ನಿಲ್ಲದ ಚೀನ ಉದ್ಧಟತನ ಭಾರತದ ಪ್ರಬಲ ಸಂದೇಶ
Team Udayavani, Jun 30, 2020, 5:53 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಪೂರ್ವ ಲಡಾಖ್‌ನಲ್ಲಿ ಚೀನದ ಬೆದರಿಕೆಗಳಿಗೆ, ಕುತಂತ್ರಗಳಿಗೆ ಪ್ರತ್ಯುತ್ತರ ನೀಡಲು ಭಾರತ ಸಕಲ ರೀತಿಯಿಂದಲೂ ಸಜ್ಜಾಗುತ್ತಿದೆ.
ಅತ್ತ ಚೀನ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ಗಡಿಭಾಗದಲ್ಲಿ ಜಮಾವಣೆ ಮಾಡುತ್ತಿರುವಂತೆಯೇ, ಇತ್ತ ಭಾರತವೂ ಸಹ ಯೋಧರು, ಯುದ್ಧವಿಮಾನಗಳು, ರಾಡಾರ್‌ಗಳು, ವಾಯುನೆಲೆ ತುಕಡಿಗಳು, ಫಿರಂಗಿಗಳು ಸೇರಿದಂತೆ ಅತ್ಯುಪಯುಕ್ತ ಯುದ್ಧ ಸಾಮಗ್ರಿಗಳ ಮೂಲಕ ಎಲ್ಲಾ ಸವಾಲಿಗೂ ಸಜ್ಜಾಗಿ ನಿಲ್ಲುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರೂ ಸಹ ಚೀನದ ಉದ್ಧಟತನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಚೀನ ನಂಬಿಕೆಗೆ ಒಂದಿಷ್ಟೂ ಅರ್ಹವಲ್ಲದ ರಾಷ್ಟ್ರ ಎನ್ನುವುದು ಪದೇ ಪದೇ ಸಾಬೀತಾಗುತ್ತಲೇ ಇರುತ್ತದೆ. ನುಡಿಯೊಂದು ನಡೆಯೊಂದು ಎನ್ನುವುದು ಚೀನದ ಪ್ರಮುಖ ಗುರುತಾಗಿ ಬದಲಾಗಿಬಿಟ್ಟಿದೆ. ಇತ್ತೀಚೆಗಷ್ಟೇ ಹಿರಿಯ ಕಮಾಂಡರ್ ಮಟ್ಟದ ಮಾತುಕತೆಯ ನಂತರ, ಚೀನ ಸೇನೆಯನ್ನು ಪಾಪಸ್ ಕರೆಸಿಕೊಳ್ಳುವುದಾಗಿ ಹೇಳಿತ್ತು.
ಆದರೆ, ಮತ್ತೆ ಗಾಲ್ವಾನ್ ಕಣಿವೆಯ ಮೇಲೆ ಸಾರ್ವಭೌಮತ್ವ ಸ್ಥಾಪಿಸಲು ಅದು ಯತ್ನಿಸುತ್ತಿದೆ. ಚೀನ ಗಸ್ತು ಪಾಯಿಂಟ್ 14-15ರಲ್ಲಿ ಪುನಃ ಕ್ಯಾಂಪ್ ಹಾಕಿರುವುದನ್ನು ಉಪಗ್ರಹ ಚಿತ್ರಗಳು ಸಾರುತ್ತಿವೆ.ಈ ಕಾರಣಕ್ಕಾಗಿಯೇ, ನಮ್ಮ ತಯಾರಿಯಲ್ಲಿ ನಾವಿರುವುದು ಅತ್ಯಗತ್ಯ.
ಗಮನಾರ್ಹ ಸಂಗತಿಯೆಂದರೆ, ಈ ಬಿಕ್ಕಟ್ಟಿನ ಸಮಯದಲ್ಲೇ ಭಾರತದ ವಾಯುಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸುವಂಥ ಸಂತಸದ ಸುದ್ದಿಯೊಂದು ಬಂದಿದೆ. ಭಾರತ ಮತ್ತು ಫ್ರಾನ್ಸ್ ನಡುವಿನ 36 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಹಿನ್ನೆಲೆಯಲ್ಲಿ ಜುಲೈ ಅಂತ್ಯದೊಳಗೆ ಆರು ರಫೇಲ್ ಯುದ್ಧ ವಿಮಾನಗಳನ್ನು ಭಾರತ ಪಡೆಯಲಿದೆ.
