ಪಾದೂರು ತೈಲ ಸ್ಥಾವರದಲ್ಲಿ ಅನಿಲ ಸೋರಿಕೆ ?
Team Udayavani, Jun 30, 2020, 8:09 AM IST
ಪಾದೂರು ಕಚ್ಚಾ ತೈಲ ಸಂಗ್ರಹಾಗಾರ ಪರಿಸರದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಅನಿಲ ಸೋರಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಕಾಪು: ಕಾಪು ತಾಲೂಕಿನ ಪಾದೂರು ಐಎಸ್‌ಪಿಆರ್‌ಎಲ್ ಕಚ್ಚಾ ತೈಲ ಸಂಗ್ರಹಾಗಾರದಲ್ಲಿ ಸೋಮವಾರ ಅನಿಲ ಸೋರಿಕೆಯ ಶಂಕೆ ಮೂಡಿದ್ದು, ಪರಿಸರದ ಮಕ್ಕಳು, ಹಿರಿಯರ ಸಹಿತ ಹಲವರು ಅಸ್ವಸ್ಥರಾಗಿದ್ದಾರೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಅನಿಲದ ವಾಸನೆ ಬರಲಾರಂಭಿಸಿದ್ದು ಸ್ಥಳೀಯರು ಕೂಡಲೇ ಮಜೂರು ಗ್ರಾಮ ಪಂಚಾಯತ್, ಜನಜಾಗೃತಿ ಸಮಿತಿ ಮತ್ತು ವಿವಿಧ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದರು. ಆದರೆ ಕಂಪೆನಿ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ್ದು, ಸಂಜೆಯವರೆಗೂ ಯಾವುದೇ ತಪಾಸಣೆ ನಡೆಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪಾದೂರು ಕೂರಾಲು ಪರಿಸರದ ಮೂರ್‍ನಾಲ್ಕು ಮಂದಿ ಮಕ್ಕಳು ವಾಂತಿ ಮಾಡಿಕೊಂಡಿರುವುದಲ್ಲದೆ, ಕೆಲವು ಮನೆಗಳಲ್ಲಿನ ಹಿರಿಯರು ಮೂರ್ಛೆ ತಪ್ಪಿದ ಅನುಭವಕ್ಕೊಳಗಾಗಿದ್ದಾರೆ.
ಸಂಜೆಯ ವೇಳೆಗೆ ಮಜೂರು ಗ್ರಾ.ಪಂ. ಅಧ್ಯಕ್ಷ ಸಂದೀಪ್ ರಾವ್, ಉಪಾಧ್ಯಕ್ಷೆ ಸಹನಾ ತಂತ್ರಿ, ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ತಾ.ಪಂ. ಸದಸ್ಯೆ ಶಶಿಪ್ರಭಾ ಶೆಟ್ಟಿ, ಜನಜಾಗೃತಿ ಸಮಿತಿಯ ಪ್ರಮುಖರಾದ ಅರುಣ್ ಶೆಟ್ಟಿ ಪಾದೂರು, ಶಿವರಾಮ ಶೆಟ್ಟಿ ಪಯ್ನಾರು, ಪ್ರವೀಣ್ ಕುಮಾರ್ ಗುರ್ಮೆ, ರಂಗನಾಥ ಶೆಟ್ಟಿ ಮೊದಲಾದವರ ನಿಯೋಗವು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ, ಸ್ಥಳೀಯರ ಜತೆ ಸೇರಿ ಅನಿಲ ವಾಸನೆಯ ಜಾಡಿನ ಪತ್ತೆಗೆ ಮುಂದಾಗಿತ್ತು. ಜನಪ್ರತಿನಿಧಿಗಳು ಮತ್ತು ಸ್ಥಳೀಯರ ನಿಯೋಗ ಅನಿಲ ವಾಸನೆಯ ಮೂಲ ಪತ್ತೆಗೆ ಮುಂದಾಗಿರುವ ಬಗ್ಗೆ ಮಾಹಿತಿ ಪಡೆದ ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಾಪು ಸಿಐ ಮಹೇಶ್ ಪ್ರಸಾದ್, ಮಾಲಿನ್ಯ ನಿಯಂತ್ರಣ ಅಧಿಕಾರಿ ವಿಜಯಾ ಹೆಗ್ಡೆ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಕಂಪೆನಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮಾಹಿತಿ ಪಡೆದುಕೊಂಡರು.
