆ, ಆ ಹುದ್ದೆ ಸಮರ್ಥವಾಗಿ ನಿಭಾಯಿಸಲು ಸಾಧ್ಯವೇ? ಎನ್ನುವ ಭಯವಿತ್ತು. ಆದರೆ, ಮಾರ್ಗದರ್ಶನ ಮಾಡುವ ಕೇಂದ್ರದ ಹಾಗೂ ರಾಜ್ಯದ ಪ್ರಮುಖ ನಾಯಕರ ತಂಡ ಮತ್ತು ಪಕ್ಷಕ್ಕಾಗಿ ಹಗಲಿರುಳು ದುಡಿಯುವ ಕಾರ್ಯಕರ್ತರಿರುವಾಗ, ಆ ಜವಾಬ್ದಾರಿ ನಿರ್ವಹಿಸುವುದು ಕಷ್ಟವಾಗುವುದಿಲ್ಲ ಎಂಬ ನಂಬಿಕೆಯೂ ಇನ್ನೊಂದೆಡೆಗಿತ್ತು. ಆ ಕಾರಣಕ್ಕೆ ಈ ಹಂತಕ್ಕೆ ತಲುಪಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಮನೆ-ಮನಗಳಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಭದ್ರ ಮಾಡುತ್ತದೆ ಎನ್ನುವ ವಿಶ್ವಾಸವಿದೆ.
ನಿಮ್ಮ ಪ್ರಕಾರ, ಕೋವಿಡ್ ಸೋಂಕು ತಂದೊಡ್ಡಿರುವ ಸವಾಲುಗಳನ್ನು ಹೇಗೆ ಎದುರಿಸಬೇಕು?
ದೇಶದಲ್ಲಿ ಕೋವಿಡ್ ಸವಾಲುಗಳನ್ನು ಮೆಟ್ಟಿ ನಿಂತು ಸಾಧಕನಾಗುವ ಶಕ್ತಿ ಮೋದಿಗೂ ಇದೆ; ರಾಜ್ಯದಲ್ಲಿ ಯಡಿಯೂರಪ್ಪನವರಿಗೂ ಇದೆ. ಈ ಕೋವಿಡ್ ಸಂಕಷ್ಟಕ್ಕೆ ಮೋದಿ ಸರಕಾರ ಇಡೀ ದೇಶಕ್ಕೆ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಕೊಟ್ಟಿದೆ. ಈಗಿನ ಕೋವಿಡ್ ನಡುವಿನ ಸವಾಲುಗಳನ್ನು ಯಶಸ್ಸನ್ನಾಗಿ ಮಾಡುವ ಪ್ರಯತ್ನದಲ್ಲಿ ಪ್ರಧಾನಿ ಮೋದಿ ಇದ್ದಾರೆ. ಹೀಗಾಗಿ, ಯಾರಿಗೂ ಭವಿಷ್ಯದ ಬಗ್ಗೆ ಭಯಬೇಡ. ಒಂದಷ್ಟು ಕಷ್ಟ-ನಷ್ಟಗಳು ಆಗಿರಬಹುದು. ಆದರೆ, ಕೋವಿಡ್ ಪ್ರತಿಯೊಬ್ಬರ ಜೀವನಕ್ಕೆ ಒಂದು ಪಾಠವನ್ನು ಕಲಿಸಿದ್ದು, ಅದಕ್ಕೆ ಅನುಗುಣವಾಗಿ ಬಹಳ ಎಚ್ಚರಿಕೆಯಿಂದ ನಾವು ಬದುಕನ್ನು ಮುನ್ನಡೆಸುವ ಅನಿವಾರ್ಯತೆಯಿದೆ.
