ಮಲ್ಪೆ ಬಂದರು: ಡ್ಯಾಮ್, ಆಂಧ್ರದ ಮೀನು ಭರ್ಜರಿ ಮಾರಾಟ
Team Udayavani, Jun 24, 2020, 1:30 PM IST
ಮಲ್ಪೆ: ಮಳೆಗಾಲದಲ್ಲಿ ಯಾಂತ್ರಿಕ ಮೀನುಗಾರಿಕೆ ನಿಷೇಧಗೊಂಡ ಬಳಿಕ ಹೊರರಾಜ್ಯಗಳ ಮೀನುಗಳಿಗೆ ಭಾರೀ ಬೇಡಿಕೆ. ಮಲ್ಪೆ ಬಂದರಿನಲ್ಲಿ ಆಂಧ್ರಪ್ರದೇಶ ಸಮುದ್ರದ ತಾಜಾ ಮೀನು, ರಾಜ್ಯದ ಡ್ಯಾಮ್‌ಗಳ ಮೀನು ಮತ್ತು ಫ್ರೀಜಿಂಗ್ ಪ್ಲಾಂಟ್‌ನ ಮೀನುಗಳ ಭರ್ಜರಿ ಮಾರಾಟ ನಡೆಯುತ್ತಿದೆ. ಮಲ್ಪೆಯಲ್ಲಿ ನಾಡದೋಣಿ ಮೀನುಗಾರರು ಕಡಲಿಗಿಳಿಯಲು ಸೋಮವಾರವಷ್ಟೇ ಚಾಲನೆ ದೊರಕಿದ್ದು, ಸಮುದ್ರದ ವಾತಾವರಣ ನೋಡಿಕೊಂಡು ಇನ್ನಷ್ಟೇ ಕಡಲಿಗಿಳಿಯಬೇಕಾಗಿದೆ. ಹಾಗಾಗಿ ಕಳೆದ ಕೆಲವು ದಿನಗಳಿಂದ ಹೊರರಾಜ್ಯದ ಮೀನುಗಳು ಇಲ್ಲಿ ಭಾರೀ ಬೇಡಿಕೆ ಪಡೆದು ಕೊಳ್ಳುತ್ತಿದೆ ಎನ್ನಲಾಗಿದೆ.
ದೇಶದ ಪಶ್ಚಿಮ ಕರಾವಳಿಯ ರಾಜ್ಯದಲ್ಲಿ ಮೀನುಗಾರಿಕೆಗೆ ನಿಷೇಧ ಇರುವಾಗ ಪೂರ್ವ ಕರಾವಳಿಯ ಆಂಧ್ರಪ್ರದೇಶ, ತಮಿಳುನಾಡು ರಾಜ್ಯದಲ್ಲಿ ನಿಷೇಧ ಇರುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ಅಲ್ಲಿನ ತಾಜಾ ಮೀನುಗಳನ್ನು ಮೀನು ವ್ಯಾಪಾರಿಗಳು ಇಲ್ಲಿಗೆ ಲಾರಿ ಮೂಲಕ ತಂದು ಮಾರಾಟ ಮಾಡುತ್ತಾರೆ. ಮಲ್ಪೆ ಬಂದರಿಗೆ ಪ್ರತಿನಿತ್ಯ 18ರಿಂದ 20 ಲಾರಿಗಳಿಂದ ಸುಮಾರು 60 ಟನ್‌ಗಳಷ್ಟು ಮೀನುಗಳು ಬರುತ್ತಿವೆ. ಬಂಗುಡೆ, ಬೂತಾಯಿ, ರೆಬ್ಟಾಯಿ, ಬೊಳಂ ಜಿಲ್ ಸೇರಿದಂತೆ ಚಿಲ್ಲರೆ ಮೀನುಗಳು ರಖಂ ಆಗಿ ಮಾರಾಟವಾಗುತ್ತಿವೆ. ಮುಂಜಾನೆ 4 ಗಂಟೆಗೆ ಆರಂಭಗೊಂಡ ಮೀನು ಮಾರಾಟದ ಚಟುವಟಿಕೆ ಬೆಳಗ್ಗೆ 8 ಗಂಟೆಯೊಳಗೆ ಮುಕ್ತಾಯಗೊಳ್ಳುತ್ತದೆ. ಒಟ್ಟಿನಲ್ಲಿ ಮಳೆಗಾಲದಲ್ಲೂ ಬಂದರಿನಲ್ಲಿ ನಿತ್ಯ ಲಕ್ಷಾಂತರ ರೂಪಾಯಿ ವ್ಯವಹಾರ ವಹಿವಾಟು ನಡೆಯುತ್ತದೆ.
ವಿವಿಧ ಮೀನಿನ ರಖಂ ದರ
ಪ್ರಸ್ತುತ ಮಲ್ಪೆ ಬಂದರು ಮಾರುಕಟ್ಟೆಯಲ್ಲಿ 25 ಕೆ.ಜಿ.ಯ ಒಂದು ಬಾಕ್ಸ್ ಬಂಗುಡೆಗೆ 5,000 -5,500 ರೂ., ಬೂತಾಯಿ ಮೀನಿಗೆ 3,000 -3,500 ರೂ., ಬೊಳಂಜಿಲ್ 3,000 -3,500 ರೂ., ಮಿಕ್ಸ್ ಮೀನು 1,000 – 1,300 ರೂ.ಗಳಿಗೆ ರಖಂನಲ್ಲಿ ಮಾರಾಟವಾಗುತ್ತಿದೆ. ಪ್ಯಾಕೇಟ್ ಮೀನುಗಳಲ್ಲಿ ಗೋಂಕೆ ಕೆ.ಜಿ.ಗೆ 100ರಿಂದ 110 ರೂ., ಬಂಗುಡೆ 170ರಿಂದ 180 ರೂ., ರೆಬ್ಟಾಯಿ 80 ರೂ. ಕೋಡುಬತ್ತಿ 100 ರೂ.ಗಳಿಗೆ ಮಾರಾಟವಾಗುತ್ತಿದೆ. ದಿನ ಬೇಡಿಕೆಗೆ ಅನುಗುಣವಾಗಿ ದರದಲ್ಲಿ ವ್ಯತ್ಯಾಸ ಉಂಟಾಗುತ್ತದೆ.
ಚಾಂದಿನಿ, ರೌಕಟ್ಲ ಮೀನು
ಉತ್ತರ ಕರ್ನಾಟಕದ ಡ್ಯಾಮ್‌ಗಳಲ್ಲಿ ಗಾಳ ಹಾಕಿ ಹಿಡಿಯಲಾಗುವ ಚಾಂದಿನಿ, ರೌಕಟ್ಲ, ಜಿಲೇಬಿ ಜಾತಿಯ ಮೀನುಗಳು ಮಲ್ಪೆ ಬಂದರಿಗೆ ಬಂದಿವೆ. ಚಾಂದಿನಿ ಮೀನು ಸ್ಥಳೀಯ ಹೊಳೆಯಲ್ಲಿ ಸಿಗುವ ಕೆಂಬೇರಿ ಮೀನಿನ ರೂಪವನ್ನು ಹೋಲುತ್ತಿದ್ದು ರುಚಿ ಕೂಡ ಅದರಷ್ಟೆ ಇದೆ. ಹಾಗಾಗಿ ಇಲ್ಲಿ ಸಾಧಾರಣವಾಗಿ ಬೇಡಿಕೆ ಪಡೆದುಕೊಳ್ಳುತ್ತಿದೆ ಎನ್ನುತ್ತಾರೆ ಮೀನು ವ್ಯಾಪಾರಿ ಪ್ರದೀಪ್ ಟಿ. ಸುವರ್ಣ. ಸುಮಾರು ಮೂರು ಕೆ.ಜಿ. ತೂಕದ ಚಾಂದಿನಿ ಮೀನುಗಳೂ ಕಾಣಸಿಗುತ್ತವೆ. ಇದು ಕೆ.ಜಿ.ಗೆ 130 ರೂ. ದರ ಇರುತ್ತದೆ. ಉಳಿದಂತೆ ಕಾಕಟ್ಲ 100 ರೂ., ಜಿಲೇಬಿ 100 ರೂ., ಪೊಂಗಸ್ 100 ರೂ. ಗೆ ಮಾರಾಟವಾಗುತ್ತಿದೆ.
8 ಗಂಟೆಯೊಳಗೆ ವ್ಯವಹಾರ ಮುಕ್ತಾಯ
ಪೂರ್ವ ಕರಾವಳಿಯ ರಾಜ್ಯದಲ್ಲಿ ಪ್ರಸ್ತುತ ದೋಣಿಗಳು ಮೀನುಗಾರಿಕೆ ನಡೆಸುತ್ತವೆ. ಹಾಗಾಗಿ ಇಲ್ಲಿನ ನಿಷೇಧದ ಅವಧಿಯಲ್ಲಿ ಅಲ್ಲಿನ ಮೀನುಗಳು ಲಾರಿ ಮೂಲಕ ಇಲ್ಲಿಗೆ ಬರುತ್ತವೆ. ರಖಂ ಮಾರಾಟವಾದ್ದರಿಂದ ಬೆಳಗ್ಗೆ 8 ಗಂಟೆಯೊಳಗೆ ಬಂದರಿನಲ್ಲಿ ವ್ಯವಹಾರ ಮುಗಿಯುತ್ತದೆ.
-ಶಿವಕುಮಾರ್, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ.
ವ್ಯಾಪಾರಿಗಳ ಸಂಖ್ಯೆ ತೀರ ಕಡಿಮೆ
ಮಳೆಗಾಲದಲ್ಲಿ ಯಾಂತ್ರಿಕ ಮೀನುಗಾರಿಕೆಗೆ ನಿಷೇಧವಿರುವುದರಿಂದ ಹೊರರಾಜ್ಯಗಳ ಬಂದರಿನ ಮೀನನ್ನು ತರಿಸಿಕೊಂಡು ಮಾರಾಟ ಮಾಡುತ್ತೇವೆ. ಇದೀಗ ಆಂಧ್ರಪ್ರದೇಶದ ಮೀನು ಮಾತ್ರ ಇಲ್ಲಿಗೆ ಬರುತ್ತಿದೆ. ಈ ಬಾರಿ ಕೋವಿಡ್ ದಿಂದಾಗಿ ಮೀನು ಮಾರಾಟದ ಮಹಿಳೆಯರು ಸೇರಿದಂತೆ ಮೀನು ಖರೀದಿಸಲು ಬರುವ ವ್ಯಾಪಾರಿಗಳ ಸಂಖ್ಯೆ ತೀರ ಕಡಿಮೆ ಇದೆ.
-ಹುಸೇನ್ ಸಾಹೇಬ್ ಮಲ್ಪೆ, ಮೀನು ವ್ಯಾಪಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.