ಬೆಂಕಿಗೆ ಬಿದ್ದ ಜಾಸ್ಮಿನ್, ಬೆಂದ ಮೇಲೂ ಅರಳಿತು…
Team Udayavani, Jun 28, 2020, 6:50 AM IST
ಮದುವೆ ಮುರಿದುಹೋದರೆ ಹುಡುಗಿಯ ಬಾಳು ಬರ್ಬಾದ್ ಆಯ್ತು ಎಂದು ವಾದಿಸುವ ಜನರಿದ್ದಾರೆ. ಡಿವೋರ್ಸ್ ಪಡೆದಾಕೆ “”ಎಲ್ಲರಿಗೂ ಹೊರೆ” ಎಂದು ನಂಬುವವರು ಎಲ್ಲೆಡೆ ಇದ್ದಾರೆ. ಇಂಥ ನಂಬಿಕೆಗಳನ್ನು ಕಿತ್ತು ಬಿಸಾಡಿದ ದಿಟ್ಟೆಯೊಬ್ಬಳ ಕಥೆ ಇದು. ಈಕೆಯ ಹೆಸರು- ಜಾಸ್ಮಿನ್ ಎಂ ಮೂಸಾ. ಬದುಕು ಈಕೆಯನ್ನು ಇನ್ನಿಲ್ಲದಂತೆ ಕಾಡಿದೆ. ಕ್ಷಣಕ್ಕೊಮ್ಮೆ ಪರೀಕ್ಷೆಗೆ ಒಡ್ಡಿದೆ. ಸಂಕಷ್ಟಗಳು ಹೆಜ್ಜೆಗೊಮ್ಮೆ ಬಂದಿವೆ. ಮದುವೆಗಳು ಮುರಿದು ಬಿದ್ದಿವೆ. ಇಷ್ಟಾದರೂ ಈಕೆ ಎದೆಗುಂದಿಲ್ಲ. ಸತಾಯಿಸುವ ವಿಧಿಗೇ ಸವಾಲು ಹಾಕಿ ನಿಂತು ಬದುಕು ಕಟ್ಟಿ ಕೊಂಡಿದ್ದಾಳೆ. ಜಾಸ್ಮಿನ್‌ಳ ಯಶೋಗಾಥೆ ಸಿನಿಮಾ ಕಥೆಯನ್ನು ಮೀರಿಸುವಂತಿದೆ. ಅದನ್ನೆಲ್ಲ ಅವಳ ಮಾತಲ್ಲೇ ಹೇಳುವುದಾದರೆ.
ನಮ್ಮದು ಮಿಡ್ಲ್ ಕ್ಲಾಸ್ ಫ್ಯಾಮಿಲಿ. ನಾವಿದ್ದುದು, ಕೇರಳದ ಕಲ್ಲಿಕೋಟೆಗೆ ಸಮೀಪದ ಚೆರುಮುಖ ಎಂಬ ಹಳ್ಳಿಯಲ್ಲಿ. ಮೂರು ಹೆಣ್ಣು- ಎರಡು ಗಂಡು ಮಕ್ಕಳು ಮತ್ತು ಅಪ್ಪ-ಅಮ್ಮ; ಇದಿಷ್ಟು ನನ್ನ ಕುಟುಂಬ. ನಾನೇ ಹಿರಿ ಮಗಳು. ಇದು 2012ರ ಮಾತು. ಅವು ನನ್ನ ಸೆಕೆಂಡ್ ಪಿಯುಸಿಯ ಕಡೆಯ ದಿನಗಳು. ಅವತ್ತೂಂದು ದಿನ ಕಾಲೇಜಿಂದ ಮನೆಗೆ ಬಂದರೆ- ಐದಾರು ಜನ ಅಪರಿಚಿತರು ಕಾಣಿಸಿದರು. ಅಮ್ಮ ಗಡಿಬಿಡಿಯಿಂದಲೇ ಕರೆದು- “ಬೇಗ ಫ್ರೆಶ್ ಆಗಿ, ಡ್ರೆಸ್ ಬದಲಿಸಿ ಬಾ. ಗೆಸ್ಟ್ ಗಳಿಗೆ ಕಾಫಿ ಕೊಡು’ ಅಂದರು. ಹಾಗೇ ಮಾಡಿದೆ. ಆನಂತರ, ಬಂದಿದ್ದವರೆಲ್ಲ ಅಪ್ಪ-ಅಮ್ಮನಿಗೆ ಬೈ ಹೇಳುತ್ತಾ ಎದ್ದು ಹೋದರು. “ಅವರು ಹೆಣ್ಣು ನೋಡಲು’ ಬಂದಿದ್ದರೆಂದು ಆಮೇಲಷ್ಟೇ ಗೊತ್ತಾಯಿತು.