ಮೋದಿ ರಾಷ್ಟ್ರ ದ್ರಷ್ಟಾರ
ದೃಷ್ಟಾರ ಮತ್ತು ಮುತ್ಸದಿಗೆ ವ್ಯತ್ಯಾಸವಿದೆ. ದೃಷ್ಟಾರ ಯಾವತ್ತೂ ರಾಷ್ಟ್ರವನ್ನು ಗುರುತಿಸುತ್ತ ರಾಷ್ಟ್ರದ ಚಿಂತನೆ ಮಾಡುತ್ತಾನೆ. ರಾಜಕಾರಣಿಯಾಗಿದ್ದರೆ ಕೇವಲ ಮತದ ಚಿಂತನೆಯನ್ನಷ್ಟೇ ಮಾಡುತ್ತಾನೆ. ಆದರೆ, ನರೇಂದ್ರ ಮೋದಿ ಒಬ್ಬ ರಾಷ್ಟ್ರ ದೃಷ್ಟಾರ. ರಾಷ್ಟ್ರದ ದೃಷ್ಟಿಕೋನ ಇಟ್ಟುಕೊಂಡಿರುವ ನಾಯಕ. ಒಂದುವೇಳೆ ಅವರು ಮತಾವಲಂಬಿಯಾಗಿರುತ್ತಿದ್ದರೆ ದೇಶದ ಪರ ತೀರ್ಮಾನ ತೆಗೆದುಕೊಳ್ಳುತ್ತಿರಲಿಲ್ಲ. ಹೀಗಾಗಿ, ರಾಷ್ಟ್ರದ ಹಿತದೃಷ್ಟಿಯಿಂದ ಭಾರತದ ಹತ್ತಾರು ವರ್ಷಗಳ ಪರಿಕಲ್ಪನೆಯಡಿ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಈ ದೇಶದ ಕೋಟ್ಯಂತರ ಜನರಿಗೆ ಮೋದಿ ಅಪಾರ ವಿಶ್ವಾಸವಿದೆ.
1 ವರ್ಷ ಅವಧಿಯಲ್ಲಿ ಕ್ಷೇತ್ರಕ್ಕೆ ನಳಿನ್ ಅನುದಾನದ ಕೊಡುಗೆ
– ಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ಮೀನುಗಾರರ ಸಮುದಾಯ ಆಧಾರಿತ ಜೀವನೋಪಾಯ ಸುಧಾರಣೆಗೆ ಕೈಗೊಳ್ಳುವ ಸಂಶೋಧನೆ ಹಾಗೂ ಮೀನುಗಾರಿಕಾ ಮೂಲಸೌಕರ್ಯ ತಂತ್ರಜ್ಞಾನ ಆಧುನೀಕರಣಕ್ಕೆ ಕೇಂದ್ರ ಸರಕಾರದ ಪರಿಸರ ಮತ್ತು ಪರಿಸರ ಸಚಿವಾಲಯದಿಂದ 36 ಕೋಟಿ
– ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಎನ್‌ಐಟಿಕೆಯಿಂದ ಬಿ.ಸಿ.ರೋಡು ರಸ್ತೆವರೆಗೆ ಚತುಷ್ಪಥ ಹೆದ್ದಾರಿಯ 25 ಕಿ.ಮಿ.ರಸ್ತೆ ಫೆವರ್ ಫಿನಿಷ್ ಡಾಂಬರೀಕರಣ 23 ಕೋಟಿ
– ಕೇಂದ್ರ ಸರಕಾರದಿಂದ ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಕುಲಶೇಖರದಿಂದ ಮೂಡುಬಿದಿರೆ ವರೆಗಿನ ರಸ್ತೆ ಡಾಮಾರೀಕರಣಕ್ಕೆ 6.91 ಕೋಟಿ
– ಮಂಗಳೂರು-ಮಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 234ರ ಕುವೆಟ್ಟು ಚಾರ್ಮಾಡಿಘಾಟ್‌ವರೆಗಿನ 25 ಕಿ.ಮಿ. ರಸ್ತೆ ಮರು ಡಾಮರೀಕರಣಕ್ಕೆ ಕೇಂದ್ರ ಸರಕಾರದಿಂದ ಅನುದಾನ 9.22 ಕೋಟಿ
– ಮಂಗಳೂರು -ಮಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 234ರಚಾರ್ಮಾಡಿ ಘಾಟ್‌ನ 27 ಕಿ.ಮೀ. ರಸ್ತೆ ಮರು ಡಾಮರೀಕರಣಕ್ಕೆ ಕೇಂದ್ರ ಸರಕಾರದ ಅನುದಾನ 9.22 ಕೋಟಿ
– ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅನುದಾನ 183.93 ಕೋಟಿ
– ಪ್ರಧಾನ ಮಂತ್ರಿ ಕಿಸಾನ್ ಯೋಜನೆ 101.54 ಕೋಟಿ
– ಜನಧನ್ ಯೋಜನೆ 28.64 ಕೋಟಿ
– ಮಳೆಹಾನಿ ಕಾಮಗಾರಿಗಳಿಗೆ ಅನುದಾನ 3 ಕೋಟಿ
ಸಂಸದರ ಪ್ರದೇಶಾಭಿವೃದ್ಧಿ ನಿಧಿ
– ವಿವಿಧ ಅಭಿವೃದ್ಧಿ ಕಾಮಗಾರಿಗಳು 2.49 ಕೋಟಿ
– ಕೋವಿಡ್ ತುರ್ತು ಕಾರ್ಯಗಳನ್ನು ಕೈಗೊಳ್ಳಲು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ 1 ಕೋಟಿ
– ಕೋವಿಡ್ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಪ್ರಧಾನಮಂತ್ರಿ ಪರಿಹಾರ ನಿಧಿಗೆ 1 ಕೋಟಿ
ಕೋವಿಡ್ ನಿಯಂತ್ರಣಕ್ಕೆ ಪೂರ್ತಿ ಸಮಯ ಮೀಸಲಿಟ್ಟ ನಳಿನ್ ಕುಮಾರ್ ಕಟೀಲು ; ಸಂಸದರ ವಾರ್‌ರೂಂನಿಂದ ಜನಮಾನಸಕ್ಕೆ ಸ್ಪಂದನೆ
ಕೋವಿಡ್-19 ಮುನ್ನೆಚ್ಚರಿಕೆ ಕ್ರಮವಾಗಿ ಕರಾವಳಿ ಕರ್ನಾಟಕದಲ್ಲಿ ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ದಕ್ಷಿಣ ಕನ್ನಡದ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ತಮ್ಮ ಕಚೇರಿಯಲ್ಲೇ ವಾರ್‌ರೂಂ ತೆರೆದು ಜನತೆಗೆ ಅಭೂತಪೂರ್ವ ಸೇವೆ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಕ್ಷಾಂತರ ದಿನಸಿ ಕಿಟ್
ಮಾ.24ರಂದು ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ಕಚೇರಿಯಲ್ಲಿ ಕಾರ್ಯಾರಂಭಿಸಿದ ವಾರ್ ರೂಂನಿಂದ 3.18 ಲಕ್ಷ ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸಲಾಗಿದೆ. ವಲಸೆ ಕಾರ್ಮಿಕರಿಗೆ ಹಾಗೂ ನಿರಾಶ್ರಿತರಿಗೆ 3.92 ಲಕ್ಷ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. 76 ಸಾವಿರಕ್ಕೂ ಅಧಿಕ ಮಂದಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಔಷಧ ಒದಗಿಸಲಾಗಿದೆ. ವಾರ್ ರೂಂನ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ತಿಳಿಸಿದ 25,900 ಮಂದಿಗೆ ಪರಿಹಾರ ನೀಡಲಾಗಿದೆ. 2.42 ಲಕ್ಷ ಮಂದಿ ಸಂಸದರ ಮೂಲಕ ಪಿ.ಎಂ.ಕೇರ್ ನಿಧಿಗೆ ಸಹಾಯ ನಿಧಿ ನೀಡಿದ್ದಾರೆ.
