ಅಪ್ಪನ ನೆನಪು : ಅಪ್ಪನೆಂದರೆ…
Team Udayavani, Jun 21, 2020, 5:18 PM IST
ಅಪ್ಪನೆಂದರೆ…
ಮುಂಗಾರು ತೊಯ್ದು ಮಣ್ಣು ಕಂಪು ಬೀರುತ್ತದೆ;
ಮುಂಗೋಳಿ ಕೂಗಿಗೆ ನಿದ್ದೆ ಮಾಯ..!
ಜೋಡಿ ಎತ್ತುಗಳು ಎದ್ದು ದಾರಿ ಕಾಯುತ್ತವೆ;
ಮಡ್ಡಿ, ಅಕ್ಕಚ್ಚು ಉದರ ಪೇಯ.
ಗದ್ದೆ ಬದುಗಳೆಲ್ಲ ಶೃಂಗ ತೋರಣವಾಗುತ್ತವೆ;
ಬಿರಿದ ಒಡಲೊಳಗೆ ನೀರು
ಮುಟ್ಟಾಳೆ ಹೊತ್ತ ವೃದ್ಧ ನೇಗಿಲ ಹಿಡಿದಾನೆ;
ಮೊಗದಲ್ಲಿ ತುಂಬಾ ಬೆವರು.
ತೊರೆ ಕೆರೆ ತುಂಬಿ ತುಳುಕಾಡುತ್ತಿವೆ ಸುತ್ತ;
ಹಾರೆ ಗುದ್ದಲಿಗೆಲ್ಲಿ ಬಿಡುವು?
ಓ ಬೇಲೆ ಎಲ್ಲೆಲ್ಲೂ ಮೇಳೈಸುತ್ತಿವೆ;
ಬಂಗಾರವಾಗಿದೆ ಬಯಲು.
ಹರಿವೆ, ನವಧಾನ್ಯ ಮತ್ತೆ ಚಿಗುರಿದೆ ಅಲ್ಲಿ;
ಚಳಿಗಾಲವಂತು ಸೊಗಸು.
ಏತ ಕಟ್ಟಿದ ಬಳಿಕ ನೀರು ಚಿಮ್ಮಿದೆ ಮೇಲೆ;
ಕೈ ಬೊಗಸೆ ತುಂಬಾ ಕನಸು.
ಬೇಸಗೆಯ ಬೆಚ್ಚಗೆ ಶಾಖ, ಚಿಗುರಿದೆ ಹೂ ಹಣ್ಣು;
ಮರದ ತುಂಬಾ ಗೇರುಬೀಜದ ಫಸಲು.
ತರುಲತೆ ಪೊದೆಯ ನಡುವಣದ ನಿಡುಗಣ್ಣು;
ಆಷಾಡಕ್ಕೊಂದಿಷ್ಟು ಪೇರಿಸುವ ಹವಣು.
ಸೂರು ಸೋರುವ ಮುನ್ನ ಮುಳಿಹುಲ್ಲ ಹುಡುಕಾಟ;
ನೂರು ಯೋಜನ ಅವನ ಬಿರುನಡಿಗೆ.
ಮತ್ತೆ ಏಣಿ ಮೇಲೇರಿ ಆಗಸದಿ ಬರವಣಿಗೆ;
ಅಪ್ಪನೆಂದರೆ ಗಟ್ಟಿ ಪಾವಟಿಗೆ.
ಹೆಗಲ ಮೇಲೇರಿದರೆ ಆನು ದೇವ ಮೂರ್ತಿ;
ಕವಿತೆ ಮೌನವಾಗುವುದು ಹೀಗೆ.
ಅಪ್ಪ ಎಂದರೆ ಈಗ ಮುಗಿಲ ನಕ್ಷತ್ರ;
ಇರುಳು ಹಡೆಯುವುದು ನೆನಪ
ಬೇಗೆ.
– ಡಾ|ರತ್ನಾಕರ ಮಲ್ಲಮೂಲೆ , ಕಾಸರಗೋಡು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.