ಅಪ್ಪಾ-ಅಮ್ಮಾ, ಇಷ್ಟು ಚಿಕ್ಕವಯಸ್ಸಿಗೇ ನನಗೆ ಮದುವೆ ಬೇಡ. ನಾನು ಡಿಗ್ರಿ ಮಾಡಬೇಕು ಎಂದು ಬೇಡಿಕೊಂಡೆ. ಹೆತ್ತವರು ಕೇಳಲಿಲ್ಲ. “ನಿನ್ನ ಹಿಂದೆ ಇನ್ನೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರ ಬಗ್ಗೇನೂ ನಾವು ಯೋಚಿಸಬೇಕು. ಸುಮ್ನೆ ಒಪ್ಪಿಕೋ’ -ಎಂದು ನನ್ನ ಬಾಯಿ ಮುಚ್ಚಿಸಿದರು. ಪರಿಣಾಮ, 17 ತುಂಬಿ 18ಕ್ಕೆ ಕಾಲಿಟ್ಟ ಮೂರೇ ದಿನಕ್ಕೆ, ನನ್ನ ಮದುವೆಯಾಗಿ ಹೋಯಿತು.
ಅವತ್ತು ನಮ್ಮ ಮೊದಲ ರಾತ್ರಿಯ ಸಂಭ್ರಮ. ಆಸೆ, ಭಯ, ಕನಸು-ಕನವರಿಕೆ, ರೋಮಾಂಚನ-ತಳಮಳ ಎದೆಯೊಳಗೆ ತುಂಬಿಕೊಂಡೇ ಕುಳಿತಿದ್ದೆ. ನನ್ನ ಗಂಡ ವಿಚಿತ್ರವಾಗಿ ನೋಡುತ್ತಾ ಬಳಿಬಂದ. ನನ್ನನ್ನು ಕೆಡವಲು, ತಬ್ಬಿಕೊಳ್ಳಲು ಪ್ರಯತ್ನಿಸಿದ. ಭಯದಿಂದ ಚೀರಿಕೊಂಡೆ.
ವಿಪರ್ಯಾಸವೆಂದರೆ, ನನ್ನ ಚೀರಾಟ ಕೇಳಿ, ಅದೇ ಮನೆಯ ಹೊರಗಿದ್ದ ಜನ ಖುಷಿಯಿಂದ ನಗುತ್ತಿದ್ದರಂತೆ! ಆನಂತರ ತಿಳಿದುಬಂದದ್ದು ಏನೆಂದರೆ, ನನ್ನನ್ನು ಮದುವೆಯಾಗಿದ್ದವ, ಆಟಿಸಂನಂಥ ತೊಂದರೆಯಿಂದ ಬಳಲುತ್ತಿದ್ದ. ಅಂಥ ವನೂ, ರಾತ್ರಿಯ ವೇಳೆ ಬಗೆಬಗೆಯ ಹಿಂಸೆ ಕೊಟ್ಟ. ಹಲ್ಲೆ ಮಾಡಿದ. ಮರ್ಯಾದೆಗೆ ಅಂಜಿ ಏನನ್ನೂ ಬಾಯಿ ಬಿಡದೆ ಒಂದಿಡೀ ವರ್ಷ ಕಳೆದೆ. ನಂತರವೂ ಆತನ ಕಿರುಕುಳ ನಿಲ್ಲಲಿಲ್ಲ. ಕಡೆಗೆ ಹೆತ್ತವರೊಂದಿಗೆ ಎಲ್ಲ ಹೇಳಿಕೊಂಡೆ. ಪರಿಣಾಮ; ಕೆಲವೇ ದಿನಗಳಲ್ಲಿ ಡಿವೊರ್ಸ್ ಪಡೆದು ತವರಿಗೆ ಬಂದೆ.
