“ಸೌಹಾರ್ದ ಕಾಪಾಡುವಲ್ಲಿ ಪತ್ರಕರ್ತರ ಸೇವೆ ಮಹತ್ವದ್ದು’
ಪತ್ರಿಕಾ ದಿನಾಚರಣೆ, ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ
Team Udayavani, Jul 2, 2020, 5:19 AM IST
ಮಹಾನಗರ: ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸುಧಾರಣೆ ಮಾಡುವಲ್ಲಿ ಹಾಗೂ ಸಾಮಾಜಿಕ ಸೌಹಾರ್ದವನ್ನು ಕಾಪಾಡುವಲ್ಲಿ ಪತ್ರಕರ್ತರ ಸೇವೆ ಅತ್ಯಂತ ಮಹತ್ವದ್ದು, ಹಾಗಾಗಿ ಪೊಲೀಸರು, ಸೈನಿಕರು, ಆರೋಗ್ಯ ಸೇವಾ ಕಾರ್ಯಕರ್ತರಂತೆ ಪತ್ರಕರ್ತರು ಕೂಡ ಅತ್ಯಂತ ಗೌರ ವಾರ್ಹರು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಡಾ| ಪಿ.ಎಲ್. ಧರ್ಮ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಮಂಗಳೂರು ಪ್ರಸ್ ಕ್ಲಬ್ ಮತ್ತ ಪತ್ರಿಕಾ ಭವನ ಟ್ರಸ್ಟ್‌ನ ಸಹಯೋಗದಲ್ಲಿ ಬುಧವಾರ ನಗರದ ಲೇಡಿಹಿಲ್‌ನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅವರು ಉದ್ಘಾಟಿಸಿದರು.
21ನೇ ಶತಮಾನದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮೊದಲ 10 ಆದ್ಯತೆಗಳಲ್ಲಿ ಮಾಹಿತಿಯೂ ಒಂದಾಗಿದೆ. ಪತ್ರಿಕೆ/ ಮಾಧ್ಯಮಗಳಿಲ್ಲದೆ ಸಮಾಜಕ್ಕೆ ಯಾವುದನ್ನೂ ಕಲಿಯಲು ಸಾಧ್ಯ ವಿಲ್ಲ. ಪತ್ರಕರ್ತರಿಂದ ಚರಿತ್ರೆ, ಭಾಷೆ ಪುನಾರಚನೆಯಾಗಿದೆ. ಪತ್ರಕರ್ತರು ಬರೆಯುವಾಗ ಸಣ್ಣ ತಪ್ಪುಗಳನ್ನು ಮಾಡುವುದು ಸಹಜ. ಆದರೆ ಪುನರಪಿ ತಪ್ಪು ಮಾಡಬಾರದು. ಸಂಶೋಧನೆ ಮಾಡಿ ಬರೆಯಬೇಕು. ಸಾಮಾಜಿಕ ಜವಾಬ್ದಾರಿಯನ್ನು ಮರೆಯಬಾರದು ಎಂದರು.
ಪತ್ರಕರ್ತ ಮುಹಮ್ಮದ್ ಅನ್ಸಾರ್ ಅವರ “ಸಂಬಂಧ ಗಟ್ಟಿಗೊಳಿಸಿದ ರಮಜಾನ್’ ಎಂಬ ವರದಿಗೆ ಈ ವರ್ಷದ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಲಭಿಸಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಮೆಸ್ಕಾಂ ಪ್ರಧಾನ ವ್ಯವಸ್ಥಾಪಕ ಎಚ್.ಕೆ. ಕೃಷ್ಣ ಮೂರ್ತಿ ಅವರು ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು. ಪ್ರಶಸ್ತಿಯು 5,001 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿದೆ.
ಹಿರಿಯ ಪತ್ರಕರ್ತ ಸುರೇಶ್ ಬೆಳಗಜೆ ಅವರು “ಪತ್ರಕರ್ತರು ಮತ್ತು ಪತ್ರಿಕೋದ್ಯಮದ ಪ್ರಸ್ತುತತೆ’ ಎಂಬ ವಿಷಯದ ಕುರಿತು ಮಾತನಾಡಿದರು. ಪತ್ರಕರ್ತರು ಪ್ರಸ್ತುತ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ತಮ್ಮ ಆರ್ಥಿಕ ಭದ್ರತೆಗಾಗಿ ಉಳಿತಾಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಪತ್ರಕರ್ತ ಪಿ.ಬಿ. ಹರೀಶ್ ರೈ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.