ಆ್ಯಂಬುಲೆನ್ಸ್ ಸೇವೆ
ಸಂಸದರ ವಾರ್ ರೂಂನಿಂದ ಉಚಿತ ಆ್ಯಂಬುಲೆನ್ಸ್ ಒದಗಿಸಲಾಗಿದ್ದು 53 ಗರ್ಭಿಣಿಯವರು ಹಾಗೂ 64 ಮಂದಿ ತುರ್ತು ವೈದ್ಯಕೀಯ ಸೇವೆ ಈ ಸೌಲಭ್ಯ ಬಳಸಿದ್ದಾರೆ. 8 ಮಂದಿ ಗರ್ಭಿಣಿಯರು ಬೇರೆ ಜಿಲ್ಲೆಗಳಿಗೆ ಈ ಆಂಬುಲೆನ್ಸ್ ಮೂಲಕ ಪಯಣಿಸಿದ್ದಾರೆ. ಪ್ರತೀ ದಿನ 10ಕ್ಕೂ ಅಧಿಕ ಮಂದಿ ಡಯಾಲಿಸಿಸ್‌ಗಾಗಿ ಆಸ್ಪತ್ರೆಗೆ ತೆರಳಲು ಸಂಸದರ ವಾರ್ ರೂಂನ ಆಂಬುಲೆನ್ಸ್ ಸೇವೆ ಬಳಸಿದ್ದರು. 317 ಮಂದಿಗೆ ತುರ್ತು ಔಷಧ ಸೇವೆ ಒದಗಿಸಲಾಗಿದೆ. ಸಂಸದ ನಳಿನ್‌ಕುಮಾರ್ ಅವರು ವೆನ್ಲಾಕ್ ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳಿಗೆ ಪ್ರತೀ ದಿನ ಊಟ ಮತ್ತು ಉಪಹಾರ ಒದಗಿಸುವ ಮೂಲಕ ವೈದ್ಯಕೀಯ ಸಿಬ್ಬಂದಿಗಳ ಮನ್ನಣೆಗೆ ಪಾತ್ರರಾಗಿದ್ದಾರೆ. ತಮ್ಮ ಸ್ವಂತ ವೆಚ್ಚದಿಂದ ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳಿಗೆ ತಲಾ 20 ಸಾವಿರ ದಿನಸಿ ಸಾಮಾಗ್ರಿಗಳ ಕಿಟ್ ರವಾನಿಸಿದ್ದಾರೆ. ಜಿಲ್ಲೆಯ ಬಿಜೆಪಿ ಶಾಸಕರು ಕೂಡಾ ತಮ್ಮ ಕ್ಷೇತ್ರದಲ್ಲಿ ವಾರ್‌ರೂಂ ತೆರೆದು ಜನತೆಯ ಸೇವೆಯಲ್ಲಿ ತೊಡಗಿದ್ದರು. ದ.ಕ.ಜಿಲ್ಲೆಯಲ್ಲಿ 30 ಸಾವಿರಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಸೇವಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮಧ್ಯೆ ಸಮನ್ವಯ ಕಾರರಾಗಿ ಜವಾಬ್ದಾರಿ ನಿರ್ವಹಿಸಿದ ನಳಿನ್‌ಕುಮಾರ್ ಅವರು ಕೋವಿಡ್ ನಿಯಂತ್ರಣಕ್ಕೆ ತಮ್ಮ ಪೂರ್ತಿ ಸಮಯವನ್ನು ಮುಡಿಪಾಗಿರಿಸಿದ್ದರು. ಕರಾವಳಿ ಭಾಗದಲ್ಲಿ ಕೋವಿಡ್-19 ವ್ಯಾಪಕವಾಗುವ ಸುಳಿವು ಲಭಿಸುತ್ತಿದ್ದಂತೆ ಸರ್ಕಾರದ ಗಮನ ಸೆಳೆದು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ಸುಸಜ್ಜಿತ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದಕ್ಷಿಣ ಕನ್ನಡಕ್ಕೆ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಕ್ಷಿಪ್ರವಾಗಿ ತರುವಲ್ಲಿಯೂ ಯಶಸ್ವಿಯಾದ ನಳಿನ್‌ಕುಮಾರ್ ಅವರು ರೈಲ್ವೆ ಬೋಗಿಯಲ್ಲಿ ಕ್ವಾರಂಟೈನ್ ವಾರ್ಡ್ ನಿರ್ಮಾಣಕ್ಕೂ ಮುತುವರ್ಜಿ ವಹಿಸಿದ್ದರು. ನಳಿನ್‌ಕುಮಾರ್ ಕಟೀಲ್ ಮತ್ತು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು, ಅಧಿಕಾರಿಗಳು, ವೈದ್ಯರು, ಆರೋಗ್ಯ ಹಾಗೂ ವಿವಿಧ ಇಲಾಖೆಯ ಎಲ್ಲ ಸಿಬ್ಬಂದಿಗಳು ಒಂದು ತಂಡವಾಗಿ ಕೆಲಸ ಮಾಡಿದ ಪರಿಣಾಮ ಕರಾವಳಿಯಲ್ಲಿ ಕೋವಿಡ್ ನಿಯಂತ್ರಣ ಸಾಧ್ಯವಾಯಿತು.
ನಿರಂತರ ಸಂಪರ್ಕ
ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಲಾಕ್‌ಡೌನ್ ಅವಧಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳ ಹಾಗೂ ಶಾಸಕರ ಸಭೆ ನಡೆಸಿದ್ದರು. ಜಿಲ್ಲಾ ಕೇಂದ್ರದಲ್ಲೂ ನಿರಂತರ ಸಭೆ, ಅಧಿಕಾರಿಗಳಿಗೆ ಸೂಚನೆ, ವಲಸೆ ಕಾರ್ಮಿಕರನ್ನು ಅವರು ರಾಜ್ಯ, ಜಿಲ್ಲೆಗಳಿಗೆ ಕಳುಹಿಸಲು ವ್ಯವಸ್ಥೆ, ವಿದೇಶದಲ್ಲಿರುವ, ಹೊರ ರಾಜ್ಯದಲ್ಲಿರುವ ಕನ್ನಡಿಗರನ್ನು ಕರೆತರಲು ವ್ಯವಸ್ಥೆ.. ಹೀಗೆ ಸಂಸದ ನಳಿನ್‌ಕುಮಾರ್ ಕಟೀಲ್ ಅವರಿಂದ ದಣಿವರಿಯದ ಸೇವೆ.
ವೀಡಿಯೋ ಕಾನ್ಫರೆನ್ಸ್
ಪಕ್ಷದ ಎಲ್ಲ ಜಿಲ್ಲಾಧ್ಯಕ್ಷರು ಹಾಗೂ ಪ್ರಮುಖ ನಾಯಕರ ಜತೆ ನಿರಂತರ ವೀಡಿಯೋ ಕಾನ್ಫೆರೆನ್ಸ್ ಮೂಲಕ ಸಂಪರ್ಕ ಸಾಧಿಸಿ ಕೋವಿಡ್ ವಿರುದ್ದ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸುತ್ತಿದ್ದರು. ರಾಜ್ಯದಲ್ಲಿ ಪಕ್ಷದ ಕಡೆಯಿಂದ 2.5 ಕೋಟಿ ಜನರಿಗೆ ಆಹಾರ ಪೊಟ್ಟಣ ವಿತರಿಸಲಾಗಿದೆ. ಪ್ರತಿ ದಿನ ಸಾಯಂಕಾಲ ವೀಡಿಯೋ ಕಾನ್ಫೆರೆನ್ಸ್ ಮೂಲಕ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ರಾಜ್ಯದಲ್ಲಿ ಕೈಗೊಂಡ ಸೇವಾ ಅಭಿಯಾನದ ವಿವರ ನೀಡಿ ಸಲಹೆ, ಸೂಚನೆಗಳನ್ನು ಪಡೆಯುತ್ತಿದ್ದರು.