ಗಂಡನ ಮನೆಯಲ್ಲಂತೂ ನೆಮ್ಮದಿಯಿರಲಿಲ್ಲ. ತವರಿನಲ್ಲಾದರೂ ಖುಷಿ ಯಿಂದಿರೋಣವೆಂಬ ನನ್ನಾಸೆಗೆ, ನೆರೆಹೊರೆಯವರು ಕಲ್ಲು ಹಾಕಿದರು. ನನ್ನನ್ನು ಕಂಡರೆ ಸಾಕು; “ಇವಳಾ, ಗಂಡನನ್ನ ಬಿಟ್ಟು ಬಂದವಳು’ ಎಂದು ಹಂಗಿಸಿದರು. “ಮದುವೆಗೆ ಬಂದಿರುವ ಇಬ್ಬರು ಮಕ್ಕಳು ಮನೇಲಿದ್ದಾರೆ. ಅದು ಗೊತ್ತಿದ್ದೂ ಇವಳನ್ನು ಜೊತೇಲಿ ಇಟ್ಕೊಂಡಿದೀರ? ಬೇಗ ಇನ್ನೊಂದು ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಿ…’ ಎಂದು ನನ್ನ ಹೆತ್ತವರಿಗೆ ಬುದ್ಧಿ ಹೇಳಿದರು! ಪೋಷಕರಿಗೂ ಇದೇ ಸರಿಯೆನ್ನಿಸಿತು. ಈ ಬಾರಿ ನಾನು ಸ್ಪಷ್ಟವಾಗಿ ಹೇಳಿದೆ: “ಮುಂದೆ ಬದುಕಬೇಕಾದವಳು ನಾನು. ನನ್ನ ಹಳೆಯ ಕತೆಯನ್ನೆಲ್ಲ ಮೊದಲೇ ಹೇಳಿ. ಆಗ ಒಪ್ಪಿದರೆ ಮುಂದಿನ ಮಾತು…’
ಅಚ್ಚರಿ ಎಂಬಂತೆ, ನಂತರದ ಕೆಲವೇ ದಿನಗಳಲ್ಲಿ ಸುಂದರ-ಸಭ್ಯ ಎಂಬಂತಿದ್ದ ಹುಡುಗನೇ ನನ್ನನ್ನು ನೋಡಲು ಬಂದ. ನಾನು ಏನನ್ನೂ ಮುಚ್ಚಿಡದೆ ಎಲ್ಲವನ್ನು ಹೇಳಿಕೊಂಡೆ. “ನಿನ್ನ ಹಳೆಯ ಕಥೆ ನನಗೆ ಬೇಕಿಲ್ಲ. ಮದುವೆಯಾಗೋಣ…’ ಅಂದ! ಅಬ್ಟಾ, ಹಳೆಯ ಕಥೆಯನ್ನೆಲ್ಲ ಕೇಳಿದ ಮೇಲೂ ಇವನು ಒಪ್ಪಿದನಲ್ಲ ಅನ್ನಿಸಿ ಖುಷಿಯಾಯಿತು. ಕೆಲವೇ ದಿನಗಳಲ್ಲಿ ಮದುವೆಯಾಯಿತು. ಹೊಸ ಬದುಕಿನ ಕುರಿತು ನಾನು ಕಟ್ಟಿಕೊಂಡಿದ್ದ ಕನಸಿನ ಗೋಪುರ, ಮೊದಲ ರಾತ್ರಿಯೇ ಕುಸಿದುಬಿತ್ತು! ನನ್ನ ಗಂಡ, ಕೆನ್ನೆ ಚದುರಿ ಹೋಗುವಂತೆ ಹೊಡೆದ. ಆ ಶಾಕ್‌ನಿಂದ ಚೇತರಿಸಿಕೊಳ್ಳುವುದರೊಳಗೆ, ನನ್ನನ್ನು ಮಂಚಕ್ಕೆ ಕಟ್ಟಿಹಾಕಿ ಮೇಲೆರಗಿದ. ಅವತ್ತೂ ಅಷ್ಟೆ: ನಾನು ನೋವಿನಿಂದ, ಭಯದಿಂದ ಚೀರುತ್ತಿದ್ದರೆ, ಮನೆಯ ಆಚೆಯಿದ್ದ ಜನ- “ಹೋ, ಇವತ್ತು ಫಸ್ಟ್ ನೈಟಾ, ಇದೆಲ್ಲಾ ಮಾಮೂಲು…’ ಎಂದು ನಕ್ಕು ಸುಮ್ಮನಾಗಿದ್ದರು. ಆನಂತರದಲ್ಲಿ ರಾತ್ರಿಯ ವೇಳೆ ದಿನವೂ ಮಂಚಕ್ಕೆ ಕಟ್ಟಿಹಾಕಿ ಅತ್ಯಾಚಾರ ಮಾಡುವುದು ಗಂಡನ ದಿನಚರಿಯೇ ಆಗಿಹೋಯಿತು. ಆಗಲೇ ಎದೆಯೊಡೆಯುವ ಸಂಗತಿ ಗೊತ್ತಾಯಿತು- ನನ್ನ ಗಂಡ, ಡ್ರಗ್ ಅಡಿಕ್ಟ್ ಆಗಿದ್ದ!
