ಏರುತ್ತಿರುವ ಅಂಕಿಸಂಖ್ಯೆಯಲ್ಲಿ ಆತಂಕದ ಛಾಯೆ
Team Udayavani, Jun 20, 2020, 6:20 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಶುಕ್ರವಾರದ ವೇಳೆಗೆ ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 4 ಲಕ್ಷಕ್ಕೆ ಹತ್ತಿರ ಹತ್ತಿರ ಇದೆ. 12 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ.
ಜೂನ್ 11ರಿಂದ ಪ್ರತಿದಿನ ದೇಶದಲ್ಲಿ ಹತ್ತು ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದು, ಇದೇ ವೇಗದಲ್ಲೇ ಮುಂದುವರಿದರೆ ಭಾನುವಾರದ ವೇಳೆಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 4 ಲಕ್ಷ ತಲುಪಲಿದ್ದು, ನಂತರದ 8 ದಿನಗಳಲ್ಲಿ 5 ಲಕ್ಷ ಮುಟ್ಟುತ್ತದೆ.
ಈಗ ನಿತ್ಯ 1 ಲಕ್ಷ 50 ಸಾವಿರಕ್ಕೂ ಅಧಿಕ ಜನರನ್ನು ಪರೀಕ್ಷಿಸುತ್ತಿರುವ ಭಾರತ, ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಟೆಸ್ಟಿಂಗ್‌ಗಳನ್ನು ನಡೆಸಲು ಸಜ್ಜಾಗಿದೆ. ಹೀಗಾಗಿ, ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಸಾಧ್ಯತೆಯಿದೆ.
ಇದೆಲ್ಲದರ ನಡುವೆಯೇ ಗಮನಾರ್ಹ ಸಂಗತಿಯೆಂದರೆ, ದೇಶದಲ್ಲಿ ಕೋವಿಡ್ ನಿಂದ ಚೇತರಿಸಿಕೊಂಡವರ ಸಂಖ್ಯೆ 2 ಲಕ್ಷದ ಗಡಿ ದಾಟಿದೆ ಎನ್ನುವುದು!
ಒಂದೇ ದಿನ ಬದಲಾದ ಅಂಕಿಸಂಖ್ಯೆ!
ದೇಶದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಹಠಾತ್ ಏರಿಕೆ ಕಂಡಿದೆ. ಗಮನಾರ್ಹ ಸಂಗತಿಯೆಂದರೆ, ಮಹಾರಾಷ್ಟ್ರ ಮೃತರ ಸಂಖ್ಯೆಗೆ ಹಳೆಯ ಪ್ರಕರಣಗಳನ್ನು ಸೇರಿಸಿದ್ದರಿಂದ ಈ ಬೃಹತ್ ಏರಿಕೆಯಾಗಿರುವುದು.
ಮಹಾರಾಷ್ಟ್ರದಲ್ಲಿ ಈ ಹಿಂದೆ ಕೆಲವೊಂದು ಅನುಮಾನಾಸ್ಪದ ಸಾವಿನ ಪ್ರಕರಣಗಳನ್ನು ಕೋವಿಡ್-19 ಸಾವುಗಳೆಂದು ಪರಿಗಣಿಸಿರಲಿಲ್ಲ. ಈಗ ಪರಿಶೋಧನೆಯ ವೇಳೆ, ಈ ಹಿಂದೆ ದಾಖಲಿಸದಿದ್ದ 1328 ಸಾವಿನ ಪ್ರಕರಣಗಳನ್ನು ಸೇರಿಸಿದ ಕಾರಣ, ಆ ರಾಜ್ಯವಷ್ಟೇ ಅಲ್ಲದೇ, ದೇಶದ ಸರಾಸರಿ ಮರಣ ಪ್ರಮಾಣದ ಮೇಲೂ ಪರಿಣಾಮವುಂಟಾಗಿದೆ.
ಸಿಎಫ್ಆರ್‌ನಲ್ಲೂ ಏರಿಕೆ
ಜೂನ್ 16ರವರೆಗೂ ದೇಶದ ಮರಣ ದರ/ಕೇಸ್ ಫೆಟಾಲಿಟಿ ರೇಟ್ (ಸಿಎಫ್ಆರ್) ಕೇವಲ 2.9 ಪ್ರತಿಶತದಷ್ಟಿತ್ತು. ಆದರೆ ಜೂನ್ 17ಕ್ಕೆ, ಅಂದರೆ ಮಹಾರಾಷ್ಟ್ರ ಹೆಚ್ಚುವರಿ ಸಂಖ್ಯೆಗಳನ್ನು ಸೇರಿಸಿದ ನಂತರ ಭಾರತದ ಸಿಎಫ್ಆರ್ 3.37 ಪ್ರತಿಶತಕ್ಕೇರಿತು.
ಮಂಗಳವಾರದವರೆಗೂ ಮಹಾರಾಷ್ಟ್ರ ಮರಣ ಪ್ರಮಾಣದಲ್ಲಿ ನಾಲ್ಕನೇ ಸ್ಥಾನಕ್ಕಿತ್ತು. ಅಲ್ಲಿಯವರೆಗೂ ಸಿಎಫ್ಆರ್ 3.73 ಪ್ರತಿಶತದಷ್ಟಿತ್ತು. ಆದರೆ, ಈಗ ಈ ಸಂಖ್ಯೆ 4.9 ಪ್ರತಿಶತಕ್ಕೆ ಏರಿಕೆಯಾಗಿ, ದೇಶದಲ್ಲಿ ಅತಿಹೆಚ್ಚು ಮರಣ ದರ ಹೊಂದಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ 2ನೇ ಸ್ಥಾನಕ್ಕೇರಿದೆ.
ಗುಜರಾತ್ ಮೊದಲನೇ ಸ್ಥಾನದಲ್ಲಿದ್ದು, ಅಲ್ಲಿ ಸಿಎಫ್ಆರ್ 6.79 ಪ್ರತಿಶತದಷ್ಟಿದೆ. ಇನ್ನು, ಜೂನ್ 17ರಂದು ಮುಂಬಯಿನಲ್ಲಿ ಮೃತರ ಒಟ್ಟು ಸಂಖ್ಯೆ 3,167ಕ್ಕೆ ಏರಿತು. ಮೃತರ ಸಂಖ್ಯೆಯಲ್ಲಿ ಹೋಲಿಸಿದರೆ ಮುಂಬಯಿಗಿಂತ ಕೇವಲ ನಾಲ್ಕು ಜಾಗತಿಕ ನಗರಗಳಲ್ಲಿ ಮೃತರ ಸಂಖ್ಯೆ ಅಧಿಕವಿದೆ.
ಟೆಸ್ಟ್‌ಗಳ ಜತೆಗೆ ಏರುವುದೇ ಸೋಂಕಿತರ ಸಂಖ್ಯೆ?
ದೆಹಲಿಯಲ್ಲಿ ಕೋವಿಡ್ 19 ಹಾವಳಿ ಅಧಿಕವಾಗುತ್ತಾ ಸಾಗಿದ್ದರೂ, ಟೆಸ್ಟಿಂಗ್‌ಪ್ರಮಾಣದಲ್ಲಿ ಹಠಾತ್ ಇಳಿಕೆ ಕಂಡುಬಂದದ್ದು ಅಚ್ಚರಿ – ಆಘಾತಕ್ಕೆ ಕಾರಣವಾಗಿತ್ತು. ಈ ವಿಷಯದಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡ ಆಪ್ ಸರ್ಕಾರವನ್ನು ಪ್ರಶ್ನಿಸಿತ್ತು.
ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಾಗೂ ಆಪ್ ಸರ್ಕಾರದ ನಡುವೆ ಸಭೆ ಕೂಡ ನಡೆಯಿತು. ಜೂನ್ 20ರ ನಂತರ ದೆಹಲಿಯಲ್ಲಿ ಪ್ರತಿದಿನ 18,000 ಟೆಸ್ಟ್‌ಗಳನ್ನು ನಡೆಸಲಾಗುವುದೆಂದು ಅಮಿತ್ ಶಾ ಹೇಳಿದ್ದಾರೆ. ಇದಕ್ಕಾಗಿ ಭಾರೀ ಪ್ರಮಾಣ ಟೆಸ್ಟ್ ಕಿಟ್‌ಗಳು ಕೂಡ ರಾಜಧಾನಿಗೆ ಬಂದಿಳಿದಿವೆ.
ಹಾಗಿದ್ದರೆ, ಇಂದಿನಿಂದ ದೆಹಲಿಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ವಿಪರೀತ ಏರಿಕೆ ಕಂಡುಬರಲಿದೆಯೇ ಎನ್ನುವ ಪ್ರಶ್ನೆ ಎದುರಾಗುತ್ತಿದೆ. ಈಗಾಗಲೇ ಹಲವು ತಜ್ಞರು ದೆಹಲಿಯು ಸಮುದಾಯ ಪ್ರಸರಣ ತಲುಪುವ ಹಂತದಲ್ಲಿದೆ ಎಂದು ಎಚ್ಚರಿಸುತ್ತಿದ್ದಾರೆ. ಆದಾಗ್ಯೂ, ಐಸಿಎಂಆರ್ ಇದನ್ನು ಅಲ್ಲಗಳೆಯುತ್ತದಾದರೂ, ದೆಹಲಿಯ ಟೆಸ್ಟ್ ಪಾಸಿಟಿವಿಟಿ ರೇಟ್ ಕೂಡ ಈಗ 14.67 ಪ್ರತಿಶತ ತಲುಪಿರುವುದರಿಂದ ಆತಂಕ ಹೆಚ್ಚಿದೆ.
ಟೆಸ್ಟ್‌ಗಳ ಹೆಚ್ಚಳದಿಂದ ಇನ್ಮುಂದೆ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣಿಸಬಹುದೆಂಬ ಅಂದಾಜಿದೆ. ಇದರ ನಡುವೆಯೇ ದೇಶದಲ್ಲಿ ಒಟ್ಟು ಪರೀಕ್ಷೆಗಳ ಸಂಖ್ಯೆ 64 ಲಕ್ಷ ದಾಟಿದ್ದು, ಗುರುವಾರವೊಂದೇ ದಿನ 1 ಲಕ್ಷ 76 ಸಾವಿರ ಜನರನ್ನು ಪರೀಕ್ಷಿಸಲಾಗಿದೆ. ಮುಂದಿನ ದಿನಗಳಲ್ಲಿ ದೆಹಲಿ ಸೇರಿದಂತೆ ದೇಶಾದ್ಯಂತ ಟೆಸ್ಟಿಂಗ್ ಪ್ರಮಾಣ ಅಧಿಕವಾಗಲಿರುವುದರಿಂದ ಹೆಚ್ಚಿನ ಸೋಂಕಿತರೂ ಪತ್ತೆಯಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.