ಮದುವೆ ಎಂಬುದು ಬಂಧನವಾದಾಗ…
Team Udayavani, Jul 1, 2020, 5:32 AM IST
ಸುನೈನಾಗೆ 40 ವರ್ಷ. ಅವಳ ಪತಿ ರಾಮ್‌ಗೆ 32 ವರ್ಷ. ದೈಹಿಕವಾಗಿ ಚಿಕ್ಕ ಹುಡುಗಿಯಂತೆ ಕಾಣುವ ಸುನೈನಾ, ಮಾನಸಿಕವಾಗಿಯೂ ಲವಲವಿಕೆಯಿಂದ ಇದ್ದರು. ಮದುವೆಯಾಗಿ ಎರಡು ವರ್ಷವಾಗುತ್ತಾ ಬಂದಿದೆ. ಆದರೆ, ಇತ್ತೀಚೆಗೆ ಯಾಕೋ ದಿನಗಳು ಮಂಕಾಗುತ್ತಿವೆ. ಪರಸ್ಪರ ಹೆಚ್ಚು ಮಾತಿಲ್ಲ, ನಗುವಿಲ್ಲ. ಮೊದಲು ಮಾಂತ್ರಿಕ ಆಕರ್ಷಣೆ ಇದ್ದ ಸಂಬಂಧದಲ್ಲಿ ಈಗ ಯಾಂತ್ರಿಕತೆ ಮನೆ ಮಾಡಿತ್ತು. ಮದುವೆಯಾದ ತಕ್ಷಣವೇ ಸುನೈನಾಗೆ ಹೊಸ ಕೆಲಸ ಸಿಕ್ಕಿತು.
ಆದರೆ, ರಾಮ್ ಕೆಲಸ ಕಳೆದುಕೊಂಡು, ಇನ್ನೊಂದು ಕೆಲಸ ಸಿಗಲು ನಾಲ್ಕು ತಿಂಗಳು ಬೇಕಾಯಿತು. ಈ ನಡುವೆ 24 ವರ್ಷದ ನಾದಿನಿಗೂ ಇವರಿದ್ದ ಊರಿನಲ್ಲೇ ಕೆಲಸ ಸಿಕ್ಕಿದ್ದರಿಂದ, ಅವಳೂ ಇವರ ಮನೆಯಲ್ಲಿ ಬಂದು ಉಳಿದು ಕೊಂಡಳು. ಸುನೈನಾಗೆ ಮನೆ ಕೆಲಸದ ಒತ್ತಡದ ಜೊತೆಗೆ, ಹೊಸ ಕೆಲಸದ ಒತ್ತಡ ಬೇರೆ. ರಾಮ್ ಮನೆ ಕೆಲಸದಲ್ಲಿ ಸಹಕರಿಸುವುದಿಲ್ಲ. ನಾದಿನಿಗೆ ಕೆಲಸ ಹೇಳುವಂತಿಲ್ಲ. ಅವಳಾಗಿಯೇ ತಿಳಿದುಕೊಂಡು ಕೆಲಸ ಮಾಡುವುದೂ ಇಲ್ಲ.
ಸುನೈನಾ ಮನೆಗಾಗಿ ಬಹಳ ಕಷ್ಟಪಡತೊಡಗಿದರು. ಉಳಿದವರಿಗೆ ಅದು ಅರ್ಥವಾಗಲಿಲ್ಲ. ಹಾಗಾಗಿ, ಆಕೆಗೆ ಮದುವೆ ಹೊರೆಯೆನಿಸತೊಡಗಿತು. “ಮಾಂಸಾಹಾರ ತಿನ್ನಬಾರದು’ ಎಂದು ಮನೆಯ ಓನರ್ ನಿಯಮ ಹಾಕಿದ್ದರಿಂದ, ಅಣ್ಣ-ತಂಗಿ ಇಬ್ಬರೂ ಮನೆ ಬದಲಾಯಿಸೋಣ ಅಂತ ಒತ್ತಾಯಿಸುತ್ತಿದ್ದರು. ಈ ಮನೆ ಸುನೈನಾಳ ಅಮ್ಮನ ಮನೆಗೆ ಹತ್ತಿರ. ತಾಯಿಯೂ ಈಕೆಗೆ ಬೇಕಾದ ಸಹಾಯ ಮಾಡುತ್ತಿದ್ದರು. ಬೇರೆ ಮನೆ ಮಾಡಲು ಇಷ್ಟವಿಲ್ಲದಿದ್ದರೂ ಸುನೈನಾ ಮನೆ ಬದಲಿಸಿದರು.