ಮೊದಲ ಮದುವೆ ಮುರಿದುಬಿದ್ದಿದೆ. ಹೆತ್ತವರು- “ನೀನೊಂದು ಹೊರೆ’ ಎಂದದ್ದಾಗಿದೆ. ಎರಡನೇ ಮದುವೆಯಾದವ ಕೇಡಿಯಾಗಿದ್ದಾನೆ. ವಿಪರೀತ ಹೊಡೆಯುತ್ತಾನೆ. ದಿನವೂ ರೇಪ್ ಮಾಡುತ್ತಾನೆ! ಈಗ ಮಾಡುವುದೇನು? -ಹೀಗೆಲ್ಲ ಯೋಚಿಸುತ್ತ, ದಿನವೂ ಸುಸ್ತಾಗುವಷ್ಟು ಅಳುತ್ತಿದ್ದೆ. “ಯಾರಿಗಾದ್ರೂ ವಿಷಯ ಹೇಳಿದ್ರೆ, ಅವತ್ತೇ ನಿನ್ನನ್ನು ಕೊಂದುಬಿಡ್ತೀನಿ’ ಎಂದು ಹೆದರಿಸಿದ್ದ. ಹೀಗಿದ್ದಾಗಲೇ, ಖುಷಿಯ ಸಂಗತಿ ಜೊತೆಯಾಯಿತು. ಅನಾರೋಗ್ಯವೆಂದು ಆಸ್ಪತ್ರೆಗೆ ಹೋದರೆ- “ನೀವೀಗ ತಾಯಿ ಆಗ್ತಾ ಇದೀರ’ ಎಂಬ ಸುದ್ದಿ ಕೊಟ್ಟರು.
ತಂದೆಯಾಗ್ತಾ ಇದೀನಿ ಅಂತ ಗೊತ್ತಾದರೆ ಸಾಕು; ಎಂಥ ಕೇಡಿಯೂ ಬದಲಾಗಿಬಿಡ್ತಾನೆ ಎಂಬುದು ನನ್ನ ನಂಬಿಕೆಯಾಗಿತ್ತು. ಹಾಗೆ ಬದಲಾದ ಜನರನ್ನೂ ಕಂಡಿದ್ದೆ
. ಸುದ್ದಿ ಗೊತ್ತಾದ ತಕ್ಷಣ ನನ್ನ ಗಂಡನೂ ಬದಲಾದಂತೆ, ಸಂಭ್ರಮದ ಕ್ಷಣಗಳು ನಮ್ಮ ಜೊತೆಯಾದಂತೆಲ್ಲಾ ಕನಸು ಕಂಡೆ. ಗಂಡ ಮನೆಗೆ ಬಂದಾಗ, ಇನ್ನಿಲ್ಲದ ಆಸೆಯಿಂದ ಅವನ ಬಳಿ ಹೋಗಿ-“ರೀ, ನೀವು ತಂದೆ ಯಾಗ್ತಾ ಇದೀರ. ಆಸ್ಪತ್ರೆಗೆ ಹೋಗಿದ್ದೆ. ಆಗ ಗೊತ್ತಾಯ್ತು…’ ಅಂದೆ. ಅಷ್ಟೇ; ಮರುಕ್ಷಣವೇ, ನಾನು ಕನಸಿನಲ್ಲೂ ಊಹಿಸಿರದ ಘಟನೆ ನಡೆದುಹೋಯಿತು. ತಂದೆಯಾಗುವೆನೆಂದು ತಿಳಿದು ನನ್ನ ಗಂಡ ಖುಷಿಪಡಲಿಲ್ಲ. ಬದಲಾಗಿ, ನನ್ನ ಹೊಟ್ಟೆಗೆ ಜಾಡಿಸಿ ಒದ್ದುಬಿಟ್ಟ. ನಾನು, ಫುಟ್ಬಾಲ್ ಚೆಂಡಿನಂತೆ ಆ ಮೂಲೆಗೆ ಹೋಗಿ ಬಿದ್ದೆ. ಸ್ವಲ್ಪ ಹೊತ್ತಿನಲ್ಲೇ ಬ್ಲೀಡಿಂಗ್ ಶುರುವಾಯಿತು. ಒಂದು ದಿನ ಕಳೆದ ಮೇಲೂ ಬ್ಲೀಡಿಂಗ್ ನಿಲ್ಲಲಿಲ್ಲ. ಬೇರೆ ದಾರಿಯಿಲ್ಲದೆ ಆಸ್ಪತ್ರೆಗೆ ಹೋದರೆ- ಕೂಲಂಕಷವಾಗಿ ಪರೀಕ್ಷಿಸಿದ ವೈದ್ಯರು- “ಗರ್ಭಕೋಶಕ್ಕೆ ತುಂಬಾ ಪೆಟ್ಟು ಬಿದ್ದಿದೆ. ಆಪರೇಷನ್ ಆಗಬೇಕು. ಮಗು ಉಳಿಯುವ ಛಾ®Õ… 50-50′ ಅಂದರು. ಆಪರೇಷನ್ ಮಾಡಿಸಿಕೊಳ್ಳಲು ನಾನು ಸಜ್ಜಾದಾಗಲೇ, ಏನೋ ಉಪಕಾರ ಮಾಡುವವನಂತೆ ಬಂದ ಗಂಡ- “ಡಿವೊರ್ಸ್ ಕೊಡ್ತೇನೆ, ಸಹಿ ಮಾಡು’ ಅಂದ! ಒಂದು ಹೆಣ್ಣಿನ ಬದುಕಿನೊಂದಿಗೆ ಈ ಮಟ್ಟಕ್ಕೆ ಆಟವಾಡಿದನಲ್ಲ; ಇವನನ್ನು ಸುಮ್ಮನೆ ಬಿಡಬಾರದು ಅನ್ನಿಸಿತು. ದೈಹಿಕ-ಮಾನಸಿಕ ಕಿರುಕುಳದ ಕೇಸ್ ಹಾಕಿದೆ. ಆ ಕೇಡಿಗೆ ಜೈಲು ಶಿಕ್ಷೆಯಾಯಿತು.