ಅಭಿವೃದ್ಧಿಯಲ್ಲಿ ನಳಿನ್ ಸಾಧನೆಯ ಸರದಾರ
01. ನಂಬರ್ ಒನ್ ಸಂಸದ , ದೇಶದಲ್ಲಿ 6ನೇ ಅತ್ಯಂತ ಕ್ರಿಯಾಶೀಲ ಸಂಸದ, ಸಂಸದರ ಆದರ್ಶ ಗ್ರಾಮ ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನದ ಹೆಗ್ಗಳಿಕೆ
02. 2009-14 ನೇ ಅವಧಿಯಲ್ಲಿ ಪ್ರಥಮ ಬಾರಿಗೆ ಸಂಸದನಾಗಿ ವಿರೋಧ ಪಕ್ಷದಲ್ಲಿದ್ದು ಜಿಲ್ಲೆಗೆ 4000 ಕೋ.ರೂ. ಅನುದಾನ
03. 2014-19 ನೇ ಅವಧಿಯಲ್ಲಿ ಸಂಸದನಾಗಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಈ ಜಿಲ್ಲೆಗೆ 16,520 ಕೋಟಿ ರೂ. ಅನುದಾನ.
04. ನಗರಕ್ಕೆ ಪಾಸ್‌ಪೋರ್ಟ್ ಕಚೇರಿ
05. ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿ
06. ಮಂಗಳೂರಿನಲ್ಲಿ ಆರ್‌ಎಂಎಸ್ ರೀಜನಲ್ ಕಚೇರಿ
07. ಮಂಗಳೂರಿನಲ್ಲಿ ಕೊಂಕಣ ರೈಲ್ವೆ ಪ್ರಾದೇಶಿಕ ಕಚೇರಿ
08. ಮಂಗಳೂರಿಗೆ ಸ್ಮಾರ್ಟ್‌ಸಿಟಿ ಯೋಜನೆ , ಅಮೃತ ಯೋಜನೆ .
09. ಸ್ಟಾರ್ಟ್‌ಅಪ್ ಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಂಕ್ಯುಪೇಷನ್ ಸೆಂಟರ್
10. ಹಲವು ದಶಕಗಳಿಂದ ನೆನೆಗುದಿಯಲ್ಲಿದ್ದ ಕುಳಾಯಿ ಮೀನುಗಾರಿಕಾ ಜೆಟ್ಟಿಗೆ ಶಿಲಾನ್ಯಾಸ
11. ಮೂಲ್ಕಿ-ಬಿ.ಸಿ.ರೋಡು, ತೊಕ್ಕೊಟ್ಟು-ಮೇಲ್ಕಾರ್ ಸೇರಿದಂತೆ ರಸ್ತೆಗಳ ಉನ್ನತೀಕರಣಕ್ಕೆ ಶಿಲಾನ್ಯಾಸ
12. ಮಾಣಿ- ಮೈಸೂರು ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ
13. ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಗುರುಪುರದಲ್ಲಿ 39.42 ಕೋ.ರೂ. ವೆಚ್ಚದಲ್ಲಿ ನೂತನ ಸೇತುವೆ
14. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಗೆ 296.91 ಕೋ.ರೂ. ಅನುದಾನ
15. ಜಿಲ್ಲೆಯ ಎಲ್ಲಾ ಕಾಲೇಜುಗಳಿಗೆ ರೂಸಾ ಯೋಜನೆಯಡಿ 24 ಕೋಟಿ ರೂ. ಅನುದಾನ
16. ಜಿಲ್ಲೆಯಲ್ಲಿ 23 ಟಿಂಕರಿಂಗ್ ಲ್ಯಾಬ್ ನಿರ್ಮಾಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.