ಯಾವ ನಿರ್ಧಾರವನ್ನೇ ಆದರೂ ದೊಡ್ಡವಳಾದ ಸುನೈನಾಳೇ ತೆಗೆದುಕೊಳ್ಳಬೇಕಾಗಿತ್ತು. ಗಂಡ-ನಾದಿನಿ ಚಿಕ್ಕ ಹುಡುಗರಂತೆ ವರ್ತಿಸುವುದು ಸುನೈನಾಗೆ ಬೇಸರ ತರಿಸಿತ್ತು. ನಾದಿನಿಗೆ ಹಸಿವು ಜಾಸ್ತಿ. ಸುನೈನಾಳೆ ಬೆಳಗ್ಗೆ ಬೇಗ ಎದ್ದು ಅವಳಿಗೆ ತಿಂಡಿ ಮಾಡಿಕೊಡ ಬೇಕು. ಸುನೈನಾ, ಮನೆ- ಆಫೀಸಿನ ಈ ಗೋಜಲಿನ ನಡುವೆ ವಯಸ್ಸಾದವರಂತೆ ಕಾಣತೊಡಗಿದ್ದಾರೆ. ಕೌನ್ಸೆಲಿಂಗ್‌ಗೆ ಬರಲು ಗಂಡ ಒಪ್ಪದಿರುವುದು, ಸುನೈನಾರ ಸಂಕಟವನ್ನು ಇನ್ನಷ್ಟು ಹೆಚ್ಚಿಸಿದೆ.
ಗಂಡ- ಹೆಂಡತಿಯ ನಡುವೆ ನಡೆಯುವ ಸರಸದ ಮಾತು, ಕೀಟಲೆ- ಕಿತ್ತಾಟಗಳೇ ಅನ್ಯೋನ್ಯತೆಯನ್ನು ಹುಟ್ಟುಹಾಕು ವುದು. ಆದರೆ, ಇವರ ಸಂಬಂಧದಲ್ಲಿ, ನಾದಿನಿಯ ಇರುವಿಕೆ ಇದೆಲ್ಲವನ್ನೂ ನುಂಗಿ ಹಾಕಿತ್ತು. ರಾತ್ರಿಯ ವೇಳೆ ನಡೆಯುವ ಸೆಕ್ಸ್ ಬರೀ ಶರೀರದ ಜರೂರತ್ತು ಎನಿಸತೊಡ ಗಿ ದಾಗ, ಹೆಣ್ಣಿಗೆ ಸೆಕ್ಸ್ ದೌರ್ಜನ್ಯದಂತೆ ಕಾಣುತ್ತದೆ. ನಾದಿನಿಯ ಬಗ್ಗೆ ಸುನೈನಾ ದೂರು ನೀಡಿದಾಗ ರಾಮ್, “ಚಿಕ್ಕ ಹುಡುಗಿಯ ಮೇಲೆ ವಯಸ್ಸಾದ ನೀನು ಪೈಪೋಟಿ ಮಾಡುತ್ತೀಯ’ ಎಂದದ್ದು ಅಸಹನೆ ಉಂಟುಮಾಡಿತು.
ಇಂಥ ಸಂದರ್ಭದಲ್ಲಿ ಕೌಟುಂಬಿಕ ಸಲಹೆಯ ಅಗತ್ಯವಿ ರುತ್ತ ದೆ. ನಾದಿನಿಗೆ ಮನೆಕೆಲಸದಲ್ಲಿ ಸಹಕರಿಸಲು ಸೂಚನೆ ಕೊಡ ಬೇಕಾ ಗುತ್ತದೆ. ಆದರೆ, ಇಲ್ಲಿ ಸಲಹೆ ಕೊಡುವವರು ಯಾರು? ಕುಟುಂಬದ ಸಹಕಾರವಿಲ್ಲದೆ ಸುನೈನಾ ಬಹಳ ನರಳಿ, ಕೊನೆಗೆ ವಿಚ್ಚೇದನದ ದಾರಿ ಹಿಡಿದರು. ಆನಂತರದಲ್ಲಿ ಆಕೆ ಮತ್ತೆ ಹಕ್ಕಿಯಂತೆ ಹಾರಿದ್ದಾರೆ. ಮದುವೆಯಾಗುವಾಗ ಗಂಡಿನ ವಯಸ್ಸು ಹೆಣ್ಣಿಗಿಂತ ಜಾಸ್ತಿ ಇರಲಿ ಎಂದು ಅಭಿಪ್ರಾಯ ತಿಳಿಸಿದ್ದಾರೆ.
* ಡಾ. ಶುಭಾ ಮಧುಸೂದನ್, ಚಿಕಿತ್ಸಾ ಮನೋವಿಜ್ಞಾನಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.