ಎರಡನೇ ಮದುವೆಯೂ ಮುರಿದುಬಿದ್ದಾಗ, ಪೋಷಕರು ಕಂಗಾಲಾದರು. ಅಡ್ಜಸ್ಟ್ ಮಾಡಿಕೊಂಡು ಇರೋದು ಬಿಟ್ಟು ಇಲ್ಲಿಗೇಕೆ ಬಂದೆ? ನೀನೇ ಒಂದು ಹೊರೆ ಆಗಿಬಿಟ್ಟೆಯಲ್ಲ, ಎಂದು ರೇಗಿದರು. ಇದೇ ವಿಷಯಕ್ಕೆ ಹೆತ್ತವರೊಂದಿಗೆ ದಿನವೂ ಜಗಳವಾಗುತ್ತಿತ್ತು. ಕಡೆಗೊಮ್ಮೆ- “ಯಾರಿಗೂ ಹೊರೆಯಾಗಿ ಇರೋ ದಿಲ್ಲ, ದೇಶಾಂತರ ಹೋಗಿಬಿಡ್ತೇನೆ’ ಅಂದೆ. ಅರಬ್ ರಾಷ್ಟ್ರಗಳಿಗೆ ಹೋಗಿ, ಏನಾದರೂ ಕೆಲಸ ಮಾಡಿಕೊಂಡು ಬದುಕುವುದು ನನ್ನ ಉದ್ದೇಶವಾಗಿತ್ತು. ಊರಲ್ಲಿ ಇರುವಾಗಲೇ ಇಷ್ಟು ರಗಳೆಯಾಗಿದೆ. ಇನ್ನು, ವಿದೇಶಕ್ಕೆ ಹೋದರೆ ಏನಾದೀತೋ ಎಂದು ಹೆದರಿದ ಹೆತ್ತವರು, ನನ್ನ ಪಾಸ್‌ಪೋರ್ಟನ್ನೇ ಸುಟ್ಟು ಹಾಕಿಬಿಟ್ಟರು. ನನ್ನ ಸಂಕಟವನ್ನೆಲ್ಲ ಫೇಸ್‌ಬು ಕ್‌ನ ಗೆಳೆಯರೊಬ್ಬರಲ್ಲಿ ಹೇಳಿಕೊಳ್ಳುತ್ತಿದ್ದೆ. ನಂತರ ಅವರ ಸಲಹೆಯಂತೆ, 2018ರಲ್ಲಿ ಕೊಚ್ಚಿಯ ರೈಲು ಹತ್ತಿದವಳು, ನನಗಷ್ಟೇ ಎಂಬಂತೆ- ಹೇಳಿಕೊಂಡೆ: ಇಷ್ಟು ದಿನ ಬೆಂಕಿಯಲ್ಲಿ ಬೆಂದಿದ್ದಾಯಿತು. ಇನ್ನು ಮುಂದೆ, ಬೆಂಕಿಗೆ ಬಿದ್ದರೂ ಬೇಯಬಾರದು, ಹೂವಂತೆ ಅರಳಬೇಕು. ಇವತ್ತಿಂದ, ನನಗೋಸ್ಕರ ಬದುಕಬೇಕು!
ಕೊಚ್ಚಿಯಲ್ಲಿ, ನನ್ನ ಕತೆಯನ್ನೆಲ್ಲ ಕೇಳಿ, ಕೆಲಸ ಕೊಡಲು ಜನ ಹಿಂಜರಿದರು. ಮೊದಲೇ ಡೈವೊರ್ಸಿ, ಮನೆ ಬಿಟ್ಟು ಬಂದಿದ್ದಾಳೆ, ನಾಳೆ ಕೇಸ್ ಗೀಸ್ ಆದರೆ ಫಜೀತಿ ಆಗುತ್ತೆ ಎಂದೇ ಎಲ್ಲರೂ ಯೋಚಿಸಿದರು. ಆಗಂತೂ ನಾನು ದಿಕ್ಕು ತೋಚದೆ ಕಂಗಾಲಾದೆ. ನನ್ನ ಬದುಕಲ್ಲಿ ಒಳ್ಳೆಯ ದಿನಗಳೇ ಇಲ್ಲವಾ? ಜೀವನವಿಡೀ ಕಣ್ಣೀರಲ್ಲಿ ಕೈತೊಳೆಯುವುದೇ ನನ್ನ ಹಣೆಬರಹವಾ ಎಂದೆಲ್ಲಾ ಯೋಚಿಸುತ್ತಿದ್ದೆ. ಆಗಲೇ, ಪುಣ್ಯವಶಾತ್ ಜಿಮ್ ಒಂದರಲ್ಲಿ ರಿಸೆಪ್ಶನಿಸ್ಟ್ ಕೆಲಸ ಸಿಕ್ಕಿತು. ಅಬ್ಟಾ, ಮೂರು ಹೊತ್ತಿನ ಅನ್ನಕ್ಕೆ ಕಡೆಗೂ ಒಂದು ದಾರಿಯಾಯಿತು ಅಂದುಕೊಂಡೆ. ಜಿಮ್‌ನ ಮಾಲೀಕರ ಹೆಸರು ಬೋನ್ಸಿ ಫರ್ನಾಂಡಿಸ್. ಅವರಿಗೆ, ನನ್ನ ಬದುಕಿನ ಕಥೆಯನ್ನೆಲ್ಲ ವಿವರವಾಗಿ ಹೇಳಿಕೊಂಡೆ. ಎಲ್ಲವನ್ನೂ ಕೇಳಿದ ನಂತರ ಅವರು ಒಂದು ಮಾತು ಹೇಳಿದರು: “ಜಾಸ್ಮಿನ್, ಬದುಕಲ್ಲಿ ತುಂಬಾ ನೊಂದಿದ್ದೀಯ. ಇವತ್ತಿಂದ ನೀನು ನಮ್ಮ ವರ್ಕರ್ ಮಾತ್ರವಲ್ಲ; ನಮ್ಮ ಕುಟುಂಬದಲ್ಲಿ ಒಬ್ಬಳು. ಹಳೆಯದನ್ನು ಮರೆತು ಖುಷಿಯಾಗಿರು…’
ಹೀಗೆ ಹೇಳಿದ್ದು ಮಾತ್ರವಲ್ಲ; ಹಾಗೆಯೇ ನಡೆದುಕೊಂಡರು. ನಾನು ಕೆಲಸದವಳು ಎಂದು ಭಾವಿಸದೆ, ದಿನವೂ ನನಗೆ ಮನೆಯಿಂದ ಊಟ ಕಳಿಸಿದರು. ನನ್ನ ಕಷ್ಟ ಸುಖ ವಿಚಾರಿಸಿದರು. ಅಪ್ಪ-ಅಮ್ಮ ಹೀಗಿರಬೇಕಲ್ವ ಎಂಬ ಫೀಲ್ ಬರುವಂತೆ ಮಾಡಿಬಿಟ್ಟರು. ಬದುಕಿನಲ್ಲಿ ಪೆಟ್ಟಿನ ಮೇಲೆ ಪೆಟ್ಟು ತಿಂದಿದ್ದವಳು ನಾನು. ಅದೇ ಕಾರಣಕ್ಕೆ ಯಾರನ್ನೂ ನಂಬಲು ಮನಸ್ಸಾಗುತ್ತಿರಲಿಲ್ಲ. ಹಾಗಂತ ಮೌನವಾಗಿ ಇರಲೂ ಸಾಧ್ಯವಿರಲಿಲ್ಲ. ರಿಸೆಪ್ಶನಿಸ್ಟ್ ಕೆಲಸ ಅಂದಮೇಲೆ, ಮಾತಾಡದೆ ಇರಲು ಸಾಧ್ಯವೇ? ಸುತ್ತಲಿನ ಪ್ರಪಂಚಕ್ಕೆ ನಿಧಾನಕ್ಕೆ ತೆರೆದುಕೊಂಡೆ. ಆಗಷ್ಟೇ ಹೊಟ್ಟೆಯ ಶಸ್ತ್ರಕ್ರಿಯೆ ಆಗಿದ್ದರಿಂದ ತುಂಬಾ ತೆಳ್ಳಗಿದ್ದೆ. ರಿಸೆಪ್ಶನ್ ಸೀಟಿನಲ್ಲಿ ಕುಳಿತೇ ಜಿಮ್‌ಗೆ ಬರುವ ಜನ ಹಾಗೂ ಆರೋಗ್ಯದ ಕುರಿತು ಅವರಿಗಿರುವ ಕಾಳಜಿಯನ್ನು ಗಮನಿಸಿದೆ. ಕೆಲ ದಿನಗಳ ನಂತರ, ನಾನೂ ಕಟ್ಟುಮಸ್ತಾದ ದೇಹ ಹೊಂದಬೇಕು ಅನ್ನಿಸಿತು. ಮರುದಿನವೇ ಜಿಮ್‌ಗೆ ಸೇರಿದೆ.