ಹಾಗೆಂದು, ಚೀನ – ಭಾರತದ ನಡುವೆ ಯುದ್ಧ ಸಂಭವಿಸುವುದು ಶತಃಸಿದ್ಧ ಎಂದು ಭಾವಿಸುವುದು ತಪ್ಪಾಗುತ್ತದೆ. ಚೀನ ಆರ್ಥಿಕವಾಗಿ ಭಾರತಕ್ಕಿಂತ ಎಷ್ಟೇ ಮುಂದಿರಬಹುದು, ಆದರೆ ಯುದ್ಧ ನಿಸ್ಸಂಶಯವಾಗಿಯೂ ಅದಕ್ಕೂ ಹಲವು ರೀತಿಯಿಂದ ದುಬಾರಿಯಾಗಿ ಪರಿಣಮಿಸುವುದು ನಿರ್ವಿವಾದ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಲೇ ಕಪ್ಪು ಚುಕ್ಕೆಯೊಂದು ಚೀನಕ್ಕೆ ಹತ್ತಿದ್ದು, ಅದರ ಮೇಲೆ ಜಾಗತಿಕ ಒತ್ತಡವೂ ಹೆಚ್ಚುತ್ತಿದೆ. ಒಂದು ವೇಳೆ ಯುದ್ಧ ಸಂಭವಿಸಿತೆಂದರೂ ಚೀನದ ಹೆಡೆಮುರಿಕಟ್ಟಲು ಅನೇಕ ರಾಷ್ಟ್ರಗಳು ಭಾರತಕ್ಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಕ್ಕೆ ನಿಲ್ಲಲಿವೆ. ಭಾರತವೂ ಏಕಾಂಗಿಯಾಗಿ ಚೀನಕ್ಕೆ ಉತ್ತರಿಸಲು ಸಶಕ್ತವಾಗಿದೆ.
ಇಂದು ಪಾಕಿಸ್ಥಾನವನ್ನು ಹೊರತುಪಡಿಸಿ, ಉಳಿದೆಲ್ಲ ನೆರೆ ರಾಷ್ಟ್ರಗಳೊಂದಿಗೂ ಚೀನ ವೈಷಮ್ಯ ಕಟ್ಟಿಕೊಂಡಿದೆ. ದಕ್ಷಿಣ ಚೀನ ಸಮುದ್ರದಲ್ಲಿ ಅದು ಪಾರಮ್ಯ ಸಾಧಿಸಲು ಪ್ರಯತ್ನಿಸುತ್ತಿರುವುದು ಜಗತ್ತಿನ ಅನೇಕ ರಾಷ್ಟ್ರಗಳ ಕಣ್ಣು ಕೆಂಪಾಗಿಸಿದೆ.
ಇತ್ತೀಚೆಗಷ್ಟೇ ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕ ಜರ್ಮನಿಯಲ್ಲಿದ್ದ ತನ್ನ ಮೂರು ಸಮರ ನೌಕೆಗಳನ್ನು ದಕ್ಷಿಣ ಚೀನ ಸಮುದ್ರಕ್ಕೆ ಕಳುಹಿಸಿಕೊಟ್ಟಿರುವುದು, ಅಲ್ಲದೇ ಚೀನ ಯಾವ ರಾಷ್ಟ್ರಗಳೊಂದಿಗೆ ಬಿಕ್ಕಟ್ಟು ಸೃಷ್ಟಿಸುತ್ತಿದೆಯೋ, ಆ ರಾಷ್ಟ್ರಗಳಿಗೆಲ್ಲ ಸೇನಾ ಬೆಂಬಲ ನೀಡಿರುವುದಾಗಿ ಹೇಳಿರುವುದು ಸಹ, ಚೀನ ಬೆಚ್ಚುವಂತೆ ಮಾಡಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಭಾರತ ಚೀನಕ್ಕೆ ಈಗ ಬಲಿಷ್ಠ ಸಂದೇಶ ಕಳುಹಿಸುವಲ್ಲಿ ಯಶಸ್ವಿಯಾಗುತ್ತಿದೆ.
ಈಗ ಭಾರತ ಬದಲಾಗಿದೆ. ಸತ್ಯವೇನೆಂದರೆ, ಗಡಿ ಭಾಗದಲ್ಲಿ ಭಾರತ ನಡೆಸಿರುವ ಅಭಿವೃದ್ಧಿ ಕಾರ್ಯಗಳು ಚೀನದ ನಿದ್ದೆಗೆಡಿಸಿವೆ. ಈ ಕಾರಣಕ್ಕಾಗಿಯೇ, ಚೀನ ಹುಚ್ಚುಹಿಡಿದಂತೆ ವರ್ತಿಸುತ್ತಿದೆ. ನಿಸ್ಸಂಶಯವಾಗಿಯೂ ಭಾರತೀಯ ಸೇನೆಯ ಕೆಚ್ಚೆದೆಯ ಈ ಹೆಜ್ಜೆಗಳು, ಬದಲಾದ ಭಾರತದ ಸಂಕೇತಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.