ಮೇಲ್ನೋಟಕ್ಕೆ ಸೋರಿಕೆ ದೃಢ
ಮೇಲ್ನೋಟಕ್ಕೆ ಅನಿಲ ಸೋರಿಕೆಯಾಗು ತ್ತಿರುವುದನ್ನು ಗಮನಿಸಿದ್ದೇವೆ. ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಕೆಲವು ಕಡೆಗಳಲ್ಲಿ ಕೆಟ್ಟ ವಾಸನೆಯ ಅನುಭವ ಉಂಟಾಗಿದ್ದು
ವಾಸನೆ ಎಲ್ಲಿಂದ ಮತ್ತು ಹೇಗೆ ಬಂದಿದೆ ಎನ್ನುವುದನ್ನು ಪರಿಶೀಲಿಸಲು ಐಎಸ್‌ಪಿಆರ್‌ಎಲ್ ಕಂಪೆನಿಗೆ ಸೂಚನೆ ನೀಡಲಾಗಿದೆ ಎಂದು ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಅಧಿಕಾರಿ ವಿಜಯಾ ಹೆಗ್ಡೆ ತಿಳಿಸಿದ್ದಾರೆ. 24 ಗಂಟೆಯೊಳಗೆ ಸಮಸ್ಯೆ ಬಗೆಹರಿಸಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್ ಅವರು ತಿಳಿಸಿದ್ದಾರೆ.
ನಿರ್ಲಕ್ಷ್ಯಕ್ಕೆ ಆಕ್ರೋಶ
ಕೊರೊನಾ ಆತಂಕ, ಹೈದರಾಬಾದ್‌ನಲ್ಲಿ ವಿಷಾನಿಲ ಸೋರಿಕೆ ಭೀತಿಯ ನಡುವೆಯೇ ಪಾದೂರಿನಲ್ಲಿ ಅನಿಲ ಸೋರಿಕೆ ಉಂಟಾಗಿದ್ದು, ಸ್ಥಳೀಯರು ಮಾಹಿತಿ ನೀಡಿದರೂ ನಿರ್ಲಕ್ಷ್ಯ ತೋರಿದ ಕಂಪೆನಿಯ ಅಧಿಕಾರಿಗಳನ್ನು ಜನಪ್ರತಿನಿಧಿಗಳು, ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ತೀವ್ರ ತರಾಟೆಗೆ ತೆಗೆದುಕೊಂಡರು.
ಆತಂಕ ಬೇಡ
ಸ್ಥಳಕ್ಕೆ ಭೇಟಿ ನೀಡಿದ ಐಎಸ್‌ಪಿಆರ್‌ಎಲ್ ಪ್ರಾಜೆಕ್ಟ್ ಮ್ಯಾನೇಜರ್ ವಿಪಿನ್ ಕುಮಾರ್ ಅನಿಲ ಸೋರಿಕೆಯ ವಿಚಾರವನ್ನು ನಿರಾಕರಿಸಿದ್ದು, ಘಟಕದೊಳಗೆ ಎಲ್ಲೂ ಅನಿಲ ವಾಸನೆ ಬಂದಿಲ್ಲ. ಪಾದೂರು-ತೋಕೂರು ನಡುವಿನ ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ 36 ಕಿ.ಮೀ. ಉದ್ದದ ಪೈಪ್‌ಲೈನ್ ಇದ್ದು ಅದರಲ್ಲೇನಾದರೂ ಸೋರಿಕೆ ಇದೆಯೇ ಎಂದು ತಜ್ಞರ ಮೂಲಕ ಪರಿಶೀಲಿಸಲಾಗುವುದು. ಜನರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.