ಆನಂತರದಲ್ಲಿ, ನನಗೇ ಗೊತ್ತಿಲ್ಲದಂತೆ ನಾನು ಬದಲಾಗಿಹೋದೆ. ಅದುವರೆಗೂ ಪೀಚಲು ದೇಹ ಹೊಂದಿದ್ದವಳು, ಆರೆಂಟು ತಿಂಗಳಲ್ಲಿ ಕಟ್ಟುಮಸ್ತಾದ ದೇಹ ಪಡೆದೆ. ನಾನೂ ಜಿಮ್ ಟ್ರೈನರ್ ಆಗಬಾರದೇಕೆ ಅನಿಸಿದ್ದೇ ಆಗ. ಜಿಮ್ ಟ್ರೈನರ್ ಆಗಬೇಕೆಂದರೆ, ಅದಕ್ಕೆ ಸಂಬಂಧಿಸಿದ ಕೋರ್ಸ್ ಮಾಡಬೇಕಿತ್ತು. ಅದಕ್ಕಾಗಿ ಬೆಂಗಳೂರಿಗೆ ಹೋಗಬೇಕಿತ್ತು. ನನ್ನ ಪಾಲಿನ ಗಾಡ್‌ಫಾ ದರ್ ಆಗಿದ್ದ ಬೋನ್ಸಿ ಫರ್ನಾಂಡಿಸ್ ದಂಪತಿಯ ಬಳಿ ಮನದಾಸೆ ಹೇಳಿಕೊಂಡೆ. “ಹೋಗಿ ಬಾ ಮಗಳೇ, ನಿನಗೆ ಗೆಲುವಾಗಲಿ!’ -ಅಂದರು. ಆ ಕೋರ್ಸ್‌ನ ಶುಲ್ಕಕ್ಕೇ ಕೂಡಿಟ್ಟಿದ್ದ ಹಣವೆಲ್ಲಾ ಖಾಲಿಯಾಯಿತು. ಆಗ, ಪಾರ್ಟ್ ಟೈಂ ಕೆಲಸ ಮಾಡುತ್ತಾ ಖರ್ಚುಗಳನ್ನು ನಿಭಾಯಿಸಿದೆ. ಕೋರ್ಸ್ ಮುಗಿಸುತ್ತಿದ್ದಂತೆ, ಬೆಂಗಳೂರಿನಲ್ಲೇಕೈತುಂಬ ಸಂಬಳದ ಫಿಟೆ°ಸ್ ಟ್ರೈನರ್ ಕೆಲಸ ಸಿಕ್ಕಿತು!
ಈಗ ಬೆಂಗಳೂರಿನಲ್ಲಿ ಇದ್ದೇನೆ. ಕೈತುಂಬಾ ಹಣವಿದೆ. ತೃಪ್ತಿ ಕೊಡುವಂಥ ನೌಕರಿಯಿದೆ. ವಿದೇಶಗಳಿಗೆ ಹೋಗಿಬಂದೆನೆಂಬ ಖುಷಿಯಿದೆ. ನಾನು ಯಾರಿಗೂ ಹೊರೆಯಾಗಲಿಲ್ಲವೆಂಬ ಆತ್ಮಸಂತೋಷವಿದೆ. ಹೋರಾಟದ ಬದುಕಲ್ಲಿ ಕಡೆಗೂ ಗೆದ್ದೆ ಅಂದುಕೊಂಡಾಗ ಅಪ್ಪ-ಅಮ್ಮ, ತಂಗಿಯರೆಲ್ಲಾ ನೆನಪಾಗಿಬಿಡ್ತಾರೆ. ಅವ ರನ್ನೆಲ್ಲ ನೋಡಬೇಕು ಅಂತ ಆಸೆಯಿದೆ. ಆದರೆ ಅಲ್ಲಿಗೆ ನಾನು ಹೋಗಲಾರೆ. ಹಾಗಾಗಿ, ನನ್ನ ಕುಟುಂಬದವರೆಲ್ಲ ಯಾವತ್ತೂ ಚೆನ್ನಾಗಿರಲಿ ಎಂದಷ್ಟೇ ಪ್ರಾರ್ಥಿಸುತ್ತೇನೆ’ ಅನ್ನುತ್ತಾ ಮೌನಕ್ಕೆ ಜಾರುತ್ತಾರೆ ಜಾಸ್ಮಿನ್.ಹೂವಿನ ಹೆಸರು ಹೊಂದಿರುವ ಈ ಹೆಣ್ಣುಮಗಳು, ಮುಳ್ಳಿನ ಮೇಲೆ ನಡೆದೂ ನವಿಲಾದಳಲ್ಲ; ಭೇಷ್!
– ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.